Sunbathing: ನೀವು ಎಂದಾದ್ರೂ ಸೂರ್ಯಸ್ನಾನ ಮಾಡಿದ್ರಾ? ಚಳಿಗಾಲದಲ್ಲಿ ಸನ್‌ಬಾತ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
Dec 30, 2023 07:15 PM IST
ಸೂರ್ಯಸ್ನಾನ
- Sunbathing in Winter: ನೀವು ಎಂದಾದರೂ ಸೂರ್ಯಸ್ನಾನ ಮಾಡಿದ್ದೀರಾ? ಇಲ್ಲವಾದರೆ ಈ ಚಳಿಗಾಲದಲ್ಲಿ ಖಂಡಿತ ಪ್ರಯತ್ನಿಸಿ. ಸೂರ್ಯನ ಬಿಸಿಲಿನಿಂದ ಸಿಗುವ ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.
ನಾವೀಗ ಚಳಿಗಾಲದ ಮಧ್ಯದಲ್ಲಿದ್ದೇವೆ. ಚಳಿ ತನ್ನ ಇರುವಿಕೆಯನ್ನು ತೋರಿಸುತ್ತಿದೆ. ಈ ಸಮಯದಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಒಂದು ರೀತಿಯ ಹಿತವನ್ನು ನೀಡುತ್ತದೆ. ಸೂರ್ಯನ ಬಿಸಿಲು ಚಳಿ ಓಡಿಸುತ್ತದೆ ಎಂದು ಮನಸ್ಸಿಗೆ ಬಂದಾಗಲೆಲ್ಲ ಬಿಸಿಲಿಗೆ ಹೋದೀರಿ ಜೋಕೆ. ಅತಿಯಾದ ಬಿಸಿಲಿನಿಂದಾಗುವ ಅಪಾಯವೇನು ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ಯಾವುದೇ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಬಳಸದೇ ಬಿಸಿಲಿಗೆ ಅತಿಯಾಗಿ ಒಡ್ಡಿಕೊಳ್ಳುವುದು ಹಾನಿಕಾರಕ. ಅದನ್ನೇ ಮಿತವಾಗಿ ಸೂರ್ಯನ ಬಿಸಿಲು ಕಾಯಿಸುವುದರಿಂದ ನಿಮಗೆ ಅನೇಕ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ಸಂಶೋಧನೆ ಸಾಬೀತುಪಡಿಸಿದೆ.
ಸೂಕ್ತ ರಕ್ಷಣೆ ಇಲ್ಲದೆ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಒಂದಲ್ಲ, ಎರಡಲ್ಲ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸನ್‌ಬರ್ನ್, ಸ್ಕಿನ್‌ಟ್ಯಾನ್ ಬಗ್ಗೆಲ್ಲಾ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಮಿತವಾಗಿ ಮಾಡುವ ಸೂರ್ಯಸ್ನಾನದಿಂದ ಬಹಳಷ್ಟು ಪ್ರಯೋಜನವಿದೆ. ಅದರಲ್ಲೂ ಚಳಿಗಾಲದಲ್ಲಿ ಇದರ ಪ್ರಯೋಜನ ಇನ್ನೂ ಹೆಚ್ಚೇ. ಯಾವುದೇ ಅಡ್ಡ ಪರಿಣಾಮವಿಲ್ಲದ ಸನ್‌ಸ್ಕ್ರೀನ್ ಬಳಕೆ ಮಾಡಿ ನೀವೂ ಸನ್‌ಬಾತ್ ತೆಗೆದುಕೊಂಡರೆ ಹಲವಾರು ಪ್ರಯೋಜನಗಳು ನಿಮ್ಮದಾಗಲಿದೆ.
ಸೂರ್ಯಸ್ನಾನದ ಪ್ರಯೋಜನಗಳು ಹೀಗಿವೆ
ಅಧಿಕ ರಕ್ತದೊತ್ತಡ ನಿಭಾಯಿಸುತ್ತದೆ
ಅಧಿಕ ರಕ್ತದೊತ್ತಡದಿಂದ ನೀವು ಬಳಲುತ್ತಿದ್ದರೆ ಸೂರ್ಯಸ್ನಾನ ಅದಕ್ಕೆ ಉತ್ತಮವಾಗಿದೆ. ಇದು ಚರ್ಮದ ಮೇಲಿರುವ ನೈಟ್ರಿಕ್ ಆಕ್ಸೈಡ್ ಅನ್ನು ಪ್ರಚೋದಿಸುತ್ತದೆ. ಇದು ಅಪಧಮನಿಗಳ ಹಿಗ್ಗುವಿಕೆಯನ್ನು ಉತ್ತೇಜಿಸುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡ ಅಧಿಕವಾಗುವುದನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ
ನೀವು ಮಿತವಾಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ನಿದ್ದೆಗೆ ಅಗತ್ಯವಾದ ಮೆಲಟೊನಿನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಉತ್ತಮ ನಿದ್ದೆ ನಿಮ್ಮದಾಗುತ್ತದೆ. ಬೆಳಗ್ಗಿನ ಸಮಯದಲ್ಲಿ ಒಂದು ಗಂಟೆ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಸಿರ್ಕಾಡಿಯನ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
ಇದನ್ನೂ ಓದಿ: Child Care: ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ, ಅಮ್ಮಂದಿರು ತಪ್ಪದೇ ಪಾಲಿಸಬೇಕಾದ 6 ನಿಯಮಗಳಿವು
ಖಿನ್ನತೆ ದೂರ ಮಾಡುತ್ತದೆ
ಸೂರ್ಯನ ಬೆಳಕು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಳಿಗಾಲವು ದೊಡ್ಡ ಸವಾಲಾಗಿದೆ. ಹೆಚ್ಚಿನ ಜನರು ಚಳಿಗಾಗಲದಲ್ಲಿ ಋತುಮಾನದ ಖಿನ್ನತೆಯಿಂದ ಬಳಲುತ್ತಾರೆ. ಸೂರ್ಯನ ಬೆಳಕು ಸಿರೊಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಖಿನ್ನತೆ ದೂರಮಾಡಿ, ಉತ್ತಮ ಮನಸ್ಥಿತಿ ಮತ್ತು ಶಾಂತ ಭಾವನೆಗಳನ್ನು ಮೂಡಿಸುವುದಕ್ಕೆ ಕಾರಣವಾಗಿದೆ.
ವಿಟಮಿನ್ ಡಿ ಮಟ್ಟ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ
ವೈದ್ಯರು ಹೇಳುವ ಪ್ರಕಾರ ನೀವು ಮುಂಜಾನೆಯ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ನೈಸರ್ಗಿಕವಾಗಿಯೇ ವಿಟಮಿನ್ ಡಿ ನಿಮ್ಮ ದೇಹ ಸೇರುತ್ತದೆ. ವಿಟಮಿನ್ ಡಿ ಯು ವಿವಿಧ ಕಾಯಿಲೆ ಮತ್ತು ಸೋಂಕುಗಳಿಂದ ದೇಹವನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ಇದು ಗಟ್ಟಿಮುಟ್ಟಾದ ಮೂಳೆಗಳನ್ನು ಮತ್ತು ಆರೋಗ್ಯಕರ ಹಲ್ಲುಗಳನ್ನು ನೀಡುತ್ತದೆ.
ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ
ಎನ್‌ಸಿಬಿಐ ಪ್ರಕಾರ, ಸೂರ್ಯನ ಬೆಳಕು ವಿಟಮಿನ್ ಡಿ ಯ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಈ ಪೋಷಕಾಂಶವು ಸ್ತನ, ಕೊಲೊನ್, ಪ್ರಾಸ್ಟೇಟ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂರ್ಯನ ಬೆಳಕಿಗೆ ಮೈಯೊಡ್ಡಿದಾಗ ಮಾನವನ್ನ ಚರ್ಮವು ವಿಟಮಿನ್ ಡಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವುದೇ ಲೋಷನ್ ಅಥವಾ ಎಣ್ಣೆಯನ್ನು ತ್ವಚೆಗೆ ಲೇಪಿಸದೇ ಮುಂಜಾನೆಯ ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂ ಕೆಲವು ಕ್ಯಾನ್ಸರ್ ಅಪಾಯವನ್ನು ತಡೆಗಟ್ಟ ಬಹುದಾಗಿದೆ.