logo
ಕನ್ನಡ ಸುದ್ದಿ  /  ಜೀವನಶೈಲಿ  /  ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

Reshma HT Kannada

May 17, 2024 03:23 PM IST

google News

ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು

    • ಅಡುಗೆಪ್ರಿಯರಿಗೆ ಬಗೆಬಗೆ ಅಡುಗೆ ಮಾಡಿ ಬಡಿಸುವುದು ಎಂದರೆ ಏನೋ ಹರುಷ. ಈಗಂತೂ ಮಾವಿನಹಣ್ಣಿನ ಕಾಲ. ಮಾವಿನಹಣ್ಣು ಮಾತ್ರವಲ್ಲ ಇದರಿಂದ ತಯಾರಿಸುವ ತಿನಿಸುಗಳು ಕೂಡ ಸಖತ್‌ ರುಚಿಯಾಗಿರುತ್ತವೆ. ಮಾವಿನಹಣ್ಣಿನಿಂದ ಏನೆಲ್ಲಾ ಸಿಹಿಖಾದ್ಯಗಳನ್ನು ತಯಾರಿಸಬಹುದು ನೋಡಿ. ನೀವು ಇದನ್ನು ಮನೆಯಲ್ಲಿ ತಯಾರಿಸಿ, ಮನೆಯವರನ್ನು ಖುಷಿ ಪಡಿಸಬಹುದು. (ಬರಹ: ಭಾಗ್ಯ ದಿವಾಣ)
ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು
ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು

ಸದ್ಯ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಹಣ್ಣುಗಳ ರಾಜ ಮಾವಿನಹಣ್ಣಿನದ್ದೇ ದರ್ಬಾರು. ಚೀಲದ ತುಂಬಾ ಬಗೆಬಗೆಯ ಮಾವಿನಹಣ್ಣುಗಳನ್ನು ಮನೆಗೆ ತಂದು ಒಮ್ಮೆಲೇ ಅದನ್ನು ತಿಂದು ಮುಗಿಸೋದಕ್ಕೂ ಆಗದೇ ಕೆಟ್ಟು ಹೋಗುವ ಚಿಂತೆ ಇನ್ನು ಬೇಕಿಲ್ಲ. ಯಾಕಂದರೆ ಮಾವಿನ ಹಣ್ಣುಗಳಿಂದ ರುಚಿಕರವಾದ ಸಿಹಿತಿನಿಸುಗಳನ್ನು ತಯಾರಿಸಿಕೊಂಡು ವಾರಗಳ ಕಾಲ ಬಳಕೆ ಮಾಡಿಕೊಳ್ಳಬಹುದು. ಹಾಗಾದರೆ ಸರಳವಾಗಿ ತಯಾರಿಸಿಕೊಳ್ಳಬಹುದಾದ ಮಾವಿನಹಣ್ಣಿನ ಸ್ವಾದಿಷ್ಟಕರ ಸಿಹಿ ತಿನಿಸುಗಳು ಯಾವುವು? ಅವುಗಳನ್ನು ತಯಾರಿಸುವ ವಿಧಾನ ಹೇಗೆ ಎಂಬೆಲ್ಲಾ ಮಾಹಿತಿಗಳು ನಿಮಗಾಗಿ ಇಲ್ಲಿವೆ.

ಮಾವಿನ ಹಣ್ಣಿನ ಸಿಹಿಖಾದ್ಯಗಳು

ಮಾವಿನಹಣ್ಣಿನ ಪಾಯಸ

ಬೇಕಾಗುವ ಸಾಮಗ್ರಿಗಳು: ನೀರು - ಕಾಲು ಲೋಟ, ಹಾಲು - ಅರ್ಧ ಲೀಟರ್‌, ಕಂಡೆನ್ಸಡ್‌ ಮಿಲ್ಕ್‌ - 2 ಚಮಚ, ಸಕ್ಕರೆ - 2 ಚಮಚ, ಮಾವಿನಹಣ್ಣು - 2

ತಯಾರಿಸುವ ವಿಧಾನ: ಕಡಾಯಿಗೆ ಕಾಲು ಲೋಟ ನೀರು ಹಾಕಿಕೊಂಡು ಅದು ಬಿಸಿಯಾಗುತ್ತಿದ್ದಂತೆಯೇ ಅರ್ಧ ಲೀಟರ್‌ ಹಸಿ ಹಾಲನ್ನು ಅದರ ಜೊತೆಗೆ ಹಾಕಿ ಕಾಯಿಸಿಕೊಂಡು, ಹಾಲು ಕಾಲು ಲೀಟರ್‌ ಆಗಿ ಬತ್ತಿಕೊಳ್ಳುವವರೆಗೂ ಕಾಯಿಸಿ. ಇದಕ್ಕೆ 2 ಚಮಚ ಕಂಡೆನ್ಸಡ್‌ ಮಿಲ್ಕ್‌ ಹಾಕಿಕೊಂಡು ಹಾಲಿನಲ್ಲಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ 2 ಚಮಚ ಸಕ್ಕರೆ ಹಾಕಿ. ಈಗ ತೆಗೆದಿಟ್ಟುಕೊಂಡಿರುವ 2 ಮಾವಿನ ಹಣ್ಣುಗಳ ಪ್ಯೂರಿಯನ್ನು ಈ ಹಾಲಿಗೆ ಹಾಕಿಕೊಂಡು ಎಗ್‌ ಬೀಟರ್‌ ಸಹಾಯದಿಂದ ಹದಗೊಳಿಸಿ 2 ನಿಮಿಷಗಳ ಕಾಲ ಕುದಿಸಿಕೊಂಡರೆ ಸಾಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ ಸೇರಿ ನಿಮಗಿಷ್ಟವಾದ ಡ್ರೈಫ್ರುಟ್ಸ್‌ಗಳನ್ನು ಹಾಕಿ ಅಲಂಕರಿಸಿಕೊಂಡರೆ ಮಾವಿನಹಣ್ಣಿನ ಖೀರ್‌ ಅಥವಾ ಮಾವಿನಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ.

ಮಾವಿನ ಹಣ್ಣಿನ ಕೇಸರಿಬಾತ್‌

ಬೇಕಾಗುವ ಸಾಮಗ್ರಿಗಳು: ರವೆ - ಅರ್ಧ ಕಪ್‌, ಮಾವಿನ ಹಣ್ಣಿ ಪ್ಯೂರಿ - ಅರ್ಧ ಕಪ್‌, ಸಕ್ಕರೆ - ಒಂದೂವರೆ ಕಪ್‌, ಬಿಸಿ ನೀರು - ಒಂದು ಕಪ್‌, ಕೇಸರಿ - ಅರ್ಧ ಚಮಚ, ಗೋಡಂಬಿ - 10-12, ಒಣದ್ರಾಕ್ಷಿ - 2 ಚಮಚ

ತಯಾರಿಸುವ ವಿಧಾನ: ಒಂದು ಪ್ಯಾನ್‌ನಲ್ಲಿ 2 ಚಮಚ ತುಪ್ಪ, ಗೋಡಂಬಿ ಹಾಕಿಕೊಂಡು ಹೊಂಬಣ್ಣ ಬರುವ ತನಕ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್‌ಗೆ 2 ಚಮಚ ಒಣ ದ್ರಾಕ್ಷಿ ಹಾಕಿಕೊಂಡು ಹುರಿದು ತೆಗೆದಿಟ್ಟುಕೊಳ್ಳಿ. ಬಾಣಲೆಯಲ್ಲಿ ಉಳಿದಿರುವ ತುಪ್ಪಕ್ಕೆ ಅರ್ಧ ಕಪ್‌ ರವೆ ಹಾಕಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ನಂತರ ಬೇರೊಂದು ತಟ್ಟೆಗೆ ಅದನ್ನು ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ 2 ಚಮಚ ತುಪ್ಪ ಹಾಕಿಕೊಂಡು ಅರ್ಧ ಕಪ್‌ ಮಾವಿನ ಹಣ್ಣಿನ ಪ್ಯೂರಿಯನ್ನು ಸೇರಿಸಿ 2 ನಿಮಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ. ನಂತರ ಇದಕ್ಕೆ ಒಂದೂಕಾಲು ಕಪ್‌ ಬಿಸಿ ನೀರನ್ನು ಹಾಕಿ ಮಿಶ್ರ ಮಾಡಿಕೊಂಡು 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ಹುರಿದಿಟ್ಟುಕೊಂಡ ರವೆಯನ್ನು ಇದಕ್ಕೆ ಮಿಶ್ರ ಮಾಡಿಕೊಂಡು ಗಂಟುಗಳಾಗದಂತೆ ಚೆನ್ನಾಗಿ ಕೈಯಾಡಿಸಿಕೊಳ್ಳಿ. ಪುನಃ ಪಾತ್ರೆಗೆ ಮುಚ್ಚಳ ಮುಚ್ಚಿ 2 ನಿಮಷಗಳ ಕಾಲ ಬೇಯಲು ಬಿಡಿ. ನಂತರ ಒಂದೂವರೆ ಕಪ್‌ ಸಕ್ಕರೆ ಹಾಕಿ ಎಲ್ಲವೂ ಬೆರೆತುಕೊಳ್ಳಲು ಬಿಡಿ. ಇದಕ್ಕೆ ಅರ್ಧ ಚಮಚ ನೆನೆಸಿಟ್ಟುಕೊಂಡಿರುವ ಕೇಸರಿ, ಅರ್ಧ ಚಮಚ ಏಲಕ್ಕಿ ಪುಡಿ ಹಾಗೂ ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿಯನ್ನು ಸೇರಿಸಿಕೊಂಡರೆ ರುಚಿರುಚಿಯಾದ ಮಾವಿನಹಣ್ಣಿನ ಕೇಸರಿಬಾತ್‌ ಸಿದ್ಧವಾಗುತ್ತದೆ.

ಮಾವಿನಹಣ್ಣಿನ ಪುಡ್ಡಿಂಗ್‌

ಬೇಕಾಗುವ ಸಾಮಗ್ರಿಗಳು: ಮಾವಿನಹಣ್ಣು - 2-3, ಸಕ್ಕರೆ - ಅರ್ಧ ಕಪ್‌, ಹಾಲು - ಒಂದೂವರೆ ಕಪ್‌, ಕಾರ್ನ್‌ ಫ್ಲೋರ್‌ - 2 ಚಮಚ, ಉಪ್ಪು - 1 ಚಿಟಿಕೆ, ನಿಂಬೆರಸ - 1 ಚಮಚ

ತಯಾರಿಸುವ ವಿಧಾನ: ಮೊದಲಿಗೆ ಮಿಕ್ಸಿ ಜಾರಿಗೆ 1 ಕಪ್‌ ಅಳತೆಯಷ್ಟು ಮಾವಿನಹಣ್ಣನ್ನು ತೆಗೆದುಕೊಂಡು ಅದಕ್ಕೆ ಅರ್ಧ ಕಪ್‌ ಸಕ್ಕರೆ, 1 ಚಿಟಿಕೆ ಉಪ್ಪು ಸೇರಿಸಿ ನೀರನ್ನು ಸೇರಿಸದೆಯೇ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಒಂದೂಕಾಲು ಕಪ್‌ ಕುದಿಸಿದ ಹಾಲನ್ನು ಸೇರಿಸಿ ಮತ್ತೊಮ್ಮೆ ರುಬ್ಬಿಕೊಂಡು ತೆಗೆದಿಟ್ಟುಕೊಳ್ಳಿ. ಇನ್ನೊಂದು ಕಪ್‌ನಲ್ಲಿ 2 ಚಮಚ ಕಾರ್ನ್‌ ಫ್ಲೋರ್‌ ಹಾಕಿಕೊಂಡು ಕಾಲು ಕಪ್‌ ಹಾಲು ಸೇರಿಸಿ ಗಂಟುಗಳಾಗದಂತೆ ಚೆನ್ನಾಗಿ ಮಿಶ್ರ ಮಾಡಿ ಬದಿಗಿಡಿ. ಈಗ ಬಾಣಲೆಯೊಂದನ್ನು ಬಿಸಿ ಮಾಡಿಕೊಂಡು ರುಬ್ಬಿಟ್ಟುಕೊಂಡ ಮಾವಿನಹಣ್ಣಿನ ಮಿಶ್ರಣವನ್ನು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸುತ್ತಿರಿ. ನಂತರ ಕಾರ್ನ್‌ ಫ್ಲೋರ್‌ ಮಿಶ್ರಣವನ್ನು ಇದಕ್ಕೆ ಸ್ವಲ್ಪವಾಗಿ ಸೇರಿಸಿ ಮತ್ತೆ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಸ್ಟೌವ್‌ ಆಫ್‌ ಮಾಡಿಕೊಂಡು ಇದಕ್ಕೆ 1 ಚಮಚ ನಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ. ಪುಡ್ಡಿಂಗ್‌ ಹಾಕಲು ಸೂಕ್ತ ಪಾತ್ರೆಯನ್ನು ತೆಗೆದುಕೊಂಡು ಪಾತ್ರೆಗೆ ಎಣ್ಣೆಯನ್ನು ಸವರಿಕೊಂಡು ಕುದಿಸಿಟ್ಟ ಮಿಶ್ರಣವನ್ನು ಇದಕ್ಕೆ ಹಾಕಿ ತಣ್ಣಗಾಗಿಸಿಕೊಳ್ಳಿ. ನಂತರ 2 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಟ್ಟು ತೆಗೆದರೆ ಮ್ಯಾಂಗೋ ಪುಡ್ಡಿಂಗ್‌ ತಯಾರಾಗುತ್ತದೆ.

ಮಾವಿನಹಣ್ಣು ಬರ್ಫಿ

ಬೇಕಾಗುವ ಸಾಮಗ್ರಿಗಳು: ಮಿಲ್ಕ್‌ ಪೌಡರ್‌ - 1 ಕಪ್‌, ಮಾವಿನಹಣ್ಣು - 2, ಸಕ್ಕರೆ - 3 ಚಮಚ, ತುಪ್ಪ - ಕಾಲು ಬಟ್ಟಲು, ಏಲಕ್ಕಿ ಪುಡಿ - ಕಾಲು ಚಮಚ

ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನಹಣ್ಣಿನ ತಿರುಳನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಒಂದು ಕಪ್‌ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ನಾನ್‌ಸ್ಟಿಕ್‌ ಪ್ಯಾನ್‌ಗೆ 3 ಚಮಚ ತುಪ್ಪ ಹಾಕಿ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಗಂಟಾಗದಂತೆ, ತಳ ಹಿಡಿಯದಂತೆ ಸಣ್ಣನೆಯ ಉರಿಯಲ್ಲಿ ಬೇಯಿಸಿಕೊಳ್ಳಿ. 10 ನಿಮಿಷಗಳ ನಂತರ 3 ಚಮಚಗಳಷ್ಟು ಸಕ್ಕರೆಯನ್ನು ಸೇರಿಸಿ ಕೈಯಾಡಿಸುತ್ತಲೇ ಇರಿ. ರುಚಿಗಾಗಿ ಕಾಲು ಚಮಚ ಏಲಕ್ಕಿ ಪುಡಿ ಸೇರಿಸಿ. ತಳ ಬಿಡುವ ಹದ ಬಂದ ನಂತರ ತುಪ್ಪ ಸವರಿದ ಬಟ್ಟಲಿಗೆ ಹಾಕಿ ನಿಮಗೆ ಬೇಕಾಗಿರುವ ಆಕಾರಕ್ಕೆ ಹದಗೊಳಿಸಿ ಬಾದಾಮಿ, ಪಿಸ್ತಾದಂತಹ ನಿಮ್ಮ ಆಯ್ಕೆಯ ಡ್ರೈಫ್ರುಟ್ಸ್‌ ಸೇರಿಸಿಕೊಂಡು 8 ಗಂಟೆಗಳ ಕಾಲ ತಣ್ಣಗಾಗಲು ಬಿಡಿ. ಚೌಕಾಕಾರದಲ್ಲಿ ತುಂಡರಿಸಿಕೊಂಡರೆ ಕಲರ್‌ ಫುಲ್‌ ಮಾವಿನ ಹಣ್ಣಿನ ಬರ್ಫಿ ಸವಿಯಲು ಸಿದ್ಧ.

ಮಾವಿನ ಹಣ್ಣಿನ ರಸಾಯನ

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು - 4, ತೆಂಗಿನಕಾಯಿ - 1, ಬೆಲ್ಲದಪುಡಿ- 1 ಕಪ್‌, ಉಪ್ಪು - ಒಂದು ಚಿಟಿಕೆ, ಏಲಕ್ಕಿ ಪುಡಿ - ಕಾಲು ಚಮಚ, ಎಳ್ಳು - 2 ಚಮಚ

ತಯಾರಿಸುವ ವಿಧಾನ: ಚೆನ್ನಾಗಿ ಮಾಗಿರುವ 4 ಮಾವಿನ ಹಣ್ಣುಗಳನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಇದಕ್ಕೆ 1 ತೆಂಗಿನಕಾಯಿಯ ಹಾಲನ್ನು ತೆಗೆದು ಸೋಸಿಕೊಂಡು ಸೇರಿಸಿ. ಜೊತೆಗೆ ನಿಮ್ಮ ರುಚಿಯ ಹದಕ್ಕೆ ಅನುಸಾರವಾಗಿ ಬೆಲ್ಲದ ಪುಡಿ ಹಾಗೂ ಒಂದು ಚಿಟಿಕೆ ಉಪ್ಪು, ಕಾಲು ಚಮಚ ಏಲಕ್ಕಿ ಪುಡಿ ಸೇರಿಸಿ. ಇದಕ್ಕೆ ಎಳ್ಳಿನ ಒಗ್ಗರಣೆ ಹಾಕಿಕೊಂಡರೆ ರುಚಿಕರವಾದ ಮಾವಿನ ಹಣ್ಣಿನ ರಸಾಯನವನ್ನು ಸವಿಯಬಹುದು. ಇದು ದೋಸೆ ಹಾಗೂ ಚಪಾತಿಯ ಜೊತೆಗೂ ಸೇರಿಸಿಕೊಳ್ಳುವುದಕ್ಕೂ ಉತ್ತಮ ಆಯ್ಕೆಯಾಗಿದೆ.

ಮಾವಿನ ಹಣ್ಣಿನ ಸೀಸನ್‌ನಲ್ಲಿ ಸಖತ್‌ ಟೇಸ್ಟಿಯಾಗಿರುವ ಇಂತಹ ಸಿಹಿ ತಿನಿಸುಗಳನ್ನು ಮಾಡಿಕೊಂಡರೆ ವಾರದ ಕಾಲ ಮಾವಿನ ಹಣ್ಣಿನ ಘಮದಲ್ಲಿ ತೇಲಾಡಬಹುದು. ಆರೋಗ್ಯಕರವೂ ಆಗಿರುವ ಮಾವಿನಹಣ್ಣಿನ ಈ ಸಿಹಿ ತಿನಿಸುಗಳನ್ನು ನೀವೂ ಬಿಡುವಾದಾಗ ತಯಾರಿಸಿ ನೋಡಿ. ಇದನ್ನೂ ಓದಿ:

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ