Aloo Sagu Recipe: ಪೂರಿಗೆ ಬೆಸ್ಟ್ ಕಾಂಬಿನೇಷನ್ ಅಂದ್ರೆ ಸಾಗು; ಆಲೂಗಡ್ಡೆ ಸಾಗು ಮಾಡುವ ಸರಳ ವಿಧಾನ ಇಲ್ಲಿದೆ
Oct 01, 2023 08:23 PM IST
ಆಲೂಗಡ್ಡೆ ಸಾಗು ( twitter/@rajpurvii)
- Aloo Sagu Recipe in Kannada: ನಾವಿಲ್ಲಿ ನಿಮಗೆ ಆಲೂ ಸಾಗು ಮಾಡುವ ಸರಳ ವಿಧಾನವನ್ನು ಹೇಳುತ್ತಿದ್ದೇವೆ. ನೀವೂ ಒಮ್ಮೆ ಟ್ರೈ ಮಾಡಿ..
ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳಗಿನ ಉಪಹಾರಕ್ಕೆ ಪೂರಿ ಮಾಡುತ್ತಾರೆ. ಹೋಟೆಲ್ಗಳಲ್ಲಿ ಬೆಳಗಿನ ಉಪಹಾರಕ್ಕೆ ಮಾತ್ರವಲ್ಲದೆ ಮಧ್ಯಾಹ್ನದ ಭೋಜನದ ಭಾಗವಾಗಿಯೂ ಪೂರಿಯನ್ನು ಸರ್ವ್ ಮಾಡಲಾಗುತ್ತದೆ. ಆದರೆ ಪೂರಿನ ಚಟ್ನಿ-ಸಾಂಬಾರ್ ಜೊತೆ ತಿನ್ನುವುದಕ್ಕಿಂತಲೂ ಆಲೂಗಡ್ಡೆ ಸಾಗು ಜೊತೆ ತಿಂದರೆ ರುಚಿ ಜಾಸ್ತಿ. ಹೋಟೆಲ್ಗಳಲ್ಲೇನೋ ಪೂರಿಗೆ ಸಾಗು ಕೊಡಬಹುದು ಆದರೆ ಮನೆಯಲ್ಲಿ ಪೂರಿ ಮಾಡುವ ಎಲ್ಲರೂ ಸಾಗು ಮಾಡುವುದಿಲ್ಲ. ಮಾಡಿದರೂ ಕೆಲವೊಮ್ಮೆ ಹೋಟೆಲ್ನಷ್ಟು ರುಚಿ ಬರುವುದಿಲ್ಲ. ನಾವಿಲ್ಲಿ ನಿಮಗೆ ಆಲೂ ಸಾಗು ಮಾಡುವ ಸರಳ ವಿಧಾನವನ್ನು ಹೇಳುತ್ತಿದ್ದೇವೆ. ನೀವೂ ಒಮ್ಮೆ ಟ್ರೈ ಮಾಡಿ..
ಆಲೂಗಡ್ಡೆ ಸಾಗು ಮಾಡಲು ಬೇಕಾಗುವ ಪದಾರ್ಥಗಳು
ಆಲುಗಡ್ಡೆ
ಕ್ಯಾರೆಟ್
ಹಸಿ ಬಟಾಣಿ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಸಾಸಿವೆ
ಬೇವಿನೆಲೆ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಅರಿಶಿನ
ಕಡಲೆ ಹಿಟ್ಟು
ಎಣ್ಣೆ
ಉಪ್ಪು
ಆಲೂಗಡ್ಡೆ ಸಾಗು ಮಾಡುವ ವಿಧಾನ
ಸ್ಟವ್ ಮೇಲೆ ಪ್ಯಾನ್ ಇಟ್ಟು 4 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, 10 ಬೇವಿನ ಎಲೆ, ಜೀರಿಗೆ, 4-5ಹಸಿಮೆಣಸು, ಕತ್ತರಿಸಿದ ಈರುಳ್ಳಿ, ಸಣ್ಣಗೆ ಕತ್ತರಿಸಿದ ಒಂದು ಕ್ಯಾರೆಟ್ ಚೂರುಗಳು ಮತ್ತು ಕಾಲು ಕಪ್ ಹಸಿ ಬಟಾಣಿ, ಸ್ವಲ್ಪ ಉಪ್ಪು ಹಾಕಿ. ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಟೀ ಸ್ಪೂನ್ ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಬೌಲ್ ನೀರಿನಲ್ಲಿ ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು ಹಾಕಿ ಕಲಸಿಕೊಳ್ಳಿ. ಕಡಲೆ ಹಿಟ್ಟಿನ ಈ ನೀರನ್ನು ಸ್ಟವ್ ಮೇಲೆ ಇರುವ ಪ್ಯಾನ್ಗೆ ಹಾಕಿ. ಎಲ್ಲವನ್ನೂ ಚೆನ್ನಾಗಿ ಕಲಸಿ ಒಂದು ನಿಮಿಷ ಫ್ರೈ ಆಗಲು ಬಿಡಿ.
ಈಗ ಬೇಯಿಸಿದ 3 ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಕಪ್ ನೀರು ಮತ್ತು ಉಪ್ಪು ಹಾಕಿ. ಖಾರ ಕಮ್ಮಿ ಆಯಿತು ಎನಿಸಿದರೆ ಚೂರು ಖಾರದ ಪುಡಿ ಸೇರಿಸಬಹುದು. ಹೆಚ್ಚು ದಪ್ಪ ಅಥವಾ ಹೆಚ್ಚು ತೆಳು ಮಾಡಿಕೊಳ್ಳಬೇಡಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಈಗ ಆಲೂಗಡ್ಡೆ ಸಾಗು ಸಿದ್ಧ.
ಪೂರಿ ಮಾತ್ರವಲ್ಲದೇ ಆಲೂಗಡ್ಡೆ ಸಾಗುನ ನೀವು ದೋಸೆ, ಚಪಾತಿ, ಇಡ್ಲಿ ಜೊತೆಯೂ ಸವಿಯಬಹುದು. ಅಷ್ಟೇ ಅಲ್ಲ ಸಾಂಬಾರು ಬದಲು ಬಿಸಿಬಿಸ ಅನ್ನವನ್ನೂ ಸಾಗು ಜೊತೆ ತಿನ್ನಬಹುದು.
ವಿಭಾಗ