logo
ಕನ್ನಡ ಸುದ್ದಿ  /  ಜೀವನಶೈಲಿ  /  Tasting Powder: ಟೇಸ್ಟಿಂಗ್‌ ಪೌಡರ್‌ ಎಂದರೇನು, ಇದು ಆಹಾರದ ರುಚಿ ಹೆಚ್ಚಿಸುವುದು ಹೇಗೆ; ಮಾಹಿತಿ ಇಲ್ಲಿದೆ

Tasting Powder: ಟೇಸ್ಟಿಂಗ್‌ ಪೌಡರ್‌ ಎಂದರೇನು, ಇದು ಆಹಾರದ ರುಚಿ ಹೆಚ್ಚಿಸುವುದು ಹೇಗೆ; ಮಾಹಿತಿ ಇಲ್ಲಿದೆ

Reshma HT Kannada

Sep 02, 2023 02:25 PM IST

google News

ಟೇಸ್ಟಿಂಗ್‌ ಪೌಡರ್‌

    • ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಖಾದ್ಯಗಳಿಗೆ ಟೇಸ್ಟಿಂಗ್‌ ಪೌಡರ್‌ ಸೇರಿಸುತ್ತಾರೆ, ಆ ಕಾರಣಕ್ಕೆ ಇವರ ರುಚಿ ಇಮ್ಮಡಿಯಾಗುವುದು ಎಂದು ಹಲವರು ಹೇಳುವುದನ್ನು ನಾವು ಕೇಳಿರುತ್ತೇವೆ. ಹಾಗಾದರೆ ಏನಿದು ಟೇಸ್ಟಿಂಗ್‌ ಪೌಡರ್‌, ಇದು ಆಹಾರದ ರುಚಿ ಹೆಚ್ಚಿಸುವುದು ಹೇಗೆ? ನೋಡಿ. 
ಟೇಸ್ಟಿಂಗ್‌ ಪೌಡರ್‌
ಟೇಸ್ಟಿಂಗ್‌ ಪೌಡರ್‌

ಮನೆಯಲ್ಲಿ ಮಾಡುವ ತಿನಿಸುಗಳಿಗಿಂತ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಮಾಡುವ ತಿನಿಸುಗಳು ನಮ್ಮ ಬಾಯಿಗೆ ಹೆಚ್ಚು ರುಚಿಸುತ್ತವೆ. ಹೋಟೆಲ್‌ಗಳಲ್ಲಿ ಒಮ್ಮೆ ತಿಂದ ತಿಂಡಿಯನ್ನು ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವುದು ಸಹಜ. ಅದೇ ತಿಂಡಿಯನ್ನು ಮನೆಯಲ್ಲಿ ಮಾಡಿದರೆ ಇದು ಅಷ್ಟೊಂದು ರುಚಿಸುವುದಿಲ್ಲ.

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಖಾದ್ಯಗಳ ರುಚಿ ಹೆಚ್ಚಿಸುವ ಸಲುವಾಗಿ ಟೇಸ್ಟಿಂಗ್‌ ಪೌಡರ್‌ ಬಳಸುತ್ತಾರೆ ಎಂಬುದು ಹಲವರಿಗೆ ತಿಳಿದಿರುವ ವಿಚಾರ. ಅದರಲ್ಲೂ ಗೋಬಿಮಂಚೂರಿ, ಫ್ರೈಡ್‌ರೈಸ್‌, ಸಲಾಡ್‌, ಸಾಸ್‌, ಸೂಪ್‌ನಂತಹ ಖಾದ್ಯಗಳು ಹಾಗೂ ಹೆಚ್ಚಾಗಿ ಚೈನಿಸ್‌ ಖಾದ್ಯಗಳಿಗೆ ಟೇಸ್ಟಿಂಗ್‌ ಪೌಡರ್‌ ಅನ್ನು ಹೆಚ್ಚು ಬಳಸುತ್ತಾರೆ. ಆ ಕಾರಣಕ್ಕೆ ಅವುಗಳು ತಮ್ಮ ನಾಲಿಗೆಗೆ ಹೆಚ್ಚು ರುಚಿಸುತ್ತವೆ. ಅದೆಲ್ಲಾ ಸರಿ ಈ ಟೇಸ್ಟಿಂಗ್‌ ಪೌಡರ್‌ ಎಂದರೇನು? ಇದು ಆಹಾರಕ್ಕೆ ರುಚಿ ನೀಡುವುದು ಹೇಗೆ? ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ಈ ಕುರಿತ ವಿವರ ಇಲ್ಲಿದೆ.

ಏನಿದು ಟೇಸ್ಟಿಂಗ್‌ ಪೌಡರ್‌?

ಟೇಸ್ಟಿಂಗ್‌ ಪೌಡರ್‌ಗೆ ಮೋನೊಸೋಡಿಯಂ ಗ್ಲುಟಾಮೇಟ್‌ (ಎಂಎಸ್‌ಜಿ) ಎಂದೂ ಕರೆಯುತ್ತಾರೆ. ಖಾದ್ಯಗಳ ರುಚಿ ಹೆಚ್ಚಿಸುವ ಅಜಿನೊಮೊಟೊ ಹೆಸರಿನ ಟೇಸ್ಟಿಂಗ್‌ ಪೌಡರ್‌ ಬಳಕೆ ಆರೋಗ್ಯಕ್ಕೆ ಉತ್ತಮವಲ್ಲ ಎನ್ನುವುದು ಹಲವು ತಜ್ಞರ ಅಭಿಪ್ರಾಯ. ಆದರು 100 ವರ್ಷಗಳಿಂದೀಚೆಗೂ ಈ ಟೇಸ್ಟಿಂಗ್‌ ಪೌಡರ್‌ ಬಳಕೆ ಚಾಲ್ತಿಯಲ್ಲಿದೆ. ನಮ್ಮಲ್ಲಿ ಟೇಸ್ಟಿಂಗ್‌ ಪೌಡರ್‌ ಬಳಕೆಯಿಲ್ಲ, ನಮ್ಮದೇನಿದ್ರು ಕೈರುಚಿ ಅಷ್ಟೇ ಎಂದುಕೊಂಡೇ ಹಲವು ಹೋಟೆಲ್‌ನವರು ಗ್ರಾಹಕರಿಗೆ ಮಂಕು ಬೂದಿ ಎರಚುತ್ತಾರೆ.

ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಡಿಎ) ಆಹಾರಗಳಲ್ಲಿ ಬಳಸುವ ಎಂಎಸ್‌ಜಿ (ಟೇಸ್ಟಿಂಗ್‌ ಪೌಡರ್‌) ಸುರಕ್ಷಿತ ಎಂದು ತಿಳಿಸಿತ್ತು. ಆದರೆ ಈಗಲೂ ಇದರ ಬಳಕೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಸಾಮಾನ್ಯವಾಗಿ ಚೈನಿಸ್‌ ಹಾಗೂ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಟೇಸ್ಟಿಂಗ್‌ ಪೌಡರ್‌ ಅನ್ನು ಹೆಚ್ಚೇ ಬಳಸುತ್ತಾರೆ ಎಂದು ನಿಮಗೆ ತಿಳಿದಿರಬೇಕು.

ಎಂಎಸ್‌ಜಿಯಲ್ಲಿ ಎಲ್‌-ಗ್ಲುಟಾಮಿಕ್‌ ಆಮ್ಲ ಇರುವ ಕಾರಣಕ್ಕೆ ಇದು ಆಹಾರಕ್ಕೆ ಪರಿಮಳ ಹಾಗೂ ರುಚಿ ನೀಡುತ್ತದೆ. ಈ ಅಂಶವು ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿರುತ್ತದೆ. ಎಲ್‌-ಗ್ಲುಟಾಮಿಕ್‌ ಆಮ್ಲವು ದೇಹಕ್ಕೆ ಅನಿವಾರ್ಯವಲ್ಲದ ಅಮೈನೋ ಆಮ್ಲವಾಗಿದೆ. ಯಾಕೆಂದರೆ ಇದನ್ನು ನಮ್ಮ ದೇಹವು ಸ್ವತಃ ಉತ್ಪಾದಿಸುತ್ತದೆ. ಆ ಕಾರಣಕ್ಕೆ ಅದನ್ನು ಆಹಾರ ಮೂಲದಿಂದ ಪಡೆಯುವ ಅಗತ್ಯವಿಲ್ಲ.

ಬಿಳಿ ಬಣ್ಣದ ಪುಡಿ

ಎಂಎಸ್‌ಜಿ ಬಿಳಿ ಬಣ್ಣದ, ವಾಸನೆ ರಹಿತ ಸ್ಫಟಿಕದಂತಹ ಪುಡಿ. ಆಹಾರ ಉದ್ಯಮದಲ್ಲಿ ಇದಕ್ಕೆ ಇ621 ಎಂದು ಕರೆಯಲಾಗುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಇದನ್ನು ಸಿಹಿ ಅಂಶವಿರುವ ಬಿಟ್ರೂಟ್‌, ಕಬ್ಬು ಹಾಗೂ ಕಾಕಂಬಿಯಂತಹ ಕಾರ್ಬೋಹ್ರೈಡೇಟ್‌ ಮೂಲಗಳನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ.

ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ಹಾಗೂ ಎಂಎಸ್‌ಜಿಯಲ್ಲಿ ಕಂಡುಬರುವ ಗ್ಲುಟಾಮಿಕ್‌ ಆಮ್ಲದ ನಡುವೆ ಯಾವುದೇ ರಾಸಾಯನಿಕ ವ್ಯತ್ಯಾಸವಿಲ್ಲ.

ಎಂಎಸ್‌ಜಿ ಯುಮಾಮಿ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ರುಚಿಯನ್ನು ಹೊಂದಿದೆ. ಇದು ಸಿಹಿ, ಹುಳಿ, ಉಪ್ಪು ಮತ್ತು ಕಹಿ ರುಚಿಗಳನ್ನು ಹೊಂದಿರುತ್ತದೆ. ಯುಮಾಮಿ ಮಾಂಸ ಪರಿಮಳವನ್ನು ಹೊಂದಿದ್ದು ಇದು ಆಹಾರದಲ್ಲಿ ಪ್ರೊಟೀನ್‌ ಉಪಸ್ಥಿತಿಯನ್ನು ಸೂಚಿಸುತ್ತದೆ.

ಎಂಎಸ್‌ಜಿ ಏಷ್ಯಾ ಅಡುಗೆಗಳಲ್ಲಿ ಸಾಮಾನ್ಯವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಸ್ಕರಿಸಿ ಆಹಾರಗಳಲ್ಲಿ ಎಂಎಸ್‌ಜಿ ಬಳಸುತ್ತಾರೆ. ಪ್ರತಿದಿನ ಇದನ್ನು 0.3 ರಿಂದ 1.0 ಗ್ರಾಂವರೆಗೆ ಸೇವಿಸಬಹುದು ಎಂದು ಅಂದಾಜಿಸಲಾಗಿದೆ.

ಟೇಸ್ಟಿಂಗ್‌ ಪೌಡರ್‌ ಸೇವನೆಯ ಪರಿಣಾಮಗಳು

  • ತಲೆನೋವು
  • ಮುಖ ಹಾಗೂ ಸ್ನಾಯುಗಳಲ್ಲಿ ಬಿಗಿತದ ಅನುಭವ
  • ಮುಖ, ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಮರಗಟ್ಟುವಿಕೆ
  • ಎದೆಬಡಿತದ ಏರುಪೇರು
  • ಎದೆನೋವು
  • ಅನಾರೋಗ್ಯದ ಭಾವನೆ (ವಾಕರಿಕೆ)
  • ನಿಶಕ್ತಿ
  • ಹೊಟ್ಟೆ ಉಬ್ಬರಿಸಿದಂತಾಗುವುದು
  • ಹಸಿವಾಗದೇ ಇರುವುದು

ಆದರೆ ಎಂಎಸ್‌ಜಿ ಮತ್ತು ಈ ರೋಗಲಕ್ಷಣಗಳ ನಡುವಿನ ಸಂಪರ್ಕದ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದಾಗ್ಯೂ, ಕೆಲವರಲ್ಲಿ ಮಾತ್ರ ಎಂಎಸ್‌ಜಿಯ ಸೇವನೆಯಿಂದ ಈ ರೀತಿಯ ಸಮಸ್ಯೆಗಳು ಕಾಣಿಸಬಹುದು ಎನ್ನುತ್ತಾರೆ ಸಂಶೋಧಕರು. ಎಂಎಸ್‌ಜಿ ಸೇವನೆಯಿಂದ ಉಂಟಾಗುವ ರೋಗಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ ಮತ್ತು ಚಿಕಿತ್ಸೆ ಅಗತ್ಯವಿಲ್ಲ. ಇದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಎಂಎಸ್‌ಇ ಬಳಕೆಯ ಇರುವ ಆಹಾರವನ್ನು ಸೇವಿಸದೇ ಇರುವುದು.

ಟೇಸ್ಟಿಂಗ್‌ ಪೌಡರ್‌ ಬಳಕೆ ಬಗ್ಗೆ ಲೇಖಕ ಗೋಪಾಲಕೃಷ್ಣ ಕುಂಟಿನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅವರ ಬರಹಕ್ಕೆ ಹಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಗೋಪಾಲಕೃಷ್ಣ ಕುಂಟಿನಿ ಅವರ ಬರಹ

ಕಳೆದ ಮೂರು ತಿಂಗಳುಗಳಲ್ಲಿ ಮಡಿಕೇರಿ, ಕುಶಾಲನಗರ, ಮೈಸೂರು, ಬಿಡದಿ, ಬೆಂಗಳೂರು, ಮಂಗಳೂರು, ಉಡುಪಿ, ಸಾಲಿಗ್ರಾಮ, ಬೈಂದೂರು, ಭಟ್ಕಳ, ಹೊನ್ನಾವರ, ಜೋಗ, ಹಾಸನ, ಯಡಿಯೂರು, ಕೋಲಾರ ಅಂತ ಹತ್ತಾರು ಊರುಗಳಲ್ಲಿ ಕನಿಷ್ಠ ಮೂವತ್ತು ರೆಸ್ಟೋರೆಂಟ್‌ಗಳಿಗೆ ಹೋಗಿದ್ದೇನೆ.

ನಾನು ಹೋಟೇಲುಗಳಿಗೆ ಹೋದರೆ, ತಿಂದು ಎದ್ದು ಸುಮ್ಮನೇ ಬರುವವನಲ್ಲ. ಕ್ಯಾಶಿಯರ್ ಟೇಬಲ್ ಬಳಿ ನಿಂತು ಮೂರ್ನಾಲ್ಕು ನಿಮಿಷವಾದರೂ ಸುಖ ದು:ಖ ಆಲಿಸದೇ ಇದ್ದರೆ ನನಗೆ ತಿಂದದ್ದು ಕರಗುವುದಿಲ್ಲ.

ಈ ಎಲ್ಲಾ ಹೋಟೇಲಿನವರೂ ಮಾತುಕತೆ ವೇಳೆ ನಾನು ಕೇಳದೇ ಇದ್ದರೂ ಹೇಳಿದ ಒಂದು ಮಾತು ಐಡೆಂಟಿಕಲ್.

“ಸಾರ್ ನಾವು ಟೇಸ್ಟಿಂಗ್ ಪೌಡರ್ ಹಾಕೋದಿಲ್ಲʼ

ಈ ಇವರ ಬರಹಕ್ಕೆ ಹಲವರು ಟೇಸ್ಟಿಂಗ್‌ ಪೌಡರ್‌ ಹಾಕದ ಹೋಟೆಲ್‌ ಇಲ್ಲ ಎಂಬರ್ಥದಲ್ಲಿ ಕಾಮೆಂಟ್‌ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ