logo
ಕನ್ನಡ ಸುದ್ದಿ  /  ಜೀವನಶೈಲಿ  /  ಹಲಸಿನಹಣ್ಣಿನಿಂದ ಮಾಡಬಹುದು ಡಿಫ್ರೆಂಟ್‌ ಟೇಸ್ಟ್‌ನ ದೋಸೆ-ಇಡ್ಲಿ, ಸೀಸನ್‌ ಮುಗಿಯೋ ಮೊದಲು ಮಾಡಿ ತಿನ್ನಿ; ರೆಸಿಪಿ ಇಲ್ಲಿದೆ

ಹಲಸಿನಹಣ್ಣಿನಿಂದ ಮಾಡಬಹುದು ಡಿಫ್ರೆಂಟ್‌ ಟೇಸ್ಟ್‌ನ ದೋಸೆ-ಇಡ್ಲಿ, ಸೀಸನ್‌ ಮುಗಿಯೋ ಮೊದಲು ಮಾಡಿ ತಿನ್ನಿ; ರೆಸಿಪಿ ಇಲ್ಲಿದೆ

Reshma HT Kannada

May 29, 2024 05:30 PM IST

google News

ಹಲಸಿನಹಣ್ಣಿನಿಂದ ಮಾಡಬಹುದು ಡಿಫ್ರೆಂಟ್‌ ಟೇಸ್ಟ್‌ನ ದೋಸೆ-ಇಡ್ಲಿ; ರೆಸಿಪಿ ಇಲ್ಲಿದೆ

    • ಮಳೆಗಾಲದ ಆರಂಭ ಎಂದರೆ ಮಣ್ಣಿನ ಘಮದೊಂದಿಗೆ ಹಲಸಿನ ಹಣ್ಣಿನ ಘಮವೂ ಸೇರುತ್ತದೆ. ಹಲಸಿನ ಹಣ್ಣಿನ ಪರಿಮಳಕ್ಕೆ ಬೇರೆ ಸರಿಸಾಟಿಯಿಲ್ಲ. ಈ ಹಣ್ಣಷ್ಟೇ ಅಲ್ಲ ಇದರಿಂದ ತಯಾರಿಸುವ ರೆಸಿಪಿಗಳು ಅಷ್ಟೇ ಸಖತ್‌ ಆಗಿರುತ್ತದೆ. ಇದರಿಂದ ತಯಾರಿಸುವ ದೋಸೆ ಇಡ್ಲಿ ರುಚಿಗೆ ಬೇರೆ ಸಾಟಿಯಿಲ್ಲ.
ಹಲಸಿನಹಣ್ಣಿನಿಂದ ಮಾಡಬಹುದು ಡಿಫ್ರೆಂಟ್‌ ಟೇಸ್ಟ್‌ನ ದೋಸೆ-ಇಡ್ಲಿ; ರೆಸಿಪಿ ಇಲ್ಲಿದೆ
ಹಲಸಿನಹಣ್ಣಿನಿಂದ ಮಾಡಬಹುದು ಡಿಫ್ರೆಂಟ್‌ ಟೇಸ್ಟ್‌ನ ದೋಸೆ-ಇಡ್ಲಿ; ರೆಸಿಪಿ ಇಲ್ಲಿದೆ

ಜೂನ್‌ ತಿಂಗಳಲ್ಲಿ ಮಳೆಗಾಲದ ಜೊತೆಗೆ ಹಲಸಿನ ಹಣ್ಣಿನ ಪರಿಮಳವೂ ನಮ್ಮ ಮನಸ್ಸು ತುಂಬುತ್ತದೆ. ಹಲಸಿನ ಹಣ್ಣು ಹೊರಗಡೆ ಮುಳ್ಳಾದ್ರೂ ಒಳಗಡೆ ಪರಿಮಳ ರುಚಿಗೆ ಸಾಟಿಯಿಲ್ಲ. ಮಾವಿನಹಣ್ಣಿನಷ್ಟೇ ಹಲಸಿನ ಹಣ್ಣಿಗೂ ಸಾಕಷ್ಟು ಬೇಡಿಕೆ ಇದೆ. ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಹಲಸಿನ ಹಣ್ಣು ತಿನ್ನುವ ಮಜಾವೇ ಬೇರೆ. ಹಲಸಿನ ಹಣ್ಣು, ಕಾಯಿಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ದೋಸೆ, ಇಡ್ಲಿ ಕೂಡ ಒಂದು. ಹಲಸಿನ ಹಣ್ಣು ಹಸಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಕಾಡುತ್ತೆ ಅನ್ನುವವರು ದೋಸೆ ಇಡ್ಲಿ ಮಾಡಿ ತಿನ್ನಬಹುದು. ಹೊರಗಡೆ ಮಳೆ ಸುರಿಯುತ್ತಿರುವಾಗ ಬಿಸಿಬಿಸಿ ದೋಸೆ ಇಡ್ಲಿ ತಿಂತಾ ಇದ್ರೆ ಆಹಾ, ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸೋದು ಸುಳ್ಳಲ್ಲ. ಸರಳವಾಗಿ ಕಡಿಮೆ ಸಾಮಗ್ರಿ ಬಳಸಿ ತಯಾರಿಸಿದ್ರೂ ಇದರ ರುಚಿಗೆ ಎಲ್ಲರೂ ಫಿದಾ ಆಗೋದು ಪಕ್ಕಾ.

ಹಲಸಿನ ಹಣ್ಣಿನ ಇಡ್ಲಿ

ಬೇಕಾಗುವ ಸಾಮಗ್ರಿಗಳು: ಹಲಸಿನ ಹಣ್ಣು - 2 ಕಪ್‌, ಅಕ್ಕಿ - 2 ಕಪ್‌, ಬೆಲ್ಲ - ಸ್ವಲ್ಪ, ಉಪ್ಪು - ರುಚಿಗೆ, ಅರಿಸಿನ - ಚಿಟಿಕೆ, ರವೆ - ಅರ್ಧ ಕಪ್‌, ತೆಂಗಿನತುರಿ - 1ಕಪ್‌

ಹಲಸಿನ ಹಣ್ಣಿನ ಇಡ್ಲಿ ತಯಾರಿಸುವ ವಿಧಾನ: ಅಕ್ಕಿಯನ್ನು 6 ರಿಂದ 7 ಗಂಟೆ ನೆನೆಸಿಡಿ. ಹಲಸಿನ ಹಣ್ಣಿನ ಬೀಜ ತೆಗೆದು ಬಿಡಿಸಿ ಇಟ್ಟಿಕೊಂಡಿರಿ. ಅಕ್ಕಿಯನ್ನು ಚೆನ್ನಾಗಿ ತೊಳೆದು ಅದರ ಜೊತೆಗೆ ಹಲಸಿನ ಹಣ್ಣಿನ ತೊಳೆ (ಸೊಳೆ), ಉಪ್ಪು, ರವೆ, ಬೆಲ್ಲ, ತೆಂಗಿನತುರಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಹಿಟ್ಟಿಗೆ ಹೆಚ್ಚು ನೀರು ಹಾಕಬೇಡಿ. ಇದು ಸ್ವಲ್ಪ ದಪ್ಪಗಿರಬೇಕು. ಇದನ್ನು ಸಾಗುವಾನಿ ಎಲೆಯಲ್ಲಿ ಬೇಯಿಸಿದರೆ ರುಚಿ ಹೆಚ್ಚು, ಎಲೆ ಇಲ್ಲ ಎಂದರೆ ಇಡ್ಲಿ ಪಾತ್ರೆಯಲ್ಲೂ ಬೇಯಿಸಬಹುದು. ಇದನ್ನು ತೆಂಗಿನ ಚಟ್ನಿ ಜೊತೆ ತಿನ್ನಲು ಸಖತ್‌ ಆಗಿರುತ್ತದೆ.

ಹಲಸಿನ ಹಣ್ಣಿನ ದೋಸೆ

ಬೇಕಾಗುವ ಸಾಮಗ್ರಿಗಳು: ಹಲಸಿನ ಹಣ್ಣು - 2 ಕಪ್‌, ಅಕ್ಕಿ - ಮುಕ್ಕಾಲು ಕಪ್‌, ತೆಂಗಿನತುರಿ - 1/4 ಕಪ್‌, ಬೆಲ್ಲ - ಸ್ವಲ್ಪ, ಉಪ್ಪು - ರುಚಿಗೆ, ನೀರು - ರುಬ್ಬಿಕೊಳ್ಳಲು, ಎಣ್ಣೆ - ಸ್ವಲ್ಪ

ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನ: ಅಕ್ಕಿಯನ್ನ ನಾಲ್ಕೈದು ಗಂಟೆ ನೆನೆಸಿಟ್ಟುಕೊಳ್ಳಿ. ಹಲಸಿನ ಹಣ್ಣಿನ ತೊಳೆಯನ್ನು ಬೀಜ ತೆಗೆದು ಬೇರ್ಪಡಿಸಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ನೆನೆಸಿದ್ದ ಅಕ್ಕಿ, ಹಲಸಿನ ಹಣ್ಣು, ಬೆಲ್ಲ, ತೆಂಗಿನತುರಿ, ಉಪ್ಪು, ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ನುಣ್ಣಗೆ ರುಬ್ಬಿದ್ದರೆ ಮಾತ್ರ ದೋಸೆ ಚೆನ್ನಾಗಿ ಬರುತ್ತದೆ. ದೋಸೆ ಮಾಡುವ ಮುನ್ನ ಉಪ್ಪು ಸರಿ ಇದ್ಯಾ ನೋಡಿಕೊಳ್ಳಿ. ಇದನ್ನು ತೆಳ್ಳಗೆ ದೋಸೆ ಕಾವಲಿಯ ಮೇಲೆ ಹರಡಿ ಎರಡೂ ಕಡೆ ಚೆನ್ನಾಗಿ ಬೇಯಿಸಿ. ಹಲಸಿನ ಹಣ್ಣಿನ ದೋಸೆ ತುಪ್ಪದ ಜೊತೆ ತಿನ್ನಲು ಸಖತ್‌ ಆಗಿರುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ