logo
ಕನ್ನಡ ಸುದ್ದಿ  /  ಜೀವನಶೈಲಿ  /  ಭಾನುವಾರದ ಸಂಜೆಗೆ ಬಾಯಲ್ಲಿ ನೀರೂರಿಸುವ ಆಲೂ ಮಂಚೂರಿಯನ್‌ ಮಾಡಿ, ಮಕ್ಕಳಿಗಂತೂ ಈ ರೆಸಿಪಿ ಸಖತ್ ಇಷ್ಟ ಆಗುತ್ತೆ

ಭಾನುವಾರದ ಸಂಜೆಗೆ ಬಾಯಲ್ಲಿ ನೀರೂರಿಸುವ ಆಲೂ ಮಂಚೂರಿಯನ್‌ ಮಾಡಿ, ಮಕ್ಕಳಿಗಂತೂ ಈ ರೆಸಿಪಿ ಸಖತ್ ಇಷ್ಟ ಆಗುತ್ತೆ

Reshma HT Kannada

Oct 06, 2024 05:06 PM IST

google News

ಆಲೂ ಮಂಚೂರಿಯನ್

    • ಗೋಬಿ ಮಂಚೂರಿಯನ್ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ, ಆದರೆ ಅಷ್ಟೇ ರುಚಿಯ ಮಂಚೂರಿಯನ್ ಅನ್ನು ಆಲೂಗೆಡ್ಡೆಯಿಂದಲೂ ತಯಾರಿಸಬಹುದು. ಭಾನುವಾರದ ಸಂಜೆಗೆ ಇದಕ್ಕಿಂತ ಬೆಸ್ಟ್ ಸ್ನ್ಯಾಕ್‌ ಇನ್ನೊಂದಿಲ್ಲ. ಸುಲಭವಾಗಿ, ಕಡಿಮೆ ಸಾಮಗ್ರಿ ಬಳಸಿ ತಯಾರಿಸಬಹುದಾದ ರೆಸಿಪಿಯಿದು. ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಇವತ್ತೇ ಭಾನುವಾರ. ಇನ್ನೇಕೆ ತಡ, ಮಾಡಿ ತಿನ್ನಿ. 
ಆಲೂ ಮಂಚೂರಿಯನ್
ಆಲೂ ಮಂಚೂರಿಯನ್

ಮಂಚೂರಿಯನ್ ಎಂದಾಕ್ಷಣ ನಮಗೆ ನೆನಪಾಗೋದು ಗೋಬಿ. ಆದರೆ ಗೋಬಿ ಮಂಚೂರಿಯನ್ ಅನ್ನು ಅಷ್ಟು ರುಚಿಯಾಗಿ ಮನೆಯಲ್ಲಿ ಮಾಡಲು ಸಾಧ್ಯವಿಲ್ಲ, ಹೊರಗಡೆ ತಿಂದ್ರೆ ಆರೋಗ್ಯ ಕಡಿಮೆ ಅಂತ ಭಯ. ಹಾಗಂತ ಚಿಂತೆ ಬೇಡ, ಗೋಬಿ ಮಂಚೂರಿಯನ್ ಟೇಸ್ಟ್‌ನಲ್ಲಿ ಆಲೂ ಮಂಚೂರಿಯನ್ ಮಾಡಬಹುದು. ಅದು ಕೂಡ ಸುಲಭವಾಗಿ ಮನೆಯಲ್ಲೇ ಮಾಡಬಹುದು.

ಕಡಿಮೆ ಸಾಮಗ್ರಿ ಬಳಸಿ ಮಾಡುವ ಈ ಆಲೂ ಮಂಚೂರಿಯನ್ ಸಖತ್ ಟೇಸ್ಟಿ ಅನ್ನಿಸೋದು ಸುಳ್ಳಲ್ಲ. ಅತ್ಯಂತ ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ತಿಂಡಿ ಭಾನುವಾರದ ಸಂಜೆಗೆ ಹೇಳಿ ಮಾಡಿಸಿದ್ದು. ಮಕ್ಕಳು, ಮನೆಯವರೂ ಎಲ್ಲರೂ ಇರುವ ದಿನವಾದ ಭಾನುವಾದ ನೀವು ಈ ರೀತಿಯ ಆಲೂ ಮಂಚೂರಿಯನ್ ಮಾಡಿದ್ರೆ ಖಂಡಿತ ಎಲ್ಲರೂ ಖುಷಿಯಿಂದ ತಿಂತಾರೆ. ಹಾಗಾದರೆ ಆಲೂ ಮಂಚೂರಿಯನ್ ಮಾಡೋದು ಹೇಗೆ ನೋಡಿ.

ಆಲೂ ಮಂಚೂರಿಯನ್‌ಗೆ ಬೇಕಾಗುವ ಪದಾರ್ಥಗಳು

ದೊಡ್ಡ ಆಲೂಗೆಡ್ಡೆ – 2, ಮೈದಾ – ಅರ್ಧ ಕಪ್‌, ಕಾರ್ನ್ ಫ್ಲೋರ್ – ಕಾಲು ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಖಾರದ ಪುಟಿ – ಅರ್ಧ ಚಮಚ, ಉಪ್ಪು – ರುಚಿಗೆ, ಎಣ್ಣೆ – 2 ಚಮಚ, ಎಣ್ಣೆ – ಕರಿಯಲು (ಪ್ರತ್ಯೇಕ)

ಗ್ರೇವಿ ತಯಾರಿಸಲು: ಎಣ್ಣೆ – 4ಚಮಚ, ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ – 4 ಎಸಳು, ಕ್ಯಾಪ್ಸಿಕಂ – 1, ಈರುಳ್ಳಿ – 1, ಟೊಮೆಟೊ ಸಾಸ್ – 2 ಚಮಚ, ಸೋಯಾಸಾಸ್ – 2, ಖಾರದಪುಡಿ – ಅರ್ಧ ಚಮಚ

ಆಲೂ ಮಂಚೂರಿಯನ್ ಮಾಡುವ ವಿಧಾನ

ಮೊದಲು ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಂಡು ನೀರಿಗೆ ಹಾಕಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಒಲೆಯ ಮೇಲಿಡಿ. ಅದಕ್ಕೆ ಅರ್ಧ ಚಮಚ ಉಪ್ಪು ಸೇರಿಸಿ, ಆಲೂಗೆಡ್ಡೆಯನ್ನು ಬೇಯಲು ಬಿಡಿ. ಆಲೂಗೆಡ್ಡೆ ಅರ್ಧದಷ್ಟು ಬೆಂದರೆ ಸಾಕು. ಇದನ್ನು ಕುದಿಯುವ ನೀರಿನಿಂದ ಹೊರ ತೆಗೆದು ಇನ್ನೊಂದು ಪಾತ್ರೆಗೆ ಹಾಕಿಡಿ. ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಶುಂಠಿ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಮತ್ತು ನೀರು ಸೇರಿಸಿ, ಇದನ್ನು ಹಿಟ್ಟಿನಂತೆ ಕಲೆಸಿ.

ಒಂದು ಕಡಾಯಿಯನ್ನು ತೆಗೆದುಕೊಂಡು ಆಳವಾಗಿ ಹುರಿಯಲು ಬೇಕಾದಷ್ಟು ಎಣ್ಣೆಯನ್ನು ಸೇರಿಸಿ. ಇದನ್ನು ಸ್ಟೌ ಮೇಲೆ ಮಧ್ಯಮ ಉರಿಯಲ್ಲಿ ಇರಿಸಿ. ಬೇಯಿಸಿಕೊಂಡು ಆಲೂಗೆಡ್ಡೆ ತುಂಡುಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಗೆ ಬಿಡಿ. ಆಲೂಗೆಡ್ಡೆ ಚೂರುಗಳು ಹೊಂಬಣ್ಣಕ್ಕೆ ತಿರುಗಿದಾಗ ಆಲೂಗೆಡ್ಡೆ ತುಂಡುಗಳನ್ನು ತೆಗೆದು ಒಂದು ಪ್ಲೇಟ್ ಮೇಲೆ ಹರಡಿ.

ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಈರುಳ್ಳಿ, ಕ್ಯಾಪ್ಸಿಕಂ ತುಂಡುಗಳು ಸೇರಿಸಿ ಹುರಿದಿಟ್ಟುಕೊಳ್ಳಿ. ಅವು ಸ್ವಲ್ಪ ಬೆಂದಾಗ ಟೊಮೆಟೊ ಸಾಸ್, ಸೋಯಾ ಸಾಸ್, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಜೋಳದ ಹಿಟ್ಟಿನೊಂದಿಗೆ ಎರಡು ಚಮಚ ನೀರನ್ನು ಮಿಶ್ರಣ ಮಾಡಿ ಮತ್ತು ಮಿಶ್ರಣವನ್ನು ಕುದಿಯುವ ಸಾಸ್ಗೆ ಸುರಿಯಿರಿ. ಇದು ದಪ್ಪವಾಗಿಸುತ್ತದೆ. ಈಗ ಈ ಮಿಶ್ರಣ ಎರಡು ನಿಮಿಷಗಳ ಕಾಲ ಕುದಿದ ನಂತರ, ಹುರಿದ ಆಲೂಗಡ್ಡೆ ತುಂಡುಗಳನ್ನು ಸೇರಿಸಿ. ಅಂತಿಮವಾಗಿ, ಸ್ವಲ್ಪ ಈರುಳ್ಳಿ ಸಿಂಪಡಿಸಿ ಸಾಕು. ಆಲೂ ಮಂಚೂರಿಯನ್ ತಿನ್ನಲು ಸಿದ್ಧ.

ಈ ಆಲೂ ಮಂಚೂರಿಯನ್ ಮಕ್ಕಳಿಗೆ ಖಂಡಿತ ಇಷ್ಟವಾಗುತ್ತೆ. ನೀವು ಮನೆಯಲ್ಲಿ ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಬೇಕು ಎಂದು ಹೇಳುವುದರಲ್ಲಿ ಅನುಮಾನವಿಲ್ಲ. ಇಂದು ಭಾನುವಾರ ಮನೆಯಲ್ಲಿ ಈ ಎಲ್ಲಾ ಸಾಮಗ್ರಿ ಇದ್ದರೆ ಥಟ್ಟಂತ ಆಲೂ ಮಂಚೂರಿಯನ್ ಮಾಡಿಬಿಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ