logo
ಕನ್ನಡ ಸುದ್ದಿ  /  ಜೀವನಶೈಲಿ  /  Chicken 65: ಚಿಕನ್‌ 65 ನಿಮ್ಗೂ ಇಷ್ಟನಾ, ಇದಕ್ಕೆ ಈ ಹೆಸರು ಬಂದಿದ್ದೇ ರೋಚಕ; ಇದರ ಹಿಂದಿದೆ ಹಲವು ಆಸಕ್ತಿಕರ ಸಂಗತಿ

Chicken 65: ಚಿಕನ್‌ 65 ನಿಮ್ಗೂ ಇಷ್ಟನಾ, ಇದಕ್ಕೆ ಈ ಹೆಸರು ಬಂದಿದ್ದೇ ರೋಚಕ; ಇದರ ಹಿಂದಿದೆ ಹಲವು ಆಸಕ್ತಿಕರ ಸಂಗತಿ

Reshma HT Kannada

Jul 05, 2024 05:10 PM IST

google News

ಚಿಕನ್‌ 65 ನಿಮ್ಗೂ ಇಷ್ಟನಾ, ಇದಕ್ಕೆ ಈ ಹೆಸರು ಹೇಗೆ ಬಂತು ತಿಳಿದಿದ್ಯಾ? ಇದರ ಹಿಂದಿನ ಆಸಕ್ತಿದಾಯಕ ವಿಚಾರ ಇಲ್ಲಿದೆ

    • ಮಾಂಸಾಹಾರಿಗಳ ಫೇವರಿಟ್‌ ಚಿಕನ್‌, ಇದರಲ್ಲಿ ಸಾಕಷ್ಟು ವೆರೈಟಿ ಖಾದ್ಯಗಳನ್ನು ತಯಾರಿಸಬಹುದು. ಚಿಕನ್‌ 65 ಇಂತಹ ಖಾದ್ಯಗಳಲ್ಲಿ ಒಂದು. ಇದು ಹಲವರ ಫೇವರಿಟ್‌ ಕೂಡ. ಆದ್ರೆ ನೀವು ಎಂದಾದ್ರೂ ಚಿಕನ್‌ 65 ಎಂಬ ಹೆಸರು ಈ ಖಾದ್ಯಕ್ಕೆ ಏಕೆ ಬಂತು ಅಂತ ಯೋಚಿಸಿದ್ದೀರಾ? ಇದರ ಹಿಂದಿನ ಆಸಕ್ತಿದಾಯಕ ಕಥೆಯಿದು. (ಬರಹ: ಪ್ರಿಯಾಂಕ ಗೌಡ)
ಚಿಕನ್‌ 65 ನಿಮ್ಗೂ ಇಷ್ಟನಾ, ಇದಕ್ಕೆ ಈ ಹೆಸರು ಹೇಗೆ ಬಂತು ತಿಳಿದಿದ್ಯಾ? ಇದರ ಹಿಂದಿನ ಆಸಕ್ತಿದಾಯಕ ವಿಚಾರ ಇಲ್ಲಿದೆ
ಚಿಕನ್‌ 65 ನಿಮ್ಗೂ ಇಷ್ಟನಾ, ಇದಕ್ಕೆ ಈ ಹೆಸರು ಹೇಗೆ ಬಂತು ತಿಳಿದಿದ್ಯಾ? ಇದರ ಹಿಂದಿನ ಆಸಕ್ತಿದಾಯಕ ವಿಚಾರ ಇಲ್ಲಿದೆ

ದಕ್ಷಿಣ ಭಾರತೀಯ ಶೈಲಿಯ ಉಪಹಾರದ ಭಕ್ಷ್ಯಗಳು ಎಂದಾಕ್ಷಣ ನಿಮಗೆ ನೆನಪಿಗೆ ಬರುವ ಹೆಸರುಗಳು ಯಾವ್ಯಾವು.. ದೋಸೆ, ಇಡ್ಲಿ, ನೀರು ದೋಸೆ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಉಪ್ಪಿಟ್ಟು, ಅಪ್ಪಂ, ಉಪ್ಪಮ್ ಹೀಗೆ ಈ ಭಕ್ಷ್ಯಗಳೇ ಕಣ್ಣ ಮುಂದೆ ಬರುತ್ತವೆ. ಮಾಂಸಹಾರಿ ಭಕ್ಷ್ಯಗಳೆಂದರೆ ಮಂಗಳೂರಿನ ಬಂಗುಡೆ ಪುಳಿಮುಂಚಿ, ಮಂಡ್ಯದ ಮಟನ್ ಕೈಮಾ, ನಾಟಿ ಕೋಳಿ ಸಾರು ಅಥವಾ ತಮಿಳುನಾಡಿನ ದಿಂಡಿಗಲ್ ಸೇರಿದಂತೆ ಹಲವಾರು ಜನಪ್ರಿಯ ಭಕ್ಷ್ಯಗಳು ಮಾತ್ರವಲ್ಲದೆ ಅಷ್ಟೇ ರುಚಿಕರವಾದದ್ದು ನಮ್ಮಲ್ಲಿವೆ.

ಭಾರತವು ಆಹಾರ ವೈವಿಧ್ಯಗಳ ನಾಡು. ಇಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರದ ಹಲವು ಬಗೆಯ ಖಾದ್ಯಗಳು ಜನಪ್ರಿಯವಾಗಿವೆ. ಮಾಂಸಾಹಾರಿಗಳ ಫೇವರಿಟ್‌ ಆಗಿರುವ ಚಿಕನ್‌ನಿಂದ ಸಾಕಷ್ಟು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಚಿಕನ್‌ 65 ಕೂಡ ಒಂದು. ಸಖತ್‌ ಟೇಸ್ಟಿ ಆಗಿರುವ ಈ ಖಾದ್ಯ ಬೆಸ್ಟ್‌ ಸೈಡ್‌ ಡಿಶ್‌ಗಳಲ್ಲಿ ಒಂದು. ಚಿಕನ್‌ 65ಗೆ ಅಂತರರಾಷ್ಟ್ರೀಯ ಮನ್ನಣೆಯೂ ಸಿಕ್ಕಿದೆ. ಪ್ರಪಂಚದಾದ್ಯಂತದ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಚಿಕನ್ 65 ಸಿಗುತ್ತದೆ. ಭಾರತದಲ್ಲಿ ವಿವಿಧ ಪ್ರದೇಶಗಳು ಸ್ಥಳೀಯ ಅಭಿರುಚಿಗೆ ತಕ್ಕಂತೆ ಈ ಪಾಕವಿಧಾನವನ್ನು ಅಳವಡಿಸಿಕೊಂಡಿವೆ. ಇಂದು ನೀವು ಚಿಕನ್ 65 ಬಿರಿಯಾನಿ, ಪನೀರ್ 65, (ಚಿಕನ್ ಬದಲಿಗೆ ಪನೀರ್ ಬಳಸುವ ಸಸ್ಯಾಹಾರಿ ಆವೃತ್ತಿ) ಮತ್ತು ಗೋಬಿ 65 ಅನ್ನೂ ಸಹ ಸೇವಿಸಿರಬಹುದು.

ಇಷ್ಟೆಲ್ಲಾ ಜನಪ್ರಿಯತೆ ಪಡೆದಿರುವ ಈ ಖಾದ್ಯಕ್ಕೆ ಚಿಕನ್ 65 ಎಂಬ ಹೆಸರು ಹೇಗೆ ಬಂತು, ಎಲ್ಲಿ ಹುಟ್ಟಿಕೊಂಡಿತು ಎಂಬೆಲ್ಲಾ ಕುತೂಹಲ ಇರಬಹುದು. ಇದರ ಮೂಲದ ಹಿಂದೆ ಹಲವಾರು ಕಥೆಗಳಿವೆ. ಆದರೆ, ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿದಿಲ್ಲ. ಅಂತಹ ಕಥೆಗಳು ಇಲ್ಲಿವೆ.

ಚೆನ್ನೈನ ಬುಹಾರಿ ಹೋಟೆಲ್‌ ಚಿಕನ್ 65 ಮೂಲ

ಚಿಕನ್ 65 ಎಂಬ ಖಾದ್ಯವು 1965 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಬುಹಾರಿ ಹೋಟೆಲ್‌ನಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಬುಹಾರಿ ಹೋಟೆಲ್ ಸಂಸ್ಥಾಪಕ ಬುಹಾರಿ ಎಂಬುವವರು ಈ ಭಕ್ಷ್ಯವನ್ನು ಕಂಡುಹಿಡಿದಿದ್ದಾರೆ ಎನ್ನಲಾಗುತ್ತದೆ. ಮೊದಲಿಗೆ ಹೋಟೆಲ್‌ನಲ್ಲಿ ಗ್ರಾಹಕರಿಗೆ ತ್ವರಿತ ತಿಂಡಿಯಾಗಿ ಚಿಕನ್ 65 ಅನ್ನು ಬಡಿಸಲಾಯಿತು. ಇದು ಎಲ್ಲರಿಗೂ ಪ್ರಿಯವಾಯಿತಾದ್ದರಿಂದ ಇದರ ಜನಪ್ರಿಯತೆ ಉತ್ತುಂಗಕ್ಕೆ ಏರಿತು. ಹೀಗಾಗಿ ಈ ಖಾದ್ಯವನ್ನು ಪರಿಚಯಿಸಿದ ವರ್ಷದ ನಂತರ ಇದಕ್ಕೆ ಚಿಕನ್ 65 ಎಂದು ಹೆಸರಿಡಲಾಯಿತು ಎಂದು ನಂಬಲಾಗಿದೆ.

ಪದಾರ್ಥಗಳ ಸಂಖ್ಯೆ

ಇನ್ನೊಂದು ಕಥೆಯ ಪ್ರಕಾರ, ಈ ಖಾದ್ಯವನ್ನು ತಯಾರಿಸಲು 65 ರೀತಿಯ ಮಸಾಲೆಗಳನ್ನು ಬಳಸಲಾಯಿತು. ಹಾಗಾಗಿ ಇದಕ್ಕೆ ಚಿಕನ್ 65 ಎಂಬ ಹೆಸರು ಬಂತು ಎಂದು ಹೇಳಲಾಗಿದೆ. ಆದರೆ, ಇದು ನಿಜವಲ್ಲ ಎಂದು ತೋರುತ್ತದೆ. ಯಾಕೆಂದರೆ, ಈ ಖಾದ್ಯವನ್ನು ಕೆಲವೇ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಬಳಸಲಾಗುತ್ತದೆ.

ಮೆನು ಸಂಖ್ಯೆ

ದಕ್ಷಿಣ ಭಾರತದ ಮಿಲಿಟರಿ ಕ್ಯಾಂಟೀನ್‌ನಲ್ಲಿನ ಮೆನುವಿನಲ್ಲಿ ಚಿಕನ್ 65 ಅನ್ನು 65ನೇ ನಂಬರ್‌ನಲ್ಲಿ ತೋರಿಸಲಾಗಿತ್ತು. ಹೀಗಾಗಿ ಇದು ನಿಧಾನಕ್ಕೆ ಚಿಕನ್ 65 ಎಂಬ ಹೆಸರು ತಾಳಿತು ಎಂದು ನಂಬಲಾಗಿದೆ. ಇದು ನಿಜವಿದ್ದಿರಲೂಬಹುದು. ಗ್ರಾಹಕರಿಗೆ ಸುಲಭವಾಗಿ ಗುರುತಿಸಲು ಹಿಂದೆಲ್ಲಾ ಮೆನುವಿನಲ್ಲಿ ಸಂಖ್ಯೆಗಳನ್ನು ನೀಡಲಾಗುತ್ತಿತ್ತು.

ಕೋಳಿಯ ವಯಸ್ಸು

ಒಂದು ತಮಾಷೆಯ ವಿಷಯ ಏನೆಂದರೆ ಈ ಖಾದ್ಯವನ್ನು ಮಾಡಲು 65 ದಿನಗಳಾಗಿದ್ದ ಕೋಳಿಯನ್ನು ಬಳಸಲಾಗಿತ್ತು. ಹೀಗಾಗಿ ಇದಕ್ಕೆ ಈ ಹೆಸರು ಬಂತು ಅಂತಾನೂ ಹೇಳಲಾಗುತ್ತದೆ.

ಖಾದ್ಯ ಬಡಿಸುವಿಕೆಯ ಗಾತ್ರ

ಅಂದರೆ, ಈ ಖಾದ್ಯ ಒಂದು ಪ್ಲೇಟ್‌ಗೆ ತುಂಬಾ ಕಡಿಮೆ ಸಿಗುತ್ತದೆ. ಕೇವಲ 65 ಗ್ರಾಂ ಮಾತ್ರ ಬಡಿಸಲಾಗುತ್ತದೆ. ಹೀಗಾಗಿ ಈ ಹೆಸರು ಬಂತು ಅಂತಾ ಇನ್ನೊಂದು ಕಥೆ.

1965 ರಲ್ಲಿ ಜನಪ್ರಿಯತೆ

1965 ರಲ್ಲಿ ಈ ಖಾದ್ಯವು ವ್ಯಾಪಕವಾಗಿ ಜನಪ್ರಿಯವಾಯಿತು. ಹೀಗಾಗಿ ಚಿಕನ್ 65 ಎಂಬ ಹೆಸರು ಬಂತು ಅಂತಾ ಕೆಲವರು ನಂಬುತ್ತಾರೆ.

ಭಾರತೀಯ ಸೇನೆಯಲ್ಲಿ ಮೂಲ

ಭಾರತೀಯ ಸೈನಿಕರಲ್ಲಿ ಚಿಕನ್ 65 ಜನಪ್ರಿಯ ಭಕ್ಷ್ಯವಾಗಿದೆಯಂತೆ. 65ನೇ ಸಂಖ್ಯೆಯು ಸೈನ್ಯದ ನಿರ್ದಿಷ್ಟ ಬೆಟಾಲಿಯನ್ ಅಥವಾ ರೆಜಿಮೆಂಟ್‌ಗೆ ಸಂಬಂಧಿಸಿರಬಹುದು ಎಂದು ನಂಬಲಾಗಿದೆ.

ಚಿಕನ್ 65 ಮಾಡುವ ವಿಧಾನ ಹೀಗೆ

ಚಿಕನ್ 65ನಲ್ಲಿ, ಚಿಕನ್ ಪೀಸ್‌ಗಳನ್ನು ಮ್ಯಾರಿನೇಟ್ ಮಾಡಬೇಕು. ಅದಕ್ಕಾಗಿ ಚಿಕನ್ ಅನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ, ನಿಂಬೆ ರಸ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಲಾಗುತ್ತದೆ. ಜೊತೆಗೆ ಅಕ್ಕಿ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಮತ್ತು ಮೊಟ್ಟೆಗಳನ್ನು ಮ್ಯಾರಿನೇಟ್ ಮಾಡಿದ ಚಿಕನ್‌ಗೆ ಸೇರಿಸಬಹುದು. ಇದರಿಂದ ಚಿಕನ್ 65 ಗರಿಗರಿಯಾಗಿ ಬರುತ್ತದೆ. ಇದನ್ನು ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಇಡಬೇಕು.

ಇನ್ನು ಚಿಕನ್ 65 ಮಾಡಲು ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದು ಕಾದ ಕೂಡಲೇ ಚಿಕನ್ ಮಾಂಸದ ತುಂಡುಗಳನ್ನು ಡೀಪ್ ಫ್ರೈ ಮಾಡಬೇಕು.

ಮೊದಲಿಗೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಲಾಗುತ್ತದೆ. ಎಣ್ಣೆ ಕಾದ ಬಳಿಕ ಚಿಕನ್ ಪೀಸ್‌ಗಳನ್ನು ಹಾಕಿ ಡೀಪ್ ಫ್ರೈ ಮಾಡಬೇಕು. ನಂತರ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಶುಂಠಿ-ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ಗರಂ ಮಸಾಲಾ, ಉಪ್ಪು, ಖಾರದ ಪುಡಿ, ಸ್ವಲ್ಪ ಟೊಮೆಟೊ ಸಾಸ್, ಸ್ವಲ್ಪ ನೀರು ಹಾಕಿ. ನಂತರ ಡೀಪ್ ಫ್ರೈ ಮಾಡಿದ ಚಿಕನ್ ಅನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಫ್ರೀ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ, ಗರಿಗರಿಯಾದ ಚಿಕನ್ 65 ಸವಿಯಲು ಸಿದ್ಧ.

ರೆಸ್ಟೋರೆಂಟ್‌ಗಳಲ್ಲಿ ನೀವು ಇದನ್ನು ತಿಂದಿರಬಹುದು. ಆದ್ರೆ ಈ ರೆಸಿಪಿ ಮಾಡೋದು ಎಷ್ಟು ಸುಲಭ ಅಂತಾ ನೀವು ತಿಳಿದುಕೊಂಡಿದ್ದೀರಿ ಅಲ್ವಾ? ಹಾಗಿದ್ರೆ ಮನೆಯಲ್ಲೇ ಒಮ್ಮೆ ಟ್ರೈ ಮಾಡಿ. ಅತಿಥಿಗಳು ಬಂದಾಗ ಊಟದ ಜೊತೆ ಸೈಡ್ ಡಿಶ್ ಆಗಿ ಬಡಿಸಲು ಚೆನ್ನಾಗಿರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ