logo
ಕನ್ನಡ ಸುದ್ದಿ  /  ಜೀವನಶೈಲಿ  /  Sweet Potato Bonda: ಮಕ್ಕಳಿಗಾಗಿ ಏನಾದ್ರೂ ಸ್ಪೆಷಲ್ ತಿಂಡಿ ಮಾಡ್ಬೇಕು ಅಂತಿದೀರಾ? ಸಿಹಿಗೆಣಸಿನ ಬೋಂಡ ಮಾಡಿ ಕೊಡಿ, ಇಷ್ಟಪಟ್ಟು ತಿಂತಾರೆ

Sweet Potato Bonda: ಮಕ್ಕಳಿಗಾಗಿ ಏನಾದ್ರೂ ಸ್ಪೆಷಲ್ ತಿಂಡಿ ಮಾಡ್ಬೇಕು ಅಂತಿದೀರಾ? ಸಿಹಿಗೆಣಸಿನ ಬೋಂಡ ಮಾಡಿ ಕೊಡಿ, ಇಷ್ಟಪಟ್ಟು ತಿಂತಾರೆ

Reshma HT Kannada

Sep 11, 2024 04:12 PM IST

google News

ಸಿಹಿಗೆಣಸಿನ ಬೋಂಡ

    • ಮನೆಯಲ್ಲಿ ಮಕ್ಕಳಿದ್ರೆ ಪದೇ ಪದೇ ತಿಂಡಿ ಕೇಳೋದು ಸಹಜ. ಹಾಗಂತ ಮಾಡಿರುವ ತಿಂಡಿಯನ್ನೇ ಮತ್ತೆ ಮತ್ತೆ ಮಾಡಿದ್ರೆ ಅವರು ಖಂಡಿತ ಬೇಸರ ಮಾಡಿಕೊಳ್ಳುತ್ತಾರೆ. ನೀವು ಮಕ್ಕಳಿಗಾಗಿ ಏನಾದ್ರೂ ಸ್ಪೆಷಲ್ ಮಾಡ್ಬೇಕು ಅಂತಿದ್ರೆ ಸಿಹಿ ಗೆಣಸಿನ ಬೋಂಡಾ ಮಾಡಿ, ಇದನ್ನ ಮಕ್ಕಳು ಖಂಡಿತ ಇಷ್ಟಪಟ್ಟು ತಿಂತಾರೆ.
ಸಿಹಿಗೆಣಸಿನ ಬೋಂಡ
ಸಿಹಿಗೆಣಸಿನ ಬೋಂಡ

ಪ್ರತಿದಿನ ಮನೆಯಲ್ಲಿ ಇಡ್ಲಿ, ದೋಸೆ ಅಂತ ತಿಂಡಿ ಮಾಡಿದ್ರೆ ಖಂಡಿತ ಯಾರಿಗೂ ಇಷ್ಟವಾಗುವುದಿಲ್ಲ. ಹೊಸ ರುಚಿ ಬೇಕೆಂದು ನಾಲಿಗೆ ಪದೇ ಪದೇ ಕೇಳುತ್ತೆ. ಹಾಗಿದ್ದಾಗ ಏನಪ್ಪಾ ಮಾಡೋದು ಅಂತ ಗೃಹಿಣಿಯರು ತಲೆ ಕೆಡಿಸಿಕೊಳ್ಳೋದು ಖಂಡಿತ. ಅಂತಹ ಸಮಯದಲ್ಲಿ ನೀವು ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸಿಹಿ ಗೆಣಸಿನ ಬೋಂಡ ಮಾಡಬಹುದು. ಇದು ಖಂಡಿತ ಪಕೋಡ ರೀತಿಯಲ್ಲ.

ಸಿಹಿ ಗೆಣಸಿನ ಬೋಂಡ ನೋಡಲು ಪಡ್ಡು ರೀತಿ ಕಾಣಿಸುತ್ತದೆ. ಇದು ಸಿಹಿ ರುಚಿ ಇರುವ ಕಾರಣ ಮಕ್ಕಳಿಗೆ ಸಖತ್ ಇಷ್ಟ ಆಗುತ್ತೆ. ಇದನ್ನ ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅಂತ ಕೇಳ್ತಾರೆ. ಹಾಗಾದರೆ ಸಿಹಿ ಗೆಣಸಿನ ಬೋಂಡಾ ಮಾಡಲು ಏನೆಲ್ಲಾ ಬೇಕು, ಇದನ್ನು ತಯಾರಿಸುವುದು ಹೇಗೆ ನೋಡಿ.

ಸಿಹಿ ಗೆಣಸಿನ ಬೋಂಡಕ್ಕೆ ಬೇಕಾಗುವ ಸಾಮಗ್ರಿಗಳು

ಸಿಹಿಗೆಣಸು – ಕಾಲು ಕೆಜಿ, ತೆಂಗಿನತುರಿ – ಕಾಲು ಕಪ್‌, ಏಲಕ್ಕಿ ಪುಡಿ – ಕಾಲು ಚಮಚ, ಉಪ್ಪು – ಚಿಟಿಕೆ, ಸಕ್ಕರೆ – ರುಚಿಗೆ, ಕರಿಯಲು ಎಣ್ಣೆ, ಇಡ್ಲಿ ಹಿಟ್ಟು – 1ಕಪ್‌, ಅಕ್ಕಿ ಹಿಟ್ಟು – ಸ್ವಲ್ಪ

ಸಿಹಿ ಗೆಣಸಿನ ಬೋಂಡ ಮಾಡುವ ವಿಧಾನ

ಮೊದಲು ಸಿಹಿಗೆಣಸನ್ನು ಬೇಯಿಸಿಕೊಳ್ಳಿ, ನಂತರ ಸಿಪ್ಪೆ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ. ಆ ಪಾತ್ರೆಗೆ ತೆಂಗಿನತುರಿ, ಏಲಕ್ಕಿ ಪುಡಿ, ಚಿಟಿಕೆ ಹಾಗೂ ಅಗತ್ಯ ಇರುವಷ್ಟು ಸಕ್ಕರೆ ಸೇರಿಸಿ. ಇದನ್ನು ಕೈ ಅಥವಾ ಚಮಚ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಇಡ್ಲಿ ಹಿಟ್ಟು ತೆಗೆದುಕೊಳ್ಳಿ, ಇಡ್ಲಿಹಿಟ್ಟು ತೆಳ್ಳಗಿದ್ದರೆ ಸ್ವಲ್ಪ ಅಕ್ಕಿಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಮೇಲೆ ಸಿಹಿಗೆಣಸಿನ ಮಿಶ್ರಣವನ್ನು ಇಡ್ಲಿ ಹಿಟ್ಟಿನಲ್ಲಿ ಅದ್ದಿ ಉಂಡೆ ರೂಪದಲ್ಲಿ ಎಣ್ಣೆ ಬಿಡಿ. ಇದನ್ನು ಕೆಂಪಗಾಗುವವರೆಗೂ ಕಾಯಿಸಿ. ನಂತರ ಎಣ್ಣೆಯಿಂದ ಹೊರ ತೆಗೆಯಿರಿ. ಈ ನಿಮ್ಮ ಮುಂದೆ ರುಚಿಯಾದ ಸಿಹಿ ಗೆಣಸಿನ ಸ್ಪೆಷಲ್ ಬೋಂಡಾ ರೆಡಿ.

ಸಿಹಿ ಗೆಣಸಿನ ಪ್ರಯೋಜನಗಳು

ಸಿಹಿ ಗೆಣಸಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ. ಪೊಟ್ಯಾಸಿಯಮ್ ಹೆಚ್ಚಿನ ಅಂಶದಿಂದಾಗಿ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಗೆಣಸಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಉತ್ಪಾದಿಸಲು ಅವು ಸಹಾಯ ಮಾಡುತ್ತವೆ. ಬಾಹ್ಯ ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಸಿದ್ಧಪಡಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ