ಮಾವಿನಕಾಯಿಯಲ್ಲ, ಇಲ್ಲಿದೆ ಮಾವಿನಹಣ್ಣಿನ ಉಪ್ಪಿನಕಾಯಿ ರೆಸಿಪಿ; ಬೇಸಿಗೆಯಲ್ಲಿ ಮಾಡಿಟ್ಟುಕೊಂಡ್ರೆ ವರ್ಷ ಪೂರ್ತಿ ತಿನ್ನಬಹುದು
Apr 19, 2024 08:13 PM IST
ಮಾವಿನಹಣ್ಣಿನ ಸ್ಪೆಷಲ್ ಉಪ್ಪಿನಕಾಯಿ
- ಖಾರ ಖಾರವಾದ ಉಪ್ಪಿನಕಾಯಿ ಜೊತೆಗಿದ್ದರೆ, ಊಟ ಒಂದು ತುತ್ತು ಹೆಚ್ಚಿಗೆಯೇ ಹೊಟ್ಟೆ ಸೇರುತ್ತದೆ. ಅದರಲ್ಲೂ ಮಾವಿನಹಣ್ಣಿನ ಉಪ್ಪಿನಕಾಯಿ ಇದ್ದರಂತೂ ಕೇಳೋದೇ ಬೇಡ, ಊಟಕ್ಕೆ ಹೊಸ ರುಚಿ ಬರುವುದರಲ್ಲಿ ಅನುಮಾನವಿಲ್ಲ. ಇದೇನಿದು ಮಾವಿನ ಹಣ್ಣಿನ ಉಪ್ಪಿನಕಾಯಿ, ಇದನ್ನು ತಯಾರಿಸುವುದು ಹೇಗೆ ನೋಡಿ.
ಮಾವಿನ ಕಾಯಿ ಉಪ್ಪಿನಕಾಯಿ, ಅಮಟೆಕಾಯಿ ಉಪ್ಪಿನಕಾಯಿ, ನಿಂಬೆಹುಳಿ ಉಪ್ಪಿನಕಾಯಿ ಹೀಗೆ ವಿವಿಧ ಬಗೆಯ ಉಪ್ಪಿನಕಾಯಿಗಳನ್ನು ನೀವು ಊಟದ ಜೊತೆ ಸವಿದಿರಬಹುದು. ಆದರೆ ನಾಲಿಗೆಗೆ ಹೊಸ ರುಚಿ ನೀಡಬಲ್ಲ ಮಾವಿನಹಣ್ಣಿನ ಉಪ್ಪಿನಕಾಯಿಯನ್ನು ಎಂದಾದರೂ ತಿಂದಿದ್ದೀರಾ? ಉಪ್ಪು, ಹುಳಿ, ಸಿಹಿಯ ಜೊತೆಗೆ ಖಾರವೂ ಸಮ ಪ್ರಮಾಣದಲ್ಲಿರುವ ಮಾವಿನಹಣ್ಣಿನ ಉಪ್ಪಿನಕಾಯಿ, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡದ ಹಲವೆಡೆ ಮಾವಿನ ಸೀಸನ್‌ನಲ್ಲಿ ತಪ್ಪದೇ ಮಾಡುತ್ತಾರೆ. ಅಯ್ಯೋ ಇದೇನಿದು, ಮಾವಿನ ಹಣ್ಣಿನಿಂದ ಉಪ್ಪಿನಕಾಯಿಯೇ, ಇದು ಸಿಹಿ ಇರೋದಿಲ್ವಾ ಅಂತ ಮೂಗು ಮುರಿಯಬೇಡಿ. ಇದರ ರುಚಿ ನೋಡಿದ ಮೇಲೆ ನೀವು ಮೂಗಿನ ಮೇಲೆ ಬೆರಳು ಇರಿಸಿಕೊಳ್ಳೋದು ಖಂಡಿತ.
ಈ ಮಾವಿನ ಹಣ್ಣಿನ ಉಪ್ಪಿನಕಾಯಿ ತಯಾರಿಸಲು ಯಾವ ಮಾವಿನಹಣ್ಣು ಬಳಸುತ್ತಾರೆ. ರುಚಿಕರವಾದ ಈ ಉಪ್ಪಿನಕಾಯಿ ತಯಾರಿಸುವ ವಿಧಾನ ಹೇಗೆ, ಇಂತಹ ಅನೇಕ ಪ್ರಶ್ನೆಗಳು ಈಗಾಗಲೇ ನಿಮ್ಮನ್ನು ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಕಾಡು ಮಾವಿನಹಣ್ಣು
ಸಾಮಾನ್ಯವಾಗಿ ಮಾವಿನಹಣ್ಣಿನ ಉಪ್ಪಿನಕಾಯಿ ತಯಾರಿಸಲು ಕಾಟು ಮಾವಿನಹಣ್ಣು ಇಲ್ಲವೇ ಕಾಡುಮಾವಿನ ಹಣ್ಣನ್ನು ಬಳಸಲಾಗುತ್ತದೆ. ದಕ್ಷಿಣ ಕನ್ನಡ ಭಾಗದ ಗುಡ್ಡಗಾಡುಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಈ ಮಾವಿನ ಹಣ್ಣಿನ ತಳಿಯು ಗಾತ್ರದಲ್ಲಿ ಬಲು ಚಿಕ್ಕದಾಗಿದ್ದು, ಹುಳಿ-ಸಿಹಿ ರುಚಿಯನ್ನು ಹೊಂದಿರುತ್ತದೆ. ಹಲವೆಡೆ ಇದನ್ನು ಬೆಲ್ಲ ಮಾವು ಎಂದೂ ಕರೆಯುವುದಿದೆ. ಮಾವಿನ ಹಣ್ಣಿನ ಉಪ್ಪಿನಕಾಯಿಗೆ ಇದಕ್ಕಿಂತ ಸೂಕ್ತ ಆಯ್ಕೆ ಬೇರೊಂದಿಲ್ಲ. ಈ ಉಪ್ಪಿನಕಾಯಿಗೆ ಸ್ಥಳೀಯ ಭಾಷೆಯಲ್ಲಿ ಮಾವಿನ ಹಣ್ಣಿನ ಹಸಿ ಹೊರಡಿ ಎಂದೂ ಕರೆಯುತ್ತಾರೆ.
ಮಾವಿನ ಹಣ್ಣಿನ ಹಸಿ ಹೊರಡಿ
ಬೇಕಾಗುವ ಸಾಮಗ್ರಿಗಳು: ಕಾಡು ಮಾವಿನಹಣ್ಣು - 1 ಕೆಜಿ, ಸಾಸಿವೆ ಪುಡಿ - ಅರ್ಧ ಕೆಜಿ, ಮೆಣಸು ಪುಡಿ - ಅರ್ಧ ಕೆಜಿ, ಕಲ್ಲುಪ್ಪು ಅಗತ್ಯವಿರುವಷ್ಟು, ಅರಿಸಿನ - 100 ಗ್ರಾಂ,
ತಯಾರಿಸುವ ವಿಧಾನ: ಮೊದಲಿಗೆ ಮಾಗಿದ ಕಾಡು ಮಾವಿನ ಹಣ್ಣನ್ನು ನೀರಿನಲ್ಲಿ ತೊಳೆದುಕೊಂಡು ಒಣಗಿದ ಬಟ್ಟೆಯಿಂದ ನೀರು ಸ್ವಲ್ಪವೂ ಉಳಿಯದಂತೆ ಒರೆಸಿಕೊಳ್ಳಬೇಕು. ನಂತರ ಚೂರಿಯಿಂದ ಅದರ ತೊಟ್ಟನ್ನು ತೆಗೆದು, ಸಿಪ್ಪೆಯಲ್ಲಿ ಮೇಲಿನಿಂದ ಕೆಳಭಾಗಕ್ಕಾಗಿ ಗೆರೆಯನ್ನು ಎಳೆದುಕೊಳ್ಳಬೇಕು. ಈ ಹಣ್ಣುಗಳನ್ನು ಕಡು ಉಪ್ಪು ನೀರಿನಲ್ಲಿ ಹದವಾಗಿ ಬೇಯಿಸಿಕೊಳ್ಳಬೇಕು. ಮಾವಿನ ಹಣ್ಣುಗಳ ಬಣ್ಣ ಹಸಿರಿನಿಂದ ಸಾಮಾನ್ಯ ಹಳದಿ ಬಣ್ಣ ಬರುವ ವೇಳೆಗೆ ಅದನ್ನು ಸ್ಟೌವ್‌ನಿಂದ ಕೆಳಗಿಳಿಸಿ, ಆರಲು ಬಿಡಬೇಕು.
ಈಗ ಅಳತೆಯಂತೆ ತೆಗೆದುಕೊಂಡ ಸಾಸಿವೆಯನ್ನು ಹಸಿಯಾಗಿಯೇ ಗ್ರೈಂಡ್ ಮಾಡಿಕೊಳ್ಳಬೇಕು. ಅದಕ್ಕೆ ಮೆಣಸಿನ ಪುಡಿ, ಅರಸಿನ ಪುಡಿಯನ್ನೂ ಸೇರಿಸಿ ಚೆನ್ನಾಗಿ ಹದಗೊಳಿಸಬೇಕು. ಈ ಮಿಶ್ರಣಕ್ಕೆ ಉಪ್ಪು ನೀರಿನ ಸಮೇತವಾಗಿ ಮಾವಿನ ಹಣ್ಣುಗಳನ್ನೂ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಭರಣಿಯಲ್ಲಿ ಹಾಕಿ, ಕಾಟನ್ ಬಟ್ಟೆಯಿಂದ ಅದರ ಮೇಲ್ಭಾಗವನ್ನು ಬಿಗಿಯಾಗಿ ಕಟ್ಟಿದ ನಂತರ ಮುಚ್ಚಳವನ್ನು ಹಾಕಿ ಅಂದಾಜು ಒಂದು ತಿಂಗಳ ಕಾಲ ಬೆಚ್ಚನೆಯ ಜಾಗದಲ್ಲಿ ಇರಿಸಬೇಕು. ಆಗ ಮಾತ್ರವೇ ಮಾವಿನಹಣ್ಣು ಉಪ್ಪು, ಸಿಹಿ, ಹುಳಿ ಹಾಗೂ ಖಾರದಲ್ಲಿ ಬೆರೆತು ಸಿದ್ಧವಾಗುತ್ತದೆ. ಫ್ರಿಜ್‌ನಲ್ಲಿಟ್ಟರೆ ಆರು ತಿಂಗಳವರೆಗೂ ಈ ಉಪ್ಪಿನಕಾಯಿಯನ್ನು ದಿನಬಳಕೆ ಮಾಡಿಕೊಳ್ಳಬಹುದು.
ಇನ್ನೊಂದು ವಿಧಾನ
ಬೇಕಾಗುವ ಸಾಮಗ್ರಿಗಳು: ಕಾಡು ಮಾವಿನಹಣ್ಣು - 10, ಮೆಂತ್ಯ - 2 ಚಮಚ, ಜೀರಿಗೆ - 3 ಚಮಚ, ಅರಿಶಿನ - 1 ಚಮಚ, ಸಾಸಿವೆ - 4 ಚಮಚ, ಕುಮ್ಟೆ ಮೆಣಸು - 12-15
ತಯಾರಿಸುವ ವಿಧಾನ: ಮೆಂತ್ಯ, ಜೀರಿಗೆ, ಅರಿಸಿನ, ಸಾಸಿವೆ ಹಾಗೂ ಕುಮ್ಟೆ ಮೆಣಸು ಇವೆಲ್ಲವನ್ನೂ ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಂಡು ಕಡು ಉಪ್ಪು ನೀರಿನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡ ಗ್ರೈಂಡ್ ಮಾಡಿಕೊಳ್ಳಿ. ಮತ್ತೊಂದು ಕಡೆ, 10 ಕಾಡು ಮಾವಿನಹಣ್ಣುಗಳನ್ನು ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು, ಅದರ ತುದಿ ಹಾಗೂ ಬುಡ ಭಾಗವನ್ನು ಪ್ರತ್ಯೇಕಿಸಿಕೊಳ್ಳಿ. ಇದನ್ನು ಉಪ್ಪು ನೀರಿನಲ್ಲಿ ಸ್ವಲ್ಪವೇ ಹೊತ್ತು ಬೇಯಿಸಿಕೊಳ್ಳಬೇಕು. ಉಪ್ಪು ನೀರಿನಲ್ಲಿ ಬೇಯಿಸಿಕೊಂಡ ಮಾವಿನಹಣ್ಣು ಬಿಸಿ ಆರಿದ ಮೇಲೆ ಇದಕ್ಕೆ ತಯಾರಿಸಿಟ್ಟುಕೊಂಡ ಉಪ್ಪಿನಕಾಯಿ ಮಿಶ್ರಣವನ್ನು ಹಾಕಿ ಒಂದು ದಿನದ ಕಾಲ ಹೊಂದಿಕೊಳ್ಳಲು ಬಿಡಬೇಕು. ಆಗ ರುಚಿಕರವಾದ ಮಾವಿನಹಣ್ಣಿನ ಉಪ್ಪಿಕಾಯಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ಹುರಿದ ಮಿಶ್ರಣಗಳಿಂದ ತಯಾರಿಸಿಕೊಳ್ಳುವುದರಿಂದಾಗಿ ಅಂದಾಜು 1 ವರ್ಷದವರೆಗೂ ಬಳಕೆ ಮಾಡಬಹುದು.
ನಿತ್ಯವೂ ಒಂದೇ ಬಗೆಯ, ರುಚಿಯ ಉಪ್ಪಿನಕಾಯಿಯನ್ನು ತಿಂದು ಬೇಸರವಾಗಿದ್ದರೆ, ಇಂತಹ ವಿಭಿನ್ನ ರುಚಿಯ ಮಾವಿನಹಣ್ಣಿನ ಉಪ್ಪಿನಕಾಯಿಯನ್ನು ನೀವೂ ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸಿ ನೋಡಿ. ಮುಂದಿನ ವರ್ಷ ಮಾವಿನ ಸೀಸನ್‌ನಲ್ಲಿ ಮತ್ತೆ ಉಪ್ಪಿನಕಾಯಿಗಾಗಿ ಕಾಡು ಮಾವಿನಹಣ್ಣನ್ನು ಹುಡುಕುವುದು ಖಚಿತ.
ವಿಭಾಗ