logo
ಕನ್ನಡ ಸುದ್ದಿ  /  ಜೀವನಶೈಲಿ  /  Pachadi Recipe: ಯುಗಾದಿ ಹಬ್ಬದಂದು ಪಚಡಿ ಸೇವಿಸುವ ಉದ್ದೇಶವೇನು, ಈ ವಿಶೇಷ ರೆಸಿಪಿಯನ್ನು ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ

Pachadi Recipe: ಯುಗಾದಿ ಹಬ್ಬದಂದು ಪಚಡಿ ಸೇವಿಸುವ ಉದ್ದೇಶವೇನು, ಈ ವಿಶೇಷ ರೆಸಿಪಿಯನ್ನು ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ

Reshma HT Kannada

Apr 03, 2024 10:22 AM IST

google News

ಯುಗಾದಿ ಪಚಡಿ

    • ಭಾರತದಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಯುಗಾದಿ ಹಿಂದೂಗಳ ಹೊಸ ವರ್ಷ. ಈ ಹಬ್ಬದಂದು ಬೇವು-ಬೆಲ್ಲ ಹಂಚುವ ಜೊತೆಗೆ ಥರಹೇವಾರಿ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಯುಗಾದಿ ವಿಶೇಷ ರೆಸಿಪಿಗಳಲ್ಲಿ ಪಚಡಿ ಕೂಡ ಒಂದು. ಪಚಡಿ ಎಂದರೇನು, ಇದನ್ನು ತಯಾರಿಸುವುದು ಹೇಗೆ ನೋಡಿ.
ಯುಗಾದಿ ಪಚಡಿ
ಯುಗಾದಿ ಪಚಡಿ

ಹಿಂದೂಗಳ ಹೊಸ ವರ್ಷ ಯುಗಾದಿಗೆ ದಿನಗಣನೆ ಆರಂಭವಾಗಿದೆ. ಭಾರತದಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಆಪ್ತರಿಗೆ ಬೇವು ಬೆಲ್ಲ ಹಂಚುವ ಮೂಲಕ ಜೀವನದಲ್ಲಿ ಕಹಿ-ಸಿಹಿ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಎಂದು ಸಾರುವ ಹಬ್ಬ ಇದಾಗಿದೆ. ಯುಗಾದಿಯಂದು ವಿವಿಧ ಬಗೆಯ ಪಾಯಸ, ಒಬ್ಬಟ್ಟು ಬಗೆ ಬಗೆ ಅಡುಗೆಯ ಜೊತೆಗೆ ಪಚಡಿ ಎಂಬ ವಿಶೇಷ ರೆಸಿಪಿಯನ್ನೂ ತಯಾರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಇದನ್ನು ಹೆಚ್ಚು ತಯಾರಿಸುತ್ತಾರಾದರೂ ಕರ್ನಾಟಕದ ಕೆಲವು ಭಾಗದಲ್ಲೂ ಯುಗಾದಿಗೆ ಪಚಡಿ ತಯಾರಿಸುವ ಕ್ರಮವಿದೆ.

ಏನಿದು ಪಚಡಿ?

ಪಚಡಿ ಎಂಬುದು ಯುಗಾದಿಗೆಂದೇ ವಿಶೇಷವಾಗಿ ತಯಾರಿಸಲಾಗುವ ಖಾದ್ಯವಾಗಿದ್ದು, ಇದು 6 ಭಿನ್ನ ರುಚಿಯನ್ನು ಹೊಂದಿರುತ್ತದೆ. ಸಿಹಿ, ಹುಳಿ, ಉಪ್ಪು, ಮಸಾಲೆ, ಒಗರು ಹಾಗೂ ಕಹಿ ರುಚಿಯನ್ನು ಹೊಂದಿರುವ ಪಾನೀಯ ರೂಪದ ತಿನಿಸು ಇದಾಗಿದೆ. ಯುಗಾದಿಯಂದು ಮೊದಲು ಸೇವಿಸುವ ಖಾದ್ಯ ಇದಾಗಿದ್ದು, ಇದನ್ನು ದೇವರಿಗೆ ಅರ್ಪಿಸಿ, ನಂತರ ಮನೆಯವರೆಲ್ಲಾ ಹಂಚಿ ತಿನ್ನುತ್ತಾರೆ. ಬೆಲ್ಲ, ಮಾವಿನಕಾಯಿ, ಬೇವಿನ ಹೂವು, ಹುಣಸೆರಸ, ಉಪ್ಪು ಹಾಗೂ ಕಾಳುಮೆಣಸು ಹಾಕಿ ಪಚಡಿ ತಯಾರಿಸುತ್ತಾರೆ.

ಬೆಲ್ಲವು ಸಂತೋಷದ ಸಂಕೇತ, ಮಾವಿನ ಹುಳಿ ರುಚಿಯು ಬದುಕಿನ ಜೀವನದಲ್ಲಿ ಎದುರಾಗುವ ಅಚ್ಚರಿಗಳನ್ನು ಸಂಕೇತಿಸುತ್ತದೆ, ಬೇವಿನ ಎಲೆಯ ಕಹಿರುಚಿಯು ದುಃಖವನ್ನು ಪ್ರತಿನಿಧಿಸುತ್ತದೆ. ಹುಣಸೆಹಣ್ಣಿನ ಒಗರು ಅಹಿತರಕವನ್ನು ಸಂಕೇತಿಸುತ್ತದೆ. ಉಪ್ಪಿನ ರುಚಿಯು ಅಜ್ಞಾತ ಹಂತದ ಭಯವನ್ನು ಪ್ರತಿನಿಧಿಸುತ್ತದೆ. ಕಾಳುಮೆಣಸು ಕೋಪವನ್ನು ಸಂಕೇತಿಸುತ್ತದೆ, ಈ ಎಲ್ಲವೂ ಬದುಕಿನಲ್ಲಿ ಎದುರಾಗುವ ಸಾಮಾನ್ಯ ಭಾವನೆಗಳಾಗಿವೆ. ಎಲ್ಲವನ್ನೂ ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಪಚಡಿಯನ್ನು ಸೇವಿಸುತ್ತಾರೆ. ಪಚಡಿಗೆ ಕೆಲವರು ಬಾಳೆಹಣ್ಣು, ಒಣದ್ರಾಕ್ಷಿ, ಗೋಡಂಬಿ ಕೂಡ ಸೇರಿಸುತ್ತಾರೆ.

ಪಚಡಿ ರೆಸಿಪಿ

ಬೇಕಾಗುವ ಸಾಮಗ್ರಿಗಳು

ನೀರು - ಒಂದೂವರೆ ಕಪ್‌, ಮಾವಿನಕಾಯಿ- 2 ರಿಂದ 3 ಚಮಚ (ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಬೇಕು), ಬೇವಿನ ಹೂ- ಸ್ವಲ್ಪ, ಉಪ್ಪು - ರುಚಿಗೆ, ಬೆಲ್ಲ - 3ರಿಂದ 4 ಚಮಚ, ಕಾಳಮೆಣಸಿನ ಪುಡಿ - ಚಿಟಿಕೆ, ಹುಣಸೆರಸ - ಒಂದೂವರೆ ಚಮಚ.

ತಯಾರಿಸುವ ವಿಧಾನ: ಹುಣಸೆಹಣ್ಣು ನೆನೆಸಿ, ರಸ ತಯಾರಿಸಿಟ್ಟುಕೊಳ್ಳಿ. ತಾಜಾ ಬೇವಿನ ಹೂಗಳನ್ನು ಬಿಡಿಸಿ ಇಟ್ಟುಕೊಳ್ಳಿ. ಬೇವಿನ ಹೂ ದೊಡ್ಡದಿದ್ದರೆ ಚಿಕ್ಕದಾಗಿ ಹೆಚ್ಚಿಕೊಳ್ಳಬಹುದು. ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಬೆಲ್ಲದ ಪುಡಿ ಸೇರಿಸಿ, ಬೆಲ್ಲ ಕರಗುವವರೆಗೂ ಕೈಯಾಡಿಸಿ. ಈ ನೀರನ್ನು ಒಂದು ಪಾತ್ರೆಗೆ ಸೋಸಿ, ನಂತರ ಅದೇ ಪಾತ್ರೆಗೆ ಹುಣಸೆರಸವನ್ನು ಸೋಸಿ ಹಾಕಿ. ನಂತರ ಉಳಿದ ಸಾಮಗ್ರಿಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ದೇವರಿಗೆ ನೈವೇದ್ಯ ಮಾಡಿ, ನಂತರ ಮನೆಯವರೆಲ್ಲರಿಗೂ ಹಂಚಿ.

ಯುಗಾದಿ ಪಚಡಿ ಆರೋಗ್ಯಕ್ಕೂ ಉತ್ತಮ. ಇದಕ್ಕೆ ಬಳಸುವ ಎಲ್ಲಾ ಪದಾರ್ಥಗಳು ವಿಶೇಷ ಆರೋಗ್ಯ ಪ್ರಯೋಜನವನ್ನೂ ಹೊಂದಿವೆ. ನೀವು ಈ ಬಾರಿ ಯುಗಾದಿಗೆ ಈ ವಿಶೇಷ ಪಚಡಿಯನ್ನು ಮಾಡಿ ಸವಿಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ