ಚಳಿ, ಮಳೆಯ ವಾತಾವರಣಕ್ಕೆ ಸಖತ್ ಆಗಿರುತ್ತೆ ಮೆಂತ್ಯೆ ಕಢಿ; ಮಹಾರಾಷ್ಟ್ರ ಶೈಲಿಯ ಆ ಖಾದ್ಯವನ್ನು ನೀವೂ ಒಮ್ಮೆ ಮನೆಯಲ್ಲಿ ಮಾಡಿ
Dec 01, 2024 10:54 AM IST
ಮೆಂತ್ಯೆ ಕಢಿ
- ಚಳಿಗಾಲದಲ್ಲಿ ಖಾರಖಾರವಾಗಿ ರುಚಿ ರುಚಿಯಾದ ತಿನಿಸುಗಳನ್ನು ತಿನ್ನಬೇಕು ಅಂತ ನಾಲಿಗೆ ಬಯಸುವುದು ಸಹಜ. ಅದರಲ್ಲೂ ಈಗ ಮಳೆ ಬೇರೆ ಜೊತೆಯಾಗಿದೆ. ಈ ಸಮಯದಲ್ಲಿ ಆರೋಗ್ಯಕ್ಕೂ ಹಿತ ಎನ್ನಿಸುವ ಆಹಾರ ತಿನ್ನಬೇಕು. ಈ ಚಳಿ–ಮಳೆಯ ವೆದರ್‌ಗೆ ಸಖತ್ ಆಗಿರುತ್ತೆ ಮೆಂತ್ಯೆ ಕಢಿ. ಇದನ್ನ ಮಾಡೋದು ಹೇಗೆ ನೋಡಿ.
ಕಢಿ ಇದು ಕರ್ನಾಟಕಕ್ಕೆ ಹೊಸತು ಎನ್ನಿಸಿದರೂ ಮಹಾರಾಷ್ಟ್ರದಲ್ಲಿ ಸಖತ್ ಫೇಮಸ್. ವಿವಿಧ ರೀತಿಯ ಕಧಿಗಳನ್ನು ಮಾಡಲಾಗುತ್ತದೆ. ಮೊಸರು ಹಾಗೂ ಬೇಳೆಗಳಿಂದ ತಯಾರಿಸುವ ಈ ಕಧಿ ಚಳಿಗಾಲಕ್ಕೆ ಖಂಡಿತ ಸ್ಪೆಷಲ್ ಎನ್ನಿಸುತ್ತೆ. ಈ ಸಮಯದಲ್ಲಿ ಆರೋಗ್ಯಕ್ಕೂ ಹಿತವಾಗಿ, ನಾಲಿಗೆಗೂ ರುಚಿ ಎನ್ನಿಸುವ ಆಹಾರ ಬಹಳ ಅವಶ್ಯ. ಅದಕ್ಕಾಗಿ ನೀವು ಈ ಮೆಂತ್ಯೆ ಕಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಮೆಂತ್ಯೆ ಸೊಪ್ಪಿನಿಂದ ಮಾಡುವ ಕಧಿಯ ರುಚಿಯನ್ನು ಚಳಿಗಾಲದಲ್ಲಿ ಒಮ್ಮೆಯಾದ್ರೂ ಸವಿಬೇಕು. ಇದನ್ನು ಒಮ್ಮೆ ತಿಂದ್ರೆ ಮೆಂತ್ಯೆ ಕಹಿ ಅಂತ ದ್ವೇಷ ಮಾಡೋರು ಕೂಡ ಮತ್ತೆ ಮತ್ತೆ ಬೇಕು ಅಂತ ತಿಂತಾರೆ. ಇದನ್ನು ಚಪಾತಿ, ಅನ್ನ, ದೋಸೆ ಜೊತೆ ನೆಂಜಿಕೊಂಡು ತಿನ್ನಬಹುದು. ಹಾಗಾದರೆ ಇದನ್ನು ಮಾಡೋದು ಹೇಗೆ ನೋಡಿ.
ಮೆಂತ್ಯೆ ಕಢಿ ರೆಸಿಪಿ
ಹುಳಿ ಮೊಸರು – 1ಕಪ್, ಕಡಲೆಹಿಟ್ಟು – 2ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಇಂಗು, ಅರಿಶಿನ, ಕೊತ್ತಂಬರಿ ಪೇಸ್ಟ್, ಮೆಂತ್ಯೆ ಕಾಳು, ಉಪ್ಪು, ತುಪ್ಪ ಅಥವಾ ಎಣ್ಣೆ, ಜೀರಿಗೆ, ಕೊತ್ತಂಬರಿ ಸೊಪ್ಪು, ಸಾಸಿವೆ, ಒಣಮೆಣಸು, ಬೆಳುಳ್ಳಿ, ಖಾರದ ಪುಡಿ, ಮೆಂತ್ಯೆ ಸೊಪ್ಪು, ನೀರು.
ಮೆಂತ್ಯೆ ಕಢಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಹುಳ ಮೊಸರು ಹಾಕಿ, ಅದಕ್ಕೆ ಕಡಲೆಹಿಟ್ಟು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿ. ಇದನ್ನು ತೆಳುವಾಗಿಸಲು ಅಗತ್ಯ ಇರುವಷ್ಟು ನೀರು ಸೇರಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ ಸೇರಿಸಿ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಇಂಗು, ಅರಿಸಿನ, ಕೊತ್ತಂಬರಿ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಚಿಕ್ಕದಾಗಿ ಹೆಚ್ಚಿದ ಮೆಂತ್ಯೆಸೊಪ್ಪನ್ನು ಹಾಕಿ ಮಿಶ್ರಣ ಮಾಡಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಮೆಂತ್ಯೆ ಸೊಪ್ಪು ಬೆಂದಿದೆ ಎಂದಾಗ ಮೊಸರಿನ ಮಿಶ್ರಣವನ್ನು ಅದಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕೊನೆಯಲ್ಲಿ ಉಳಿದ ಮಸಾಲೆಗಳನ್ನು ಹಾಕಬೇಕು. ಇದರಿಂದ ರುಚಿ ಹಾಗೂ ಬಣ್ಣ ಎರಡೂ ಚೆನ್ನಾಗಿರುತ್ತದೆ.
ಈಗ ಒಗ್ಗರಣೆ ಮಾಡಲು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕೊತ್ತಂಬರಿ ಹಾಗೂ ಸಾಸಿವೆ ಹಾಕಿ. ನಂತರ ಒಣಮೆಣಸು, ಬೆಳುಳ್ಳಿ, ಈರುಳ್ಳಿ, ಖಾರದ ಪುಡಿ, ಇಂಗು ಸೇರಿಸಿ. ಇದನ್ನು ಕಢಿಗೆ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಮೆಂತ್ಯೆ ಕಢಿ ತಿನ್ನಲು ಸಿದ್ಧ. ಇದು ಚಳಿಗಾಲದಲ್ಲಿ ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತೆ, ಇಂದು ಭಾನುವಾರ ಮನೆಯಲ್ಲಿ ಈ ಸಿಂಪಲ್ ರೆಸಿಪಿ ಟ್ರೈ ಮಾಡಿ.
ಇದನ್ನೂ ಓದಿ: ಹೋಟೆಲ್ ಶೈಲಿಯ ಟೊಮೆಟೊ ಸೂಪ್ ಮಾಡೋದು ಹೇಗೆ ನೋಡಿ
ವಿಭಾಗ