ಮನೆಯಲ್ಲಿ ತರಕಾರಿ ಖಾಲಿಯಾಗಿದ್ದರೆ ಈ ರೆಸಿಪಿ ಮಾಡಿ ನೋಡಿ: ಅನ್ನ, ಚಪಾತಿಗೂ ಸೂಪರ್ ಕಾಂಬಿನೇಷನ್ ಈರುಳ್ಳಿ ಕುರ್ಮಾ
Nov 29, 2024 02:14 PM IST
ಮನೆಯಲ್ಲಿ ತರಕಾರಿ ಖಾಲಿಯಾಗಿದ್ದರೆ ಈ ರೆಸಿಪಿ ಮಾಡಿ ನೋಡಿ: ಅನ್ನ, ಚಪಾತಿಗೂ ಸೂಪರ್ ಕಾಂಬಿನೇಷನ್ ಈರುಳ್ಳಿ ಕುರ್ಮಾ
ಮನೆಯಲ್ಲಿ ತರಕಾರಿ ಎಲ್ಲಾ ಖಾಲಿ ಆಗಿದ್ಯಾ? ಈರುಳ್ಳಿ ಹಾಗೂ ಟೊಮೆಟೊ ಮಾತ್ರ ಇದ್ಯಾ? ರಸಂ ಮಾಡಬಹುದೇನೋ ಅಂತಾ ಯೋಚಿಸಬಹುದು. ಇದರ ಬದಲು ಈರುಳ್ಳಿ ಕುರ್ಮಾ ರೆಸಿಪಿ ಮಾಡಿನೋಡಿ. ಖಂಡಿತ ಮನೆಮಂದಿಗೆಲ್ಲ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಈ ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯವಿದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಮನೆಯಲ್ಲಿ ಕೆಲವೊಮ್ಮೆ ತರಕಾರಿ ಖಾಲಿಯಾಗಿರುತ್ತದೆ. ಈ ವೇಳೆ ಏನು ಕರಿ ಅಥವಾ ಸಾಂಬಾರು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ಈರುಳ್ಳಿ ಹಾಗೂ ಟೊಮೆಟೊ ಇದ್ದರೆ ಸರಳವಾಗಿ ಈರುಳ್ಳಿ ಕುರ್ಮಾ ರೆಸಿಪಿಯನ್ನು ಪ್ರಯತ್ನಿಸಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಬಿಸಿ ಬಿಸಿ ಅನ್ನದೊಂದಿಗೆ ಸವಿದರೆ ಇದರ ರುಚಿ ಅದ್ಭುತ. ಸ್ವಲ್ಪ ಖಾರ ಖಾರವಾಗಿ ಮಾಡಿದರೆ ಈ ಚಳಿಗಾಲಕ್ಕೆ ಹೇಳಿ ಮಾಡಿದ ಪಾಕವಿಧಾನವಿದು. ಈರುಳ್ಳಿ ಹಾಗೂ ಟೊಮೆಟೊವನ್ನು ಹಾಕುವುದರಿಂದ ಈ ಕುರ್ಮಾ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಈ ಈರುಳ್ಳಿ ಕುರ್ಮಾ ರೆಸಿಪಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಈರುಳ್ಳಿ ಕುರ್ಮಾ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಈರುಳ್ಳಿ- ನಾಲ್ಕು, ಎಣ್ಣೆ- ಬೇಕಾದಷ್ಟು, ಒಣ ಕೊಬ್ಬರಿ ಪುಡಿ- ಮೂರು ಟೀ ಚಮಚ, ಎಳ್ಳು ಬೀಜಗಳು- ಒಂದು ಟೀ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಮೂರು ಟೀ ಚಮಚ, ಮೆಣಸಿನಪುಡಿ- ಒಂದೂವರೆ ಟೀ ಚಮಚ, ಜೀರಿಗೆ ಪುಡಿ- ಒಂದು ಟೀ ಚಮಚ, ಗರಂ ಮಸಾಲೆ- ಒಂದು ಟೀ ಚಮಚ, ಕೊತ್ತಂಬರಿ ಪುಡಿ- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಟೊಮೆಟೊ- ಮೂರು, ಹುಣಸೆಹಣ್ಣು- ಒಂದು ನಿಂಬೆಹಣ್ಣಿನ ಗಾತ್ರದಷ್ಟು, ಕೊತ್ತಂಬರಿ ಪುಡಿ- ಎರಡು ಟೀ ಚಮಚ.
ರೆಸಿಪಿ ತಯಾರಿಸುವ ವಿಧಾನ: ಸ್ಟೌವ್ ಮೇಲೆ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಈರುಳ್ಳಿ ಬಣ್ಣ ಬದಲಾದಾಗ ತೆಂಗಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಎಳ್ಳು ಸೇರಿಸಿ ಫ್ರೈ ಮಾಡಿ ಸ್ಟೌವ್ ಆಫ್ ಮಾಡಿ.
ಈ ಸಂಪೂರ್ಣ ಮಿಶ್ರಣ ತಣ್ಣಗಾದಾಗ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ. ಆ ಎಣ್ಣೆಯಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಮೆಣಸಿನ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ, ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ರುಬ್ಬಿಕೊಂಡಿರುವ ಟೊಮೆಟೊವನ್ನು ಸೇರಿಸಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಇದನ್ನು ಬಿಸಿ ಮಾಡಿ. ಐದು ನಿಮಿಷಗಳ ನಂತರ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ.
ಇವುಗಳನ್ನು ಚೆನ್ನಾಗಿ ಫ್ರೈ ಮಾಡಿದ (ಹಸಿ ವಾಸನೆ ಹೋಗಬೇಕು) ನಂತರ ನೀರಿನಲ್ಲಿ ನೆನೆಸಿಟ್ಟ ಹುಣಸೆಹಣ್ಣನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಮೊದಲೇ ರುಬ್ಬಿಕೊಂಡಿರುವ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಸ್ವಲ್ವ ನೀರು ಸೇರಿಸಬಹುದು. ಇದನ್ನು ಅರ್ಧ ಗಂಟೆ ಕಡಿಮೆ ಉರಿಯಲ್ಲಿ ಮುಚ್ಚಿ ಬೇಯಿಸಬೇಕು. ಎಣ್ಣೆ ಮೇಲಕ್ಕೆ ತೇಲಿದರೆ ಕುರ್ಮಾ ಸಿದ್ಧವಾಗಿದೆ ಎಂದರ್ಥ. ಇದರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ, ಸ್ಟೌವ್ ಆಫ್ ಮಾಡಿದರೆ ರುಚಿಕರವಾದ ಈರುಳ್ಳಿ ಕುರ್ಮಾ ಸಿದ್ಧ.
ಈರುಳ್ಳಿ ಕುರ್ಮಾವು ಅನ್ನದೊಂದಿಗೆ ಮಾತ್ರವಲ್ಲ ಚಪಾತಿ ಅಥವಾ ರೊಟ್ಟಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ಇದರ ರುಚಿ ನಿಮಗೆ ಇಷ್ಟವಾಗುತ್ತದೆ.
ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈರುಳ್ಳಿ ಮತ್ತು ಟೊಮೆಟೊ ಮಾತ್ರ ಇರುವಾಗ ಈ ಕುರ್ಮಾವನ್ನು ಪ್ರಯತ್ನಿಸಬಹುದು. ಇದು ನಿಮಗೆ ಉತ್ತಮ ರುಚಿಯನ್ನು ನೀಡುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚು ಮಸಾಲೆ ಸೇರಿಸಿದರೆ ಖಾರ-ಖಾರವಾಗಿ ಈ ಚಳಿಗಾಲದಲ್ಲಿ ತಿನ್ನಲು ಉತ್ತಮವಾಗಿರುತ್ತದೆ.
ವಿಭಾಗ