Monsoon Fitness: ಮಳೆಗಾಲದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವ ಸೃಜನಾತ್ಮಕ ವಿಧಾನ ಹೀಗಿದೆ; 10000 ಹೆಜ್ಜೆ ನಡೆಯಲು ಈ ಸರಳ ಮಾರ್ಗ ಅನುಸರಿಸಿ
Jul 03, 2023 05:40 PM IST
ಮಳೆಗಾಲ ಮತ್ತು ಫಿಟ್‌ನೆಸ್
- ಮಳೆಗಾಲದಲ್ಲಿ ಹೊರಗಡೆ ಧೋ ಎಂದು ಸುರಿಯುತ್ತಿರುವ ವರ್ಷಧಾರೆಯ ನಡುವೆ ಫಿಟ್‌ನೆಸ್ ಕಾಯ್ದುಕೊಳ್ಳುವುದು ನಿಜಕ್ಕೂ ಸವಾಲು. ಅದರಲ್ಲೂ ಪ್ರತಿದಿನ 10000 ಹೆಜ್ಜೆ ನಡೆಯಬೇಕು ಎಂದರೆ ಹೇಗೆ ಸಾಧ್ಯ. ಖಂಡಿತ ಸಾಧ್ಯವಿದೆ. ನೀವು ಮನೆಯೊಳಗೆ 10000 ಹೆಜ್ಜೆ ನಡೆದು, ಫಿಟ್‌ನೆಸ್ ಗುರಿ ತಲುಪಲು ಸಾಧ್ಯ.
ಮಾನ್ಸೂನ್ ಬೇಸಿಗೆಯ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ದೇಹ, ಮನಕ್ಕೆ ಮುದ ನೀಡುವುದು ಸುಳ್ಳಲ್ಲ. ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಕುಡಿಯುತ್ತಾ, ಪಕೋಡ ಮೆಲ್ಲುತ್ತಾ ಪೇಪರ್ ಓದಲು ಖುಷಿ ಎನ್ನಿಸುತ್ತದೆ. ಆದರೆ ಮಳೆಗಾಲದ ಬೆಳಗು ನಮ್ಮನ್ನು ಜಡವಾಗಿಸುವುದು ಸುಳ್ಳಲ್ಲ. ಅಲ್ಲದೆ ಒಂದೇ ಸಮನೆ ಸುರಿಯುತ್ತಿರುವ ಮಳೆಯು ಬೆಳಿಗಿನ ವಾಕಿಂಗ್ ಹೋಗಲು ಅನುಮತಿಸುವುದಿಲ್ಲ. ತಿನ್ನುವುದು ಕುಳಿತುಕೊಳ್ಳುವುದು ಇದು ದೇಹದಲ್ಲಿ ಇನ್ನಷ್ಟು ಕ್ಯಾಲೊರಿ ಹೆಚ್ಚಲು ಕಾರಣವಾಗಬಹುದು. ಮಳೆಗಾಲದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವುದು ಸವಾಲು ಎನ್ನಿಸುತ್ತದೆ. ಆ ಕಾರಣಕ್ಕೆ ಇನ್‌ಡೋರ್ ವ್ಯಾಯಾಮಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ದೇಹ ಫಿಟ್ ಆಗಿರಲು ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ. ಆರೋಗ್ಯವಂತ ವ್ಯಕ್ತಿ ಫಿಟ್‌ನೆಸ್ ಕಾಯ್ದುಕೊಳ್ಳಲು 10000 ಹೆಜ್ಜೆ ನಡೆಯಬೇಕು. ಆದರೆ ಮಳೆಗಾಲದಲ್ಲಿ ಇದು ಹೇಗೆ ಸಾಧ್ಯ ಎಂದು ಚಿಂತಿಸುತ್ತಿದ್ದೀರಾ? ಖಂಡಿತ ಸಾಧ್ಯವಿದೆ. ಮನೆಯೊಳಗೆ ನೀವು 1000 ಹೆಜ್ಜೆ ನಡೆಯಬಹುದು.
ಫರಿದಾಬಾದ್‌ನ ಅಮೃತಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಡಾ. ರಾಮ್ನಿವಾಸ್ ಗುಪ್ತಾ ಅವರು ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಮಳೆಗಾಲದಲ್ಲಿ ಮನೆಯೊಳಗೆ 10000 ಹೆಜ್ಜೆ ನಡೆಯುವುದು ಹೇಗೆ ಎಂಬ ಕುರಿತು ಮಾಹಿತಿ ನೀಡಿದ್ದಾರೆ.
ಟಿವಿ ನೋಡುವಾಗ ವಾಕ್ ಮಾಡಿ
ಮಳೆಗಾಲದಲ್ಲಿ ಇನ್‌ಡೋರ್ ವಾಕಿಂಗ್‌ಗೆ ಟಿವಿ ನೋಡುವಾಗ ನಡೆಯುವುದು ಒಂದು ಆಯ್ಕೆ. ಟಿವಿ ನೋಡುವಾಗ, ಸಂಗೀತ ಕೇಳುವಾಗ, ಫೋನ್‌ನಲ್ಲಿ ಮಾತನಾಡುವಾಗ ನಡೆದಾಡಿ. ಇದು ನೀವು ಎಲ್ಲಿಗೂ ಹೋದಂತೆ ಅನ್ನಿಸುವುದಿಲ್ಲ, ಆದರೆ ಹೆಜ್ಜೆಗಳು ಕೌಂಟ್ ಆಗುತ್ತದೆ.
ಡಾನ್ಸ್ ಮಾಡಿ
ಮಳೆಗಾಲದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳಲು ಇನ್ನೊಂದು ದಾರಿ ಎಂದರೆ ಡಾನ್ಸ್ ಮಾಡುವುದು. ಮನೆಯೊಳಗೆ ಮ್ಯೂಸಿಕ್ ಹಾಕಿಕೊಂಡು ಡಾನ್ಸ್ ಮಾಡಿ ಅಥವಾ ಏರೋಬಿಕ್ ವ್ಯಾಯಾಮ ಮಾಡಿ. ಜುಂಬಾ, ಸ್ಕಿಪಿಂಗ್, ಜಪಿಂಗ್ ಜಾಕ್ಸ್, ಹೂಪಿಂಗ್‌ಗಳು ಮನೆಯ ಒಳಗಡೆ ಮಾಡಬಹುದಾದ ಉತ್ತಮ ವ್ಯಾಯಾಮಗಳಾಗಿವೆ.
ಅಪಾರ್ಟ್‌ಮೆಂಟ್, ಕಚೇರಿಯ ವರಾಂಡದಲ್ಲಿ ನಡೆಯಿರಿ
ನಿಮ್ಮ ಪರಿಧಿಯನ್ನು ಲೀವಿಂಗ್ ರೂಮ್‌ಗಷ್ಟೇ ಸೀಮಿತಗೊಳಿಸದಿರಿ. ಮಳೆಗಾಲದಲ್ಲಿ ಕಚೇರಿ ಅಥವಾ ಅಪಾರ್ಟ್‌ಮೆಂಟ್ ಹಜಾರ ಅಥವಾ ವರಾಂಡದಲ್ಲಿ ನಡೆದಾಡಬಹುದು. ಶಾಪಿಂಗ್ ಕಾಂಪ್ಲೆಕ್ಸ್ ಅಥವಾ ಶಾಪಿಂಗ್ ಮಾಲ್‌ಗಳ ಒಳಗೂ ಸುಮ್ಮನೆ ನಡೆದಾಡಬಹುದು. ಇದು ನಿಮಗೆ ಹೆಜ್ಜೆಯ ಕೌಂಟ್ ಹೆಚ್ಚಲು ಸಹಾಯ ಮಾಡುತ್ತದೆ. ಅಲ್ಲದೆ ಮಳೆಯ ತೊಂದರೆಯೂ ಕಾಡುವುದಿಲ್ಲ.
ಟ್ರೆಡ್‌ಮಿಲ್ ಮೇಲೆ ನಡೆದಾಡುವುದು
ನಿಮ್ಮ ಮನೆಯಲ್ಲಿ ಟ್ರೆಡ್‌ಮಿಲ್ ಇದ್ದರೆ ನೀವು ಖಂಡಿತ ಅದರ ಮೇಲೆ ಹೆಚ್ಚು ಹೆಚ್ಚು ನಡೆದಾಡಬಹುದು ಅಥವಾ ಜಿಮ್‌ನಲ್ಲಿ ಹೋಗಿ ಟ್ರೆಡ್‌ಮಿಲ್ ಮೇಲೆ ನಡೆಯಬಹುದು.
ಬಾಡ್‌ಮಿಂಟನ್ ಅಥವಾ ಟೇಬಲ್ ಟೆನ್ನಿಸ್
ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆ ಸೇರಿ ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನಿಸ್, ಬಾಡ್‌ಮಿಂಟನ್ ಅಥವಾ ಮಿನಿ ಗಾಲ್ಫ್‌ನಂತಹ ಆಟಗಳನ್ನೂ ಸಹ ಆಡಬಹುದು. ಈ ಚಟುವಟಿಕೆಗಳು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುವುದು ಮಾತ್ರವಲ್ಲ, ಮನರಂಜನೆಯನ್ನೂ ನೀಡುತ್ತವೆ.
ಕಸ ಗುಡಿಸುವುದು
ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು, ಧೂಳು ಗುಡಿಸುವುದು ಒರೆಸುವುದು ಮುಂತಾದ ದೈನಂದಿನ ಚಟುವಟಿಕೆಗಳು ನಿಮ್ಮ ಹೆಜ್ಜೆಯ ಸಂಖ್ಯೆ ಹೆಚ್ಚಲು ನೆರವಾಗುತ್ತದೆ.
ʼನೆನಪಿಡಿ, ಯಾವುದೇ ಕಾರಣಕ್ಕೂ ಮಳೆಗಾಲ ನೀವು 10000 ಹೆಜ್ಜೆ ನಡೆಯಲು ಅಡ್ಡಿಯಾಗಬಾರದು. ಹವಮಾನವನ್ನು ಲೆಕ್ಕಿಸದೇ ಒಳಾಂಗಣ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದನ್ನೂ ಮೀರಿ ನೀವು ನಡೆಯಬೇಕು ಅಂತಿದ್ದರೆ ರೈನ್‌ಕೋಟ್ ಅಥವಾ ಛತ್ರಿ ಧರಿಸಿ ಮಳೆಯಲ್ಲಿ ನಡೆಯಬಹುದು. ಮಳೆಗಾಲದಲ್ಲಿ ಪ್ರಕೃತಿಯೊಂದಿಗೆ ನಡೆದಾಡುವುದು ಖುಷಿ ಕೊಡುವ ಸಂಗತಿಯೂ ಹೌದು. ಆದರೆ ಸುರಕ್ಷಿತವಾಗಿರುವುದು ಮುಖ್ಯವಾಗುತ್ತದೆʼ ಎನ್ನುತ್ತಾರೆ ವೈದ್ಯರು.