logo
ಕನ್ನಡ ಸುದ್ದಿ  /  ಜೀವನಶೈಲಿ  /  Mango Lassi: ಮಾವಿನಹಣ್ಣು ಮಾರುಕಟ್ಟೆಗೆ ಬಂದಾಯ್ತು ಇನ್ನೇಕೆ ತಡ, ಮನೆಯಲ್ಲೇ ಮಾಡಿ ಬಗೆ ಬಗೆ ಮ್ಯಾಂಗೊ ಲಸ್ಸಿ; ಇಲ್ಲಿದೆ ರೆಸಿಪಿ

Mango Lassi: ಮಾವಿನಹಣ್ಣು ಮಾರುಕಟ್ಟೆಗೆ ಬಂದಾಯ್ತು ಇನ್ನೇಕೆ ತಡ, ಮನೆಯಲ್ಲೇ ಮಾಡಿ ಬಗೆ ಬಗೆ ಮ್ಯಾಂಗೊ ಲಸ್ಸಿ; ಇಲ್ಲಿದೆ ರೆಸಿಪಿ

Reshma HT Kannada

Apr 02, 2024 03:36 PM IST

google News

ಮಾವಿನಹಣ್ಣು ಮಾರುಕಟ್ಟೆಗೆ ಬಂದಾಯ್ತು, ಇನ್ನೇಕೆ ತಡ ಮನೆಯಲ್ಲೇ ಮಾಡಿ ಬಗೆ ಬಗೆ ಮ್ಯಾಂಗೊ ಲಸ್ಸಿ, ಇಲ್ಲಿದೆ ರೆಸಿಪಿ

    • ಮ್ಯಾಂಗೊ ಲಸ್ಸಿ ಹೆಸರು ಕೇಳಿದ್ರೆ ಬಾಯಲ್ಲಿ ನೀರುರೋದು ಪಕ್ಕಾ. ವಿಶ್ವದ ನಂಬರ್‌ ಒನ್‌ ಡೇರಿ ಪಾನೀಯ ಎಂಬ ಹೆಗ್ಗಳಿಕೆಯೂ ಈಗ ಮ್ಯಾಂಗೊ ಲಸ್ಸಿ ಪಾಲಿಗಿದೆ. ಹಾಗಂತ ಹೊರಗಡೆ ಇದನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ಆರೋಗ್ಯಕರ ಲಸ್ಸಿ ತಯಾರಿಸಿ. ಇಲ್ಲಿದೆ ಬಗೆ ಬಗೆ ಮ್ಯಾಂಗೊ ಲಸ್ಸಿ ರೆಸಿಪಿ.
ಮಾವಿನಹಣ್ಣು ಮಾರುಕಟ್ಟೆಗೆ ಬಂದಾಯ್ತು, ಇನ್ನೇಕೆ ತಡ ಮನೆಯಲ್ಲೇ ಮಾಡಿ ಬಗೆ ಬಗೆ ಮ್ಯಾಂಗೊ ಲಸ್ಸಿ, ಇಲ್ಲಿದೆ ರೆಸಿಪಿ
ಮಾವಿನಹಣ್ಣು ಮಾರುಕಟ್ಟೆಗೆ ಬಂದಾಯ್ತು, ಇನ್ನೇಕೆ ತಡ ಮನೆಯಲ್ಲೇ ಮಾಡಿ ಬಗೆ ಬಗೆ ಮ್ಯಾಂಗೊ ಲಸ್ಸಿ, ಇಲ್ಲಿದೆ ರೆಸಿಪಿ

ಮಾವಿನಹಣ್ಣಿನ ಸೀಸನ್‌ ಆರಂಭವಾಗಿದೆ. ಇನ್ನು ಮುಂದೆ ಮಾರುಕಟ್ಟೆ ಎಲ್ಲಿ ನೋಡಿದ್ರೂ ಹಣ್ಣುಗಳ ರಾಜ ಮಾವಿನಹಣ್ಣಿನದ್ದೇ ಕಾರುಬಾರು. ಮಾವಿನಹಣ್ಣು ಮಾತ್ರವಲ್ಲ, ಇದರಿಂದ ತಯಾರಿಸುವ ಬಗೆ ಬಗೆ ಖಾದ್ಯಗಳು ಕೂಡ ಬಾಯಲ್ಲಿ ನೀರೂರಿಸೋದು ಸುಳ್ಳಲ್ಲ. ತಾಜಾ ಮಾವಿನಹಣ್ಣು ಬಳಸಿ ತಯಾರಿಸುವ ಮ್ಯಾಂಗೊ ಲಸ್ಸಿ ಯಾರಿಗೆ ಇಷ್ಟವಿಲ್ಲ ಹೇಳಿ. 2023-24ನೇ ಸಾಲಿನ ವಿಶ್ವದ ಟಾಪ್‌ 16 ಡೇರಿ ಪಾನೀಯಗಳ ಪಟ್ಟಿಯಲ್ಲಿ ಮ್ಯಾಂಗೊ ಲಸ್ಸಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದು ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯ ಎಂದರೂ ತಪ್ಪಾಗಲಿಕ್ಕಿಲ್ಲ. ಮಾವಿನ ಹಣ್ಣಿನಿಂದ ತಯಾರಿಸುವ ಈ ಸೂಪರ್‌ ಪಾನೀಯವನ್ನು ಹೆಚ್ಚು ಆರೋಗ್ಯಕರವಾಗಿಸಲು ಇದಕ್ಕೆ ಬಾದಾಮಿ, ಚಿಯಾಸೀಡ್ಸ್‌ ಹಾಗೂ ಅರಿಸಿನದಂತಹ ಸೂಪರ್‌ ಫುಡ್‌ಗಳನ್ನು ಸೇರಿಸಬಹುದು. ಹಾಗಾದ್ರೆ ಆರೋಗ್ಯಕರ ಮ್ಯಾಂಗೋ ಲಸ್ಸಿ ತಯಾರಿಸುವುದು ಹೇಗೆ ಅಂತೀರಾ, ನಿಮಗಾಗಿ ಇಲ್ಲಿದೆ ಬಗೆ ಬಗೆ ಮ್ಯಾಂಗೊ ಲಸ್ಸಿ ರೆಸಿಪಿ.

ಮಾವಿನಹಣ್ಣು ಬಾದಾಮಿ ಲಸ್ಸಿ

ಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನಹಣ್ಣು - 1, ಮೊಸರು - 1ಕಪ್‌, ಬಾದಾಮಿ - 1/4 ಕಪ್‌ (ರಾತ್ರಿ ಇಡೀ ನೆನೆಸಿದ್ದು), ಜೇನುತುಪ್ಪ - 1 ಟೇಬಲ್‌ ಚಮಚ, ನೀರು - 1/2 ಕಪ್‌

ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ಮಾವಿನಹಣ್ಣಿನ ತಿರುಳು, ಮೊಸರು ಹಾಗೂ ನೆನೆಸಿಟ್ಟು ಬಾದಾಮಿ, ಜೇನುತುಪ್ಪ ಹಾಗೂ ನೀರು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ರುಚಿ. ಇದನ್ನು ಗ್ಲಾಸ್‌ಗೆ ಹಾಕಿ ಐಸ್‌ ಕ್ಯೂಚ್‌ ಸೇರಿಸಿ. ನಂತರ ಬಾದಾಮಿಯಿಂದ ಅಲಂಕರಿಸಿ ತಿನ್ನಲು ಕೊಡಿ. ಇದು ರಕ್ತದೊತ್ತಡ ನಿವಾರಿಸುವ ಜೊತೆಗೆ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾವಿನಹಣ್ಣು ಚೀಯಾಸೀಡ್‌ ಲಸ್ಸಿ

ಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನಹಣ್ಣು - 1, ಮೊಸರು - 1 ಕಪ್‌, ಚಿಯಾಸೀಡ್‌ - ಚಮಚ, ಜೇನುತುಪ್ಪ - 1 ಟೇಬಲ್‌ ಚಮಚ, ನೀರು - 1/2ಕಪ್‌,

ತಯಾರಿಸುವ ವಿಧಾನ: ಮಾವಿನಹಣ್ಣಿನ ತಿರುಳು, ಚಿಯಾಸೀಡ್ಸ್‌, ಜೇನುತುಪ್ಪ ಹಾಗೂ ನೀರು ಎಲ್ಲವನ್ನೂ ಸೇರಿಸಿ ಚೆನ್ನಾಗಿ ರುಬ್ಬಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಇಡಿ. ಆಗ ಚಿಯಾ ಬೀಜಗಳು ದಪ್ಪನಾಗಿ ಅರಳಿಕೊಳ್ಳುತ್ತವೆ. ಇದನ್ನು ಕುಡಿಯಲು ನೀಡುವ ಮೊದಲು ಚೆನ್ನಾಗಿ ಕಲಿಕಿ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಚಿಯಾ ಸೀಡ್ಸ್‌ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸುವುದು ಮಾತ್ರವಲ್ಲ, ಕರುಳಿನ ಆರೋಗ್ಯವನ್ನೂ ಸುಧಾರಿಸುತ್ತದೆ.

ಮಾವಿನಹಣ್ಣು ಅರಿಸಿನದ ಲಸ್ಸಿ

ಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನಹಣ್ಣು - 1, ಮೊಸರು - 1 ಕಪ್‌, ಅರಿಸಿನ - 1 ಚಮಚ, ಶುಂಠಿ - 1/2 ಚಮಚ, ಕಾಳುಮೆಣಸು ಪುಡಿ - ಚಿಟಿಕೆ, ಜೇನುತುಪ್ಪ - 1 ಚಮಚ (ಬೇಕಿದ್ದರೆ) , ನೀರು - 1/2 ಕಪ್‌,

ತಯಾರಿಸುವ ವಿಧಾನ: ಮಾವಿನಹಣ್ಣಿನ ತಿರುಳು, ಅರಿಸಿನ, ಶುಂಠಿ, ಕಾಳುಮೆಣಸು, ಜೇನುತುಪ್ಪ ಹಾಗೂ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಶುಂಠಿ ಹಾಗೂ ಅರಿಸಿನ ಎರಡೂ ಉರಿಯೂತ ವಿರೋಧ ಗುಣ ಹೊಂದಿರುವ ಕಾರಣದಿಂದ ಇದು ಆರೋಗ್ಯಕ್ಕೆ ಬಹಳ ಉತ್ತಮ.

ಮಾವಿನಹಣ್ಣು ತೆಂಗಿನಕಾಯಿ ಲಸ್ಸಿ

ಬೇಕಾಗುವ ಸಾಮಗ್ರಿಗಳು: ಕಳಿತ ಮಾವಿನಹಣ್ಣು - 1, ಮೊಸರು - 1ಕಪ್‌, ತೆಂಗಿನಹಾಲು - 1/2 ಕಪ್‌, ತೆಂಗಿನತುರಿ -2 ಚಮಚ, ಜೇನುತುಪ್ಪ - 1 ಚಮಚ, ನೀರು - 1/2 ಕಪ್‌,

ತಯಾರಿಸುವ ವಿಧಾನ: ಮಾವಿನಹಣ್ಣಿನ ತಿರುಳು, ತೆಂಗಿನಹಾಲು, ತೆಂಗಿನತುರಿ, ಜೇನುತುಪ್ಪ ಹಾಗೂ ನೀರು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈಗ ನಿಮ್ಮ ಮುಂದೆ ರುಚಿಯಾದ ತೆಂಗಿನಕಾಯಿ ಮ್ಯಾಂಗೊ ಲಸ್ಸಿ ಕುಡಿಯಲು ಸಿದ್ಧ.

ಮಾವಿನಹಣ್ಣಿನ ಲಸ್ಸಿಯನ್ನು ಮೊಸರು ಸೇರಿದಂತೆ ಹಲವು ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಕಾರಣ ಇದು ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ವಿಟಮಿನ್‌ ಎ ಮತ್ತು ಸಿ ಅಂಶವಿದ್ದು ಚಯಾಪಚಯ ಹಾಗೂ ಚರ್ಮದ ಆರೋಗ್ಯಕ್ಕೆ ಇದು ಬಹಳ ಉತ್ತಮ. ಮೊಸರಿನಲ್ಲಿ ಪ್ರೊಬಯೋಟಿಕ್‌ ಅಂಶವಿದ್ದು ಇದು ಕರುಳಿನ ಆರೋಗ್ಯ ಸುಧಾರಿಸುವ ಜೊತೆಗೆ ಜೀರ್ಣಕ್ರಿಯೆ ಹೆಚ್ಚಲು ನೆರವಾಗುತ್ತದೆ. ಈ ಬೇಸಿಗೆಯಲ್ಲಿ ಮ್ಯಾಂಗೋ ಲಸ್ಸಿ ಕುಡಿಯಲು ಹೇಳಿ ಮಾಡಿಸಿದ್ದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ