logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಲಂಚ್ ಬಾಕ್ಸ್‌ಗೆ ಮಾಡಿ ಟೇಸ್ಟಿ ಕಾರ್ನ್ ಪಾಲಕ್ ಪಲಾವ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ಮಕ್ಕಳ ಲಂಚ್ ಬಾಕ್ಸ್‌ಗೆ ಮಾಡಿ ಟೇಸ್ಟಿ ಕಾರ್ನ್ ಪಾಲಕ್ ಪಲಾವ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

Priyanka Gowda HT Kannada

Nov 16, 2024 03:06 PM IST

google News

ಮಕ್ಕಳ ಲಂಚ್ ಬಾಕ್ಸ್‌ಗೆ ಮಾಡಿ ಟೇಸ್ಟಿ ಕಾರ್ನ್ ಪಾಲಕ್ ಪಲಾವ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

  • ತಾಯಂದಿರಿಗೆ ದಿನಾ ಮಕ್ಕಳ ಲಂಚ್ ಬಾಕ್ಸ್‌ಗೆ ಏನು ಹಾಕುವುದು ಅನ್ನೋ ಚಿಂತೆ. ನಿಮಗೂ ಈ ಚಿಂತೆಯಿದ್ದಲ್ಲಿ ಈ ತರಹ ವಿಭಿನ್ನವಾಗಿ ಕಾರ್ನ್ ಪಾಲಕ್ ಪಲಾವ್ ರೆಸಿಪಿ ಮಾಡಬಹುದು. ಮಕ್ಕಳು ಇಷ್ಟಪಟ್ಟು ತಿನ್ನಬಹುದು. ಇದನ್ನು ತಯಾರಿಸುವುದು ಅಂತಹ ಕಷ್ಟವೇನಲ್ಲ. ತುಂಬಾನೇ ಸುಲಭ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಮಕ್ಕಳ ಲಂಚ್ ಬಾಕ್ಸ್‌ಗೆ ಮಾಡಿ ಟೇಸ್ಟಿ ಕಾರ್ನ್ ಪಾಲಕ್ ಪಲಾವ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್
ಮಕ್ಕಳ ಲಂಚ್ ಬಾಕ್ಸ್‌ಗೆ ಮಾಡಿ ಟೇಸ್ಟಿ ಕಾರ್ನ್ ಪಾಲಕ್ ಪಲಾವ್: ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ಮಕ್ಕಳ ಲಂಚ್ ಬಾಕ್ಸ್‌ಗೆ ಏನಪ್ಪಾ ಹಾಕುವುದು ಎಂದು ಯೋಚನೆ ಮಾಡುತ್ತಿದ್ದರೆ ಕಾರ್ನ್ (ಜೋಳ) ಪಾಲಕ್ ಪಲಾವ್ ಮಾಡಬಹುದು. ಇದೊಂದು ಆರೋಗ್ಯಕರ ಭಕ್ಷ್ಯ. ತ್ವರಿತವಾಗಿ ತಯಾರಿಸಬಹುದಾದ ಈ ಖಾದ್ಯವು ಪೌಷ್ಟಿಕಾಂಶಯುಕ್ತವಾಗಿದ್ದು, ರುಚಿಕರವಾದ ಖಾದ್ಯವಾಗಿದೆ. ಜೋಳದ ಕಾಳುಗಳು ಹಾಗೂ ಪಾಲಕ್‌ನ ಸಮ್ಮಿಶ್ರಣವಿರುವ ಈ ಪಲಾವ್ ತುಂಬಾ ರುಚಿಕರವಾಗಿರುತ್ತದೆ. ಈರುಳ್ಳಿ, ಟೊಮೆಟೊ ಜೀರಿಗೆ, ದಾಲ್ಚಿನ್ನಿ ಮತ್ತು ಲವಂಗಗಳಂತಹ ಸುಗಂಧಭರಿತ ಮಸಾಲೆಗಳು ಪಲಾವ್‌ನ ರುಚಿ ಮತ್ತು ಪರಿಮಳವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಮ್ಮೆ ನೀವು ತಯಾರಿಸಿ ತಿಂದರೆ, ಮತ್ತೆ ಮತ್ತೆ ಮಾಡಬೇಕು ಎಂದೆನಿಸುತ್ತದೆ. ಈ ಜೋಳ ಪಾಲಕ್ ಪಲಾವ್ ಪಾಕವಿಧಾನ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಜೋಳ (ಕಾರ್ನ್) ಪಾಲಕ್ ಪಲಾವ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಸ್ವೀಟ್ ಕಾರ್ನ್- 1 ಕಪ್, ಪಾಲಕ್ ಸೊಪ್ಪು- 1 ಕಪ್, ಮೊಸರು- 1 ಕಪ್, ಬಾಸ್ಮತಿ ಅಕ್ಕಿ- ಎರಡು ಕಪ್, ತುಪ್ಪ/ಎಣ್ಣೆ- ಎರಡು ಟೀ ಚಮಚ, ಹಸಿ ಮೆಣಸಿನಕಾಯಿ- ನಾಲ್ಕು, ದಾಲ್ಚಿನ್ನಿ- ಸಣ್ಣ ತುಂಡು, ಲವಂಗ- ಎರಡು, ಏಲಕ್ಕಿ- ಎರಡು, ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚ, ಮೆಣಸಿನ ಪುಡಿ- ಅರ್ಧ ಟೀ ಚಮಚ, ಈರುಳ್ಳಿ- ಒಂದು ಕಪ್, ಟೊಮೆಟೊ ಪೇಸ್ಟ್- ಅರ್ಧ ಕಪ್, ಉಪ್ಪು- ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಈ ಪಲಾವ್ ಅನ್ನು ಬಾಸ್ಮತಿ ಅಕ್ಕಿಯೊಂದಿಗೆ ತಿನ್ನಲು ಬಯಸಿದರೆ ಅಕ್ಕಿಯನ್ನು ಮೊದಲೇ ಬೇಯಿಸಿ, ಅದನ್ನು ಪಕ್ಕಕ್ಕೆ ಇರಿಸಿ. ಅಥವಾ ಉಳಿದ ಅನ್ನದಿಂದಲೂ ತಯಾರಿಸಬಹುದು. ಪಾಲಕ್ ಸೊಪ್ಪನ್ನು ತೊಳೆದು ಮಿಕ್ಸಿಯಲ್ಲಿ ನಯವಾಗಿ ಪೇಸ್ಟ್‌ನಂತೆ ರುಬ್ಬಿಕೊಂಡು ಪಕ್ಕಕ್ಕೆ ಇಡಿ. ಜೋಳದ ಕಾಳುಗಳನ್ನು ಕೂಡ ಕುದಿಸಿ, ಪಕ್ಕಕ್ಕೆ ಇರಿಸಿ.

ಕಡಾಯಿಯನ್ನು ಒಲೆಯ ಮೇಲೆ ಇಟ್ಟು ತುಪ್ಪ/ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ದಾಲ್ಚಿನ್ನಿ, ಲವಂಗ, ಏಲಕ್ಕಿ ಮತ್ತು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ಹಸಿರು ಮೆಣಸಿನಕಾಯಿ ಹಾಗೂ ಈರುಳ್ಳಿಯ ಪೇಸ್ಟ್ ಮಾಡಿ ಈ ಮಿಶ್ರಣಕ್ಕೆ ಹಾಕಿ. ಟೊಮೆಟೊ ಪೇಸ್ಟ್ ಮತ್ತು ಉಪ್ಪು ಸೇರಿಸಿ, ಅದು ಮೃದುವಾಗುವವರೆಗೆ ಬೇಯಿಸಿ. ನಂತರ ರುಬ್ಬಿರುವ ಪಾಲಕ್ ಸೊಪ್ಪಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜತೆಗೆ ಸ್ವೀಟ್ ಕಾರ್ನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳವನ್ನು ಹಾಕಿ, ಅದು ಬಹುತೇಕ ಅಂಟಿಕೊಳ್ಳುವವರೆಗೆ ಬೇಯಿಸಿ. ನಂತರ ಸ್ಟೌ ಆಫ್ ಮಾಡಿ, ಮೊದಲೇ ಬೇಯಿಸಿದ ಅನ್ನವನ್ನು ಸೇರಿಸಿ ಮಿಶ್ರಣ ಮಾಡಿದರೆ ರುಚಿಯಾದ ಸ್ವೀಟ್ ಕಾರ್ನ್ ಪಲಾವ್ ಸವಿಯಲು ಸಿದ್ಧ.

ಈ ರೆಸಿಪಿಯು ತುಂಬಾ ಆರೋಗ್ಯಕರವಾಗಿದೆ. ಮಕ್ಕಳಿಗೂ ಇದನ್ನು ಮಾಡಿ ಬಡಿಸಬಹುದು. ಮಕ್ಕಳ ಲಂಚ್ ಬಾಕ್ಸ್‌ಗೂ ಈ ರೆಸಿಪಿಯನ್ನು ಹಾಕಿ ಕಳುಹಿಸಬಹುದು. ಒಮ್ಮೆ ನೀವು ಈ ರೆಸಿಪಿ ಮಾಡಿದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಪಾಲಕ್ ಸೊಪ್ಪು, ಟೊಮೆಟೊ, ಸ್ವೀಟ್ ಕಾರ್ನ್ ಮತ್ತು ಈರುಳ್ಳಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪಾಲಕ್ ತಿನ್ನುವುದರಿಂದ ನಮ್ಮ ದೇಹಕ್ಕೆ ಫೋಲಿಕ್ ಆಮ್ಲ ದೊರೆಯುತ್ತದೆ. ಇದು ನಮ್ಮ ಮಿದುಳಿಗೆ ಕೂಡ ಅತ್ಯಗತ್ಯ. ವಿಶೇಷವಾಗಿ ಮಕ್ಕಳಿಗೆ ಫೋಲಿಕ್ ಆಮ್ಲವನ್ನು ನೀಡಬೇಕು. ಇದನ್ನು ಮಾಡಲು ಹೆಚ್ಚೇನೂ ಸಮಯ ತೆಗೆದುಕೊಳ್ಳುವುದಿಲ್ಲ. ಬಹಳ ತ್ವರಿತವಾಗಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ