Subbanna Mess: ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿದೆ 100 ವರ್ಷಗಳ ಹಳೆಯ ಸುಬ್ಬಣ್ಣ ಮೆಸ್; ಭೋಜನಪ್ರಿಯರು ಒಮ್ಮೆ ಇಲ್ಲಿಗೆ ಭೇಟಿ ಕೊಡಲೇಬೇಕು
Jul 07, 2023 06:07 PM IST
ಮಂಡ್ಯ ಜಿಲ್ಲೆ ಮೇಲುಕೋಟೆಯ ಸುಬ್ಬಣ್ಣ ಮೆಸ್
ಈ ಹೋಟೆಲ್‌ಗೆ ಮೊದಲು ಬ್ರಾಹ್ಮಣರ ಫಲಹಾರ ಮಂದಿರ ಎಂಬ ಹೆಸರಿತ್ತು. ಸುಮಾರು 25 ವರ್ಷಗಳ ಹಿಂದೆ ಹೆಸರನ್ನು ಸುಬ್ಬಣ್ಣ ಮೆಸ್ ಎಂದು ಬದಲಿಸಲಾಗಿದೆ. ಮೆಸ್‌ನಲ್ಲಿ ಈಗ ಸುಮಾರು 15ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಪತ್ನಿ, ಅಣ್ಣನ ಸಹಾಯದಿಂದ ಶಂಕರ್ ನಾರಾಯಣ್ ಈ ಮೆಸ್ ನಡೆಸುತ್ತಾ ಬಂದಿದ್ದಾರೆ.
ಮೇಲುಕೋಟೆ ಎಂದರೆ ನಮಗೆ ತಕ್ಷಣ ನೆನಪಾಗುವುದು ಪುಳಿಯೋಗರೆ. ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಗೆ ಬಂದು ನೆಲೆಸಿದಾಗ ಅಲ್ಲಿಗೆ ಬರುವ ಭಕ್ತರಿಗೆ ಪ್ರಸಾದವಾಗಿ ನೀಡಲು ಅನ್ನಕ್ಕೆ ಬೆಲ್ಲ ಹಾಗೂ ಹುಣಿಸೆ ಹುಳಿಯನ್ನು ಸೇರಿಸಿ ಕೊಡುವಂತೆ ಸೂಚಿಸುತ್ತಿದ್ದರು. ಮುಂದೆ ಇದೇ ವಿಧಾನ ಹಂತ ಹಂತವಾಗಿ ಬದಲಾಗಿ ಈಗಿನ ಪುಳಿಯೋಗರೆವರೆಗೂ ಬಂದು ನಿಂತಿದೆ.
ಪುಳಿಯೋಗರೆ , ಸಿಹಿ ಪೊಂಗಲ್ ಫೇಮಸ್
ಅಂದ ಹಾಗೆ ಮೇಲುಕೋಟೆಗೆ ಹೋಗುವ ಭಕ್ತರು ಇಲ್ಲಿ ಪುಳಿಯೋಗರೆ ಜೊತೆಗೆ ಸಕ್ಕರೆ ಪೊಂಗಲ್ , ಬೆಲ್ಲದ ಪೊಂಗಲ್ ಕೂಡಾ ಸವಿಯುತ್ತಾರೆ. ಇಲ್ಲಿ ದೊರೆಯುವ ರುಚಿ ಬೇರೆಲ್ಲೂ ದೊರೆಯುವುದಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಈ ಐತಿಹಾಸಿಕ ಸ್ಥಳದಲ್ಲಿ ಅನೇಕ ಹೋಟೆಲ್‌ಗಳಿವೆ. ಆದರೆ ಕೆಲವೇ ಹೋಟೆಲ್‌ಗಳು ಮಾತ್ರ ಶುಚಿಯಾದ, ರುಚಿಯಾದ ಆಹಾರವನ್ನು ಜನರಿಗೆ ನೀಡುತ್ತಾ ಬಂದಿದೆ. ಅದರಲ್ಲಿ ''ಸುಬ್ಬಣ್ಣ ಮೆಸ್'' ಕೂಡಾ ಒಂದು. ಸುಬ್ಬಣ್ಣ ಮೆಸ್, ಸುಮಾರು 100 ವರ್ಷಗಳ ಹಿಂದೆ ಆರಂಭವಾದ ಒಂದು ಪುಟ್ಟ ಹೋಟೆಲ್. ಶಂಕರ್ ನಾರಾಯಣ್, ಈ ಹೋಟೆಲ್ ಮಾಲೀಕರು. ಸುಬ್ಬಣ್ಣ ಇವರ ಹಿರಿಯ ಸಹೋದರ.
ಮೊದಲು ಈ ಹೋಟೆಲ್‌ಗೆ ಬೇರೆ ಹೆಸರಿತ್ತು. ನಂತರ ಸುಬ್ಬಣ್ಣ ಮೆಸ್ ಎಂದು ಬದಲಾಯ್ತು. ಶಂಕರ್ ನಾರಾಯಣ್ ತಂದೆ ನಾಗಪ್ಪ ಕೂಡಾ ಚಿಕ್ಕ ವಯಸ್ಸಿಗೆ ಈ ಹೋಟೆಲ್ ಆರಂಭಿಸಿದ್ದರು. ಶಂಕರ್ ಅವರು 10ನೇ ತರಗತಿ ಫೇಲ್ ಆದಾಗ ತಂದೆಯೊಂದಿಗೆ ಹೋಟೆಲ್ ಉದ್ಯಮಕ್ಕೆ ಜೊತೆ ಆದರು. ನಂತರ 1997ರಲ್ಲಿ ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. ಈ ಹೋಟೆಲ್‌ಗೆ ಮೊದಲು ಬ್ರಾಹ್ಮಣರ ಫಲಹಾರ ಮಂದಿರ ಎಂಬ ಹೆಸರಿತ್ತು. ಸುಮಾರು 25 ವರ್ಷಗಳ ಹಿಂದೆ ಹೆಸರನ್ನು ಸುಬ್ಬಣ್ಣ ಮೆಸ್ ಎಂದು ಬದಲಿಸಲಾಗಿದೆ. ಮೆಸ್‌ನಲ್ಲಿ ಈಗ ಸುಮಾರು 15ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಪತ್ನಿ, ಅಣ್ಣನ ಸಹಾಯದಿಂದ ಶಂಕರ್ ನಾರಾಯಣ್ ಈ ಮೆಸ್ ನಡೆಸುತ್ತಾ ಬಂದಿದ್ದಾರೆ. ಇಲ್ಲಿ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟ ದೊರೆಯುತ್ತದೆ.
ಮೆನುವಲ್ಲಿ ಏನೆಲ್ಲಾ ಇರಲಿದೆ
ಬೆಳಗ್ಗೆ 7.30 ರಿಂದ 10.30 ವರೆಗೆ ಇಡ್ಲಿ, ದೋಸೆ ದೊರೆಯುತ್ತದೆ. ಮಧ್ಯಾಹ್ನ 12.30 ರಿಂದ 3.30 ವರೆಗೆ ಊಟ ದೊರೆಯುತ್ತದೆ. ಊಟಕ್ಕೆ ಉಪ್ಪಿನಕಾಯಿ, ಪಲ್ಯ, ಮಜ್ಜಿಗೆ ಹುಳಿ, ತೊವ್ವೆ, ಹಪ್ಪಳ, ಸಕ್ಕರೆ ಪೊಂಗಲ್, ಬೆಲ್ಲದ, ಪೊಂಗಲ್, ಪುಳಿಯೊಗರೆ, ಚಪಾತಿ ಅನ್ನ, ಸಾಂಬಾರ್, ಮಜ್ಜಿಗೆ ಇರುತ್ತದೆ. ಊಟದ ಬೆಲೆ 130 ರೂಪಾಯಿ. ಇಲ್ಲಿ ಬಂದು ಒಮ್ಮೆ ತಿಂದು ಹೋದವರು ಮತ್ತೆ ಸುಬ್ಬಣ್ಣ ಮೆಸ್ ಊಟದ ರುಚಿ ನೋಡಲು ಸ್ನೇಹಿತರು, ಕುಟುಂಬದವರನ್ನೂ ಕರೆ ತರುತ್ತಾರೆ. ಇಲ್ಲಿ ಪುಳಿಯೋಗರೆ ಗೊಜ್ಜು, ಪುಳಿಯೋಗರೆ ಪುಡಿ, ಹಪ್ಪಳ, ಸಂಡಿಗೆ, ರಸಂ ಪುಡಿ, ಸಾಂಬಾರ್ ಪುಡಿ, ಬಿಸಿಬೇಳೆ ಬಾತ್ ಪುಡಿ, ವಾಂಗಿಬಾತ್ ಪುಡಿ, ಉಪ್ಪಿನ ಕಾಯಿ , ವಿವಿಧ ರೀತಿಯ ಚಟ್ನಿ ಪುಡಿಗಳು ದೊರೆಯುತ್ತದೆ. ಊಟ ಮಾಡಿದವರು ಇಲ್ಲಿ ಏನಾದರೊಂದು ಖರೀದಿಸಿ ಮನೆಗೆ ಕೊಂಡೊಯ್ಯುತ್ತಾರೆ. ಇಲ್ಲಿನ ಊಟಕ್ಕೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಹಾಗೇ ಕೃತಕ ಬಣ್ಣ ಕೂಡಾ ನಿಷೇಧ.
ಚಟ್ನಿಪುಡಿ, ಹಪ್ಪಳ , ಸಂಡಿಗೆ ದೊರೆಯುತ್ತದೆ
ಅಡುಗೆ ಮಾಡಲು ಇಲ್ಲಿ ಗ್ಯಾಸ್ ಹಾಗೂ ಸೌದೆ ಒಲೆ ಎರಡನ್ನೂ ಬಳಸಲಾಗುತ್ತದೆ. ಹಾಗೇ ಊಟಕ್ಕೆ ಬಾಳೆ ಎಲೆ ಹಾಗೂ ಇಸ್ತ್ರಿ ಎಲೆಯನ್ನು ಬಳಸಲಾಗುತ್ತದೆ. ''ಇಲ್ಲಿ ಮನೆಯಲ್ಲೇ ಊಟ ಮಾಡಿದ ಅನುಭವ ದೊರೆಯುತ್ತದೆ'' ಎನ್ನುವುದು ಇಲ್ಲಿ ಊಟ ಮಾಡಿದವರ ಮಾತು. ''ಪ್ರತಿದಿನ ಸುಮಾರು 70 ರಿಂದ 80 ಜನರು ಇಲ್ಲಿ ಊಟ ಮಾಡುತ್ತಾರೆ. ಒಂದು ವೇಳೆ ಊಟ ಉಳಿದರೆ ದೇವಸ್ಥಾನದ ಬಳಿ ಬರುವ ಜನರಿಗೆ ಪ್ರಸಾದವಾಗಿ ಹಂಚುತ್ತೇವೆ. ಯಾವುದೇ ಕಾರಣಕ್ಕೂ ನಾವು ರೆಫ್ರಿಜರೇಟರ್‌ನಲ್ಲಿಟ್ಟು ಮತ್ತೆ ಬಳಸುವ ಪದ್ಧತಿ ಇಲ್ಲ, ಎಲ್ಲವೂ ಫ್ರೆಷ್ ಆಗಿ ತಯಾರಿಸುತ್ತೇವೆ. ಹಾಗೇ ನಾವು ಊಟಕ್ಕೆ ಬಿಟಿ ರೈಸ್ ಬಳಸುತ್ತೇವೆ. ಅಡುಗೆಗೆ ಬಳಸುವ ಪ್ರತಿಯೊಂದು ವಸ್ತುಗಳ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ'' ಎನ್ನುತ್ತಾರೆ ಶಂಕರ್ ನಾರಾಯಣ್.
ಶಂಕರ್ ನಾರಾಯಣ್ ಅವರ ಪತ್ನಿ ನಾಗಕನ್ಯ ಕೂಡಾ ಪತಿ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಮಗ ಡೇಟಾ ಇಂಜಿನಿಯರ್, ಮಗಳು ಲಂಡನ್‌ನಲ್ಲಿ ಎಂಎಸ್ ಓದುತ್ತಿದ್ದಾರೆ.
ಹವೇಲಿ ರಸ್ತೆಯಲ್ಲಿರುವ ಹೋಟೆಲ್
ಒಂದು ವೇಳೆ ನೀವು ಮೇಲುಕೋಟೆಗೆ ಹೋದಾಗ ತಪ್ಪದೆ ಒಮ್ಮೆ ಸುಬ್ಬಣ್ಣ ಮೆಸ್‌ಗೆ ಭೇಟಿ ನೀಡಿ. ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಲಕ್ಕೆ, ಅಲ್ಲಿಂದ ವಾಪಸ್ ಆಗುವಾಗ ಎಡಭಾಗದಲ್ಲಿ ಈ ಮೆಸ್ ಇದೆ. ಡಿಸಿಸಿ ಬ್ಯಾಂಕ್ ಹಿಂಭಾಗ, ಹವೇಲಿ ರಸ್ತೆಗೆ ಹೋದರೆ ಅಲ್ಲಿ ಸುಬ್ಬಣ್ಣ ಮೆಸ್ ಬೋರ್ಡ್ ಕಾಣಬಹುದು. ಅಥವಾ ದೇವಸ್ಥಾನದ ಬಳಿ ಸುಬ್ಬಣ್ಣ ಮೆಸ್ ಎಲ್ಲಿ ಎಂದು ಕೇಳಿದರೆ ಯಾರಾದರೂ ನಿಮಗೆ ದಾರಿ ತೋರಿಸುತ್ತಾರೆ.
-ರಕ್ಷಿತ
ಈ ಕಾಲಂ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆಯನ್ನು ನಮಗೆ ತಿಳಿಸಿ
ಇ-ಮೇಲ್: ht.kannada@htdigital.in
ಇಂಥಹ ಮತ್ತಷ್ಟು ಅಂಕಣಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ