ಕಬ್ಬಿನ ಜಲ್ಲೆ ಜಗಿಯೋ ಸ್ಪರ್ಧೆಯಲ್ಲಿ ಗೆದ್ದೋನು ಶೂರ , ಸಂಕ್ರಾಂತಿ ಹಬ್ಬದ ಬಾಲ್ಯದ ಸಂಭ್ರಮ ನೆನಪಿಸಿಕೊಂಡ ರಂಗಸ್ವಾಮಿ ಮೂಕನಹಳ್ಳಿ
Jan 15, 2024 09:44 AM IST
ಸಂಕ್ರಾಂತಿ ಹಬ್ಬದ ಬಾಲ್ಯದ ಸಂಭ್ರಮ ನೆನಪಿಸಿಕೊಂಡ ರಂಗಸ್ವಾಮಿ ಮೂಕನಹಳ್ಳಿ
- ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ. ಈ ಹಬ್ಬದ ಸಡಗರದ ಸಮಯದಲ್ಲಿ "ನಾವು ಬದುಕಿದ ರೀತಿ ಒಂಚೂರು ನಮ್ಮ ಮಕ್ಕಳಿಗೂ ಹೇಳೋಣ. ಇಲ್ಲವಾದಲ್ಲಿ ಎಲ್ಲವೂ ಮರೆತು ಹೋಗುತ್ತದೆ" ಎಂದು ತಮ್ಮ ಬಾಲ್ಯದಲ್ಲಿ ಸಂಕ್ರಾಂತಿ ಹಬ್ಬ ಹೇಗಿತ್ತು ಎಂದು ನೆನಪಿಸಿಕೊಂಡಿದ್ದಾರೆ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ
ಹಬ್ಬಗಳು ಬಂತೆಂದರೆ ಬಾಲ್ಯದಲ್ಲಿ ಅದೆಂತಹುದೋ ಸಡಗರ. ಸಂಕ್ರಾಂತಿ ಹಬ್ಬ ಹೆಣ್ಣು ಮಕ್ಕಳಿಗೆ ಸೇರಿದ್ದು ಎನ್ನುವ ಒಂದು ಮಾತಿದೆ. ಎಳ್ಳು ಬೆಲ್ಲ ಬೀರಲು ಶೃಂಗಾರ ಮಾಡಿಕೊಂಡು ಸಡಗರದಿಂದ ಓಡಾಡುತ್ತಾರೆ. ನಮ್ಮ ಮನೆಯಲ್ಲಿ ನಾವು ಮೂವರು ಹುಡುಗರು. ಹಾಗೆಂದು ಸಂಕ್ರಾಂತಿ ಮಜಾ ಎಂದೂ ಕಡಿಮೆಯಾಗಿಲ್ಲ. ಎಳ್ಳು ಬೆಲ್ಲ ಮುಕ್ಕಲು ಅದ್ಯಾವ ಲಿಂಗಬೇಧ ಅಲ್ಲವೇ ? ಜೊತೆಗೆ ಗೆಣಸು , ಉಪ್ಪು ಹಾಕಿ ಬೇಯಿಸಿದ ಕಡಲೇಕಾಯಿ , ಅವರೇಕಾಳು , ಸಕ್ಕರೆ ಅಚ್ಚು ., ಎಲ್ಲಕ್ಕೂ ಮಿಗಿಲಾಗಿ ಹುಡುಗರ ಗುಂಪು ಸೇರಿ ಕಪ್ಪಗೆ ದಪ್ಪಗೆ ಹಲ್ಲು ಮತ್ತು ವಸಡುಗಳಿಗೆ ಚಾಲೆಂಜ್ ಹಾಕುತ್ತಿದ್ದ ಕಬ್ಬನ್ನ ದವಡೆಯಲ್ಲಿ ಸಿಗಿದು , ಅಗಿದು , ಜಗಿದು ರಸ ಕುಡಿಯಲು ಸ್ಪರ್ಧೆ ಏರ್ಪಡುತ್ತಿತ್ತು. ಒಂದು ಜಲ್ಲೆಯನ್ನ ಯಾರು ಬೇಗ ತಿಂದು ಮುಗಿಸುತ್ತಾರೆ ಎನ್ನುವುದೇ ಒಂದು ದೊಡ್ಡ ಸ್ಪರ್ಧೆ , ಗೆದ್ದವ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದ್ದ , ಸೋತವರ ಮುಖ ಸಣ್ಣಗಾಗುತ್ತಿತ್ತು.
ಪುರೋಹಿತರ ಮಗ ಚಂದ್ರ ಮೌಳಿ ಹುಟ್ಟಾ ಮಾತುಗಾರ , ಆದರೆ ಯಾವ ಸ್ಪರ್ಧೆಯಲ್ಲೂ ಗೆಲ್ಲುತ್ತಿರಲಿಲ್ಲ , ಬಟ್ ಅವನ ಸ್ಪಿರಿಟ್ ಇಂದಿಗೂ ಕಣ್ಣ ಮುಂದಿದೆ. ' ನೋಡು ನಾನು ಗೆಲ್ಲಬೇಕು ಅಂತಾನೆ ಇದ್ದೆ , ಆದರೆ ಅವನಿಗೆ (ಗೆದ್ದವನ ತೋರಿಸುತ್ತ ) ಅಂತ ಬಿಟ್ಟುಕೊಟ್ಟೆ ' ಎಂದು ದೇಶಾವರಿ ನಗೆ ಬೀರುತ್ತಿದ್ದ. ಸೋತ ಬೇಸರವನ್ನ ಅವನ ಮುಖದಲ್ಲಿ ಎಂದೂ ಕಾಣಲಿಲ್ಲ. ಬಹಳ ಜೋವಿಯಲ್ ಮನುಷ್ಯ. ಅವರಪ್ಪ ಮಾತ್ರ ಅಷ್ಟೇ ಸಿಡುಕರಾಗಿದ್ದರು. ಒಮ್ಮೆ ಚಂದ್ರಮೌಳಿ ' ನಾನು ನಿನ್ನೆ ಕೋಲಾರ ಗೋಲ್ಡ್ ಫೀಲ್ಡ್ ಗೆ ಹೋಗಿ ಒಂದೈದು ಕೇಜಿ ಚಿನ್ನ ತರೋಣ ಅಂತಿದ್ದೆ , ಆದರೇನು ಮಾಡುವುದು ಈ ನಮ್ಮಪ್ಪ ಬಿಡುತ್ತಿಲ್ಲ ' ಎಂದ.
ಅಲ್ಲೇ ಇದ್ದ ಅವರಪ್ಪ ವಿಶ್ವನಾಥಪ್ಪ ಚಂದ್ರಮೌಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು . ಬಡತನದ ಜೀವನ , ಅಂದು ಆತನಿಗೇನು ವ್ಯಥೆಯಿತ್ತೋ ? ಬಟ್ ಅಂದಿಗೆ ಆತ ನನ್ನ ಕಣ್ಣಿಗೆ ನರರಾಕ್ಷಸ. ಇರಲಿ ಹಾಗೆ ನೋಡಲು ಹೋದರೆ ಹಬ್ಬಕ್ಕೆ ಒಂದು ವಾರ ಅಥವಾ ಹದಿನೈದು ದಿನ ಮುಂಚೆಯೇ ಸಡಗರ ಶುರುವಾಗುತ್ತಿತ್ತು. ಸಕ್ಕರೆ ಅಚ್ಚು ಮಾಡುವುದು , ಬೆಲ್ಲವನ್ನ , ಕೊಬ್ಬರಿಯನ್ನ ಸಣ್ಣಗೆ ಹೆಚ್ಚಿಕೊಳ್ಳುವುದು , ಕಬ್ಬನ್ನ ತಂದು ಶೇಖರಿಸುವುದು ಹೋಹ್ ಅದೆಂತಹ ಸಡಗರ. ಹಬ್ಬದ ದಿನವಂತೂ ಮೂವರಿಗೂ ಮೈಗೆ ಎಣ್ಣೆ ಹಚ್ಚಿ ಸ್ವಲ್ಪ ಬಿಸಲು ಕಾಯಿಸಲು ನಿಲ್ಲಿಸುತ್ತಿದ್ದರು . ಹುಟ್ಟಬಟ್ಟೆಯಲ್ಲಿ ಹಜಾರದಲ್ಲಿ ಕುಣಿದಾಡಿದ್ದೆ ಕುಣಿದಾಡಿದ್ದು ! ಎಣ್ಣೆಯ ಅಂಡನ್ನ ಗೋಡೆಗೆ ಒತ್ತಿ , ಕಳೆದ ವರ್ಷದ ಗುರುತಿನ ಜೊತೆಗೆ ಹೋಲಿಕೆ ಮಾಡಿ ನಗುತ್ತಿದ್ದೆವು , ಬಾಲ್ಯದಲ್ಲಿ ಎಷ್ಟು ಸಣ್ಣ ವಿಷಯದಿಂದ ಭೂಮ್ಯವನ್ನ ಪಡೆಯುತ್ತಿದ್ದೆವು ಅಲ್ಲವೇ ? ಬೆಳೆಯುತ್ತ ಮಾಯವಾಗುವ ಈ ಕ್ರಿಯೆಗೆ ನಾಗರೀಕತೆ ಎನ್ನುವ ಹೆಸರು ಬೇರೆ !!
ಸ್ಪರ್ಧೆಯಲ್ಲಿ ಸರಿಯಾಗಿ ಆಸ್ವಾದಿಸಿ ತಿನ್ನಲು ಆಗುವುದಿಲ್ಲ , ಅಲ್ಲೇನಿದ್ದರೂ ಗೆಲ್ಲುವ ತವಕ , ಹೀಗಾಗಿ ನಾನು ಸ್ಪರ್ಧೆಯಿಂದ ಗಾವುದ ದೂರವಿರುತ್ತಿದ್ದೆ. ಆಮೇಲೆ ನಿಧಾನವಾಗಿ ಕುಳಿತು ಇಡೀ ಜಲ್ಲೆಯನ್ನ ಹಲ್ಲಿನಿಂದ ಸಿಗಿದು , ಅಗೆದು ರಸ ಕುಡಿಯುತ್ತಿದ್ದೆ. ಕಾಂತನಿಗೆ ಅದು ಆಗುತ್ತಿರಲಿಲ್ಲ , ರಂಗ ಸಿಪ್ಪೆ ಸುಲಿದು ಕೊಡು ಎಂದು ಬರುತ್ತಿದ್ದ. ಬಾಲ್ಯದಲ್ಲಿ ಕಾಂತ ಸದಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹೀಗಾಗಿ ಅವನ ಮೇಲೆ ಎಲ್ಲರಿಗೂ ವಿಶೇಷ ಅಕ್ಕರೆ. ಅವನನ್ನ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದೆವು.
ತಿನ್ನುವುದು , ತಿನ್ನುವುದು ಮತ್ತು ತಿನ್ನುವುದು ಜೊತೆಗೆ ಕುಣಿತ , ಆಟ ಮತ್ತು ಆಟ ಅಷ್ಟೇ , ದಿನ ಮುಗಿದು ಹೋಗುತ್ತಿತ್ತು. ನಿನ್ನೆಯ ನೆನೆಪುಗಳು ಅದೆಷ್ಟು ಮಧುರ. ಅವತ್ತಿಗೆ ಹೇಳಿಕೊಳ್ಳುವ ಯಾವ ಭೌತಿಕ ಒಡೆತನ ಇರಲಿಲ್ಲ , ಆದರೆ ಜಗತ್ತಿನಲ್ಲಿರುವ ಸಕಲ ಖುಷಿ ಕಾಲ ಬಳಿಯೇ ಬಿದ್ದಿರುತ್ತಿತ್ತು. ಇಂದು ಬದಲಾಗಿ ಹೋಗಿದೆ , ಇವತ್ತು ನಾನು ಆಂತಲ್ಲ ಬಹುತೇಕ ಕಥೆ ಸೇಮ್ . ಸಿದ್ದ ಎಳ್ಳುಬೆಲ್ಲ ಕೊಳ್ಳುತ್ತಾರೆ , ಸಿದ್ದ ಸಕ್ಕರೆ ಅಚ್ಚು ತರುತ್ತಾರೆ. ಎಲ್ಲವೂ ಸಿದ್ದವಾಗಿರುತ್ತದೆ , ಅದನ್ನ ತರುವುದು ತೋರಿಕೆಗೆ ನಾಲ್ಕು ಮನೆಗೆ ಎಳ್ಳು ಕೊಟ್ಟು ಬಂದರೆ ಅಲ್ಲಿಗೆ ಹಬ್ಬ ಮುಕ್ತಾಯ. ಅಷ್ಟಕ್ಕೇ ಸಾಯಂಕಾಲಕ್ಕೆ ಉಸ್ಸಪ್ಪ ಎನ್ನುವ ಉದ್ಘಾರ ಬೇರೆ.
ಇನ್ನು ಕಬ್ಬಿನ ಜಲ್ಲೆಯನ್ನ ಹಲ್ಲಿನಲ್ಲಿ ಸೀಳಿ ತಿನ್ನುವ ಮಂದಿ ಎಷ್ಟಿದ್ದಾರು ? ನಿನ್ನೆ ಕೆಳಗಿನ ಫೋಟೋದಲ್ಲಿ ಕಾಣುವ ಕಬ್ಬಿನಲ್ಲಿ ಎರಡು ತಂದೆ , ಸಿಗಿದು ತಿಂದೆ , ಅನ್ನಿ 'ಪಪ್ಪಾ ನಿನ್ನ ಬಾಯಲ್ಲಿ ರಕ್ತ ' ಎಂದು ಕಿರುಚಿದಳು. ದವಡೆಯ ವಸಡು ಕಿತ್ತು ರಕ್ತ ಬಂದಿತ್ತು. ಆದರೇನು ನನ್ನ ನಿನ್ನೆಯ ಒಂದಷ್ಟು ಕ್ಷಣ ಜೀವಿಸಿದ ಖುಷಿ ನನ್ನದು. ನನಗೂ ಹಾಗೆ ಸಿಪ್ಪೆ ಸುಲಿದು ಕೊಡು ಅಂದಿದ್ದ ಅನ್ನಿ ರಕ್ತ ನೋಡಿ ಸುಮ್ಮನಾದಳು. ಅವರಜ್ಜಿ ಚಾಕುವಿನಿಂದ ಸಿಪ್ಪೆ ತೆಗೆದು , ಸಣ್ಣ ಹೋಳುಗಳಾಗಿ ಕತ್ತರಿಸಿ ಕೊಟ್ಟರು ಎನ್ನುವುದು ಬೇರೆಯ ಕಥೆ.
ಇವತ್ತು ನಮ್ಮ ಬದುಕು , ಅದರಲ್ಲೂ ನಗರ ಪ್ರದೇಶದಲ್ಲಿ ಬದುಕುವ ಜನರ ಬದುಕು ಥೇಟ್ ಸ್ಯಾಕರಿನಿನ ಹಾಗೆ ಸಿಹಿಯುಂಟು ಶಕ್ತಿಯಿಲ್ಲ . ಈ ವರ್ಷ ಸಿಹಿ , ಶಕ್ತಿ , ಆರೋಗ್ಯ ಎಲ್ಲವೂ ತುಂಬಿರಲಿ. ನಾವು ಬದುಕಿದ ರೀತಿ ಒಂಚೂರು ನಮ್ಮ ಮಕ್ಕಳಿಗೂ ಹೇಳೋಣ. ಇಲ್ಲವಾದಲ್ಲಿ ಎಲ್ಲವೂ ಮರೆತು ಹೋಗುತ್ತದೆ.
ಹೋಗುವ ಮುನ್ನ : “ಯದಿ ಅನಾತ್ಮಜ್ಞಸತ್ತ್ವಂ ತದಾ ಆತ್ಮಶುದ್ದರ್ಥಂ ತತ್ತ್ವವಿತ್ ಚೇತ್ ಲೋಕಸಂಗ್ರಹಾರ್ಥಂ” ಯಾವೊಬ್ಬ ವ್ಯಕ್ತಿಯು ಆತ್ಮಜ್ಞಾನವನ್ನು ಪಡೆದವನಲ್ಲವೋ ಆತನು ತನ್ನ ಚಿತ್ತ ಶುದ್ದಿಗಾಗಿ ಕರ್ಮಗಳನ್ನು ಮಾಡಬೇಕು, ಯಾರು ಆತ್ಮಜ್ಞಾನವನ್ನು ಹೊಂದಿರುತ್ತಾರೆಯೋ ಅಂತಹವರು ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡಬೇಕು , ಅರ್ಥಾತ್ ಯಾರೊಬ್ಬರೂ ಕರ್ಮಗಳನ್ನು ನಿರಾಕರಿಸುವಂತಿಲ್ಲ. ಅವರವರಿಗೆ ಅವರವರ ಕರ್ಮಗಳು ವಿಧಿಸಲ್ಪಡುತ್ತವೆ, ಆ ಕರ್ಮಗಳ ಹಿಂದೆ ಅದರದೇ ಆದ ಉದ್ದೇಶಗಳೂ ಇರುತ್ತವೆ. ಆದುದರಿಂದ ಪ್ರತಿಯೊಬ್ಬರೂ ಕರ್ಮಗಳನ್ನು ಮಾಡಬೇಕು .
ಇಂದಿನಿಂದ ಉತ್ತರಾಯಣ ಶುರು . ಭೀಷ್ಮ ಪಿತಾಮಹ ತನ್ನ ದೇಹವನ್ನ ತೊರೆಯಲು ಉತ್ತರಾಯಣಕ್ಕೆ ಕಾದಿದ್ದರು ಎನ್ನುವ ಉಲ್ಲೇಖವಿದೆ . ಅಂದರೆ ಏನೋ ವಿಶೇಷ ಇರಬೇಕಲ್ಲವೇ ? ನಾವಂದುಕೊಂಡ ಕಾರ್ಯ ಯಾವುದೇ ಇರಲಿ ತಡ ಮಾಡದೆ ಶುರು ಮಾಡೋಣ . ನೆನಪಿರಲಿ ಕರ್ಮವನ್ನ ಯಾರೂ ನಿರಾಕರಿಸುವಂತಿಲ್ಲ . ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು .
- ರಂಗಸ್ವಾಮಿ ಮೂಕನಹಳ್ಳಿ (ಫೇಸ್‌ಬುಕ್ ಬರಹ)