logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಜ್ಜಾಯ ಅಂತ ಕನ್‌ಫ್ಯೂಸ್‌ ಆಗ್ಬೇಡಿ, ಇದು ಬೆಲ್ಲದ ರೊಟ್ಟಿ; ನವರಾತ್ರಿಗೆ ವಿಶೇಷ ತಿಂಡಿ ಮಾಡ್ಬೇಕು ಅಂತಿದ್ರೆ ಟ್ರೈ ಮಾಡಿ, ಸಿಂಪಲ್ ರೆಸಿಪಿ

ಕಜ್ಜಾಯ ಅಂತ ಕನ್‌ಫ್ಯೂಸ್‌ ಆಗ್ಬೇಡಿ, ಇದು ಬೆಲ್ಲದ ರೊಟ್ಟಿ; ನವರಾತ್ರಿಗೆ ವಿಶೇಷ ತಿಂಡಿ ಮಾಡ್ಬೇಕು ಅಂತಿದ್ರೆ ಟ್ರೈ ಮಾಡಿ, ಸಿಂಪಲ್ ರೆಸಿಪಿ

Reshma HT Kannada

Oct 07, 2024 08:50 PM IST

google News

ಬೆಲ್ಲದ ರೊಟ್ಟಿ

    • ಹಬ್ಬದ ದಿನಗಳಲ್ಲಿ ಬಗೆಬಗೆಯ ಸಿಹಿ ತಿನಿಸು ಮಾಡುವುದು ವಾಡಿಕೆ. ಅದರಲ್ಲೂ ನವರಾತ್ರಿ ಎಂದರೆ ಒಂಬತ್ತು ದಿನಗಳ ಹಬ್ಬ. ಈ ಹಬ್ಬದಲ್ಲಿ ದೇವರಿಗೆ ನೈವೇದ್ಯ ಮಾಡಲು ವಿಶೇಷವಾಗಿರುವುದು ಏನನ್ನಾದರೂ ಮಾಡಬೇಕು ಅಂತಿದ್ದರೆ ಬೆಲ್ಲದ ರೊಟ್ಟಿ ಮಾಡಿ. ಕಜ್ಜಾಯದಂತೆ ಇರುವ ಈ ಸಿಹಿ ತಿನಿಸು ಮಕ್ಕಳಿಗೆ ತುಂಬಾನೇ ಇಷ್ಟವಾಗುತ್ತೆ.
ಬೆಲ್ಲದ ರೊಟ್ಟಿ
ಬೆಲ್ಲದ ರೊಟ್ಟಿ

ಎಲ್ಲೆಡೆ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನಾಳೆ (ಸೆಪ್ಟೆಂಬರ್ 8) ನವರಾತ್ರಿಯ ಆರನೇ ದಿನವಾಗಿದ್ದು ಕಾತ್ಯಾಯಿನಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿದಿನವು ದೇವರಿಗೆ ವಿಶೇಷ ‍ಪೂಜೆ ಸಲ್ಲಿಸುವ ಜೊತೆಗೆ ಸಿಹಿ ಖಾದ್ಯಗಳನ್ನೂ ಮಾಡಿ ನೈವೇದ್ಯ ಮಾಡಲಾಗುತ್ತದೆ. ನೀವು ನವರಾತ್ರಿಯ ಆರನೇ ದಿನಕ್ಕೆ ಈ ವಿಶೇಷ ಸಿಹಿ ಖಾದ್ಯವನ್ನು ಮಾಡಿ ದೇವರಿಗೆ ನೈವೇದ್ಯ ಮಾಡಬಹುದು.

ಇದು ಕಜ್ಜಾಯದಂತೆ ಕಂಡರೂ ಕಜ್ಜಾಯವಲ್ಲ. ಗೋಧಿಹಿಟ್ಟಿನಿಂದ ಮಾಡುವ ಈ ತಿಂಡಿಗೆ ಹೆಚ್ಚೇನೂ ಸಾಮಗ್ರಿ ಬೇಡ. ಕೆಲವೇ ಸಾಮಗ್ರಿ ಬಳಸಿ ಮಾಡುವ ಈ ತಿಂಡಿಯನ್ನ ಮಕ್ಕಳ ಜೊತೆ ಮನೆ ಮಂದಿಯೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ ಇದನ್ನು ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.

ಬೆಲ್ಲದ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು

ಗೋಧಿಹಿಟ್ಟು – 2ಕಪ್‌, ಬೆಲ್ಲ – ಅರ್ಧ ಕಪ್, ಸೋಂಪು – 1 ಚಮಚ, ತುಪ್ಪ – 1 ಚಮಚ, ಒಣಕೊಬ್ಬರಿ ತುರಿ – 1 ಚಮಚ.

ಬೆಲ್ಲದ ರೊಟ್ಟಿ ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಅರ್ಧ ಕಪ್‌ ಪುಡಿ ಮಾಡಿದ ಬೆಲ್ಲ ಹಾಗೂ ಎರಡು ಚಮಚ ನೀರು ಹಾಕಿ ಇದನ್ನು ಸ್ಟೌ ಮೇಲೆ ಇಟ್ಟು, ಬೆಲ್ಲವನ್ನು ಕರಗಿಸಿ. ಬೆಲ್ಲದ ಪಾಕ ಬರುವವರೆಗೂ ಚೆನ್ನಾಗಿ ಕುದಿಸಬೇಕು. ಇನ್ನೊಂದು ಬಟ್ಟಲಿನಲ್ಲಿ ಗೋಧಿಹಿಟ್ಟು, ಸೋಂಪು ಕಾಳು ಹಾಗೂ ಒಂದು ಚಮಚ ತುಪ್ಪ ಸೇರಿಸಿ. ಈಗ ಕರಗಿಸಿ ಪಾಕ ಮಾಡಿಕೊಂಡ ಬೆಲ್ಲವನ್ನು ಗೋಧಿಹಿಟ್ಟಿನ ಪಾತ್ರೆಗೆ ಸೋಸಿಕೊಳ್ಳಿ. ನಂತರ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯುವಿದ್ದರೆ ಮಾತ್ರ ಕೊಂಚ ನೀರು ಸೇರಿಸಿ. ಬಹುತೇಕ ನೀರು ಹಾಕುವ ಅಗತ್ಯ ಇರುವುದಿಲ್ಲ. ಇದನ್ನು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ಬೆಲ್ಲದ ಪಾಕ ಇರುವ ಕಾರಣ ಹಿಟ್ಟು ಸ್ವಲ್ಪ ಅಂಟಿಕೊಂಡಂತೆ ಇರುತ್ತದೆ. ಚಪಾತಿಯಂತೆ ತಟ್ಟಲು ಸಾಧ್ಯವಾಗದೇ ಇದ್ದರೆ ಕೊಂಚ ಗೋಧಿ ಹಿಟ್ಟನ್ನು ಸೇರಿಸಬಹುದು. ಈಗ ಪ್ಲಾಸಿಕ್ ಕವರ್‌ಗೆ ತುಪ್ಪ ಸವರಿ, ಪೂರಿ ಆಕಾರಕ್ಕೆ ಹಿಟ್ಟನ್ನು ಲಟ್ಟಿಸಿಕೊಳ್ಳಿ. ಈ ಹಿಟ್ಟನ್ನು ಸ್ವಲ್ಪ ದಪ್ಪವೇ ಇರಬೇಕು ಗಮನಿಸಿ. ಇದನ್ನು ಎಣ್ಣೆಯಲ್ಲಿ ಕರಿಯಿರಿ, ಇಲ್ಲವೆಂದರೆ ತವಾದ ಮೇಲೆ ಕೊಂಚ ಎಣ್ಣೆ ಹಾಕಿ ಎರಡೂ ಕಡೆ ಕಾಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಬೆಲ್ಲದ ರೊಟ್ಟಿ ತಿನ್ನಲು ಸಿದ್ಧ.

ಗೋಧಿಹಿಟ್ಟಿನ ತಯಾರಿಸುವ ಈ ವಿಶೇಷ ಖಾದ್ಯವನ್ನು ನೀವು ನವರಾತ್ರಿ ಹಬ್ಬದಲ್ಲಿ ತಯಾರಿಸಿ ದೇವಿಗೆ ನೈವೇದ್ಯ ಮಾಡಬಹುದು. ಈ ಸಿಹಿತಿನಿಸು ವಿಭಿನ್ನ ರುಚಿ ಹೊಂದಿದ್ದು ಮಕ್ಕಳಿಗಂತೂ ತುಂಬಾನೇ ಇಷ್ಟವಾಗುತ್ತದೆ. ಮನೆಮಂದಿಯೆಲ್ಲಾ ಇದನ್ನು ಖುಷಿಯಿಂದ ತಿಂತಾರೆ. ಕಜ್ಜಾಯ ಅಂತ ಕನ್‌ಪ್ಯೂಸ್ ಆದೋರು ಕೂಡ ಮತ್ತೆ ಬೇಕು ಅಂತ ಕೇಳಿ ತಿಂತಾರೆ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ