ಬಿಸಿಬಿಸಿ ಕಜ್ಜಾಯ, ರುಚಿರುಚಿ ಕಜ್ಜಾಯ ಮಾಡೋದು ಸುಲಭ ಕಣ್ರೀ: ಇಲ್ಲಿದೆ ಕಜ್ಜಾಯದ ಬೆಸ್ಟ್ ರೆಸಿಪಿ
Sep 30, 2024 12:47 PM IST
ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿ ಕಜ್ಜಾಯ ಮಾಡುವ ವಿಧಾನ, ಅದಕ್ಕೆ ಬೇಕಾಗಿರುವ ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ.
- ಹಬ್ಬಗಳು ಸಮೀಪಿಸುತ್ತಿದ್ದಾಗ ಏನೆಲ್ಲಾ ಸಿಹಿ ತಿಂಡಿಗಳನ್ನು ಮಾಡಬಹುದು ಎಂಬ ಯೋಚನೆ ಶುರುವಾಗೋದು ಮಹಿಳೆಯರಿಗೆ. ನೀವು ಈ ಬಾರಿ ಕಜ್ಜಾಯ ಮಾಡುವ ಪ್ಲಾನ್ ಮಾಡಿಕೊಂಡಿದ್ದರೆ ಅದನ್ನು ಹೇಗೆ ಮಾಡುವುದು, ಬೇಕಾಗುವ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಯಿರಿ.
ಹಬ್ಬಗಳಲ್ಲಿ ಮಾಡುವ ಪ್ರಮುಖ ಸಿಹಿ ತಿಂಡಿಗಳಲ್ಲಿ ಕಜ್ಜಾಯ ಕೂಡ ಒಂದು. ಇದು ದಕ್ಷಿಣ ಭಾರತದಲ್ಲಿ ಅದರಲ್ಲೂ ತುಂಬಾ ಜನಪ್ರಿಯವಾದ ತಿಂಡಿಯಾಗಿದ್ದು, ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕಜ್ಜಾಯ ಮಾಡುತ್ತಾರೆ. ಬೆಲ್ಲದ ಪಾಕದಿಂದ ಮಾಡಿದ ಕಜ್ಜಾಯವನ್ನು ಸುಮಾರು ಒಂದು ತಿಂಗಳವರಿಗೆ ಕೆಡದಂತೆ ಇಡಬಹುದು. ಕಜ್ಜಾಯವನ್ನು ಅತಿರಸ ಅಂತಲೂ ಕರೆಯಲಾಗುತ್ತೆ. ಕಜ್ಜಾಯ ಮಾಡುವ ವಿಧಾನ ಗೊತ್ತಿಲ್ಲದ ಕಾರಣ ಸಾಕಷ್ಟು ಮಂದಿ ಅದನ್ನು ಸವಿದಿರುವುದಿಲ್ಲ. ಈ ಬಾರಿಯ ಹಬ್ಬಕ್ಕೆ ನೀವು ಮನೆಯಲ್ಲೇ ಕಜ್ಜಾಯ ಮಾಡಿ ಮನೆಯರೊಂದಿಗೆ ಸವಿಯಬಹುದು. ಕಜ್ಜಾಯ ಮಾಡುವ ವಿಧಾನ, ಅದಕ್ಕೆ ಬೇಕಾಗಿರುವ ಪದಾರ್ಥಗಳನ್ನು ತಿಳಿಯಿರಿ.
ಕಜ್ಜಾಯ ಮಾಡಲು ಬೇಕಾಗುವ ಪದಾರ್ಥಗಳು
ದಪ್ಪ ಅಕ್ಕಿ 1 ಬಟ್ಟಲು
ಬೆಲ್ಲ 1 ಕೆಜಿ
ತೆಂಗಿನ ತುರಿ 2 ಕಪ್
ಕಾಲ್ ಕಪ್ ತುಪ್ಪ
ಬಿಳಿ ಎಳ್ಳು 100 ಗ್ರಾಂ
2 ಚಮಚ ಏಲಕ್ಕಿ ಪುಡಿ
1 ಲೋಟ ಗೋಧಿ ಹಿಟ್ಟು
1 ಚಮಕ ಗಸಗಸೆ
ಕಜ್ಜಾಯ ಸುಡಲು ಬೇಕಾಗುವಷ್ಟು ಎಣ್ಣೆ
ಕಜ್ಜಾಯ ಮಾಡುವ ವಿಧಾನ
ಮೊದಲು ಅಕ್ಕಿಯನ್ನು ನೀರಿನಲ್ಲಿ ತೊಳೆದು 8 ಗಂಟೆಗಳ ಕಾಲ ನೆನೆಸಿ ಇಡಬೇಕು. ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಅಕ್ಕಿ ನೆನೆಸುವ ನೀರನ್ನು ಬದಲಾಯಿಸಿದರೆ ಒಳ್ಳೆಯದು. ಬಳಿಕ ಅಕ್ಕಿಯನ್ನು ನೀರಿನಿಂದ ತೆಗೆದು ಬಟ್ಟೆಯ ಮೇಲೆ ಹರಡಿ ಚೆನ್ನಾಗಿ ಒಣಗಳು ಬಿಡಬೇಕು. ಅದರಲ್ಲಿ ನೀರಿನಾಂಶ ಹೋಗುವಂತೆ ನೋಡಿಕೊಳ್ಳಬೇಕು. ನಂತರ ಅಕ್ಕಿಯನ್ನು ಗ್ರೈಂಡರ್ ಅಥವಾ ಮಿಕ್ಸಿಗೆ ಹಾಕಿ ಪೌಂಡರ್ ಮಾಡಿಟ್ಟುಕೊಳ್ಳಬೇಕು. ನಂತರ ಜರಡಿಯ ಸಹಾಯದಿಂದ ಸೋಸಿ ಅಕ್ಕಿಯಲ್ಲಿ ಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆಗಳು ಇಲ್ಲದಂತೆ ನೋಡಿಕೊಳ್ಳಿ.
ಇದಾದ ಬಳಿಕ ತವಾ ಮೇಲೆ ಎಳ್ಳು ಮತ್ತು ಗಸಗಸೆಯನ್ನು ಹದವಾಗಿ ಹುರಿದುಕೊಳ್ಳಿ. ನಂತರ ಪಾತ್ರೆಯೊಂದು ತೆಗೆದುಕೊಂಡು ಅದಕ್ಕೆ ಅರ್ಧ ಕಪ್‌ನಷ್ಟು ನೀರು ಮತ್ತು ಬೆಲ್ಲವನ್ನು ಹಾಕಿ. ಬೆಲ್ಲ ಚೆನ್ನಾಗಿ ಕರಗುವ ವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ನಿಧಾನವಾಗಿ ಅಕ್ಕಿ ಹಿಟ್ಟನ್ನು ಹಾಕಿ ಕಲಸಿ, ಇದೇ ವೇಳೆ 1 ಕಪ್ ಗೋಧಿ ಹಿಟ್ಟನ್ನು ಮಿಕ್ಸ್ ಮಾಡಿ. ಗೋಧಿ ಹಿಟ್ಟು ಮಿಕ್ಸ್ ಮಾಡುವುದರಿಂದ ಕಜ್ಜಾಯ ಪುಡಿಯಾಗುವುದಿಲ್ಲ. ಇದಾದ ಬಳಿಕ ಹುರಿದು ಇಟ್ಟುಕೊಂಡಿರುವ ಎಳ್ಳು, ಗಸಗಸೆ ಹಾಗೂ ಎಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
ಪಾಕ ಸಿದ್ಧವಾದ ಬಳಿಕ ಅದರಲ್ಲಿನ ತೇವಾಂಶ ಕಡಿಮೆಯಾಗಲು 8 ರಿಂದ 10 ಗಂಟೆಗಳ ಕಾಲ ಹಾಗೆ ಬಿಡಿ. ಚೆನ್ನಾಗಿ ಹಾರಿದ ಮೇಲೆ ಸ್ವಲ್ಪ ಗಟ್ಟಿಯಾಗಿರುತ್ತೆ. ಇದರ ಸುವಾಸನೆ ಹೆಚ್ಚಿಸಲು ಸ್ವಲ್ಪ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಪಾಕ ಗಟ್ಟಿಯಾಗಿರುವುದು ಖಾತ್ರಿಯಾದ ಬಳಿಕ ಗ್ಯಾಸ್ ಸ್ಟೌವ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಅರ್ಧದಿಂದ 1 ಕೆಜಿಯಷ್ಟು ಎಣ್ಣೆಯನ್ನು ಸುರಿದು ಕಾಯಿಸಿ. ಎಣ್ಣೆ ಬಿಸಿಯಾದ ಬಳಿಕ ಗಟ್ಟಿಯಾಗಿರುವ ಪಾಕವನ್ನು ಮೊದಲು ಉಂಡೆಯಂತೆ ಮಾಡಿ ಆ ನಂತರ ಕಜ್ಜಾಯದ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಕಜ್ಜಾಯವನ್ನು ಎರಡೂ ಕಡೆಗಳಲ್ಲಿ ಚೆನ್ನಾಗಿ ಎಣ್ಣೆಯಲ್ಲಿ ಬೇಯಿಸಿ ಹೊರಗಡೆ ತೆಗೆಯಿರಿ.