ಅತಿಯಾಗಿ ಕೂದಲು ಉದುರೋದು, ತಲೆಹೊಟ್ಟಿನ ಸಮಸ್ಯೆಯಿಂದ ಬೇಸರವಾಗಿದ್ಯಾ? ದಾಲ್ಚಿನ್ನಿ ಎಲೆಯಲ್ಲಿದೆ ಪರಿಹಾರ, ಬಳಸುವ ವಿಧಾನ ಇಲ್ಲಿದೆ
Aug 28, 2024 03:55 PM IST
ತಲೆಹೊಟ್ಟಿನ ಸಮಸ್ಯೆಗೆ ದಾಲ್ಚಿನ್ನಿ ಎಲೆಯಲ್ಲಿದೆ ಪರಿಹಾರ
- ಇತ್ತೀಚಿನ ದಿನಗಳಲ್ಲಿ ಧೂಳು, ಹೊಗೆ, ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಕೂದಲಿಗೆ ಸಂಬಂಧಿಸಿದ ತೊಂದರೆಗಳು ಹೆಚ್ಚುತ್ತಿವೆ. ಇದರೊಂದಿಗೆ ಕೂದಲು ಉದುರುವ ಪ್ರಮಾಣವೂ ಹೆಚ್ಚಾಗಿದೆ. ಈ ಎರಡೂ ಸಮಸ್ಯೆ ನಿವಾರಣೆಗೆ ದಾಲ್ಚಿನ್ನಿ ಎಲೆಗಿಂತ ಉತ್ತಮ ಮದ್ದಿಲ್ಲ. ಕೂದಲಿನ ಸಮಸ್ಯೆಗಳ ನಿವಾರಣೆಗೆ ದಾಲ್ಚಿನ್ನಿ ಎಲೆಯನ್ನು ಹೇಗೆ ಬಳಸುವುದು ನೋಡಿ.
ವಾಯುಮಾಲಿನ್ಯ, ಕಲುಷಿತ ನೀರು, ಅಸಮರ್ಪಕ ಆಹಾರ ಪದ್ಧತಿ ಈ ಹಲವು ಕಾರಣಗಳಿಂದ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರೊಂದಿಗೆ ಕೆಲವು ಆರೋಗ್ಯ ಸಮಸ್ಯೆಗಳು ತಲೆಹೊಟ್ಟು ಹೆಚ್ಚಲು ಕಾರಣವಾಗುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು, ಮಹಿಳೆಯರು, ಪುರುಷರು ಎಲ್ಲರೂ ತಲೆಹೊಟ್ಟಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅತಿಯಾದ ತಲೆಹೊಟ್ಟು ಕೂದಲು ಉದುರಲು ಕಾರಣವಾಗುತ್ತಿದೆ. ಅಲ್ಲದೇ ತಲೆಹೊಟ್ಟು ಮೈಮೇಲೆ ಬಿದ್ದಾಗ ತುರಿಕೆ ಆರಂಭವಾಗುತ್ತದೆ. ಇದರಿಂದ ಮೊಡವೆಯಂತಹ ಸಮಸ್ಯೆಗಳು ಎದುರಾಗುತ್ತವೆ.
ತಲೆಹೊಟ್ಟಿನ ಸಮಸ್ಯೆಗಳ ನಿವಾರಣೆಗೆ ರಾಸಾಯನಿಕಗಳ ಬಳಕೆಗಿಂತ ಮನೆಮದ್ದು ಉತ್ತಮ. ದಾಲ್ಚಿನ್ನಿ ಎಲೆ ಬಳಸುವುದರಿಂದ ತಲೆಹೊಟ್ಟು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ, ಮಾತ್ರವಲ್ಲ ಕೂದಲು ಉದುರುವುದು ನಿಲ್ಲುತ್ತದೆ. ಹಾಗಾದ್ರೆ ಕೂದಲಿನ ಆರೈಕೆಗೆ ಪಲಾವ್ ಎಲೆ ಅಥವಾ ದಾಲ್ಚಿನ್ನಿ ಎಲೆ ಬಳಸುವುದು ಹೇಗೆ ನೋಡಿ.
ಬಿರಿಯಾನಿ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ಉರಿಯೂತ ನಿವಾರಕ ಗುಣಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಹಾಗಾಗಿ ತಲೆಹೊಟ್ಟು ಹೋಗಲಾಡಿಸಲು ಇದನ್ನು ಬಳಸಬಹುದು. ಇದರಿಂದ ಹೇರ್ ಮಾಸ್ಕ್ ತಯಾರಿಸಿ ತಲೆಹೊಟ್ಟು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಬಿರಿಯಾನಿ ಎಲೆಗಳು ತುರಿಕೆ, ದದ್ದು ಮತ್ತು ತಲೆಹೊಟ್ಟಿನ ಸಮಸ್ಯೆಗಳಿಂದ ಬಳಲುತ್ತಿರುವ ಎಲ್ಲರಿಗೂ ಉತ್ತಮ ಪರಿಹಾರವಾಗಿದೆ.
ದಾಲ್ಚಿನ್ನಿ ಎಲೆಯ ಮಾಸ್ಕ್ ತಯಾರಿಸುವುದು ಹೇಗೆ
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅವರಲ್ಲಿ ದಾಲ್ಚಿನ್ನಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸಂಪೂರ್ಣ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಬೇವಿನ ಎಣ್ಣೆ, ಒಂದು ಚಮಚ ಬೇವಿನರಸ, ಒಂದು ಚಮಚ ತೆಂಗಿನೆಣ್ಣೆ, ಒಂದು ಚಮಚ ಅಲೋವೆರಾ ಜೆಲ್ ಹಾಗೂ ನೆಲ್ಲಿಕಾಯಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೆತ್ತಿಯ ಭಾಗಕ್ಕೆ ಹಚ್ಚಿ ಬೆರಳುಗಳಿಂದ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ಉಗುರ ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ.
ವಾರದಲ್ಲಿ ಎರಡು ಅಥವಾ ಮೂರು ಈ ಪೇಸ್ಟ್ ಬಳಸುವುದರಿಂದ ತಲೆಹೊಟ್ಟು ಸಾಕಷ್ಟು ಕಡಿಮೆಯಾಗುತ್ತದೆ. ದಾಲ್ಚಿನ್ನಿ ಎಲೆಯ ಪೇಸ್ಟ್‌ಗೆ ತೆಂಗಿನೆಣ್ಣೆ ಸೇರಿಸುವುದರಿಂದ ಸೋಂಕಿನ ಪ್ರಮಾಣವೂ ಕಡಿಮೆಯಾಗುತ್ತದೆ.
ಇದೇ ರೀತಿ ದಾಲ್ಚಿನ್ನಿ ಎಲೆ ನೀರಿನಿಂದ ತಲೆಗೆ ಮಸಾಜ್ ಮಾಡುವುದು ಆ ನೀರಿನಲ್ಲಿ ತಲೆ ತೊಳೆಯುವುದರಿಂದ ಕೂಡ ಕೂದಲಿಗೆ ಸಂಬಂಧಿಸಿ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.