ಜಾಮೂನು ಪುಡಿಯೇ ಆಗಬೇಕಿಲ್ಲ, ಕ್ಯಾರೆಟ್ ಇದ್ರೆ ಸಾಕು ರುಚಿಯಾದ ಗುಲಾಬ್ ಜಾಮೂನು ತಯಾರಿಸಬಹುದು; ಗೌರಿ ಹಬ್ಬಕ್ಕೆ ಟ್ರೈ ಮಾಡಿ
Sep 06, 2024 09:02 AM IST
ಜಾಮೂನು ಪುಡಿಯೇ ಆಗಬೇಕಿಲ್ಲ, ಕ್ಯಾರೆಟ್ ಇದ್ರೆ ಸಾಕು ರುಚಿಯಾದ ಗುಲಾಬ್ ಜಾಮೂನು ತಯಾರಿಸಬಹುದು; ಗೌರಿ ಹಬ್ಬಕ್ಕೆ ಟ್ರೈ ಮಾಡಿ
ಯಾರಾದರೂ ಮನೆಗೆ ಬಂದಾಗ, ಅಥವಾ ನಮಗೇ ಜಾಮೂನು ತಿನ್ನಬೇಕು ಎನಿಸಿದಾಗ ಫಟ್ ಅಂತ ತಯಾರಿಸಬಹುದು. ಆದರೆ ಮನೆಯಲ್ಲಿ ಜಾಮೂನು ಪುಡಿಯೇ ಇಲ್ಲ ಎಂದಾದರೆ ಏನು ಮಾಡುವುದು? ಚಿಂತೆ ಬೇಡ, ಕ್ಯಾರೆಟ್‌ನಿಂದ ಕೂಡಾ ಅಷ್ಟೇ ರುಚಿಯಾದ ಗುಲಾಬ್ ಜಾಮೂನು ತಯಾರಿಸಬಹುದು. ರೆಸಿಪಿ ಇಲ್ಲಿದೆ. ಗೌರಿ ಹಬ್ಬಕ್ಕೆ ಟ್ರೈ ಮಾಡಿ.
ಜೀವನದಲ್ಲಿ ಸಿಹಿ ಇರಬೇಕು, ಹಾಗೇ ಅಡುಗೆಯಲ್ಲಿ ಸಿಹಿ ತಿಂಡಿ ಬೇಕೇ ಬೇಕು. ಪ್ರತಿದಿನ ಅಲ್ಲದಿದ್ದರೂ ಹಬ್ಬ ಹರಿದಿನ, ಹುಟ್ಟುಹಬ್ಬ, ಅತಿಥಿಗಳು ಮನೆಗೆ ಬಂದಾಗ, ಪಾರ್ಟಿ, ಮದುವೆ ಆನಿವರ್ಸರಿ, ಹೀಗೆ ವಿಶೇಷ ಸಂದರ್ಭಗಳಲ್ಲಿ ಸಿಹಿ ಇಲ್ಲದಿದ್ರೆ ಆ ದಿನ ಪರಿಪೂರ್ಣ ಎನಿಸುವುದಿಲ್ಲ.
ಯಾರಾದರೂ ಅನಿರೀಕ್ಷಿತವಾಗಿ ಮನೆಗೆ ಬರುತ್ತಿದ್ದಾರೆ ಎಂದು ಗೊತ್ತಾದಾಗ ಅವರಿಗೆ ಏನು ಅಡುಗೆ ಮಾಡುವುದು, ಸಿಹಿ ಏನು ತಯಾರಿಸುವುದು ಅಂತ ಕನ್ಫ್ಯೂಸ್ ಅಗೋದು ಸಹಜ. ರುಚಿಯಾದ ತಿಂಡಿ ತಯಾರಿಸಿ ಅವರು ನಮ್ಮ ಕೈ ರುಚಿ ಹೊಗಳಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ. ಹಾಗಿದ್ರೆ ನೀವು ವೆರೈಟಿ ಏಕೆ ಟ್ರೈ ಮಾಡಬಾರದು? ಸಾಮಾನ್ಯವಾಗಿ ಚಿಕ್ಕವರಿಂದ ವಯಸ್ಸಾದವರೆಲ್ಲಾ ಇಷ್ಟಪಟ್ಟುವ ತಿನ್ನುವ ಸಿಹಿ ಗುಲಾಬ್ ಜಾಮೂನು. ಆದರೆ ಮನೆಯಲ್ಲಿ ಗುಲಾಬ್ ಜಾಮೂನು ಪ್ಯಾಕೆಟ್ ಇಲ್ಲ ಏನು ಮಾಡೋದು ಅಂತ ಯೋಚನೆ ಮಾಡಬೇಡಿ, ಪುಡಿ ಇಲ್ಲದಿದ್ದರೇನಂತೆ ಅದರ ಬದಲಿಗೆ ಕ್ಯಾರೆಟ್ ಇದ್ರೆ ಸಾಕು. ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕ್ಯಾರೆಟ್ ಇದ್ದೇ ಇರುತ್ತದೆ. ಅದರಿಂದಲೇ ನೀವು ರುಚಿಯಾದ ಕ್ಯಾರೆಟ್ ಗುಲಾಬ್ ಜಾಮೂನು ತಯಾರಿಸಬಹುದು. ರೆಸಿಪಿ ಇಲ್ಲಿದೆ ನೋಡಿ.
ಕ್ಯಾರೆಟ್ ಗುಲಾಬ್ ಜಾಮೂನು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕ್ಯಾರೆಟ್ - 1/4 ಕಿಲೋ
- ಹಾಲು - 1 ಕಪ್
- ಚಿರೋಟಿ ರವೆ - 2 ಟೇಬಲ್ ಸ್ಪೂನ್
- ತುಪ್ಪ - 1 ಟೇಬಲ್ ಸ್ಪೂನ್
- ಹಾಲಿನ ಪುಡಿ - 1/2 ಕಪ್
- ಸಕ್ಕರೆ - 100 ಗ್ರಾಂ
- ಪಿಸ್ತಾ ಚೂರುಗಳು - 1 ಟೇಬಲ್ ಸ್ಪೂನ್
- ಏಲಕ್ಕಿ - 4
- ಎಣ್ಣೆ/ತುಪ್ಪ - ಕರಿಯಲು
ಕ್ಯಾರೆಟ್ ಗುಲಾಬ್ ಜಾಮೂನು ತಯಾರಿಸುವ ವಿಧಾನ
- ಒಂದು ದಪ್ಪ ತಳದ ಪಾತ್ರೆಗೆ ಸಕ್ಕರೆ, ಅಗತ್ಯವಿರುವಷ್ಟು ನೀರು, ಏಲಕ್ಕಿ ಸೇರಿಸಿ ಪಾಕ ತಯಾರಿಸಿಕೊಳ್ಳಿ
- ಕ್ಯಾರೆಟ್ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಮಿಕ್ಸಿಯಲ್ಲಿ ಸಣ್ಣಗೆ ಪುಡಿ ಮಾಡಿಕೊಳ್ಳಿ (ನೀರು ಸೇರಿಸಬೇಡಿ)
- ಮತ್ತೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಪುಡಿ ಮಾಡಿಕೊಂಡ ಕ್ಯಾರೆಟ್ ಸೇರಿಸಿ ಹಸಿ ವಾಸನೆ ಹೋಗುವರೆಗೂ ಹುರಿಯಿರಿ
- ನಂತರ ಹಾಲು ಸೇರಿಸಿ ಮಿಶ್ರಣವನ್ನು 5 ನಿಮಿಷ ಕುಕ್ ಮಾಡಿ
- ಹಾಲು , ಕ್ಯಾರೆಟ್ ಎರಡೂ ಚೆನ್ನಾಗಿ ಹೊಂದಿಕೊಂಡ ನಂತರ ರವೆ ಸೇರಿಸಿ ತಿರುವಿ
- ಕೊನೆಗೆ ಹಾಲಿನ ಪುಡಿ ಸೇರಿಸಿ ಮಿಶ್ರಣ, ಮುದ್ದೆಯಾಗುವರೆಗೂ ತಿರುವಿ ನಂತರ ಸ್ಟೌವ್ ಆಫ್ ಮಾಡಿ
- ಸ್ವಲ್ಪ ತಣ್ಣಗಾದ ನಂತರ ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿಕೊಳ್ಳಿ
- ತುಪ್ಪ ಅಥವಾ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ
- ನಂತರ ಮೊದಲೇ ಮಾಡಿಟ್ಟುಕೊಂಡ ಸಕ್ಕರೆ ಪಾಕದೊಳಗೆ ಸೇರಿಸಿ
- ಸಮಯ ಇದ್ದರೆ ಜಾಮೂನನ್ನು 1 ಗಂಟೆಗಳ ಕಾಲ ಸಕ್ಕರೆ ಪಾಕದಲ್ಲಿ ನೆನೆಯಲು ಬಿಡಿ, ಇಲ್ಲವಾದರೆ ಕನಿಷ್ಠ 30 ನಿಮಿಷಗಳಾದರೂ ಬೇಕು.
- ಪಾಕ ಹೆಚ್ಚು ಬೇಡವೆಂದರೆ ಜಾಮೂನ್ ಸರ್ವ್ ಮಾಡುವಾಗ ಪಾಕದಿಂದ ತೆಗೆದು ಪಿಸ್ತಾ ಚೂರುಗಳನ್ನು ಗಾರ್ನಿಶ್ ಮಾಡಿ ಕೊಡಿ
ಅತಿಥಿಗಳು/ಕುಟುಂಬದವರು ನಿಮ್ಮ ಕೈ ರುಚಿಗೆ ಇಂಪ್ರೆಸ್ ಆಗೋದು ಗ್ಯಾರಂಟಿ.