logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಣಲೆ ಪಲ್ಯದಿಂದ ಪತ್ರೊಡೆವರೆಗೆ ಬಾಯಲ್ಲಿ ನೀರೂರಿಸುವ ಮಲೆನಾಡಿನ ಮಳೆಗಾಲದ ವಿಶೇಷ ಖಾದ್ಯಗಳಿವು, ನೀವೂ ಮನೆಯಲ್ಲಿ ಮಾಡಿ ತಿನ್ನಿ

ಕಣಲೆ ಪಲ್ಯದಿಂದ ಪತ್ರೊಡೆವರೆಗೆ ಬಾಯಲ್ಲಿ ನೀರೂರಿಸುವ ಮಲೆನಾಡಿನ ಮಳೆಗಾಲದ ವಿಶೇಷ ಖಾದ್ಯಗಳಿವು, ನೀವೂ ಮನೆಯಲ್ಲಿ ಮಾಡಿ ತಿನ್ನಿ

Reshma HT Kannada

Jul 22, 2024 04:53 PM IST

google News

ಕಣಲೆ ಪಲ್ಯದಿಂದ ಪತ್ರೊಡೆವರೆಗೆ ಬಾಯಲ್ಲಿ ನೀರೂರಿಸುವ ಮಲೆನಾಡಿನ ಮಳೆಗಾಲದ ವಿಶೇಷ ಖಾದ್ಯಗಳಿವು, ನೀವೂ ಮನೆಯಲ್ಲಿ ಮಾಡಿ ತಿನ್ನಿ

    • ಮಳೆಗಾಲ ಎಂದರೆ ಗುಡ್ಡಬೆಟ್ಟಗಳು ಹಸಿರಾಗಿ ಕಣ್ಮನ ತಂಪಾಗುವುದು ಮಾತ್ರವಲ್ಲ, ಈ ಸಮಯದಲ್ಲಿ ಕರಾವಳಿ, ಮಲೆನಾಡಿನಲ್ಲಿ ತಯಾರಿಸುವ ಖಾದ್ಯಗಳು ರುಚಿ ಕೂಡ ಅಷ್ಟೇ ಸೊಗಸಾಗಿರುತ್ತದೆ. ವಿವಿಧ ಸಸ್ಯಗಳು, ಗೆಡ್ಡೆಗಳಿಂದ ಮಲೆನಾಡಿಗರು, ಕರಾವಳಿಗರು ತಯಾರಿಸುವ ಈ ಖಾದ್ಯಗಳು ನಿಮಗೆ ಬಾಯಲ್ಲಿ ನೀರೂರಿಸದೇ ಬಿಡುವುದಿಲ್ಲ. ಅಂತಹ ಒಂದಿಷ್ಟು ಖಾದ್ಯಗಳ ಪರಿಚಯ ಇಲ್ಲಿದೆ.
ಕಣಲೆ ಪಲ್ಯದಿಂದ ಪತ್ರೊಡೆವರೆಗೆ ಬಾಯಲ್ಲಿ ನೀರೂರಿಸುವ ಮಲೆನಾಡಿನ ಮಳೆಗಾಲದ ವಿಶೇಷ ಖಾದ್ಯಗಳಿವು, ನೀವೂ ಮನೆಯಲ್ಲಿ ಮಾಡಿ ತಿನ್ನಿ
ಕಣಲೆ ಪಲ್ಯದಿಂದ ಪತ್ರೊಡೆವರೆಗೆ ಬಾಯಲ್ಲಿ ನೀರೂರಿಸುವ ಮಲೆನಾಡಿನ ಮಳೆಗಾಲದ ವಿಶೇಷ ಖಾದ್ಯಗಳಿವು, ನೀವೂ ಮನೆಯಲ್ಲಿ ಮಾಡಿ ತಿನ್ನಿ

ಮಳೆಗಾಲ ಎಂದರೆ ಕರಾವಳಿ, ಮಲೆನಾಡಿಗರಿಗೆ ಕೇವಲ ಪ್ರಕೃತಿ ಹಸಿರಾಗುವ ಸಂತಸ ಮಾತ್ರವಲ್ಲ. ಕಣಲೆ, ಕೆಸು, ಅಣಬೆಯಂತಹ ಆಹಾರ ಪದಾರ್ಥಗಳಿಂದ ವಿಶೇಷ ಖಾದ್ಯಗಳನ್ನು ತಯಾರಿಸಬಹುದು ಎಂಬ ಸಂಭ್ರಮವೂ ಜೊತೆಯಾಗುತ್ತದೆ. ಮಳೆಗಾಲ ಬಂತೆಂದರೆ ಕರಾವಳಿ, ಮಲೆನಾಡಿನಲ್ಲಿ ಪತ್ರೊಡೆ, ಕಣಲೆ ಪಲ್ಯ, ಅಣಬೆಯ ಸಾರು, ಮಡಹಾಗಲಕಾಯಿ ಪೋಡಿ, ದೀವಿಹಲಸಿನ ಪೋಡಿ ಮುಂತಾದ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ನಾಲಿಗೆ ಚಪಲ ತೀರಿಸಿಕೊಳ್ಳುತ್ತಾರೆ. ಇಂತಹ ಮಲೆನಾಡು, ಕರಾವಳಿಯ ಖಾದ್ಯಗಳನ್ನು ನೀವೂ ಮನೆಯಲ್ಲಿ ತಯಾರಿಸಬಹುದು. ಇವನ್ನು ತಯಾರಿಸೋದು ಹೇಗೆ ನೋಡಿ. ಈ ಖಾದ್ಯಗಳ ರುಚಿಯನ್ನು ನೀವು ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ಬೇಕು ಅನ್ನಿಸೋದು ಖಂಡಿತ.

ಅಣಬೆ ಪಲ್ಯ

ಮಳೆಗಾಲದಲ್ಲಿ ಮಲೆನಾಡಿನಲ್ಲಿ ಅಣಬೆಗಳು ನೈಸರ್ಗಿಕವಾಗಿ ಬೆಳೆಯುತ್ತವೆ. ಇದರಿಂದ ತಯಾರಿಸುವ ಪಲ್ಯದ ರುಚಿ ನಿಮಗೆ ಬಾಯಲ್ಲಿ ನೀರೂರಿಸೋದು ಖಂಡಿತ.

ಬೇಕಾಗುವ ಸಾಮಗ್ರಿಗಳು: ಅಣಬೆ - ಕಾಲು ಕೆಜಿ ಆಗುವಷ್ಟು, ಅರಿಸಿನ ಪುಡಿ- ಅರ್ಧ ಚಮಚ, ಖಾರದ ಪುಡಿ - ಎರಡು ಚಮಚ, ಗರಂ ಮಸಾಲೆ - ಮುಕ್ಕಾಲು ಚಮಚ, ತೆಂಗಿನತುರಿ - ಕಾಲು ಕಪ್‌, ಹುಣಸೆಹಣ್ಣು - ಸ್ವಲ್ಪ, ಉಪ್ಪು - ರುಚಿಗೆ, ನೀರು - ಅಗತ್ಯ ಇರುವಷ್ಟು,

ತಯಾರಿಸುವ ವಿಧಾನ: ಮೊದಲು ಅಣಬೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಹೊರ ಭಾಗದ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಈಗ ಒಂದು ಪಾತ್ರೆ ಬಿಸಿಗಿಟ್ಟು ಅದರಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ ಅದಕ್ಕೆ ಕರಿಬೇವು ಸೇರಿಸಿ. ನಂತರ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಗೂ ಟೊಮೆಟೊ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಟೊಮೆಟೊ ಮೆತ್ತಗಾದ ಮೇಲೆ ಅರಿಸಿನ ಪುಡಿ, ಖಾರದ ಪುಡಿ, ಗರಂಮಸಾಲೆ, ಸ್ವಲ್ಪ ಹುಣಸೆಹಣ್ಣು ಹಾಗೂ ಉಪ್ಪು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ಅಣಬೆ ಸೇರಿಸಿ ಮಿಶ್ರಣ ಮಾಡಿ, ನಂತರ ತೆಂಗಿನತುರಿ ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ ಅಗತ್ಯ ಇರುವಷ್ಟು ನೀರು ಸೇರಿಸಿ, ಚೆನ್ನಾಗಿ ಕುದಿಸಿ. ಈಗ ನಿಮ್ಮ ಮುಂದೆ ರುಚಿಯಾದ ಅಣಬೆ ಪಲ್ಯ ತಿನ್ನಲು ಸಿದ್ಧ.

ಮರಕೆಸದ ಪತ್ರೊಡೆ

ಕೆಸುವಿನ ಪತ್ರೊಡೆಯನ್ನು ವರ್ಷದಲ್ಲಿ ಒಮ್ಮೆಯಾದ್ರೂ ತಿನ್ನಬೇಕು ಅನ್ನುತ್ತಾರೆ. ಇದನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶಗಳು ನಿವಾರಣೆಯಾಗುತ್ತದೆ ಎನ್ನುವುದು ನಂಬಿಕೆ.

ಬೇಕಾಗುವ ಸಾಮಗ್ರಿಗಳು: ಬೆಳ್ತಿಗೆ ಅಕ್ಕಿ - ಒಂದು ಲೋಟ, ಕುಚ್ಚಲಕ್ಕಿ - ಅರ್ಧ ಲೋಟ, ಕೆಸುವಿನ ಎಲೆ - ಹತ್ತು, ಕಡ್ಲೇಬೇಳೆ - ಎರಡು ಚಮಚ, ತೊಗರಿಬೇಳೆ - ಎರಡು ಚಮಚ, ಉದ್ದಿನಬೇಳೆ - ಎರಡು ಚಮಚ, ಮೆಂತ್ಯೆ - ಅರ್ಧ ಚಮಚ, ಕೊತ್ತಂಬರಿ - ನಾಲ್ಕು ಚಮಚ, ಜೀರಿಗೆ - ಒಂದು ಚಮಚ, ಒಣಮೆಣಸು - ಒಂದು ಚಮಚ, ಕರಿಬೇವು - ಎರಡು ಎಸಳು, ಅರಿಸಿನ ಪುಡಿ - ಅರ್ಧ ಚಮಚ, ಹುಣಸೆಹಣ್ಣು - ನಿಂಬೆಗಾತ್ರದ್ದು, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ - ಸ್ವಲ್ಪ.

ತಯಾರಿಸುವ ವಿಧಾನ: ಅಕ್ಕಿ, ಕಡ್ಲೇಬೇಳೆ, ತೊಗರಿಬೇಳೆ, ಉದ್ದಿನಬೇಳೆ, ಮೆಂತ್ಯೆ ಈ ಎಲ್ಲವನ್ನೂ ಚೆನ್ನಾಗಿ ತೊಳೆದು ಐದಾರು ಗಂಟೆಗಳ ಕಾಲ ನೆನೆಸಿಡಿ. ನಂತರ ನೀರು ಬಸಿದು ಮಿಕ್ಸಿ ಅಥವಾ ಗ್ರೈಂಡರ್‌ಗೆ ಹಾಕಿ. ಅದರ ಜೊತೆಗೆ ಕೆಸುವಿನ ಎಲೆ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿಕೊಂಡ ಹಿಟ್ಟನ್ನು ಕೆಸುವಿನ ಎಲೆಗೆ ಹಚ್ಚಿ. ಇದನ್ನು ಮಡಿಸಿ. ನಂತರ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ. ಚೆನ್ನಾಗಿ ಬೆಂದ ನಂತರ ಚಿಕ್ಕದಾಗಿ ಹೆಚ್ಚಿಕೊಂಡು ಒಗ್ಗರಣೆ ಕೊಡಿ. ಈಗ ನಿಮ್ಮ ಮುಂದೆ ರುಚಿಯಾದ ಮರಗೆಸುವಿನ ಪ್ರತೊಡೆ ತಿನ್ನಲು ಸಿದ್ಧ.

ಮಡಹಾಗಲಕಾಯಿ ಪೋಡಿ

ಬೇಕಾಗುವ ಸಾಮಗ್ರಿಗಳು: ಮಡಹಾಗಲಕಾಯಿ - ಐದರಿಂದ ಆರು, ಕಡಲೆಹಿಟ್ಟು - ಒಂದು ಕಪ್‌, ಖಾರದಪುಡಿ - ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು

ತಯಾರಿಸುವ ವಿಧಾನ: ಮಡಹಾಗಲಕಾಯಿಯನ್ನು ದುಂಡಾಗಿ ಕತ್ತರಿಸಿ. ಕಡಲೆಹಿಟ್ಟಿಗೆ ಸ್ವಲ್ಪ ಖಾರದ ಪುಡಿ, ಅರಿಸಿನ, ಉಪ್ಪು ಸೇರಿಸಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಿ. ಈ ಪೇಸ್ಟ್‌ನಲ್ಲಿ ದುಂಡಾಗಿ ಕತ್ತರಿಸಿಕೊಂಡ ಮಡಹಾಗಲಕಾಯಿ ಅದ್ದಿ ಎಣ್ಣೆಗೆ ಬಿಡಿ. ಹೊಂಬಣ್ಣ ಬರುವವರೆಗೂ ಕರಿಯಿರಿ. ಈಗ ನಿಮ್ಮ ಮುಂದೆ ರುಚಿಯಾದ ಮಡಹಾಗಲಕಾಯಿ ಪೋಡಿ ತಿನ್ನಲು ಸಿದ್ಧ.

ಕಣಲೆ ಪಲ್ಯ

ಕಣಲೆ ಎಂದರೆ ಬಿದಿರಿನ ಎಳೆ ಚಿಗುರು, ಇದರ ಪಲ್ಯ ಕೂಡ ಕೇವಲ ರುಚಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಬೇಕಾಗುವ ಸಾಮಗ್ರಿಗಳು: ಕಣಲೆ - ಎರಡು ಕಪ್‌ (ಸಣ್ಣಗೆ ಹೆಚ್ಚಿದ್ದು), ಕಾಬೂಲ್‌ ಕಡಲೆ - ಅರ್ಧ ಕಪ್‌, ಈರುಳ್ಳಿ - ಒಂದು, ಹಸಿಮೆಣಸು - ಎರಡು, ಎಣ್ಣೆ - ಎರಡು ಚಮಚ, ಇಂಗು - ಚಿಟಿಕೆ, ಅರಿಸಿನ - ಚಿಟಿಕೆ, ಸಾಸಿವೆ, ಕರಿಬೇವು, ನಿಂಬೆರಸ, ಉಪ್ಪು, ತೆಂಗಿನತುರಿ - ಎರಡು ಚಮಚ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಹೆಚ್ಚಿಕೊಂಡ ಹಸಿಮೆಣಸು ಹಾಗೂ ಕರಿಬೇವು ಸೇರಿಸಿ. ಸಾಸಿವೆ ಚಿಟಪಟ ಎಂದ ಮೇಲೆ ಚೆನ್ನಾಗಿ ತೊಳೆದು ಹೆಚ್ಚಿಟ್ಟುಕೊಂಡ ಕಣಲೆ, ಕಡಲೆ, ಅರಿಸಿನ, ಇಂಗು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅಗತ್ಯ ಇರುವಷ್ಟು ನೀರು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇಪ್ಪತ್ತು ನಿಮಿಷಗಳ ಕಾಲ ಇದನ್ನು ಬೇಯಿಸಿ. ನಂತರ ಈರುಳ್ಳಿ ಸೇರಿಸಿ. ಕೊನೆಯಲ್ಲಿ ತೆಂಗಿನತುರಿ ಹಾಗೂ ಹುಣಸೆರಸ ಸೇರಿಸಿ ಮಿಶ್ರಣ ಮಾಡಿ ಪುನಃ ಒಂದೆರಡು ನಿಮಿಷ ಕುದಿಸಿ, ಈಗ ನಿಮ್ಮ ಮುಂದೆ ರುಚಿಯಾದ ಕಣಲೆ ಪಲ್ಯ ಸವಿಯಲು ಸಿದ್ಧ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ