logo
ಕನ್ನಡ ಸುದ್ದಿ  /  ಜೀವನಶೈಲಿ  /  ಉಳಿದ ಇಡ್ಲಿ ಏನ್ ಮಾಡ್ಲಿ ಎಂಬ ಗೊಂದಲದಲ್ಲಿದ್ದೀರಾ; ಫ್ರೈಡ್ ಇಡ್ಲಿ ಚಾಟ್ ಟ್ರೈ ಮಾಡಿ, ಮಕ್ಕಳು ಕೂಡ ಇಷ್ಟಪಡ್ತಾರೆ

ಉಳಿದ ಇಡ್ಲಿ ಏನ್ ಮಾಡ್ಲಿ ಎಂಬ ಗೊಂದಲದಲ್ಲಿದ್ದೀರಾ; ಫ್ರೈಡ್ ಇಡ್ಲಿ ಚಾಟ್ ಟ್ರೈ ಮಾಡಿ, ಮಕ್ಕಳು ಕೂಡ ಇಷ್ಟಪಡ್ತಾರೆ

Jayaraj HT Kannada

Sep 15, 2024 05:05 PM IST

google News

ಉಳಿದ ಇಡ್ಲಿಯಿಂದ ಫ್ರೈಡ್ ಇಡ್ಲಿ ಚಾಟ್ ಮಾಡಿದ್ರೆ ಮಕ್ಕಳು ಕೂಡ ಇಷ್ಟಪಡ್ತಾರೆ

    • ಮನೆಯಲ್ಲಿ ಇಡ್ಲಿ ಉಳಿದರೆ ಅದನ್ನು ಏನ್‌ ಮಾಡ್ಲಿ ಎಂಬ ಗೊಂದಲ ನಿಮ್ಮದಿರಬಹುದು. ಈ ಡಿಶ್‌ ಮಾಡಿದ್ರೆ ಮಕ್ಕಳು ಕೂಡಾ ಇಷ್ಟಪಟ್ಟು ಸವಿಯುತ್ತಾರೆ. ಈ ಡಿಶ್‌ ಗಹೆಸರು ಫ್ರೈಡ್ ಇಡ್ಲಿ ಚಾಟ್. ರೆಸಿಪಿ ಇಲ್ಲಿದೆ. ಇದನ್ನು ಶೆಫ್‌ ಸಂಜೀವ್‌ ಕಪೂರ್‌ ಹಂಚಿಕೊಂಡಿದ್ದಾರೆ.
ಉಳಿದ ಇಡ್ಲಿಯಿಂದ ಫ್ರೈಡ್ ಇಡ್ಲಿ ಚಾಟ್ ಮಾಡಿದ್ರೆ ಮಕ್ಕಳು ಕೂಡ ಇಷ್ಟಪಡ್ತಾರೆ
ಉಳಿದ ಇಡ್ಲಿಯಿಂದ ಫ್ರೈಡ್ ಇಡ್ಲಿ ಚಾಟ್ ಮಾಡಿದ್ರೆ ಮಕ್ಕಳು ಕೂಡ ಇಷ್ಟಪಡ್ತಾರೆ (Pinterest)

ಕೆಲವೊಮ್ಮೆ ಮನೆಯ ಸದಸ್ಯರಿಗೆ ಬೇಕಾದಷ್ಟು ಸರಿಯಾದ ಪ್ರಮಾಣದಲ್ಲಿ ಅಡುಗೆ ಮಾಡಿದರೂ, ಸ್ವಲ್ಪ ಆಹಾರ ಉಳಿಯುತ್ತದೆ. ಆ ಕ್ಷಣಕ್ಕೆ ಫ್ರಿಡ್ಜ್‌ನಲ್ಲಿ ಇಟ್ಟು ಹಾಳಾಗುವುದರಿಂದ ತಡೆಯಬಹುದು. ಮತ್ತೆ ಅದನ್ನು ಎಸೆಯಲು ಮನಸು ಬರುವುದಿಲ್ಲ. ಫ್ರಿಡ್ಜ್‌ನಲ್ಲಿ ಉಳಿದಿರುವ ಇಡ್ಲಿ ಸಿಕ್ಕಿದಾಗ ಇದೇ ಪ್ರಮೇಯ ಬರುತ್ತದೆ. ಆಗ ಅವುಗಳನ್ನು ಮತ್ತೆ ಬಳಸುವುದು ಹೇಗೆ ಎಂಬ ಗೊಂದಲದಲ್ಲಿ ನೀವಿರಬಹುದು. ಅದನ್ನು ಎಸೆಯಲು ಹೋಗಲೇಬೇಡಿ. ನಿಮ್ಮ ಸೃಜನಶೀಲತೆಯೊಂದಿಗೆ, ಉಳಿದ ಇಡ್ಲಿಯನ್ನು ಹೊಸ ಡಿಶ್‌ ಆಗಿ ಮಾಡಬಹುದು. ಸಾಮಾನ್ಯ ಇಡ್ಲಿ ತಿನ್ನದ ಮಕ್ಕಳು ಕೂಡಾ ಈ ಹೊಸ ಡಿಶ್‌ ಇಷ್ಟಪಟ್ಟು ತಿನ್ನುತ್ತಾರೆ. ನೀವಿಂದು ಉಳಿದ ಇಡ್ಲಿಯಿಂದ ಫ್ರೈಡ್ ಇಡ್ಲಿ ಚಾಟ್ ಟ್ರೈ ಮಾಡಿ. ಈ ರೆಸಿಪಿಯನ್ನು ನಾವು ಹೇಳುತ್ತೇವೆ.

ಹುರಿದ ಇಡ್ಲಿ ಚಾಟ್‌ಗೆ ಬೇಕಾಗುವ ಪದಾರ್ಥಗಳು

  • 10-12 ಇಡ್ಲಿ
  • ಡೀಪ್‌ಫ್ರೈ ಮಾಡಲು ಎಣ್ಣೆ
  • 1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
  • ರುಚಿಗೆ ಕಪ್ಪು ಉಪ್ಪು
  • 1 ಟೀಸ್ಪೂನ್ ಚಾಟ್ ಮಸಾಲಾ
  • 1 ಟೀಸ್ಪೂನ್ ಜೀರಿಗೆ ಪುಡಿ
  • ½ ಟೀಸ್ಪೂನ್ ಸ್ಯಾಂಡ್‌ವಿಚ್ ಮಸಾಲಾ
  • ½ ಟೀಸ್ಪೂನ್ ಒಣ ಮಾವಿನ ಪುಡಿ (ಆಮ್‌ಚೂರ್)
  • 4 ಟೀಸ್ಪೂನ್ ಬೆಣ್ಣೆ
  • ಕೊತ್ತಂಬರಿ ಸೊಪ್ಪು (ಅಲಂಕರಿಸಲು)
  • ರೆಡ್‌ ಚಿಲ್ಲಿ ಫ್ಲೇಕ್ಸ್
  • 2 ಟೀಸ್ಪೂನ್ ನಿಂಬೆ ರಸ
  • ಸ್ವಲ್ಪ ಮೊಸರು
  • ಖರ್ಜೂರ ಮತ್ತು ಹುಣಸೆ ಹಣ್ಣಿನ ಚಟ್ನಿ
  • ಹಸಿರು ಚಟ್ನಿ
  • ಸ್ವಲ್ಪ ಸೇವ್
  • ಸಿಂಪಡಣೆಗೆ ಮಸಾಲಾ ದಾಲ್
  • ಸಿಂಪರಣೆಗೆ ಮಸಾಲಾ ಕಡಲೆಕಾಯಿ
  • ದಾಳಿಂಬೆ ಬೀಜ

ಹುರಿದ ಇಡ್ಲಿ ಚಾಟ್‌ ಮಾಡುವ ವಿಧಾನ

ಇಡ್ಲಿಯನ್ನು ನಾಲ್ಕು ತುಂಡುಗಳಾಗಿ ಮಾಡಿ. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿಗಿಡಿ. ಇಡ್ಲಿ ತುಂಡುಗಳನ್ನು ಗೋಲ್ಡನ್ ಕಲರ್‌ ಬರುವವರೆಗೆ ಗರಿಗರಿಯಾಗುವವರೆಗೆ ಡೀಪ್ ಫ್ರೈ ಮಾಡಿ ಪಕ್ಕಕ್ಕಿಡಿ.

ದೊಡ್ಡ ಬೌಲ್‌ನಲ್ಲಿ ಫ್ರೈ ಮಾಡಿದ ಇಡ್ಲಿ ತುಂಡುಗಳನ್ನು ಹಾಕಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಕಪ್ಪು ಉಪ್ಪು, ಚಾಟ್ ಮಸಾಲಾ, ಜೀರಿಗೆ ಪುಡಿ, ಸ್ಯಾಂಡ್ವಿಚ್ ಮಸಾಲಾ, ಮಾವಿನ ಪುಡಿ, ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಿ. ಇದಕ್ಕೆ ರೆಡ್ ಚಿಲ್ಲಿ ಫ್ಲೇಕ್ಸ್ ಸಿಂಪಡಿಸಿ. ಆ ಬಳಿಕ ನಿಂಬೆ ರಸವನ್ನು ಚಿಮುಕಿಸಿ. ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಮಿಶ್ರಣವನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ. ಅದರ ಮೇಲೆ ಪ್ಲೇಟ್‌ಗೆ ಅಗತ್ಯಕ್ಕೆ ತಕ್ಕಂತೆ ಸಿಹಿ ಮೊಸರು, ಖರ್ಜೂರ ಮತ್ತು ಹುಣಸೆಹಣ್ಣಿನ ಚಟ್ನಿ, ಹಸಿರು ಚಟ್ನಿ, ಸೇವ್, ಮಸಾಲಾ ದಾಲ್, ಮಸಾಲಾ ಕಡಲೆಕಾಯಿಗಳು, ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪು ಹರಡಿ. ರುಚಿಯಾದ ಫ್ರೈಡ್‌ ಇಡ್ಲಿ ಚಾಟ್‌ ಸವಿಯಲು ಸಿದ್ಧ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ