ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿಯಿಂದ ತಯಾರಿಸಬಹುದು ಟೇಸ್ಟಿ ಉಪ್ಪಿನಕಾಯಿ: ಒಮ್ಮೆ ಇದರ ರುಚಿ ಸವಿದರೆ ಮತ್ತೆ ಮತ್ತೆ ತಿನ್ನುವಿರಿ
Dec 11, 2024 01:49 PM IST
ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಶುಂಠಿಯಿಂದ ತಯಾರಿಸಬಹುದು ಟೇಸ್ಟಿ ಉಪ್ಪಿನಕಾಯಿ
ನಮ್ಮಲ್ಲಿ ಬಹಳ ಮಂದಿ ಉಪ್ಪಿನಕಾಯಿಯನ್ನು ಇಷ್ಟಪಡುತ್ತಾರೆ. ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ತಯಾರಿಸಬಹುದು. ಇಲ್ಲಿ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯಿಂದ ಮಾಡಿದ ಉಪ್ಪಿನಕಾಯಿ ಪಾಕವಿಧಾನವಿದೆ. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಇಲ್ಲಿದೆ ಮಸಾಲೆಯುಕ್ತ ಉಪ್ಪಿನಕಾಯಿ ರೆಸಿಪಿ.
ಹಲವು ಮಂದಿ ಉಪ್ಪಿನಕಾಯಿ ಎಂದರೆ ತುಂಬಾ ಇಷ್ಟ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಅನ್ನಕ್ಕೆ ಉಪ್ಪಿನಕಾಯಿ ಹಾಕಿ ತಿನ್ನುವವರ ಸಂಖ್ಯೆಯೇ ಹೆಚ್ಚು. ಚಳಿಗಾಲದಲ್ಲಿ ಹಲವು ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ. ಇದನ್ನು ಅನ್ನ, ದೋಸೆ ಮತ್ತು ಇಡ್ಲಿಯೊಂದಿಗೂ ತಿನ್ನಬಹುದು. ಎಲ್ಲಾ ಬಗೆಯ ಉಪ್ಪಿನಕಾಯಿಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಆದರೆ, ಮನೆಯಲ್ಲಿ ಮಾಡುವ ತಾಜಾ ಉಪ್ಪಿನಕಾಯಿಯ ರುಚಿಯೇ ಬೇರೆ. ಮನೆಯಲ್ಲಿ ತಯಾರಿಸಿದ ಮಸಾಲೆ ಉಪ್ಪಿನಕಾಯಿ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯಿಂದ ಮಸಾಲೆಯುಕ್ತ ಉಪ್ಪಿನಕಾಯಿಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ.
ಬೆಳ್ಳುಳ್ಳಿ-ಹಸಿರು ಮೆಣಸಿನಕಾಯಿ-ಶುಂಠಿಯಿಂದ ಮಸಾಲೆಯುಕ್ತ ಉಪ್ಪಿನಕಾಯಿ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು: ಮೆಣಸಿನಕಾಯಿ- ಹದಿನೈದು, ಶುಂಠಿ- 50 ಗ್ರಾಂ, ಬೆಳ್ಳುಳ್ಳಿ ಎಸಳು- 20, ಉಪ್ಪು ರುಚಿಗೆ ತಕ್ಕಷ್ಟು, ವಿನೆಗರ್- ಒಂದು ಟೀ ಚಮಚ, ಮೆಣಸಿನಪುಡಿ- ಒಂದು ಟೀ ಚಮಚ, ಅರಿಶಿನ- ಒಂದು ಟೀ ಚಮಚ, ಜೀರಿಗೆ- ಒಂದು ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಮೆಂತ್ಯ ಕಾಳು- ಒಂದು ಚಮಚ.
ಮಾಡುವ ವಿಧಾನ: ಮೊದಲಿಗೆ ಜೀರಿಗೆ, ಮೆಂತ್ಯ, ಸಾಸಿವೆ ಹಾಕಿ ಹುರಿಯಿರಿ.
- ತಣ್ಣಗಾದ ನಂತರ ಮಿಕ್ಸರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.
- ಈಗ ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ನಂತರ ಕತ್ತರಿಸಿ ಮಿಕ್ಸಿಗೆ ಹಾಕಿ ಹಸಿಯಾಗಿ ರುಬ್ಬಿಕೊಳ್ಳಿ. ಅದನ್ನು ಪಕ್ಕಕ್ಕೆ ಇರಿಸಿ.
- ಶುಂಠಿಯನ್ನು ತೊಳೆದು ತುಂಡುಗಳಾಗಿ ಕತ್ತರಿಸಿ. ಬೆಳ್ಳುಳ್ಳಿ ಎಸಳು ಮತ್ತು ಶುಂಠಿ ತುಂಡುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
- ನಂತರ ಒಂದು ತಟ್ಟೆಗೆ ನುಣ್ಣಗೆ ರುಬ್ಬಿದ ಹಸಿರು ಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
- ಇದಕ್ಕೆ ಉಪ್ಪು ಮತ್ತು ವಿನೆಗರ್ ಸೇರಿಸಿ, ಮಿಶ್ರಣ ಮಾಡಿ. ಜತೆಗೆ ರುಬ್ಬಿರುವ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ.
- ಕೊನೆಗೆ ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಹಾಗೆಯೇ ಇಡಿ.
- ಎರಡು ದಿನಗಳ ಕಾಲ ಗಾಳಿಯಾಡದ ಪಾತ್ರೆಯಲ್ಲಿ ಹಾಕಿಟ್ಟರೆ ರುಚಿಕರವಾದ, ಮಸಾಲೆಯುಕ್ತ ಉಪ್ಪಿನಕಾಯಿ ಸವಿಯಲು ಸಿದ್ಧ.
ಈ ಉಪ್ಪಿನಕಾಯಿಯನ್ನು ಬಿಸಿ ಬಿಸಿ ಅನ್ನದೊಂದಿಗೆ ಸವಿದರೆ ರುಚಿ ಅದ್ಭುತವಾಗಿರುತ್ತದೆ. ಇದನ್ನು ತಯಾರಿಸಲು ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಶುಂಠಿ ಮತ್ತು ಬೆಳ್ಳುಳ್ಳಿ ಚಳಿಗಾಲದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಶುಂಠಿಯು ಕೆಮ್ಮನ್ನು ಕಡಿಮೆ ಮಾಡುತ್ತದೆ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಕೀಲು ನೋವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೆಳ್ಳುಳ್ಳಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹೃದಯ ಸಮಸ್ಯೆಗಳನ್ನು ತಡೆಯುತ್ತದೆ. ಇದು ಕೆಲವು ರೀತಿಯ ಕ್ಯಾನ್ಸರ್ ಅನ್ನು ಸಹ ತಡೆಗಟ್ಟಲು ಸಹಕಾರಿ. ಹಸಿಮೆಣಸಿನಕಾಯಿಯಲ್ಲಿ ಒಣಮೆಣಸಿನಕಾಯಿಗಿಂತ ಹೆಚ್ಚು ಔಷಧೀಯ ಗುಣಗಳಿವೆ.
ವಿಭಾಗ