ತರಕಾರಿ ಇಲ್ಲ ಅಂದ್ರೆ ಈ ರೀತಿ ತೆಂಗಿನಕಾಯಿ ಸಾರು ಮಾಡಿ, ತುಂಬಾ ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ರೆಸಿಪಿ ಅನ್ನಕ್ಕೆ ಮಸ್ತ್ ಕಾಂಬಿನೇಷನ್
Oct 01, 2024 02:38 PM IST
ತೆಂಗಿನಕಾಯಿ ಸಾಂಬಾರ್
- ಮನೆಯಲ್ಲಿ ತರಕಾರಿ ಇಲ್ಲ ಎಂದಾಕ್ಷಣ ಸಾಂಬಾರ್ ಮಾಡೋದು ಹೇಗೆ ಅಂತ ಯೋಚನೆ ಮಾಡುವವರು ಕೆಲವರಾದ್ರೆ, ಈರುಳ್ಳಿ ಇದ್ಯಾಯಲ್ಲ ಅದನ್ನೇ ಹಾಕಿ ಸಾರು ಮಾಡಿದ್ರಾಯ್ತು ಎನ್ನುವವರು ಇನ್ನೊಂದಿಷ್ಟು. ಆದರೆ ಈ ಎರಡೂ ಇಲ್ಲ ಅಂದ್ರು ಸಖತ್ ರುಚಿಯಾಗಿರೋ ಸಾರು ಮಾಡಬಹುದು, ಅದುವೇ ತೆಂಗಿನಕಾಯಿ ಸಾರು. ಅತ್ಯಂತ ಸುಲಭವಾಗಿ ಮಾಡಬಹುದಾದ ಈ ರೆಸಿಪಿಗೆ ಏನೆಲ್ಲಾ ಬೇಕು, ಹೇಗೆ ಮಾಡೋದು ನೋಡಿ.
ದಕ್ಷಿಣ ಭಾರತದಲ್ಲಿ ಬಹುತೇಕ ಸಾಂಬಾರಿಗೆ ತೆಂಗಿನಕಾಯಿ ಬಳಸುತ್ತಾರೆ. ತೆಂಗಿನಕಾಯಿ ಬಳಸಿದ್ರೆ ಅದರ ರುಚಿಯೇ ಬೇರೆ. ವಿಭಿನ್ನ ಪರಿಮಳವನ್ನೂ ಹೊಂದಿರುವ ತೆಂಗಿನಕಾಯಿ ಸಾಂಬಾರಿಗೆ ಹೊಸ ರುಚಿ ನೀಡುತ್ತದೆ. ತರಕಾರಿ ಸಾಂಬಾರ್ ಜೊತೆ ತೆಂಗಿನಕಾಯಿ ಬಳಸೋದು ನಿಮಗೆ ಗೊತ್ತಿರಬಹುದು. ಆದರೆ ತೆಂಗಿನಕಾಯಿಯಿಂದಲೇ ರುಚಿಯಾದ ಸಾಂಬಾರ್ ತಯಾರಿಸಬಹುದು ಅಂದ್ರೆ ನಂಬ್ತೀರಾ.
ಅದೇನಪ್ಪಾ ತೆಂಗಿನಕಾಯಿ ಸಾಂಬಾರ್, ಅದರ ರುಚಿ ಹೇಗಿರಬಹುದು, ಇದನ್ನ ಮಾಡೋದು ಹೇಗೆ ಅಂತೆಲ್ಲಾ ಯೋಚಿಸ್ತಿದ್ದೀರಾ, ಖಂಡಿತ ಚಿಂತೆ ಬೇಡ. ತೆಂಗಿನಕಾಯಿ ಸಾಂಬಾರ್ ತಯಾರಿಸುವ ವಿಧಾನ ಇಲ್ಲಿದೆ ನೋಡಿ.
ತೆಂಗಿನಕಾಯಿ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು
ಹಸಿ ತೆಂಗಿನಕಾಯಿ – ಅರ್ಧ ತುಂಡು, ಟೊಮೆಟೊ – 2, ಹಸಿಮೆಣಸು – 2, ಎಣ್ಣೆ – 2 ಚಮಚ, ಬೇಳೆ – ಅರ್ಧ ಕಪ್ ಬೇಯಿಸಿಕೊಂಡಿದ್ದು, ಹುಣಸೆಹಣ್ಣಿನ ರಸ – ಕಾಲು ಕಪ್, ಉಪ್ಪು ಅರ್ಧ – ಟೀ ಚಮಚ, ಖಾರದಪುಡಿ – ಅರ್ಧ ಚಮಚ, ಅರಿಸಿನ – ಅರ್ಧ ಟೀ ಚಮಚ, ಜೀರಿಗೆ ಪುಡಿ – ಅರ್ಧ ಟೀ ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಸಾಸಿವೆ – ಅರ್ಧ ಟೀ ಚಮಚ, ಮೆಂತ್ಯ ಕಾಳು – ಅರ್ಧ ಟೀ ಚಮಚ, ಜೀರಿಗೆ – ಅರ್ಧ ಟೀ ಚಮಚ, ಕಾಳುಮೆಣಸು – 2, ಉದ್ದಿನಬೇಳೆ – ಅರ್ಧ ಚಮಚ, ಒಗ್ಗರಣೆಗೆ: ಬೆಳ್ಳುಳ್ಳಿ – 4 ಎಸಳು, ಸಾಸಿವೆ, ಜೀರಿಗೆ, ಕರಿಬೇವು
ತೆಂಗಿನಕಾಯಿ ಸಾರು ಮಾಡುವ ವಿಧಾನ
ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಜೀರಿಗೆ, ಮೆಣಸು ಮತ್ತು ಕಾಳುಮೆಣಸು ಸೇರಿಸಿ, ತರಿತರಿಯಾಗಿ ರುಬ್ಬಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ ಅಥವಾ ತುರಿದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನ ತೆಳುವಾದ ಬಟ್ಟೆ ಮೇಲೆ ಹರಡಿ, ಇದರಿಂದ ಕಾಯಿಹಾಲು ಹಿಂಡಿಕೊಂಡು ಪಾತ್ರೆಯಲ್ಲಿ ಹಾಕಿಡಿ. ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಮೆಂತ್ಯೆ, ಉದ್ದಿನಬೇಳೆ ಹಾಗೂ ಕರಿಬೇವು ಹಾಕಿ ಫ್ರೈ ಮಾಡಿ. ಇದಕ್ಕೆ ರುಬ್ಬಿಕೊಂಡ ಮಸಾಲೆ ಸೇರಿಸಿ. ಅದೇ ಮಿಶ್ರಣಕ್ಕೆ ಹಸಿಮೆಣಸು ಮತ್ತು ಟೊಮೆಟೊ ಚೂರುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದು ಮೃದುವಾದ ಮೇಲೆ ಉಪ್ಪು, ಮೆಣಸು, ಅರಿಸಿನ, ಜೀರಿಗೆ ಪುಡಿ ಸೇರಿಸಿ. ಅದಕ್ಕೆ ಹುಣಸೆಹಣ್ಣಿನ ರಸ ಹಾಗೂ ಅಗತ್ಯ ಇರುವಷ್ಟು ನೀರು ಸೇರಿಸಿ. ನಿಮಗೆ ಬೇಕು ಅನ್ನಿಸಿದರೆ ಅರ್ಧ ಟೀ ಚಮಚ ಸಕ್ಕರೆ ಸೇರಿಸಿ, ರುಚಿ ಚೆನ್ನಾಗಿರುತ್ತದೆ. ಈ ಎಲ್ಲವೂ ಕುದಿದು ಗುಳ್ಳೆ ಬರಲು ಆರಂಭಿಸಿದಾಗ ಮಾಡಿಟ್ಟುಕೊಂಡ ತೆಂಗಿನಹಾಲು ಸೇರಿಸಿ. ಕೊನೆಯಲ್ಲಿ ಉಪ್ಪು ನೋಡಿ ಕೆಳಗಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ರುಚಿಯಾದ ತೆಂಗಿನಕಾಯಿ ಸಾರು ಸವಿಯಲು ಸಿದ್ಧ.
ವಿಭಾಗ