ಮಿಕ್ಕಿದ ಅನ್ನದಿಂದ ಮಾಡಬಹುದು ಸಖತ್ ಟೇಸ್ಟಿ ವಡಾ, ಬೆಳಗಿನ ಉಪಾಹಾರಕ್ಕೂ ಸಂಜೆ ಸ್ನ್ಯಾಕ್ಸ್‌ಗೂ ಹೊಂದುತ್ತೆ ಈ ರೆಸಿಪಿ
Nov 01, 2024 02:12 PM IST
ಮಿಕ್ಕಿದ ಅನ್ನದಿಂದ ಮಾಡಿದ ವಡಾ
- ಅನ್ನ ಮಿಕ್ಕಿದಾಗ ಏನ್ ಮಾಡೋದು ಅಂತ ಯೋಚನೆ ಮಾಡಿ ಕೊನೆಗೆ ತಲೆಗೆ ಬರೋದು ಚಿತ್ರಾನ್ನ. ಆದರೆ ಯಾವಾಗ್ಲೂ ಉಳಿದ ಅನ್ನದಿಂದ ಚಿತ್ರಾನ್ನ ಮಾಡಿ ತಿಂದ್ರೆ ಏನ್ ಚೆನ್ನಾಗಿರುತ್ತೆ ಹೇಳಿ. ಅದಕ್ಕಾಗಿ ನೀವು ವಡಾ ಮಾಡಬಹುದು. ಉದ್ದಿನವಡಾ ಗೊತ್ತು ಇದ್ಯಾವುದು ಅನ್ನದ ವಡಾ, ಇದನ್ನ ಮಾಡೋದು ಹೇಗೆ ಅಂತೀರಾ. ಖಂಡಿತ ಕಷ್ಟವಿಲ್ಲ. ಕಡಿಮೆ ಸಾಮಗ್ರಿ ಬಳಸಿ ಮಾಡಬಹುದಾದ ರೆಸಿಪಿ ಇದು.
ಎಣ್ಣೆಯಲ್ಲಿ ಕರಿದ ಗರಿಗರಿ ವಡಾ ತಿನ್ನಲು ಬಹುತೇಕರಿಗೆ ಇಷ್ಟವಾಗುತ್ತದೆ. ಉದ್ದಿನವಡಾ ಕರ್ನಾಟಕದಲ್ಲಿ ಸಖತ್ ಫೇಮಸ್. ಇಡ್ಲಿಗೂ ವಡಾಕ್ಕೂ ಬಿಡಿಸಲಾಗದ ನಂಟು. ಇಡ್ಲಿ ಜೊತೆ ವಡಾ ಇದ್ದರೆ ಅದರ ಕಾಂಬಿನೇಷನ್ ತಿಂದವರಿಗಷ್ಟೇ ಗೊತ್ತು. ಆದರೆ ಯಾವಾಗ್ಲೂ ಉದ್ದಿನವಡಾ ತಿಂದ್ರೆ ನಾಲಿಗೆಗೆ ರುಚಿ ಹತ್ತೊಲ್ಲ. ವಡಾ ಬೇಕು, ಆದ್ರೆ ಉದ್ದಿನ ವಡಾ ಬೇಡ ಅಂತಿದ್ರೆ ನೀವು ಅನ್ನದ ವಡಾ ಮಾಡಿ ತಿನ್ನಬಹುದು. ಅದು ಮಿಕ್ಕಿದ ಅನ್ನದಿಂದ ಮಾಡಬಹುದಾ ವಡಾ.
ಇದೇನಪ್ಪಾ ಇದು ಅನ್ನದ ವಡಾ ಮಾಡ್ತಾರಾ, ಇದನ್ನ ಹೇಗೆ ಮಾಡೋದು ಅಂತ ನೀವು ಕೇಳಬಹುದು. ಮನೆಯಲ್ಲಿ ಮಿಕ್ಕಿದ ಅನ್ನ ಇದ್ರೆ ಸಖತ್ ಟೇಸ್ಟಿ ಆಗಿರೋ ವಡಾ ಮಾಡಬಹುದು ಅನ್ನೋದು ಹಲವರಿಗೆ ತಿಳಿದಿಲ್ಲ. ಇದಕ್ಕೆ ಹೆಚ್ಚೇನು ಎಕ್ಸ್ಟ್ರಾ ಸಾಮಗ್ರಿಗಳು ಬೇಡ. ಮನೆಯಲ್ಲೇ ಇರುವ ವಸ್ತುಗಳನ್ನ ಬಳಸಿ ರುಚಿಯಾದ ವಡಾ ಮಾಡಬಹುದು. ಹಾಗಾದರೆ ಈ ರೆಸಿಪಿ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.
ಅನ್ನದ ವಡಾ ಮಾಡಲು ಬೇಕಾಗುವ ಸಾಮಗ್ರಿಗಳು
ಅನ್ನ – 2 ಕಪ್, ಕೊತ್ತಂಬರಿ ಸೊಪ್ಪು – 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು), ಕರಿಬೇವು – ಐದಾರು ಎಳಸು, ಜೀರಿಗೆ – ಅರ್ಧ ಚಮಚ, ಇಂಗು – ಚಿಟಿಕೆ, ಉಪ್ಪು – ರುಚಿಗೆ, ಎಣ್ಣೆ – ಕರಿಯಲು, ಹೆಚ್ಚಿನ ಟೊಮೆಟೊ – ಕಾಲು ಕಪ್, ಕ್ಯಾಪ್ಸಿಕಂ – ಕಾಲು ಕಪ್, ಕ್ಯಾಬೇಜ್ – ಕಾಲು ಕಪ್, ಖಾರದಪುಡಿ – 1 ಚಮಚ, ಮೊಸರು – 1ಕಪ್, ಕೊಬ್ಬರಿ ತುರಿ – 1ಕಪ್, ಶುಂಠಿ ಹಸಿಮೆಣಸು ಪೇಸ್ಟ್ – 2 ಚಮಚ
ಅನ್ನದ ವಡಾ ಮಾಡುವ ವಿಧಾನ
ಒಂದು ಪಾತ್ರೆಗೆ ಮೊಸರು ಹಾಕಿ. ಅದೇ ಪಾತ್ರೆಗೆ ಅನ್ನವನ್ನೂ ಹಾಕಿ. ಅನ್ನ ಗಟ್ಟಿಯಾಗಿದ್ದರೆ ಒಮ್ಮೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇಲ್ಲದಿದ್ದರೆ ಕೈಯಲ್ಲಿ ಕಿವುಚಿ ಪೇಸ್ಟ್ ರೀತಿ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಹೆಚ್ಚಿಟ್ಟುಕೊಂಡ ಟೊಮೆಟೊ, ಕ್ಯಾಬೇಜ್, ಶುಂಠಿ–ಹಸಿಮೆಣಸಿನ ಪೇಸ್ಟ್, ಖಾರದ ಪುಡಿ, ಕೊಬ್ಬರಿ ತುರಿ, ಹೆಚ್ಚಿದ್ದ ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು ಹಾಗೂ ಕರಿಬೇವಿನ ಎಲೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 10 ನಿಮಿಷಗಳ ಕಾಲ ಹಾಗೆ ಇರಿಸಿ.
ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಬಿಸಿಯಾದ ಅನ್ನದ ಹಿಟ್ಟಿನಿಂದ ವಡೆ ಆಕಾರ ತಯಾರಿಸಿ ಎಣ್ಣೆಗೆ ಬಿಡಿ. ಇದನ್ನು ಎರಡೂ ಕಡೆ ಫ್ರೈ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಅನ್ನದ ವಡಾ ತಿನ್ನಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಅನ್ನದ ವಡಾ ಉದ್ದಿನವಡಾಕ್ಕಿಂತ ಬಹಳ ಬೇಗ ಬೇಯುತ್ತದೆ. ಹಾಗಾಗಿ ಎಣ್ಣೆಯಲ್ಲಿ ಹೆಚ್ಚು ಹೊತ್ತು ಇರಿಸಬೇಡಿ. ಎರಡು, ಮೂರು ನಿಮಿಷಗಳಲ್ಲಿ ವಡಾ ಬೆಂದಿರುತ್ತದೆ. ರಾತ್ರಿ ಅನ್ನ ಮಿಕ್ಕಿದರೆ ಬೆಳಿಗ್ಗೆ ಅಥವಾ ಮಧ್ಯಾಹ್ನ ಅನ್ನ ಮಿಕ್ಕಿದ್ದರೆ ಸಂಜೆಗೆ ಈ ಸಖತ್ ಟೇಸ್ಟಿ ಮಾಡಬಹುದು. ಇದರ ರುಚಿಯು ಅದ್ಭುತ.
ವಿಭಾಗ