ಅನ್ನಕ್ಕೂ, ರೋಟಿ–ಚಪಾತಿಗೂ ಸೈ ಎನ್ನಿಸುವ ಮೊಸರಿನಿಂದ ತಯಾರಿಸುವ ಖಾದ್ಯಗಳಿವು; ಇವು ನಿಮ್ಮ ನಾಲಿಗೆ ರುಚಿ ಹೆಚ್ಚಿಸೋದು ಪಕ್ಕಾ
Jul 14, 2024 05:58 PM IST
ಅನ್ನಕ್ಕೂ, ರೋಟಿ–ಚಪಾತಿಗೂ ಸೈ ಎನ್ನಿಸುವ ಮೊಸರಿನಿಂದ ತಯಾರಿಸುವ ಖಾದ್ಯಗಳಿವು; ಇವು ನಿಮ್ಮ ನಾಲಿಗೆ ರುಚಿ ಹೆಚ್ಚಿಸೋದು ಪಕ್ಕಾ
ಮೊಸರು ಇದ್ರೆ ಸಾಕು ಊಟ ಸೇರುತ್ತೆ ಅನ್ನೋರು ನಮ್ಮ ನಡುವೆ ಹಲವರಿದ್ದಾರೆ. ಆದರೆ ನಿಮ್ಮ ಊಟದ ಒಂದೆರಡು ತುತ್ತು ಹೆಚ್ಚು ತಿನ್ನುವಂತೆ ಮಾಡುತ್ತವೆ ಮೊಸರಿನಿಂದ ತಯಾರಿಸದ ಖಾದ್ಯಗಳು. ಅನ್ನಕ್ಕೂ, ರೋಟಿ–ಚಪಾತಿಗೂ ಹೊಂದುವ ಮೊಸರಿನ ಖಾದ್ಯಗಳನ್ನು ತಯಾರಿಸೋದು ಹೇಗೆ ನೋಡಿ.
ಭಾರತೀಯ ಅಡುಗೆಮನೆಯಲ್ಲಿ ಕೆಲವೊಂದು ವಸ್ತುಗಳು ಅಗ್ರಸ್ಥಾನ ಪಡೆದಿವೆ. ಅದರಲ್ಲೂ ನೀವು ಯಾರ ಮನೆಯ ಫ್ರಿಜ್ ಓಪನ್ ಮಾಡಿದ್ರೂ ಅಲ್ಲಿ ಮೊಸರಿನ ಬಟ್ಟಲು ಅಥವಾ ಪ್ಯಾಕೆಟ್ ಕಣ್ಣಿಗೆ ಬೀಳುತ್ತದೆ. ಮೊಸರಿನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಜೊತೆಗೆ ಇದರಿಂದ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದು. ದಹಿಯು ರುಚಿಕರವಾಗಿರುವುದರ ಜೊತೆಗೆ, ಜೀರ್ಣಾಂಗ ವ್ಯವಸ್ಥೆಗೆ ಮತ್ತು ಒಟ್ಟಾರೆಯಾಗಿ ದೇಹಕ್ಕೆ ಉತ್ತಮವಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒದಗಿಸುವ ಕಾರಣ ಇದು ಆರೋಗ್ಯಕ್ಕೆ ತುಂಬಾನೇ ಅವಶ್ಯ.
ಮೊಸರಿನಿಂದ ತಯಾರಿಸುವ ಖಾದ್ಯಗಳು ನಿಮ್ಮ ಜಿಹ್ವ ಚಾಪಲ್ಯವನ್ನು ಹೆಚ್ಚಿಸುವುದು ಸುಳ್ಳಲ್ಲ. ಮೊಸರಿನ ಖಾದ್ಯಗಳು ಊಟ ಹೆಚ್ಚಿಗೆ ಸೇರುವಂತೆ ಮಾಡುತ್ತವೆ. ಅನ್ನ ಆಗ್ಲಿ, ಚಪಾತಿ ಆಗ್ಲಿ ಈ ಖಾದ್ಯಗಳು ಹೊಂದಿಕೆ ಆಗುತ್ತವೆ. ಉತ್ತರ ಭಾರತದ ಕಡೆ ವಿಶೇಷವಾಗಿ ತಯಾರಿಸುವ ಈ ಖಾದ್ಯಗಳನ್ನು ನೀವು ಮನೆಯಲ್ಲಿ ತಯಾರಿಸಿ ತಿನ್ನಬಹುದು.
1. ದಹಿ ಸಬ್ಜಿ
ಬೇಕಾಗುವ ಸಾಮಗ್ರಿಗಳು: ಮೊಸರು – ಎರಡೂವರೆ ಕಪ್, ಎಣ್ಣೆ – 1 ಚಮಚ, ಜೀರಿಗೆ – 1 ಚಮಚ, ಹಸಿಮೆಣಸು – 1 ಹೆಚ್ಚಿಕೊಂಡಿದ್ದು, ಈರುಳ್ಳಿ – 1 ಮಧ್ಯಮ ಗಾತ್ರದ್ದು ಹೆಚ್ಚಿಕೊಂಡಿದ್ದು, ಖಾರದ ಪುಡಿ – ಅರ್ಧ ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಅರಿಸಿನ ಪುಡಿ – ಚಿಟಿಕೆ, ಗರಂ ಮಸಾಲೆ – ಸ್ವಲ್ಪ, ಉಪ್ಪು – ರುಚಿಗೆ
ತಯಾರಿಸುವ ವಿಧಾನ: ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಸೇರಿಸಿ ಮತ್ತು 30 ಸೆಕೆಂಡುಗಳ ಕಾಲ ಹುರಿಯಿರಿ. ಹಸಿಮೆಣಸು ಮತ್ತು ಈರುಳ್ಳಿಯನ್ನು ಸೇರಿಸಿ, ಮಿಶ್ರಣ ಮಾಡಿ ಮತ್ತು ಈರುಳ್ಳಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ. ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ಮೊಸರು ಸೇರಿಸಿ, ಮಿಶ್ರಣ ಮಾಡಿ ಮತ್ತು ಮಧ್ಯಮ ಶಾಖದಲ್ಲಿ 2-3 ನಿಮಿಷಗಳ ಕಾಲ ಬೇಯಿಸಿ. ಗರಂ ಮಸಾಲಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪು ಉದುರಿಸಿ ಬಡಿಸಿ. ಇದು ಅನ್ನಕ್ಕೂ ಚಪಾತಿಗೂ ಬೆಸ್ಟ್ ಕಾಂಬಿನೇಷನ್.
2. ದಹಿ ಆಲೂ
ಬೇಕಾಗುವ ಸಾಮಗ್ರಿಗಳು: ಎಣ್ಣೆ – 4 ಚಮಚ, ಕಾಳುಮೆಣಸು – 2, ಇಂಗು – ಚಿಟಿಕೆ, ಹಸಿಮೆಣಸು –2 (ಕತ್ತರಿಸಿಕೊಂಡಿದ್ದು), ಜೀರಿಗೆ – ಒಂದೂವರೆ ಚಮಚ, ದಾಲ್ಚಿನ್ನಿ ಎಲೆ – 1, ಬೇಬಿ ಆಲೂಗೆಡ್ಡೆ – 4 ಕಪ್ (ಸಿಪ್ಪೆ ತೆಗೆದುಕೊಂಡಿರುವುದು), ಈರುಳ್ಳಿ – 1ಕಪ್ (ಹೆಚ್ಚಿಕೊಂಡಿದ್ದು), ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಒಂದೂವರೆ ಚಮಚ, ಅರಿಸಿನ – 1ಚಮಚ, ಖಾರದಪುಡಿ – ಮುಕ್ಕಾಲು ಚಮಚ, ಕೊತ್ತಂಬರಿ ಪುಡಿ – 1ಚಮಚ, ಮೊಸರು– 1 ಕಪ್, ಉಪ್ಪು – ರುಚಿಗೆ, ಹುರಿದಿಟ್ಟುಕೊಂಡ ಕಡಲೆಹಿಟ್ಟು – ಒಂದೂವರೆ ಚಮಚ, ಕಸೂರಿಮೇಥಿ – 2ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ತುಪ್ಪ – 1ಚಮಚ,
ತಯಾರಿಸುವ ವಿಧಾನ: ಸಿಪ್ಪೆ ಸುಲಿದ ಬೇಬಿ ಆಲೂಗಡ್ಡೆಯನ್ನು 20 ನಿಮಿಷಗಳ ಕಾಲ ತಣ್ಣೀರಿನಲ್ಲಿ ಇರಿಸಿ. ಈ ಮಧ್ಯೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಾಳುಮೆಣಸು, ಇಂಗು, ಹೆಚ್ಚಿಕೊಂಡ ಹಸಿಮೆಣಸು, ಜೀರಿಗೆ, ದಾಲ್ಚಿನ್ನಿ ಎಲೆ ಸೇರಿಸಿ ಕಲಕಿ.
ಜೀರಿಗೆ ಪಟಪಟ ಅಂದ ನಂತರ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಈ ಹಂತದಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ. ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಪುಡಿಯನ್ನು ಸೇರಿಸಿ, ಎಲ್ಲವನ್ನೂ ಮಿಶ್ರಣ ಮಾಡಿ. ಈಗ ಮೊಸರನ್ನು ಸೇರಿಸಿ ಉರಿ ಹೆಚ್ಚು ಮಾಡಿ. ಮೊಸರು ಕುದಿಯುವವರೆಗೆ ನಿರಂತರವಾಗಿ ಕಲಕಿ. ಈಗ ಮಸಾಲಾವನ್ನು ಎಣ್ಣೆ ಸೋರುವವರೆಗೆ ಮತ್ತು ಮೇಲ್ಮೈಗೆ ಬರುವವರೆಗೆ ಬೇಯಿಸಿ. ಆಲೂಗಡ್ಡೆಯಿಂದ ನೀರನ್ನು ಸೋಸಿ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಮಸಾಲಾಗೆ ಸೇರಿಸಿ. ಅವುಗಳನ್ನು 5 ನಿಮಿಷಗಳ ಕಾಲ ಬೇಯಿಸಿ ಮತ್ತು ನೀವು ಸ್ವಲ್ಪ ಮಸಾಲೆ ಮಾಡಲು ಬಯಸಿದರೆ ಈ ಹಂತದಲ್ಲಿ ಕೆಲವು ಹೆಚ್ಚುವರಿ ಹಸಿರು ಮೆಣಸಿನಕಾಯಿಗಳನ್ನು ಸೇರಿಸಬಹುದು. ಈ ಉರಿ ಕಡಿಮೆ ಮಾಡಿ ಪಾತ್ರೆಯನ್ನು ಮುಚ್ಚಿ 15 ನಿಮಿಷಗಳ ಕಾಲ ಬೇಯಿಸಿ. 15 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದುಹಾಕಿ ಮತ್ತು ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸೇರಿಸಿ ಮಿಶ್ರಣ ಮಾಡಿ. ಪ್ರತ್ಯೇಕ ಬಟ್ಟಲಿನಲ್ಲಿ ಹುರಿದಿಟ್ಟುಕೊಂಡ ಕಡಲೆಹಿಟ್ಟನ್ನು 1/4 ಕಪ್ ನೀರಿನೊಂದಿಗೆ ಮಿಶ್ರಣ ಮಾಡಿ. ಇದನ್ನು ಆಲೂಗಡ್ಡೆಯ ಮೇಲೆ ಸುರಿಯಿರಿ ಮತ್ತು ಮಿಶ್ರಣ ಮಾಡಿ. ಇದು ಮಸಾಲಾ / ಪಲ್ಯವನ್ನು ದಪ್ಪವಾಗಿಸುತ್ತದೆ. ಅದು ದಪ್ಪವಾದ ನಂತರ ಅದಕ್ಕೆ ಮತ್ತೊಂದು ಕಪ್ ನೀರನ್ನು ಸೇರಿಸಿ ಮತ್ತು ಆಲೂಗಡ್ಡೆ ಮೃದುವಾಗುವವರೆಗೆ ಬೇಯಿಸಿ. ಕಸೂರಿ ಮೇಥಿ, ಹೆಚ್ಚಿಟ್ಟಿದ್ದ ಕೊತ್ತಂಬರಿ ಸೊಪ‍್ಪು ಮತ್ತು ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸಿ. ಅವುಗಳನ್ನು ಕಲಕಿ. ಈ ನಿಮ್ಮ ಮುಂದೆ ರುಚಿಯಾದ ದಹಿ ವಾಲೆ ಆಲೂ ತಿನ್ನಲು ಸಿದ್ಧ, ಇದು ಚಪಾತಿ, ರೋಟಿಗೆ ಬೆಸ್ಟ್ ಕಾಂಬಿನೇಷನ್.
3. ದಹಿ ಕಡಲೆ ಕರಿ
ಬೇಕಾಗುವ ಸಾಮಗ್ರಿಗಳು: ಮೊಸರು – ಒಂದೂವರೆ ಕಪ್, ಕಪ್ಪು ಚೆನ್ನಾ ಕಡಲೆ – 2ಕಪ್ (ನೆನೆಸಿ, ಬೇಯಿಸಿಕೊಂಡಿದ್ದು), ಕಡಲೆಹಿಟ್ಟು – 2 ಚಮಚ, ಅರಿಸಿನ ಪುಡಿ – ಚಿಟಿಕೆ, ಹಸಿಮೆಣಸಿನ ಪೇಸ್ಟ್ – 1 ಚಮಚ, ಖಾರದಪುಡಿ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಒಂದೂವರೆ ಚಮಚ, ಜೀರಿಗೆ – 1 ಚಮಚ, ಸಾಸಿವೆ – ಅರ್ಧ ಚಮಚ, ಕೊತ್ತಂಬರಿ ಸೊಪ್ಪು – 1 ಚಮಚ,
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಮೊಸರು, ಕಡಲೆಹಿಟ್ಟು, ಅರಿಸಿನ ಪುಡಿ, ಹಸಿಮೆಣಸಿನ ಕಾಯಿ ಪೇಸ್ಟ್, ಮೆಣಸಿನ ಪುಡಿ, ಉಪ್ಪು ಮತ್ತು 1/2 ಕಪ್ ನೀರನ್ನು ಸೇರಿಸಿ ಮತ್ತು ಯಾವುದೇ ಉಂಡೆಗಳು ಉಳಿಯದಂತೆ ಚೆನ್ನಾಗಿ ವಿಸ್ಕ್ ಮಾಡಿ, ಮಿಶ್ರಣ ತಯಾರಿಸಿ ಪಕ್ಕಕ್ಕೆ ಇರಿಸಿ. ಅಗಲವಾದ ಗುಂಡಿ ಇರುವ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಮತ್ತು ಸಾಸಿವೆ ಸೇರಿಸಿ. ಚಿಟಪಟ ಎನ್ನುವ ಬೇಯಿಸಿಕೊಂಡ ಚೆನ್ನಾ ಕಡಲೆ, ಮೊಸರಿನ ಮಿಶ್ರಣ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಕಲೆಸಿ. 2 ನಿಮಿಷಗಳ ಕಾಲ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ವಿಭಾಗ