ಸಂಜೆ ಸ್ನಾಕ್ಸ್‌ಗೆ ಮಾಡಬಹುದು ರುಚಿಕರವಾದ ಸಿಹಿಗೆಣಸಿನ ಚಾಟ್: ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್, ಇಲ್ಲಿದೆ ಪಾಕವಿಧಾನ
Nov 14, 2024 04:19 PM IST
ಸಂಜೆ ಸ್ನಾಕ್ಸ್‌ಗೆ ಮಾಡಬಹುದು ರುಚಿಕರವಾದ ಸಿಹಿಗೆಣಸಿನ ಚಾಟ್: ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್, ಇಲ್ಲಿದೆ ಪಾಕವಿಧಾನ
ಸ್ಟ್ರೀಟ್ ಫುಡ್ ಪ್ರಿಯರಾಗಿದ್ದರೆ, ನೀವು ಮನೆಯಲ್ಲಿಯೇ ಈ ರುಚಿಕರವಾದ ಚಾಟ್ ಅನ್ನು ಮಾಡಿ ಆನಂದಿಸಬಹುದು. ಸಿಹಿಗೆಣಸು ಎಂದರೆ ಬಹುತೇಕರು ಇಷ್ಟಪಡುತ್ತಾರೆ. ಇದರ ಚಾಟ್ ರೆಸಿಪಿ ನಿಮಗೆ ಖಂಡಿತ ಇಷ್ಟವಾಗಬಹುದು. ಇದನ್ನು ತಯಾರಿಸುವುದು ಹೇಗೆ ಇಲ್ಲಿದೆ ಪಾಕವಿಧಾನ.
ಸಿಹಿ ಗೆಣಸು ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದು, ಬಹಳ ರುಚಿಕರವಾಗಿರುತ್ತದೆ. ಭಾರತೀಯರಂತೂ ಸಿಹಿಗೆಣಸಿನ ವಿವಿಧ ಪಾಕವಿಧಾನಗಳನ್ನು ಮಾಡುತ್ತಾರೆ. ಮೂಲತಃ ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಹುಟ್ಟಿಕೊಂಡಿರುವ ಸಿಹಿಗೆಣಸು, ಇಂದು ನಮ್ಮದೆಯೇನೋ ಎಂಬಂತಾಗಿದೆ. ಕೈಗೆಟಕುವ ಬೆಲೆಗೆ ಲಭ್ಯವಿರುವ ಸಿಹಿಗೆಣಸು ಖಾರದ ಮತ್ತು ಸಿಹಿ ಭಕ್ಷ್ಯಗಳಲ್ಲಿ ಹೊಂದಿಕೊಳ್ಳುವ ಕಾರಣ ಅನೇಕ ಪಾಕಪದ್ಧತಿಗಳಲ್ಲಿ ಪ್ರಧಾನವಾಗಿವೆ. ಕೆಲವರು ಇದನ್ನು ಬೇಯಿಸಿ ತಿಂದರೆ, ಇನ್ನೂ ಕೆಲವು ಕಡೆಗಳಲ್ಲಿ ಇದನ್ನು ಬೇಯಿಸಿ, ಸಣ್ಣದಾಗಿ ಕತ್ತರಿಸಿ ತೆಂಗಿನತುರಿ, ಬೆಲ್ಲ ಮಿಶ್ರಣ ಮಾಡಿ ಸವಿಯುತ್ತಾರೆ. ಸಿಹಿಗೆಣಸಿನಿಂದ ಚಾಟ್ ಕೂಡ ಮಾಡಬಹುದು. ಸ್ಟ್ರೀಟ್ ಫುಡ್ ಪ್ರಿಯರಾಗಿದ್ದರೆ, ನೀವು ಮನೆಯಲ್ಲಿಯೇ ಈ ರುಚಿಕರವಾದ ಚಾಟ್ ಅನ್ನು ಮಾಡಿ ಆನಂದಿಸಬಹುದು. ಇದನ್ನು ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಸಿಹಿ ಗೆಣಸು ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಬೇಯಿಸಿ, ಸಿಪ್ಪೆ ಸುಲಿದ ಸಿಹಿ ಗೆಣಸು- 300 ಗ್ರಾಂ, ಚಾಟ್ ಮಸಾಲೆ ಪುಡಿ- 1 ಟೀ ಚಮಚ, ಕಪ್ಪು ಉಪ್ಪು, ರುಚಿಗೆ ತಕ್ಕಷ್ಟು ಉಪ್ಪು, ದಾಳಿಂಬೆ ಬೀಜ- ಸ್ವಲ್ಪ, ಜೀರಿಗೆ ಪುಡಿ- 1 ಟೀ ಚಮಚ, ಸಕ್ಕರೆ- ¾ ಟೀ ಚಮಚ, ಹುಣಸೆ ಚಟ್ನಿ- 3 ಟೀ ಚಮಚ, ಕೊತ್ತಂಬರಿ ಸೊಪ್ಪು- 1 ಹಿಡಿಯಷ್ಟು, ನಿಂಬೆರಸ- 1 ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಬೇಯಿಸಿ. ಬೆಂದ ನಂತರ ಅದರ ಸಿಪ್ಪೆ ತೆಗೆದು ಒಂದು ತಟ್ಟೆಯಲ್ಲಿ ಜೀರಿಗೆ ಪುಡಿ, ಉಪ್ಪು, ಚಾಟ್ ಮಸಾಲೆ, ಕಪ್ಪು ಉಪ್ಪು (black salt), ಸಕ್ಕರೆ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸಿಹಿಗೆಣಸನ್ನು ಸೇರಿಸಿ ಮಿಕ್ಸ್ ಮಾಡಿ. ಜತೆಗೆ ಹುಣಸೆ ಚಟ್ನಿಯನ್ನು ಮಿಶ್ರಣ ಮಾಡಿ. ಈಗ ಸಿದ್ಧಪಡಿಸಿದ ಚಾಟ್ ಅನ್ನು ಒಂದು ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ. ಅದರ ಮೇಲೆ ದಾಳಿಂಬೆ ಬೀಜಗಳನ್ನು ಹಾಕಿ. ಮೇಲೆ ನಿಂಬೆ ರಸ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ. ಬೇಕಿದ್ದರೆ ಸ್ವಲ್ಪ ಸೇವ್ ಹಾಕಬಹುದು. ಇದು ಸಿಹಿಗೆಣಸಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಷ್ಟು ಮಾಡಿದರೆ ರುಚಿಕರವಾದ ಚಾಟ್ ಸವಿಯಲು ಸಿದ್ಧ.
ಸಂಜೆ ಶಾಲೆಯಿಂದ ಬರುವ ಮಕ್ಕಳು ಏನಾದರೂ ಸ್ನಾಕ್ಸ್ ಕೊಡಿ ಎಂದು ಹಠ ಹಿಡಿದಾಗ ಈ ತರ ವಿಭಿನ್ನವಾಗಿ ಚಾಟ್ ಮಾಡಿ ಕೊಡಬಹುದು. ಮಕ್ಕಳು ಖಂಡಿತಾ ಇಷ್ಟಪಟ್ಟು ತಿಂತಾರೆ. ಹೊರಗಡೆ ತಿನ್ನುವ ಆಹಾರಕ್ಕಿಂತ ಮನೆಯಲ್ಲೇ ತಯಾರಿಸಿ ತಿನ್ನುವುದು ಉತ್ತಮ. ಈ ರೆಸಿಪಿ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಉತ್ತಮವಾಗಿದೆ. ಮನೆಗೆ ಯಾರಾದರೂ ದಿಢೀರನೆ ಅತಿಥಿಗಳು ಬಂದಾಗ ಕೂಡ ಈ ಸಿಹಿಗೆಣಸಿನ ಚಾಟ್ ಮಾಡಿ ಕೊಡಬಹುದು.
ವಿಭಾಗ