National Mango Day: ಸೀಸನ್ ಮುಗಿಯುವ ಮುನ್ನ ತಿನ್ನಿ ಆಮ್ರಖಂಡ್, ಮಾವಿನಹಣ್ಣಿನ ಈ ರೆಸಿಪಿ ರುಚಿ ಮುಂದಿನ ವರ್ಷದವರೆಗೆ ಕಾಡೋದು ಪಕ್ಕಾ
Jul 22, 2024 12:20 PM IST
ಸೀಸನ್ ಮುಗಿಯುವ ಮುನ್ನ ತಿನ್ನಿ ಆಮ್ರಖಂಡ್, ಮಾವಿನಹಣ್ಣಿನ ಈ ರೆಸಿಪಿ ರುಚಿ ಮುಂದಿನ ವರ್ಷದವರೆಗೆ ಕಾಡೋದು ಪಕ್ಕಾ
- ಪ್ರತಿ ವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ. ಇನ್ನೇನು ಮಾವಿನ ಸೀಸನ್ ಮುಗಿಯುತ್ತಾ ಬಂದಿರುವ ಈ ಹೊತ್ತಿನಲ್ಲಿ ನೀವು ಮಾವಿನ ಹಣ್ಣಿನಿಂದ ರುಚಿಕರವಾದ ಆಮ್ರಖಂಡ್ ರೆಸಿಪಿಯನ್ನು ತಯಾರಿಸಿ ತಿನ್ನಬಹುದು. ಈ ರೆಸಿಪಿ ರುಚಿ ಮುಂದಿನ ಮಾವಿನ ಸೀಸನ್‌ವರೆಗೂ ನಿಮ್ಮನ್ನು ಕಾಡೋದು ಖಂಡಿತ.
ಏಪ್ರಿಲ್-ಮೇ ತಿಂಗಳು ಎಂದರೆ ಮಾವಿನ ಕಾಲ ಆರಂಭವಾಗುತ್ತದೆ. ಸಾಮಾನ್ಯವಾಗಿ ಜುಲೈ ಅಂತ್ಯದಿಂದ ಆಗಸ್ಟ್ ಆರಂಭವದವರೆಗೆ ಮಾವಿನ ಸೀಸನ್ ಇರುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಮಾವಿನ ಹಣ್ಣಿನ ಖಾದ್ಯಗಳಿಗೆ ವಿಶೇಷ ಬೇಡಿಕೆ ಇದೆ. ಮಾವಿನಹಣ್ಣು ತಿನ್ನುವುದು ಮಾತ್ರವಲ್ಲ, ಇದರಿಂದ ಸಾಕಷ್ಟು ಬಗೆಯ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಬೇಸಿಗೆಯ ದಿನಗಳಲ್ಲಿ ಮಾವಿನಹಣ್ಣಿನ ಲಸ್ಸಿ, ಸ್ಮೂಥಿಯಂತಹ ಪಾನೀಯಗಳು ದೇಹ ತಣಿಸಿದರೆ ಮಳೆಗಾಲದಲ್ಲಿ ಮಾವಿನಹಣ್ಣಿನಿಂದ ತಯಾರಿಸುವ ಖಾದ್ಯಗಳು ನಮ್ಮ ಬಾಯಿರುಚಿ ಹೆಚ್ಚಿಸುತ್ತವೆ. ಮಾವಿನ ಸೀಸನ್ ಮುಗಿಯುತ್ತಾ ಬಂದರೂ ಮಾವಿಗೆ ಬೇಡಿಕೆ ಕಡಿಮೆಯಾಗಿಲ್ಲ. ರಾಷ್ಟ್ರೀಯ ಮಾವು ದಿನದ ಸಂದರ್ಭ ಮಾವಿನಿಂದ ತಯಾರಿಸಬಹುದಾದ ಈ ವಿಶೇಷ ಖಾದ್ಯದ ಹಾಗೂ ರಾಷ್ಟ್ರೀಯ ಮಾವು ದಿನದ ಬಗ್ಗೆ ತಿಳಿಯಿರಿ.
ರಾಷ್ಟ್ರೀಯ ಮಾವು ದಿನ
ರುಚಿ ಮತ್ತು ಬಹು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಮಾವಿನಹಣ್ಣನ್ನು ಸ್ಮರಿಸಲು ರಾಷ್ಟ್ರೀಯ ಮಾವಿನ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ. ಪ್ರತಿ ವರ್ಷ ಜುಲೈ 22 ರಂದು ರಾಷ್ಟ್ರೀಯ ಮಾವು ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ರಾಷ್ಟ್ರೀಯ ಮಾವು ದಿನ ಸೋಮವಾರ ಬಂದಿದೆ. ಈ ವಿಶೇಷ ದಿನವನ್ನು ಆಚರಿಸುವ ಸಂದರ್ಭ ಮಾವಿನ ಹಣ್ಣಿನಿಂದ ತಯಾರಿಸುವ ವಿಶೇಷ ಖಾದ್ಯ ಆಮ್ರಖಂಡ್ ತಯಾರಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಆಮ್ರಖಂಡ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಮೊಸರು - 750 ಗ್ರಾಂ, ತಾಜಾ ಮಾವಿನ ಹಣ್ಣಿನ ತಿರುಳು - 150 ಗ್ರಾಂ, ಸಕ್ಕರೆ ಪುಡಿ - 150ಗ್ರಾಂ, ಏಲಕ್ಕಿ - 2 ಗ್ರಾಂ, ಹಾಲು - 20 ಮಿಲಿ, ಕೇಸರಿ - 2 ಗ್ರಾಂ, ಪಿಸ್ತಾ - 20 ಗ್ರಾಂ ಕತ್ತರಿಸಿದ್ದು, ಬಾದಾಮಿ - 20 ಗ್ರಾಂ ಕತ್ತರಿಸಿದ್ದು
ಆಮ್ರಖಂಡ್ ರೆಸಿಪಿ ತಯಾರಿಸುವ ವಿಧಾನ
ಮೊದಲು ಮೊಸರನ್ನು ಹತ್ತಿ ಬಟ್ಟೆಯಲ್ಲಿ ಹಾಕಿ. ಎಲ್ಲಾ ನೀರು ಹೊರಹೋಗುವಂತೆ ಅದನ್ನು ಹಿಂಡಿಕೊಳ್ಳಿ ಅಥವಾ ಇದನ್ನು ಮಾಡುವ ಸಲುವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ನೀರಿಲ್ಲದ ಮೊಸರನ್ನು ನೇರವಾಗಿ ಬಳಸಬಹುದು. ಈಗ ಮೊಸರನ್ನು ಒಂದು ಬೌಲ್‌ಗೆ ಹಾಕಿ ಮತ್ತು ಅದು ನಯವಾಗುವವರೆಗೆ ಚೆನ್ನಾಗಿ ವಿಸ್ಕ್ ಮಾಡಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ. ಕೇಸರಿ ದಳಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಇದು ಉತ್ತಮ ಬಣ್ಣವನ್ನು ನೀಡುತ್ತದೆ. ಹಾಲಿನಲ್ಲಿ ಹೆಚ್ಚು ಸಕ್ಕರೆ ಇದ್ದರೆ ಅಥವಾ ಮೊಸರು ಗಟ್ಟಿಯಾಗಿದ್ದರೆ ಸ್ವಲ್ಪ ಹಾಲು ಸೇರಿಸಿ ಎಲ್ಲವನ್ನೂ ಕಲೆಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸಮಯದ ನಂತರ ಮೊಸರು ತುಂಬಾ ಹಗುರವಾದ ನೊರೆಯಂತೆ ಭಾಸವಾಗುತ್ತದೆ. ಇದಕ್ಕೆ ಮಾವಿನ ಹಣ್ಣಿನ ತಿರುಳನ್ನು ಸೇರಿಸಿ. ಕೇಸರಿ ಮಿಶ್ರಿತ ಹಾಲು ಮತ್ತು ಕತ್ತರಿಸಿದ ಒಣ ಹಣ್ಣಿನ ತುಂಡುಗಳಿಂದ ಅಲಂಕರಿಸಿ. ಈಗ ಆಮ್ರಖಂಡ್ ಸವಿಯಲು ಸಿದ್ಧ.
ಮಾವಿನ ಆರೋಗ್ಯ ಪ್ರಯೋಜನಗಳು
ರಸಭರಿತವಾದ ಮತ್ತು ರುಚಿಕರವಾದ ಹಣ್ಣನ್ನು ಅದರ ರುಚಿಯಿಂದ ಮಾತ್ರ ಗುರುತಿಸುವುದಲ್ಲ. ಇದರ ಪೌಷ್ಟಿಕಾಂಶದ ಮೌಲ್ಯವನ್ನು ನೀವು ತಿಳಿದಿದ್ದರೆ, ಅದನ್ನು ಹೆಚ್ಚು ಇಷ್ಟಪಡುತ್ತೀರಿ. ಮಾವಿನಹಣ್ಣನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 ನಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ವಿಭಾಗ