logo
ಕನ್ನಡ ಸುದ್ದಿ  /  ಜೀವನಶೈಲಿ  /  Tomato Biryani: ಟೊಮೆಟೊ ಬಾತ್ ಅಲ್ಲ ಇದು ಬಿರಿಯಾನಿ, ಹೊಸ ರುಚಿಯ ರೈಸ್‌ ಐಟಂ ತಿನ್ನುವ ಆಸೆ ಇದ್ರೆ ಟ್ರೈ ಮಾಡಿ

Tomato Biryani: ಟೊಮೆಟೊ ಬಾತ್ ಅಲ್ಲ ಇದು ಬಿರಿಯಾನಿ, ಹೊಸ ರುಚಿಯ ರೈಸ್‌ ಐಟಂ ತಿನ್ನುವ ಆಸೆ ಇದ್ರೆ ಟ್ರೈ ಮಾಡಿ

Reshma HT Kannada

Sep 01, 2024 02:40 PM IST

google News

ಟೊಮೆಟೊ ಬಿರಿಯಾನಿ

    • ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರ ರುಚಿ, ಸ್ವಾದಕ್ಕೆ ತಿನ್ನದೇ ಇರಲು ಮನಸ್ಸೇ ಬರುವುದಿಲ್ಲ. ನೀವು ಡಿಫ್ರೆಂಟ್ ಆಗಿರೋ ಬಿರಿಯಾನಿ ತಿನ್ನಬೇಕು ಅಂತಿದ್ರೆ ಟೊಮೆಟೊ ಬಿರಿಯಾನಿ ಮಾಡ್ಕೊಬಹುದು. ಇದನ್ನು ಮಾಡೋದು ಸುಲಭ, ಆದ್ರೂ ತಿನ್ನೋಕೆ ಮಾತ್ರ ಸಖತ್ ಟೇಸ್ಟಿ ಆಗಿರುತ್ತೆ. ಇಂದೇ ಮಾಡಿ ತಿನ್ನಿ.
ಟೊಮೆಟೊ ಬಿರಿಯಾನಿ
ಟೊಮೆಟೊ ಬಿರಿಯಾನಿ

ಬಿರಿಯಾನಿಯಲ್ಲಿ ಎಷ್ಟೆಲ್ಲಾ ವಿಧಗಳಿವೆ ಎಂದು ನೀವು ಕೇಳಿರಬಹುದು. ಆದ್ರೆ ಎಂದಾದ್ರೂ ಟೊಮೆಟೊ ಬಿರಿಯಾನಿ ಕೇಳಿದ್ದೀರಾ, ಖಂಡಿತ ಟೊಮೊಟೊ ಹಣ್ಣಿನಿಂದ ರುಚಿಕರವಾದ ಬಿರಿಯಾನಿ ತಯಾರಿಸಬಹುದು. ವೆಬ್‌ ಬಿರಿಯಾನಿಯಂತೆ ಇದಕ್ಕೆ ಹಲವಾರು ಸಾಮಗ್ರಿಗಳ ಬೇಡ. ಈರುಳ್ಳಿ ಹಾಗೂ ಟೊಮೆಟೊ ಇದ್ರೆ ಸಾಕು ರುಚಿ ರುಚಿಯಾದ ಟೊಮೆಟೊ ಬಿರಿಯಾನಿಯನ್ನ ಕೆಲವೇ ಬಿರಿಯಾನಿಗಳಲ್ಲಿ ಮಾಡಿ ತಿನ್ನಬಹುದು.

ಟೊಮೆಟೊ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು

ಟೊಮೆಟೊ – 4 (ದೊಡ್ಡ ಗಾತ್ರದ್ದು, ಇದನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ), ಬಾಸ್ಮತಿ ಅಕ್ಕಿ – 2 ಕಪ್‌, ಈರುಳ್ಳಿ – 2 ತೆಳುವಾಗಿ ಕತ್ತರಿಸಿಕೊಂಡಿದ್ದು, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಸಿಮೆಣಸು – 2, ಎಣ್ಣೆ ಅಥವಾ ತುಪ್ಪ – 4 ಚಮಚ, ದಾಲ್ಚಿನ್ನಿ – ಚಿಕ್ಕ ತುಂಡು, ಏಲಕ್ಕಿ – 3, ಖಾರದ ಪುಡಿ – 1 ಚಮಚ, ಅರಿಸಿನ – ಚಿಟಿಕೆ, ಗರಂಮಸಾಲ – 1 ಚಮಚ, ಸಕ್ಕರೆ – ಅರ್ಧ ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಹೆಚ್ಚಿದ ಪುದಿನಾ ಸೊಪ್ಪು – ಸ್ವಲ್ಪ

ಟೊಮೆಟೊ ಬಿರಿಯಾನಿ ಮಾಡುವ ವಿಧಾನ

ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಬಸಿದು ಬದಿಗಿಡಿ. ಕಡಾಯಿ ಅಥವಾ ಕುಕ್ಕರ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಬಿಸಿಯಾಗಲು ಬಿಡಿ. ಅದಕ್ಕೆ ದಾಲ್ಚಿನ್ನಿ, ಏಲಕ್ಕಿ ಸೇರಿಸಿ. ಇದು ಹಸಿವಾಸನೆ ಹೋಗುವಾಗ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಕೈಯಾಡಿಸಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಈಗ ಖಾರದಪುಡಿ, ಸಕ್ಕರೆ, ಉಪ್ಪು, ಅರಿಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಕ್ಕರೆ ಸೇರಿಸಿ, ಇದರಿಂದ ಟೇಸ್ಟ್ ಭಿನ್ನವಾಗಿರುತ್ತದೆ. ಸಕ್ಕರೆ ಬೇಡ ಎಂದರೆ ಸ್ಕಿಪ್ ಮಾಡಬಹುದು. ಇದಾದ ಬಳಿಕ ಹೆಚ್ಚಿಟ್ಟುಕೊಂಡ ಟೊಮೆಟೊ ಸೇರಿಸಿ, ಕುದಿಯಲು ಬಿಡಿ. ಟೊಮೆಟೊ ಮೆತ್ತದಾಗ ಬಳಿಕ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಹಾಗೂ ಪುದಿನಾ ಸೊಪ್ಪು ಸೇರಿಸಿ. ಈ ಎಲ್ಲವನ್ನೂ ಮಿಶ್ರಣ ಮಾಡಿ ಒಂದು ನಿಮಿಷ ಕಾಯಿಸಿ. ಈಗ ತೊಳೆದಿಟ್ಟುಕೊಂಡಿದ್ದ ಅಕ್ಕಿ ಸೇರಿಸಿ. ಇದರ ಜೊತೆ ಒಂದು ಕಪ್ ತೆಂಗಿನಹಾಲು ಸೇರಿಸಿ (ಇದು ಕೂಡ ಇಷ್ಟವಿಲ್ಲ ಎಂದರೆ ಬಿಡಬಹುದು), ತೆಂಗಿನಹಾಲು ಸೇರಿಸಿದ್ರೆ ಬಿರಿಯಾನಿ ರುಚಿಯಾಗಿರುತ್ತೆ. ತೆಂಗಿನಹಾಲು ಹಾಕಿದ್ದರೆ ನೀರು ನೋಡಿಕೊಂಡು ಹಾಕಿ. ಈಗ ಎಲ್ಲವನ್ನೂ ಮಿಶ್ರಣ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಶಲ್ ಕೂಗಿಸಿ, ಈಗ ನಿಮ್ಮ ಮುಂದೆ ರುಚಿಯಾದ ಟೊಮೆಟೊ ಬಿರಿಯಾನಿ ತಿನ್ನಲು ಸಿದ್ಧ. ಇದನ್ನು ರಾಯಿತ ಅಥವಾ ಗ್ರೇವಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಡಿಫ್ರೆಂಟ್ ಆಗಿರೋ ರೈಸ್ ಬಾತ್ ತಿನ್ನಬೇಕು ಅಂತ ಆಸೆ ಆಗಿದ್ರೆ ಈ ಟೊಮೆಟೊ ಬಿರಿಯಾನಿಯನ್ನ ಸುಲಭವಾಗಿ ಮಾಡಿಕೊಳ್ಳಬಹುದು. ಇದರ ರುಚಿಯು ಭಿನ್ನವಾಗಿರುವುದರಿಂದ ಎಲ್ಲರಿಗೂ ಇಷ್ಟವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ