ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್ ಹೋಗುವ ಪ್ಲಾನ್ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್ ಮಾಡದೇ ಬರಬೇಡಿ
May 19, 2024 08:07 PM IST
ಈ ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್ ಹೋಗುವ ಪ್ಲಾನ್ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್ ಮಾಡದೇ ಬರಬೇಡಿ
- ದೇವರನಾಡು ಎಂದೇ ಕರೆಸಿಕೊಳ್ಳುವ ಕೇರಳ ಪ್ರವಾಸೋದ್ಯಮ ಮಾತ್ರವಲ್ಲ, ಬಗೆ ಬಗೆಯ ತಿನಿಸುಗಳಿಂದಲೂ ಖ್ಯಾತಿ ಪಡೆದಿದೆ. ಈ ಬಾರಿ ನೀವು ಕೇರಳಕ್ಕೆ ಪ್ರವಾಸ ಹೋಗಬೇಕು ಅಂದುಕೊಂಡಿದ್ದರೆ, ಅದಕ್ಕೂ ಮುನ್ನ ಅಲ್ಲಿ ಸಿಗುವ ಸಾಂಪ್ರದಾಯಿಕ ತಿನಿಸುಗಳ ಬಗ್ಗೆಯೂ ತಿಳಿದುಕೊಳ್ಳಿ. ಒಂದಕ್ಕಿಂತ ಒಂದು ವಿಭಿನ್ನ ರುಚಿಯಿರುವ ಕೇರಳ ಖಾದ್ಯಗಳ ಪರಿಚಯ ಇಲ್ಲಿದೆ. (ಬರಹ: ಭಾಗ್ಯ ದಿವಾಣ)
ʻದೇವರ ನಾಡುʼ ಎಂದೇ ಖ್ಯಾತಿ ಪಡೆದಿರುವ ನಮ್ಮ ಹೆಮ್ಮೆಯ ರಾಜ್ಯ ಕೇರಳ. ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕೇರಳ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ಬೀಡು. ಇಲ್ಲಿನ ಸುಂದರ ತಾಣಗಳು ಹೇಗೆ ಕಣ್ಮನ ತಣಿಸುತ್ತವೆಯೋ ಅದೇ ರೀತಿಯಲ್ಲಿ ಇಲ್ಲಿ ತಯಾರಿಸುವ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಭಕ್ಷ್ಯಗಳು ಎಲ್ಲರನ್ನೂ ಮೋಡಿ ಮಾಡುತ್ತವೆ. ಅಕ್ಕಿ, ತೆಂಗಿನಕಾಯಿ-ತೆಂಗಿನಎಣ್ಣೆ, ತೆಂಗಿನ ಹಾಲು, ಮಸಾಲೆ ಪದಾರ್ಥಗಳು ಇಲ್ಲಿ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇಲ್ಲಿ ತಯಾರಿಸುವ ಪಥಿರಿ, ಇಡಿಯಪ್ಪಂ, ಕಪ್ಪ ಮತ್ತು ಮೀನ್ ಕರಿ, ಬೀಫ್ ರೋಸ್ಟ್, ಕರಿಮೀನ್ ಪೊಳ್ಳಿಚತ್ ಅಪ್ಪಮ್ ಹೀಗೆ ಲೆಕ್ಕಕ್ಕೆ ಸಿಗದಷ್ಟು ಬಗೆ ಬಗೆಯ ಸಿಹಿ ತಿನಿಸುಗಳು, ಖಾರಖಾರವಾದ ಖಾದ್ಯಗಳನ್ನು ನೀವು ಕೇರಳಕ್ಕೆ ಭೇಟಿ ನೀಡುವ ವೇಳೆ ತಪ್ಪದೇ ರುಚಿ ನೋಡಲೇಬೇಕು.
ರುಚಿರುಚಿಯಾದ ಬಿರಿಯಾನಿಗಳಿಂದ ಹಿಡಿದು ಸಿಹಿತಿನಿಸುಗಳವರೆಗೆ ನೀವು ತಿನ್ನಲೇಬೇಕಾದ ಕೇರಳದ ಕೆಲವು ವಿಶೇಷ ಖಾದ್ಯಗಳು ಇಲ್ಲಿವೆ:
ಕೇರಳದ ಸಾಂಪ್ರದಾಯಿಕ ತಿನಿಸುಗಳಿವು
1. ಕರಿಮೀನ್ ಪೊಳ್ಳಿಚತ್: ಕೇರಳದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಕರಿಮೀನ್ ಪೊಳ್ಳಿಚತ್ ಪ್ರಮುಖವಾದುದು. ಪರ್ಲ್ ಸ್ಪಾಟ್ ಮೀನನ್ನು ಮಸಾಲೆ ಮೆತ್ತಿದ ಬಳಿಕ ಬಾಳೆ ಎಲೆಗಳಲ್ಲಿ ಸುತ್ತಿ ಬೇಯಿಸಿ ತಯಾರಿಸುವ ಖಾದ್ಯವಿದು. ಇದು ಸುವಾಸನೆಗೆ ತಲೆದೂಗದವರೇ ಇಲ್ಲ.
2. ಅಪ್ಪಮ್ ಮತ್ತು ಫಿಶ್ ಮೊಯ್ಲಿ: ಅಪ್ಪಮ್ ತಯಾರಿಸುವ ವಿಧಾನ ಬಲು ಸುಲಭ. ನೆನೆಸಿಟ್ಟ ಅಕ್ಕಿ ಹಿಟ್ಟಿನಿಂದ ಮಾಡಿದ ಒಂದು ವಿಧದ ದೋಸೆಯನ್ನು ಅಪ್ಪಮ್ ಎನ್ನುತ್ತಾರೆ. ಇದಕ್ಕೆ ಜೊತೆಯಾಗಿ ಹಾಲಿನ ಕೆನೆ, ತೆಂಗಿನ ಹಾಲು ಆಧಾರಿತ ಮೀನು ಮೇಲೋಗರವಾದ ಫಿಶ್ ಮೊಯ್ಲಿಯನ್ನು ಸವಿಯುವುದು ಕೇರಳಿಗರಿಗೆ ಅಚ್ಚುಮೆಚ್ಚು. ನಾನ್‌ವೆಜ್ ಆಹಾರ ಪ್ರಿಯರು ತಪ್ಪದೇ ಅಪ್ಪಮ್ ಮತ್ತು ಫಿಶ್ ಮೊಯ್ಲಿಯ ರುಚಿ ನೋಡಲೇಬೇಕು.
3. ಪುಟ್ಟು ಮತ್ತು ಕಡಲ ಕರಿ: ಕೇರಳಿಗರು ಬೆಳಗ್ಗಿನ ತಿಂಡಿಯಲ್ಲಿ ಪುಟ್ಟು ಮತ್ತು ಕಡಲ ಕರಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಕ್ಕಿ ತರಿ ಹಾಗೂ ತೆಂಗಿನ ತುರಿಯ ಮಿಶ್ರಣವನ್ನು ಆವಿಯಲ್ಲಿ ಬೇಯಿಸಿ ತಯಾರಿಸುವ ಪುಟ್ಟು ಜೊತೆಗೆ ಕಡಲ ಕರಿ (ಕಪ್ಪು ಕಡಲೆಯ ಪದಾರ್ಥ)ಯನ್ನು ಸವಿಯಬಹುದು.
4. ತಲಶ್ಶೇರಿ ಬಿರಿಯಾನಿ: ಘಮ್ಮೆನ್ನುವ ಮಸಾಲೆಗಳು ಮತ್ತು ವಿಭಿನ್ನವಾದ ಮಾಂಸದ ಪದರಗಳು, ಸಾಮಾನ್ಯವಾಗಿ ಚಿಕನ್ ಅಥವಾ ಮಟನ್‌ನಿಂದ ತಯಾರಿಸುವ ಬಿರಿಯಾನಿಯನ್ನು ತಲಶ್ಶೇರಿ ಬಿರಿಯಾನಿ ಎನ್ನುತ್ತಾರೆ. ಸುವಾಸನೆ ಮತ್ತು ಟೆಕ್ಸ್ಚರ್‌ಗಳ ವಿಶಿಷ್ಟ ಮಿಶ್ರಣಕ್ಕೆ ಹೆಸರುವಾಸಿಯಾದ ಈ ಬಿರಿಯಾನಿಯು ಕೇರಳದ ಮಲಬಾರ್ ಪ್ರದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಖಾದ್ಯವೆಂದರೆ ತಪ್ಪಾಗಲಾರದು.
5. ಪಾಲಡ ಪಾಯಸಂ: ಹಾಲು, ಸಕ್ಕರೆ, ಏಲಕ್ಕಿ ಸೇರಿದಂತೆ ಪರಿಮಳಯುಕ್ತ ಮಸಾಲೆಗಳೊಂದಿಗೆ ಮಾಡಿದ ಅಕ್ಕಿ ಪಾಯಸವಾದ ಪಲಾಡ ಪಾಯಸವಿಲ್ಲದೆ ಕೇರಳದ ಯಾವುದೇ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಓಣಂ ಸೇರಿದಂತೆ ಕೇರಳದ ಪ್ರಮುಖ ಹಬ್ಬಗಳಲ್ಲಿ ಅನೇಕ ಬಗೆಯ ಪಾಲಡ ಪಾಯಸವನ್ನು ಮಾಡುವ ಸಂಪ್ರದಾಯವಿದೆ.
6. ಪಯಂಪುರಿ: ಪಯಂಪುರಿ ಅಥವಾ ಬಾಳೆಹಣ್ಣಿನ ಸಿಹಿ ಪಕೋಡವು ಕೇರಳದಾದ್ಯಂತ ಆಹಾರಪ್ರಿಯರು ಸಂಜೆಯ ಟೀ ಜೊತೆಗೆ ತಿನ್ನುವ ಸಿಹಿ ತಿನಿಸು. ಮಾಗಿದ ಬಾಳೆಹಣ್ಣನ್ನು ಉದ್ದುದ್ದ ಹಾಗೂ ತೆಳ್ಳಗೆ ಭಾಗಗಳನ್ನಾಗಿ ಮಾಡಿಟ್ಟುಕೊಂಡು ಮೈದಾ ಅಥವಾ ಗೋಧಿ ಹಿಟ್ಟು, ಅಕ್ಕಿ ಹುಡಿ, ಅರಿಶಿನ, ಉಪ್ಪು ಮತ್ತು ಸಕ್ಕರೆಯಿಂದ ಮಾಡಿದ ಹಿಟ್ಟಿನಲ್ಲಿ ಅದ್ದಿ, ನಂತರ ಎಣ್ಣೆಯಲ್ಲಿ ಹೊಂಬಣ್ಣ ಬರುವ ತನಕ ಹುರಿದು ತೆಗೆದರೆ ಸಾಕು ಪಯಂಪುರಿ ಸಿದ್ಧವಾಗುತ್ತದೆ. ಹೊರಭಾಗದಲ್ಲಿ ಗರಿಗರಿಯಾದ ಮತ್ತು ಒಳಭಾಗದಲ್ಲಿ ಮೃದುವಾಗಿದ್ದು ರುಚಿಕರವಾಗಿರುವ ಪಯಂಪುರಿ ದಿನದ ಯಾವುದೇ ಸಮಯದಲ್ಲೂ ಸವಿಯಬಹುದು.
7. ಉಣ್ಣಿಯಪ್ಪಂ: ಉಣ್ಣಿಯಪ್ಪಂ ಅಕ್ಕಿಹಿಟ್ಟು, ಬೆಲ್ಲ, ಬಾಳೆಹಣ್ಣು ಮತ್ತು ತೆಂಗಿನಕಾಯಿಯಿಂದ ಮಾಡುವ ಸಿಹಿ ತಿಂಡಿ. ಪಡ್ಡುವಿನಂತೆಯೇ ಕಂಡರೂ ರುಚಿಯಲ್ಲಿ ಸಿಹಿಯಾಗಿದ್ದು, ಓಣಂ ಸೇರಿದಂತೆ ಕೇರಳದ ಎಲ್ಲ ಹಬ್ಬ ಹರಿದಿನಗಳಲ್ಲಿ ಈ ಸಿಹಿ ತಿನಿಸನ್ನು ತಯಾರಿಸಿ ದೇವರಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಕೇರಳಿಗರಿಗಿದು ಬಲು ಅಚ್ಚುಮೆಚ್ಚಿನ ಸಿಹಿ ಖಾದ್ಯ.
8. ಕೇರಳ ಪರೋಟ: ಮಲಬಾರ್ ಪರೋಟ ಎಂದೂ ಕರೆಯಲ್ಪಡುವ ಕೇರಳ ಪೊರೋಟ, ಮೈದಾ ಹಿಟ್ಟಿನಿಂದ ತಯಾರಿಸುವ ಬೆಳಗ್ಗಿನ ಉಪಹಾರ. ಇದರಲ್ಲಿ ಅನೇಕ ಬಗೆಯವಿದ್ದು, ಕಾಯಿನ್ ಪರೋಟ, ನೂಲ್ ಪರೋಟ, ಬನ್ ಪರೋಟ, ಪಾಲ್ ಪರೋಟ ಪ್ರಮುಖವಾದುವು.
9. ಕೇರಳ ಸದ್ಯ: ಮಲಯಾಳಂ ಭಾಷೆಯಲ್ಲಿ ಸದ್ಯ ಎಂದರೆ ಹಬ್ಬ ಎಂದರ್ಥ. ಕೇರಳ ಸದ್ಯ ಎಂದರೆ ಕೇರಳದ ಪ್ರಮುಖ ಸಿಹಿ ಹಾಗೂ ಖಾರ ಪದಾರ್ಥಗಳನ್ನು ಬಾಳೆ ಎಲೆಯ ಮೇಲೆ ಬಡಿಸಿಕೊಂಡು ಊಟ ಮಾಡುವ ವಿಧಾನವಾಗಿದೆ. ಇದರಲ್ಲಿ ಅನ್ನ ಮತ್ತು ಸಾಂಬಾರ್‌ನಿಂದ ಹಿಡಿದು ಅವಿಯಲ್ ಮತ್ತು ತೋರನ್ ಹೀಗೆ ಸದ್ಯದಲ್ಲಿನ ಪ್ರತಿಯೊಂದು ಖಾದ್ಯವು ಕೇರಳದ ಆಹಾರ ವೈವಿಧ್ಯತೆಯನ್ನು ಪ್ರದರ್ಶಿಸುವಂತಿರುತ್ತದೆ.
10. ಕಲ್ಲುಮಕ್ಕಾಯ: ಕಲ್ಲುಮಕ್ಕಾಯ ಅಥವಾ ಮಸ್ಸೆಲ್ಸ್, ಕೇರಳದ ಕರಾವಳಿಯ ಪಾಕಪದ್ಧತಿಯಲ್ಲಿ ಬಹುಬೇಡಿಯಿರುವ ಸವಿಯಾದ ಆಹಾರ ಪದಾರ್ಥವಾಗಿದೆ. ಚಿಪ್ಪುಮೀನುಗಳನ್ನು ಸಾಮಾನ್ಯವಾಗಿ ಮಸಾಲೆಗಳು ಮತ್ತು ತೆಂಗಿನ ಹಾಲಿನೊಂದಿಗೆ ಸೇರಿಸಿ ತಯಾರಿಸುವ ಸ್ವಾದಿಷ್ಟಭರಿತ ತಿನಿಸು ಇದು.
ಒಟ್ಟಿನಲ್ಲಿ ಕೇರಳಕ್ಕೆ ಭೇಟಿಕೊಡುವ ಯೋಜನೆಯನ್ನು ನೀವು ಹಾಕಿಕೊಂಡಿದ್ದೇ ಆದರೆ ತಪ್ಪದೇ ಅಲ್ಲಿನ ಪ್ರಮುಖವಾದ ಈ ಖಾದ್ಯಗಳನ್ನು ಒಮ್ಮೆಯಾದರೂ ಟೇಸ್ಟ್ ಮಾಡಿ. ಒಮ್ಮೆ ರುಚಿ ನೋಡಿದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಎನ್ನಿಸದಿರದು.