Yugadi 2024: ಯುಗಾದಿ ಹಬ್ಬದಂದು ನೈವೇದ್ಯಕ್ಕೆ ಪುಳಿಯೋಗರೆ ಮಾಡಬೇಕು ಅಂತಿದ್ದೀರಾ? ಇಲ್ಲಿದೆ ಸ್ಪೆಷಲ್ ಪುಳಿಯೋಗರೆ ರೆಸಿಪಿ
Apr 03, 2024 10:21 AM IST
ಸ್ಪೆಷಲ್ ಪುಳಿಯೋಗರೆ ರೆಸಿಪಿ
- ಯುಗಾದಿ ಹಬ್ಬದಂದು ನೈವೇದ್ಯಕ್ಕಾಗಿ ರುಚಿಕರವಾದ ಪುಳಿಯೋಗರೆ ಮಾಡಬೇಕು ಅಂದುಕೊಂಡಿದ್ದೀರಾ..? ಮನೆಯಲ್ಲೇ ಪುಳಿಯೋಗರೆ ಗೊಜ್ಜು ತಯಾರಿಸಿಕೊಂಡು, ಪುಳಿಯೋಗರೆ ತಯಾರಿಸುವುದು ಬಲು ಸುಲಭ. ಇದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು, ತಯಾರಿಸುವ ವಿಧಾನ ಹೇಗೆ ನೋಡಿ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಸಂತಸ, ಸಮೃದ್ಧಿಯ ಹೊನಲನ್ನು ಮತ್ತೊಮ್ಮೆ ಹೊತ್ತು ತರುತಿದೆ. ಹೌದು, ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ಹೊಸ ವರ್ಷದ ಆರಂಭ. ಹೊಸತನಕ್ಕೆ ನಾಂದಿ. ಹಿಂದೂ ಹಬ್ಬಗಳಲ್ಲಿ ಒಂದಾದ ಯುಗಾದಿಯನ್ನು ಕರ್ನಾಟಕದಲ್ಲಿ ಆಯಾ ಪ್ರದೇಶಗಳಿಗೆ ಅನುಸಾರವಾಗಿ ವಿಭಿನ್ನವಾಗಿ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಮನೆಯನ್ನು ಮಾವಿನ ತಳಿರುಗಳಿಂದ ಅಲಂಕರಿಸುವುದು, ಮಾವಿನಕಾಯಿ ಚಿತ್ರಾನ್ನ, ಪುಳಿಯೋಗರೆ, ಒಬ್ಬಟ್ಟು ಸೇರಿದಂತೆ ವಿಭಿನ್ನ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯವನ್ನು ಅರ್ಪಿಸುವುದು, ಬೇವು- ಬೆಲ್ಲವನ್ನು ಸಮನಾಗಿ ತಿನ್ನುವುದು, ಹೊಸತನಕ್ಕೆ ನಾಂದಿಯೆಂಬಂತೆ ಹೊಸ ಬಟ್ಟೆ ತೊಟ್ಟುಕೊಳ್ಳುವುದು ಹೀಗೆ ಯುಗಾದಿಯ ಆಚರಣೆಗಳು ಹಲವು.
ಯುಗಾದಿಯೆಂದರೆ ಸಾಮಾನ್ಯವಾಗಿ ನೆನಪಾಗುವುದು ಘಮ್ಮೆನ್ನುವ ಪುಳಿಯೋಗರೆ. ದಕ್ಷಿಣ ಭಾರತದ ಸಾಮಾನ್ಯ ಆಹಾರ ಪದಾರ್ಥಗಳಲ್ಲಿ ಒಂದಾದ ಪುಳಿಯೋಗರೆಯನ್ನು ನಾವು ನಿತ್ಯವೂ ಬೇಕೆನ್ನುವಾಗ ಮಾಡಿ ತಿನ್ನುವುದಿದೆಯಾದರೂ, ಯುಗಾದಿಗೆ ಮಾಡುವ ಪುಳಿಯೋಗರೆಯ ರುಚಿ ಬೇರೆಯದ್ದೇ. ಕಟುವಾದ ಹುಳಿ, ಖಾರ ಹಾಗೂ ಪರಿಮಳ ಭರಿತ ಮಸಾಲ ಪದಾರ್ಥಗಳಿಂದ ಕೂಡಿರುವ ಈ ಪಾಕವಿಧಾನ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುತ್ತದೆ. ಸುಲಭ ಹಾಗೂ ಸರಳ ವಿಧಾನವನ್ನು ಪುಳಿಯೋಗರೆ ತಯಾರಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಪುಳಿಯೋಗರೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಹುಣಸೆಹಣ್ಣು- 2 ನಿಂಬೆ ಗಾತ್ರದ್ದು, ಬೆಲ್ಲ - 2 ತುಂಡು ನಿಂಬೆ ಗಾತ್ರದ್ದು, ಉಪ್ಪು - ರುಚಿಗೆ ತಕ್ಕಂತೆ, ಎಳ್ಳು - 4 ಚಮಚ, ಕೆಂಪು ಮೆಣಸಿನಕಾಯಿಗಳು (ಗುಂಟೂರು ಮತ್ತು ಬ್ಯಾಡಗಿ ಎರಡನ್ನೂ ಮಿಶ್ರಣ ಮಾಡಿ) - 12 ರಿಂದ 15, ಉದ್ದಿನ ಬೇಳೆ - 4 ಚಮಚ,
ಕಡಲೆಬೇಳೆ - 4 ಚಮಚ, ಕೊತ್ತಂಬರಿ (ಧನಿಯಾ) - 8 ಚಮಚ, ಜೀರಿಗೆ - 4 ಚಮಚ, ಸಾಸಿವೆ - 1/2 ಚಮಚ, ಮೆಂತ್ಯ - 1/2 ಚಮಚ, 1/2 ಚಮಚ ಕಾಳುಮೆಣಸು, ಇಂಗು - 1/2 ಚಮಚ, ಅರಿಶಿನ ಪುಡಿ - 1/2 ಚಮಚ, ತೆಂಗಿನತುರಿ - 1/2 ಕಪ್, ಅಡುಗೆ ಎಣ್ಣೆ - 1 ಚಮಚ,
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಶೇಂಗಾ ಬೀಜ - 4 ಚಮಚ, ಸಾಸಿವೆ - 1 ಚಮಚ, ಎಳ್ಳು - 2 ಚಮಚ, ಉದ್ದಿನಬೇಳೆ - 2 ಚಮಚ, ಕಡಲೆಬೇಳೆ- 2 ಚಮಚ, ಗೋಡಂಬಿ - 10-15, ಸ್ವಲ್ಪ ಕರಿಬೇವಿನ ಎಲೆಗಳು, ಅಡುಗೆ ಎಣ್ಣೆ - 1/4 ಕಪ್
ಪುಳಿಯೋಗರೆ ಗೊಜ್ಜು ತಯಾರಿಸುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಎಳ್ಳನ್ನು ಹುರಿದಿಟ್ಟುಕೊಳ್ಳಿ. ಅದೇ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಒಣಮೆಣಸನ್ನು ಹಾಕಿ ಗರಿಗರಿಯಾಗುವ ತನಕ ಹುರಿದು ಪಕ್ಕಕ್ಕೆ ಇಟ್ಟುಕೊಳ್ಳಿ. ಮತ್ತದೇ ಬಾಣಲೆಗೆ ಶೇಂಗಾಬೀಜ ಹಾಗೂ ಉದ್ದಿನಬೇಳೆ ಸೇರಿಸಿ, ಬಣ್ಣ ಬದಲಾಗುವವರೆಗೂ ಹುರಿದುಕೊಂಡು ಬಟ್ಟಲಿಗೆ ಹಾಕಿಕೊಂಡು ಎಲ್ಲವನ್ನೂ ಚೆನ್ನಾಗಿ ಆರಲು ಬಿಡಿ. ನಂತರ ಮಿಕ್ಸಿ ಜಾರಿಗೆ ಈ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
ಈಗ ಬಾಣಲೆಯನ್ನು ಬಿಸಿ ಮಾಡಿ. ಜೀರಿಗೆ, ಮೆಂತ್ಯ, ಸಾಸಿವೆ, ಕರಿಮೆಣಸು ಮತ್ತು ಕೊತ್ತಂಬರಿ ಬೀಜಗಳನ್ನು ಸೇರಿಸಿ ಘಮ್ಮೆನ್ನುವ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ತೆಂಗಿನತುರಿ, ಅರಿಶಿನ ಮತ್ತು ಇಂಗು ಸೇರಿಸಿ. ಸ್ಟವ್ ಆಫ್ ಮಾಡಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಅದು ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ. ನಂತರ ಹುಣಸೆಹಣ್ಣು ಮತ್ತು ಉಪ್ಪನ್ನು ತರಿತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಪುಡಿ ಮಾಡಿದ ಬೆಲ್ಲ ಸೇರಿಸಿ ಮತ್ತೆ ರುಬ್ಬಿಕೊಳ್ಳಿ. ಮೂರು ಪುಡಿಗಳನ್ನೂ ಜೊತೆಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ನಿಮ್ಮ ಮುಂದೆ ಪುಳಿಯೋಗರೆ ಗೊಜ್ಜು ಸಿದ್ಧ.
ಪುಳಿಯೋಗರೆ ಮಾಡುವುದು
ಈಗ ಪುಳಿಯೋಗರೆ ಸಿದ್ಧ ಮಾಡುವ ಸಮಯ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಶೇಂಗಾಬೀಜವನ್ನು ಹುರಿದುಕೊಳ್ಳಿ. ನಂತರ ಸಾಸಿವೆ, ಗೋಡಂಬಿ, ಉದ್ದಿನಬೇಳೆ, ಕಡಲೇಬೇಳೆ ಮತ್ತು ಎಳ್ಳು ಸೇರಿಸಿ. ಸಾಸಿವೆ ಸಿಡಿಯಲು ಪ್ರಾರಂಭಿಸಿದ ನಂತರ, ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಸ್ಟವ್ ಆಫ್ ಮಾಡಿ. ಇದಕ್ಕೆ ತಯಾರಿಸಿಟ್ಟ ಪುಳಿಯೋಗರೆ ಗೊಜ್ಜನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಇದಾದ ನಂತರ ಬೇಯಿಸಿಟ್ಟ ಅನ್ನದೊಂದಿಗೆ ತಯಾರಿಸಿಟ್ಟ ಗೊಜ್ಜನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡರೆ ರುಚಿರುಚಿಯಾದ ಪುಳಿಯೋಗರೆ ಯುಗಾದಿ ಹಬ್ಬದ ನೈವೇದ್ಯಕ್ಕೆ ಸಿದ್ಧವಾಗುತ್ತದೆ. ಹಬ್ಬದಡಿಗೆಯಲ್ಲಿ ಪುಳಿಯೋಗರೆ ಇಲ್ಲವೆಂದರೆ ಊಟ ರುಚಿಸುವುದಾದರೂ ಹೇಗೆ? ಈ ಬಾರಿ ಯುಗಾದಿಗೆ ನೀವೇ ಪುಳಿಯೋಗರೆ ಗೊಜ್ಜು ತಯಾರಿಸಿ ಪುಳಿಯೋಗರೆಗೆ ವಿಶೇಷ ರುಚಿ ನೀಡಿ ಹಬ್ಬದ ಸಂಭ್ರಮ ಹೆಚ್ಚಿಸಿ.
ಬರಹ: ಭಾಗ್ಯ ದಿವಾಣ