Kere habba: ಮಲೆನಾಡಿನ ಹೊಸಬಾಳೆಯಲ್ಲಿ ದೀಪಾವಳಿಯೊಂದಿಗೆ ಕೆರೆ ಹಬ್ಬದ ಖುಷಿ
Nov 24, 2023 08:00 AM IST
ಸೊರಬ ತಾಲ್ಲೂಕಿನ ಹೊಸಬಾಳೆಯಲ್ಲಿ ಕೆರೆ ಹಬ್ಬಕ್ಕೆ ದೀಪದ ಮೂಲಕ ಅಲಂಕರಿಸುತ್ತಿರುವ ಗೃಹಿಣಿಯರು.
- Karnataka Festival ಕರ್ನಾಟಕ ವಿಭಿನ್ನ ಸಂಸ್ಕೃತಿಗಳ ತವರು. ಅಪ್ಪಟ ಮಲೆನಾಡಿನ ಹೊಸಬಾಳೆಯಲ್ಲಿ ದೀಪಾವಳಿ ಮರು ದಿನ ಆಚರಿಸುವ ಕೆರೆ ಹಬ್ಬ ವಿಶಿಷ್ಟ. ಈ ಕೆರೆ ಹಬ್ಬದ ಅನುಭವವನ್ನು ಲೇಖಕ ಹಾಗೂ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ದಾಖಲಿಸಿದ್ದಾರೆ.
ಮೊನ್ನೆ ದೀಪಾವಳಿಯ ಮರುದಿನ ರಾಜ್ಯದ ಬಹುತೇಕ ಭಾಗಗಳಲ್ಲಿ ಹಬ್ಬದ ತೊಡಕು ಆಚರಿಸುತ್ತಿರುವಾಗ ಸೊರಬ ತಾಲೂಕಿನ ಹೊಸಬಾಳೆಯಲ್ಲಿ ವಿಶಿಷ್ಟ ಹಬ್ಬವೊಂದು ನಡೆದಿತ್ತು. ಇದು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಹಬ್ಬವಾಗಿದ್ದು ದೀಪಾವಳಿಯ ಮರುದಿನವೇ ನಡೆಸಲ್ಪಡುವುದು ವಿಶೇಷವಾಗಿದೆ.
ಹೊಸಬಾಳೆಯಲ್ಲಿ ಕೆಲವರ್ಷಗಳ ಹಿಂದೆ ಕೆರೆಕಟ್ಟಿಸಲಾಗಿದೆ. ಸುಮಾರು ಒಂದು ಎಕರೆಯಷ್ಟು ವ್ಯಾಪಿಸಿರುವ ಕೆರೆಯಲ್ಲಿ ಮೀನು ಬಿಡಲಾಗಿದೆ. ಕೆರೆ ಅಡಿಕೆ ತೋಟದ ಮೇಲ್ಭಾಗದಲ್ಲಿ ಇರುವುದರಿಂದ ಕೆರೆಯ ನೀರು ಹೊಸಬಾಳೆಯ ತೋಟವನ್ನು ಬೇಸಿಗೆಯಲ್ಲೂ ಹಸಿರಾಗಿ ಇಟ್ಟಿದೆ.
ಊರವರು ಸೇರಿ ಈಚೆಗೆ ಹೊಸಬಾಳೆ ಕೃಷಿ ಉತ್ಪಾದಕರ ಕಂಪನಿ ಮಾಡಿಕೊಂಡಿದ್ದಾರೆ. ಈ ಕಂಪನಿಯ ಪರವಾಗಿ ಪ್ರತಿವರ್ಷ ದೀಪಾವಳಿಯ ಮರುದಿನ ಕೆರೆ ಹಬ್ಬ ಆಚರಿಸಲಾಗುತ್ತಿದೆ.
'ಈ ಕೆರೆ ಹಬ್ಬದ ಉದ್ದೇಶ ಊರ ಪರವೂರಲ್ಲಿರುವ ಹೊಸಬಾಳೆಯ ಹೊಸತಲೆಮಾರಿನ ಯುವಕರು, ನೆಂಟರು-ಇಷ್ಟರು ಈ ನೆಪದಲ್ಲಾದರೂ ವರ್ಷಕ್ಕೆ ಒಂದು ದಿನ ಊರಿಗೆ ಬಂದು ಎಲ್ಲರ ಜೊತೆ ಬೆರೆತು ನಿರಾಳವಾಗಿ ಕಳೆಯಲಿ ಎಂಬುದು’ ಎಂದು ಆರಂಭದಲ್ಲೇ ಡಾ.ನಿರಂಜನ ಹೇಳಿದ್ದು ಹಬ್ಬದ ಪೀಠಿಕೆಯಂತಿತ್ತು. ಆ ದಿನ ಊರ ಹೊರಗಿರುವ ಮಕ್ಕಳು, ಮದುವೆಯಾಗಿ ಹೊರಗೆ ಹೋಗಿರುವ ಹೆಮ್ಮಕ್ಕಳು, ಅವರ ಮನೆಯವರು, ಮಕ್ಕಳು, ಆಪ್ತೇಷ್ಟರು ಎಲ್ಲಾ ಸೇರಿದ್ದರು. ಮಧ್ಯಾಹ್ನ ಮೂರಕ್ಕೆ ಸೇರುವುದೆಂದು ಹೇಳಲಾಗಿದ್ದರೂ ಜನ ತಯಾರಾಗಿ ಬರುವಾಗ ನಾಲ್ಕು ಘಂಟೆಯಾಗಿತ್ತು. ಬಂದವರಿಗೆ ಆಕರ್ಷಣೆಯಾಗಿ ದೋಣಿವಿಹಾರ ಕಾಯುತ್ತಿತ್ತು. ಎರಡು ದೋಣಿಗಳಲ್ಲಿ ಆಸಕ್ತರು ಹೋಗಿಬಂದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಊರಲ್ಲಿ ಕಳೆದ ಮೂವತ್ತು ವರ್ಷಗಳಿಂದ ದೇವಸ್ಥಾನದ ಪೂಜೆಮಾಡುತ್ತ ಈಗ ವೃದ್ಧಾಪ್ಯದಲ್ಲಿರುವ ಗಣಪತಿ ಹೆಗಡೆಯವರನ್ನು ಸನ್ಮಾನಿಸಲಾಯಿತು. ಜೊತೆಗೆ ಸಾಗರದ ಖ್ಯಾತ ನೇತ್ರ ತಜ್ಞ ಹಾಗೂ ಬರಹಗಾರ ಡಾ. ಎಚ್ ಎಸ್ ಮೋಹನ ಅವರಿಗೆ ರಾಜ್ಯ ಪ್ರಶಸ್ತಿ ಪಡೆದ ಬಗ್ಗೆ ಹಾಗೂ ನಿರಂಜನ ವಾನಳ್ಳಿಯವರು ಕುಲಪತಿಯಾಗಿರುವ ಬಗ್ಗೆ ಅಭಿನಂದಿಸಲಾಯಿತು.
ನಂತರ ಮಕ್ಕಳಿಂದ ಹಾಡು, ರಸಪ್ರಶ್ನೆ, ಪಿಯಾನೋ ವಾದನ ಮುಂತಾಗಿ ಮನರಂಜನಾ ಕಾರ್ಯಕ್ರಮಗಳು ನಡೆಯುವಾಗ ಬಿಸಿ ಬಿಸಿ ಬಜ್ಜಿ, ಬೋಂಡಾ, ಚುರುಮುರಿ ಸಿದ್ಧವಾಗಿತ್ತು. ಎಲ್ಲರಿಗೂ ಬೇಕಾದಷ್ಟು ಬಡಿಸಿದರು. ಜನ ಖುಷಿಯಲ್ಲಿ ತಿಂದಿದ್ದೇ ತಿಂದಿದ್ದು. ಆ ಹೊತ್ತಿಗೆ ಕತ್ತಲೆಯಾಗುತ್ತಾ ಬಂತು. ಗಣಪತಿ ಹೆಗಡೆಯವರ ಪುತ್ರ ಘನಪಾಠಿ ಗಜಾನನ ಶರ್ಮರವರು ಊರ ಮುಖಂಡ ರಾಜು ಹೆಗಡೆ ದಂಪತಿಗಳಿಂದ ಗಂಗಾರತಿ ನಡೆಸಿಕೊಟ್ಟರು. ಎಲ್ಲರೂ ಸಂಜೆ ವೇಳೆಗೆ ಕೆರೆಯ ದಂಡೆಯ ಮೇಲೆ ದೀಪ ಹಚ್ಚಿ ಖುಷಿಪಟ್ಟರು.
ಅಲ್ಲಿಗೆ ಊರ ಕೆರೆಹಬ್ಬ ಮುಕ್ತಾಯಗೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಮನೆಗಳತ್ತ ಹೆಜ್ಜೆಹಾಕಿದರು.
-ಡಾ.ನಿರಂಜನ ವಾನಳ್ಳಿ, ಕುಲಪತಿ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ಕೋಲಾರ