Akki Rotti Recipe: ಅಕ್ಕಿ ರೊಟ್ಟಿಯನ್ನು ಈ ರೀತಿ ಮಾಡಿ ತಿಂದ್ರೆ ಸಖತ್ ಆಗಿರುತ್ತೆ; ಇದು ಟೇಸ್ಟ್‌ಗಷ್ಟೇ ಅಲ್ಲ, ಆರೋಗ್ಯಕ್ಕೂ ಬೆಸ್ಟ್
Feb 19, 2024 02:14 PM IST
ಕರ್ನಾಟಕದ ಸ್ಪೆಷಲ್ ತಿಂಡಿ ಅಕ್ಕಿ ರೊಟ್ಟಿ
- Akki Roti Recipe: ಗರಿಗರಿಯಾಗಿ, ಅಷ್ಟೇ ರುಚಿಯಾಗಿರುವ ಅಕ್ಕಿ ರೊಟ್ಟಿ ಬೆಳಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ಉಪಹಾರ. ತರಕಾರಿಗಳನ್ನು ಸೇರಿಸಿ ತಯಾರಿಸುವ ಅಕ್ಕಿ ರೊಟ್ಟಿ ಕನ್ನಡಿಗರು ಇಷ್ಟ ಪಡುವ ತಿಂಡಿಗಳಲ್ಲೊಂದು. ಇದನ್ನು ನೀವು ಸುಲಭವಾಗಿ ದಿಢೀರ್ ಎಂದು ಹೀಗೆ ತಯಾರಿಸಬಹುದು.
ದಕ್ಷಿಣ ಭಾರತದ ಅಡುಗೆಗಳೇ ಹಾಗೆ, ವಿಶೇಷವಾದ ಪರಿಮಳ, ರುಚಿಯಿಂದ ನಾಲಿಗೆ ಚಾಪಲವನ್ನು ಹೆಚ್ಚಿಸುತ್ತವೆ. ಇಲ್ಲಿ ಬೆಳಗಿನ ತಿಂಡಿಯಲ್ಲೂ ವಿವಿಧ ರುಚಿಯನ್ನು ನೋಡಬಹುದು. ಅನೇಕ ದಕ್ಷಿಣ ಭಾರತೀಯರಿಗೆ ಬೆಳಗ್ಗಿನ ತಿಂಡಿಯೆಂದರೆ ಇಡೀ ದಿನಕ್ಕೆ ಚೈತನ್ಯ ತುಂಬುವ ಆಹಾರವಾಗಿರುತ್ತದೆ. ಅಪ್ಪಂನಿಂದ ಹಿಡಿದು ಬಿಸಿಬೇಳೆ ಬಾತ್‌ವರೆಗೂ ವಿವಿಧ ಬಗೆಯ ಆಹಾರಗಳನ್ನು ನಾವು ಇಲ್ಲಿನ ಮನೆಗಳಲ್ಲಿ ನೋಡಬಹುದಾಗಿದೆ. ಇಡ್ಲಿ, ದೋಸೆಗಳೆಲ್ಲವೂ ಕರ್ನಾಟಕದ ಸ್ಪೆಷಲ್ ತಿಂಡಿಗಳ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಅಂತಹುದೇ ಒಂದು ತಿಂಡಿಯಾದ ಅಕ್ಕಿ ರೊಟ್ಟಿ ಸಹ ಕರ್ನಾಟಕದ ಸ್ಪೆಷಲ್ ತಿಂಡಿಯಾಗಿದೆ. ಬೆಳಗ್ಗಿನ ತಿಂಡಿಗಳ ಪಟ್ಟಿಯಲ್ಲಿ ಜಾಗ ಪಡೆದುಕೊಂಡ ಅಕ್ಕಿ ರೊಟ್ಟಿ ಗ್ಲುಟನ್ ರಹಿತವಾಗಿದೆ. ಅಕ್ಕಿ ಹಿಟ್ಟು ತರಕಾರಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ.
ಗರಿಗರಿಯಾಗಿ, ಅಷ್ಟೇ ರುಚಿಯಾಗಿರುವ ಅಕ್ಕಿ ರೊಟ್ಟಿ ಬೆಳಗ್ಗಿನ ತಿಂಡಿಗೆ ಹೇಳಿ ಮಾಡಿಸಿದ ಉಪಹಾರ. ಮೂಲತಃ ಕರ್ನಾಟಕದೇ ಆದ ಅಕ್ಕಿ ರೊಟ್ಟಿಗೆ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ಮಾಡಲಾಗುತ್ತದ. ಈ ಸರಳವಾದ, ಪರಿಮಳದ ತಿಂಡಿಯು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದೆ. ಇದನ್ನು ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರಕ್ಕೆ ತಿನ್ನಲಾಗುತ್ತದೆ. ಸಾಮಾನ್ಯವಾಗಿ ಅಪ್ಪಂಗೆ ಹೋಲಿಸಿದರೆ ಅಕ್ಕಿ ರೊಟ್ಟಿ ಸ್ವಲ್ಪ ದಪ್ಪವಾಗಿರುತ್ತದೆ. ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುವ ಈ ರೊಟ್ಟಿ ಕಾರ್ಬೋಹೈಡ್ರೇಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಮತ್ತು ಅದು ತ್ವರಿತವಾಗಿ ಶಕ್ತಿಯನ್ನು ನೀಡುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸುವ ಅಕ್ಕಿ ರೊಟ್ಟಿಯು ಕಡಿಮೆ ಕೊಬ್ಬಿನ ಅಂಶವಿರುವ ಬೆಳಗ್ಗಿನ ತಿಂಡಿಯಾಗಿದೆ. ಇದರಲ್ಲಿ ತರಕಾರಿ, ಮಸಾಲೆ ಪದಾರ್ಥಗಳನ್ನು ಸೇರಿಸುವುದರಿಂದ ಇದು ಡಯಟ್‌ನಲ್ಲಿದ್ದವರಿಗೂ ಬೆಸ್ಟ್ ಬ್ರೆಕ್‌ಪಾಸ್ಟ್ ಆಗಿದೆ. ಅಕ್ಕಿ ರೊಟ್ಟಿಯನ್ನು ಕೆಲವು ಕಡೆ ತಾಳಿಪಟ್ಟಿ ಎಂದೂ ಕರೆಯುತ್ತಾರೆ. ಮನೆಯಲ್ಲಿ ಸುಲಭವಾಗಿ ಇದನ್ನು ತಯಾರಿಸಬಹುದು. ರುಚಿಯಾದ ಹಾಗೇ ಗರಿಗರಿಯಾದ ಅಕ್ಕಿ ರೊಟ್ಟಿಯನ್ನು ಈ ರೀತಿಯಾಗಿ ತಯಾರಿಸಿ.
ಅಕ್ಕಿ ರೊಟ್ಟಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು 2 ಕಪ್
ತೆಂಗಿನ ತುರಿ ಕಾಲು ಕಪ್
ಈರುಳ್ಳಿ ಒಂದು
ಹಸಿಮೆಣಸಿನಕಾಯಿ 2–3
ಕೊತ್ತಂಬರಿ ಸೊಪ್ಪು
ಕರಿಬೇವಿನ ಎಲೆ 8–10
ಶುಂಠಿ ಒಂದು ಇಂಚು
ಜೀರಿಗೆ ಪುಡಿ ಕಾಲು ಚಮಚ
ಉಪ್ಪು
ಎಣ್ಣೆ
ತಯಾರಿಸುವ ವಿಧಾನ
* ಮೊದಲಿಗೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆ, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
* ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು ಹಾಕಿ. ಅದಕ್ಕೆ ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಸೇರಿಸಿಕೊಳ್ಳಿ.
* ಈಗ ತೆಂಗಿನ ತುರಿ, ಜೀರಿಗೆ ಪುಡಿ, ಉಪ್ಪು ಸೇರಿಸಿ.
* ಇವಿಷ್ಟನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಲಿ. ಅದಕ್ಕೆ ಒಂದು ಚಮಚ ಅಡುಗೆ ಎಣ್ಣೆಯನ್ನ ತಪ್ಪದೇ ಸೇರಿಸಿ. ಆಗ ಮಾತ್ರ ನೀವು ಮಾಡುವ ಅಕ್ಕಿ ರೊಟ್ಟಿ ಮೃದುವಾಗಿರುತ್ತದೆ. ಮುಚ್ಚಳವನ್ನು ಮುಚ್ಚಿ 10 ನಿಮಿಷ ಹಾಗೆಯೇ ಇಡಿ.
* ಹೋಳಿಗೆ ಪೇಪರ್ ಅಥವಾ ಬಾಳೆ ಎಲೆ ಮೇಲೆ ಸ್ವಲ್ಪ ಎಣ್ಣೆ ಸವರಿ, ಈಗ ಒಂದು ಚಿಕ್ಕ ಉಂಡೆಯಷ್ಟು ಹಿಟ್ಟನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಕೈ ಯಿಂದ ನಿಧಾನವಾಗಿ ತಟ್ಟುತ್ತಾ ಬನ್ನಿ. ಅಂಗೈ ಅಗಲದ ರೊಟ್ಟಿ ತಯಾರಿಸಿ. ಎಲ್ಲಾ ಕಡೆ ಒಂದೇ ರೀತಿಯಾಗಿರಲಿ.
* ಪ್ಯಾನ್ ಬಿಸಿ ಮಾಡಿ. ರೊಟ್ಟಿಯನ್ನು ಅದರ ಮೇಲೆ ಹಾಕಿ. ಎಣ್ಣೆ ಹಾಕಿ, ಎರಡೂ ಕಡೆ ಚೆನ್ನಾಗಿ ಬೇಯಿಸಿ.
* ಸಿದ್ಧವಾದ ಅಕ್ಕಿ ರೊಟ್ಟಿಯನ್ನು ತೆಂಗಿನ ಚಟ್ನಿ ಅಥವಾ ಉಪ್ಪಿನಕಾಯಿಯ ಜೊತೆ ಸವಿಯಿರಿ.
* ಅಕ್ಕಿ ರೊಟ್ಟಿಗೆ ತುರಿದ ಕ್ಯಾರೆಟ್ ಸಹ ಸೇರಿಸಿಕೊಳ್ಳಬಹುದು. ಅದು ಮಕ್ಕಳ ಲಂಚ್ ಬಾಕ್ಸ್‌ಗೂ ಉತ್ತಮವಾಗಿರುತ್ತದೆ.
ಅಕ್ಕಿರೊಟ್ಟಿ ಕೇವಲ ಬಾಯಿ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಆರೋಗ್ಯಕ್ಕೂ ಬೆಸ್ಟ್. ಇದನ್ನು ಕ್ಯಾರೆಟ್, ತೆಂಗಿನತುರಿ, ಮಸಾಲೆಗಳನ್ನು ಸೇರಿಸಿ ತಯಾರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ