logo
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ, ಕಡಿಮೆ ಕ್ಯಾಲೊರಿ ಇರುವ 5 ವಿವಿಧ ಬಗೆಯ ಚಟ್ನಿಗಳಿವು

ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ, ಕಡಿಮೆ ಕ್ಯಾಲೊರಿ ಇರುವ 5 ವಿವಿಧ ಬಗೆಯ ಚಟ್ನಿಗಳಿವು

Reshma HT Kannada

Feb 11, 2024 04:00 PM IST

google News

ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ, ಕಡಿಮೆ ಕ್ಯಾಲೊರಿ ಇರುವ 5 ವಿವಿಧ ಬಗೆಯ ಚಟ್ನಿಗಳಿವು

    • ತೂಕ ಇಳಿಸುವ ಸಲುವಾಗಿ ಡಯೆಟ್‌ ಪ್ಲಾನ್‌ ಮಾಡುವವರಿಗೆ ಏನ್‌ ತಿನ್ನಬೇಕು, ಏನು ತಿನ್‌ಬಾರ್ದು ಅನ್ನೋದೇ ಚಿಂತೆ. ಆದ್ರೆ ನೀವು ಚಟ್ನಿಗಳನ್ನು ಸೇವಿಸಿದ್ರೆ ಖಂಡಿತ ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ಅನ್ನ, ದೋಸೆ, ಇಡ್ಲಿ ಜೊತೆ ಈ ಚಟ್ನಿಯನ್ನು ನೆಂಜಿಕೊಂಡು ತಿನ್ನುವ ಮೂಲಕ ತೂಕ ಇಳಿಸಿಕೊಳ್ಳಬಹುದು. ಮನೆಯಲ್ಲೇ ಮಾಡಿಕೊಳ್ಳಬಹುದಾದ ನಾರಿನಾಂಶ ಅಧಿಕವಾಗಿರುವ ಚಟ್ನಿಗಳಿವು.
ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ, ಕಡಿಮೆ ಕ್ಯಾಲೊರಿ ಇರುವ 5 ವಿವಿಧ ಬಗೆಯ ಚಟ್ನಿಗಳಿವು
ತೂಕ ಇಳಿಕೆಯ ಜೊತೆ ಬಾಯಿ ರುಚಿಯನ್ನೂ ಹೆಚ್ಚಿಸುವ, ಕಡಿಮೆ ಕ್ಯಾಲೊರಿ ಇರುವ 5 ವಿವಿಧ ಬಗೆಯ ಚಟ್ನಿಗಳಿವು

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ನಮ್ಮ ಡಯೆಟ್‌ ಪ್ಲಾನ್‌ ಕೂಡ ಬಹಳ ಮುಖ್ಯವಾಗುತ್ತದೆ. ಫಿಟ್‌ನೆಸ್‌ ಜರ್ನಿಯಲ್ಲಿ ಡಯೆಟ್‌ ಪಾತ್ರ ಮಹತ್ವದ್ದು. ಅಧಿಕ ಕ್ಯಾಲೊರಿ ಅಂಶ ಇರುವ ಆಹಾರಗಳ ಸೇವನೆಗೆ ಕಡಿವಾಣ ಹಾಕುವುದು ಹಾಗೂ ಸಮತೋಲಿತ ಆಹಾರಗಳ ಸೇವನೆಯ ಮೂಲಕ ಡಯೆಟ್‌ ಕ್ರಮವನ್ನು ಪಾಲಿಸಬಹುದು. ಹಾಗಂತ ನೀವು ಎಲ್ಲಾ ವಿಚಾರಗಳಲ್ಲೂ ಬಾಯಿ ಕಟ್ಟಿಕೊಂಡು ಇರಬೇಕು ಎಂದೇನಿಲ್ಲ. ಕೆಲವು ನಾಲಿಗೆಗೆ ಹಿತ ಎನ್ನಿಸುವ ಆಹಾರ ಪದಾರ್ಥಗಳನ್ನೂ ಸೇವಿಸಬಹುದು.

ಊಟ ತಿಂಡಿ ವಿಚಾರಕ್ಕೆ ಬಂದಾಗ ಒಂದು ತುತ್ತು ಚೆನ್ನಾಗಿ ತಿನ್ನಬೇಕು ಅಂದ್ರೆ ಚಟ್ನಿ ಜೊತೆಗಿರಬೇಕು. ಚಟ್ನಿಗಳು ಖಾರ, ಹುಳಿ, ಒಗರು ರುಚಿಯ ಕಾರಣ ಇವು ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ನೀವು ತಯಾರಿಸುವ ಕೆಲವು ಚಟ್ನಿಗಳು ತೂಕ ಇಳಿಕೆಗೆ ಹೇಳಿ ಮಾಡಿಸಿದಂತಿರುತ್ತವೆ. ಅದಕ್ಕೆ ಕಾರಣ ಕಡಿಮೆ ಕ್ಯಾಲೊರಿ ಹೊಂದಿರುವುದು. ಜೊತೆಗೆ ಈ ಚಟ್ನಿಗಳಲ್ಲಿ ನಾರಿನಾಂಶವು ಸಮೃದ್ಧವಾಗಿರುತ್ತದೆ. ಇದರಲ್ಲಿ ವಿಟಮಿನ್‌ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತದೆ. ಚಟ್ನಿ ತಯಾರಿಸುವ ಮಸಾಲೆ ಪದಾರ್ಥಗಳು, ತರಕಾರಿ, ಗಿಡಮೂಲಿಕೆಗಳನ್ನು ಸೇರಿಸುವ ಕಾರಣ ಇದು ಸಂಪೂರ್ಣ ಆರೋಗ್ಯಕ್ಕೂ ಉತ್ತಮ.

ಬೆಂಗಳೂರಿನ ಕ್ಲೌಡ್‌ನೈನ್‌ ಗ್ರೂಪ್‌ ಆಫ್‌ ಹಾಸ್ಪಿಟಲ್ಸ್‌ನ ಚೀಫ್‌ ಕ್ಲಿನಿಕಲ್‌ ನ್ಯೂಟ್ರಿಷನಿಸ್ಟ್‌ ಆಗಿರುವ ಅಭಿಲಾಷ ವಿ ಅವರು ಇಲ್ಲಿ ತೂಕ ಇಳಿಕೆಗೆ ಸಹಾಯ ಮಾಡುವ, ಕಡಿಮೆ ಕ್ಯಾಲೊರಿ ಹೊಂದಿರುವ 5 ಚಟ್ನಿಗಳ ಬಗ್ಗೆ ವಿವರಿಸಿದ್ದಾರೆ.

ಕೊತ್ತಂಬರಿ ಸೊಪ್ಪು ಪುದಿನಾ ಚಟ್ನಿ

ಬೇಕಾಗುವ ಸಾಮಗ್ರಿಗಳು: ತಾಜಾ ಕೊತ್ತಂಬರಿ ಸೊಪ್ಪು - 1 ಕಪ್‌, ತಾಜಾ ಪುದಿನಾ ಎಲೆಗಳು - 1/2 ಕಪ್‌, ಹಸಿಮೆಣಸು - 3, ನಿಂಬೆ ರಸ - 2 ಚಮಚ, ಉಪ್ಪು - ರುಚಿಗೆ

ತಯಾರಿಸುವ ವಿಧಾನ: ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ. ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಈ ನಿಮ್ಮ ಮುಂದೆ ಕೊತ್ತಂಬರಿ ಸೊಪ್ಪು-ಪುದಿನಾ ಚಟ್ನಿ ತಿನ್ನಲು ಸಿದ್ಧ.

ಟೊಮೆಟೊ ಬೆಳ್ಳುಳ್ಳಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಮಾಗಿದ ಟೊಮೆಟೊ ಹಣ್ಣು - 2 ಮಧ್ಯಮ ಗಾತ್ರದ್ದು, ಬೆಳ್ಳುಳ್ಳಿ ಎಸಳು - 4 ರಿಂದ 5, ವಿನೆಗರ್‌ - 1 ಚಮಚ, ಉಪ್ಪು - ರುಚಿಗೆ, ಬೆಲ್ಲದ ಪುಡಿ - ಚಿಟಿಕೆ

ತಯಾರಿಸುವ ವಿಧಾನ: ಹೆಚ್ಚಿಕೊಂಡ ಟೊಮೆಟೊ ಹಾಗೂ ಬೆಳ್ಳುಳ್ಳಿಯನ್ನು ಪಾನ್‌ವೊಂದಕ್ಕೆ ಹಾಕಿ ಮೃದುವಾಗುವವರೆಗೂ ಕೈಯಾಡಿಸಿ. ಇದನ್ನು ತಣ್ಣಗಾಗಲು ಬಿಡಿ. ಇದಕ್ಕೆ ವಿನೆಗರ್‌, ಉಪ್ಪು ಹಾಗೂ ಬೆಲ್ಲ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ತೆಂಗಿನಕಾಯಿ, ಕರಿಬೇವಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ - 1/2 ಕಪ್‌, ಕರಿಬೇವು - ಕಾಲು ಕಪ್‌, ಹಸಿಮೆಣಸು - 2 ರಿಂದ 3, ಶುಂಠಿ - 1 ತುಂಡು (ಚಿಕ್ಕದು), ಇಂಗು - ಚಿಟಿಕೆ, ನಿಂಬೆರಸ - 1 ಚಮಚ, ಉಪ್ಪು - ರುಚಿಗೆ

ತಯಾರಿಸುವ ವಿಧಾನ: ತೆಂಗಿನತುರಿ, ಕರಿಬೇವು, ಹಸಿಮೆಣಸು, ಶುಂಠಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು, ಚಿಟಿಕೆ ಇಂಗು, ನಿಂಬೆರಸ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಆಪಲ್‌ ದಾಲ್ಚಿನ್ನಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಸೇಬು - 2 ಮಧ್ಯಮ ಗಾತ್ರದ್ದು, ದಾಲ್ಚಿನ್ನಿ ಪುಡಿ - 1 ಟೇಬಲ್‌ ಚಮಚ, ಜಾಯಿಕಾಯಿ - ಚಿಕ್ಕ ತುಂಡು, ನಿಂಬೆರಸ - 1 ಟೇಬಲ್‌ ಚಮಚ, ಉಪ್ಪು - ರುಚಿಗೆ

ತಯಾರಿಸುವ ವಿಧಾನ: ಸೇಬುಹಣ್ಣನ್ನು ಕತ್ತರಿಸಿ, ಸ್ವಲ್ಪ ನೀರು ಚಿಮುಕಿಸಿ ಮೃದುವಾಗುವವರೆಗೂ ಬೇಯಸಿ. ಅದನ್ನು ತಣ್ಣಗಾಗಲು ಬಿಡಿ. ನಂತರ ದಾಲ್ಚಿನ್ನಿ ಪುಡಿ, ಜಾಕಾಯಿ, ನಿಂಬೆರಸ ಮತ್ತು ಉಪ್ಪು ಸೇರಿಸಿ ಈ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ.

ದೊಣ್ಣೆ ಮೆಣಸಿನ ಚಟ್ನಿ

ಬೇಕಾಗುವ ಸಾಮಗ್ರಿಗಳು: ದೊಣ್ಣೆ ಮೆಣಸಿನಕಾಯಿ - 2 ರಿಂದ 3, ಬೆಳ್ಳುಳ್ಳಿ ಎಸಳು - 2 ರಿಂದ 3, ವಿನಗೆರ್‌ - 1 ಚಮಚ, ಉಪ್ಪು - ರುಚಿಗೆ, ಕಾಳುಮೆಣಸು - ರುಚಿಗೆ

ತಯಾರಿಸುವ ವಿಧಾನ: ದೊಣ್ಣೆ ಮೆಣಸಿನಕಾಯಿಯನ್ನು ಪ್ಯಾನ್‌ನಲ್ಲಿ ಹುರಿದುಕೊಳ್ಳಿ, ಇದನ್ನು ಹಬೆಯಲ್ಲಿ ಬೇಯಿಸಿಕೊಳ್ಳಲೂ ಬಹುದು. ನಂತರ ಸಿಪ್ಪೆ ತೆಗೆದು, ಒಳಗಿನ ತಿರುಳು ತೆಗೆಯಿರಿ. ಇದನ್ನು ಬೆಳ್ಳುಳ್ಳಿ, ವಿನೆಗರ್‌, ಉಪ್ಪು ಹಾಗೂ ಕಾಳುಮೆಣಸಿನೊಂದಿಗೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಈ ಚಟ್ನಿಗಳು ತೂಕ ಇಳಿಕೆಗೆ ಸಹಾಯ ಮಾಡುವ ಜೊತೆಗೆ ಆರೋಗ್ಯವರ್ಧನೆಗೂ ಸಹಕಾರಿ. ಇದನ್ನು ಫ್ರಿಜ್‌ನಲ್ಲಿ ಇಟ್ಟು ಕೆಲವು ದಿನಗಳ ಕಾಲ ಬಳಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ