logo
ಕನ್ನಡ ಸುದ್ದಿ  /  ಜೀವನಶೈಲಿ  /  Hanuman Temple: ಸ್ತ್ರೀ ರೂಪದಲ್ಲಿ ಪೂಜಿಸಲ್ಪಡುವ ಆಂಜನೇಯ; ಛತ್ತೀಸ್‌ಗಢದ ರತನ್‌ಪುರ್‌ ಗಿರಿಜಾ ಬಂಧ್​ ದೇಗುಲಕ್ಕೆ ಇದೆ ಇತಿಹಾಸ

Hanuman Temple: ಸ್ತ್ರೀ ರೂಪದಲ್ಲಿ ಪೂಜಿಸಲ್ಪಡುವ ಆಂಜನೇಯ; ಛತ್ತೀಸ್‌ಗಢದ ರತನ್‌ಪುರ್‌ ಗಿರಿಜಾ ಬಂಧ್​ ದೇಗುಲಕ್ಕೆ ಇದೆ ಇತಿಹಾಸ

HT Kannada Desk HT Kannada

Feb 18, 2024 12:08 PM IST

google News

ಛತ್ತೀಸ್‌ಗಢದ ರತನ್‌ಪುರ್‌ ಗಿರಿಜಾ ಬಂಧ್​ ದೇಗುಲಕ್ಕೆ ಇದೆ ಇತಿಹಾಸ

  • Hanuman Temple: ಹನುಮಂತನನ್ನು ಪರಾಕ್ರಮದ ಸಂಕೇತ ಎಂದು ಪೂಜಿಸಲಾಗುತ್ತದೆ. ಆದರೆ ಆಂಜನೇಯನ ಬಗ್ಗೆ ಯಾರಿಗೂ ತಿಳಿದಿರದ ಅಚ್ಚರಿಯ ವಿಚಾರವೊಂದಿದೆ. ಛತ್ತೀಸಗಢದ ರತನ್​ಪುರದಲ್ಲಿರುವ ಗಿರಿಜಾಬಂಧ್​ ದೇವಸ್ಥಾನದಲ್ಲಿ ಆಂಜನೇಯ ದೇವತೆಯ ರೂಪದಲ್ಲಿ ಪೂಜಿಸಲ್ಪಡುತ್ತಾನೆ.

ಛತ್ತೀಸ್‌ಗಢದ ರತನ್‌ಪುರ್‌ ಗಿರಿಜಾ ಬಂಧ್​ ದೇಗುಲಕ್ಕೆ ಇದೆ ಇತಿಹಾಸ
ಛತ್ತೀಸ್‌ಗಢದ ರತನ್‌ಪುರ್‌ ಗಿರಿಜಾ ಬಂಧ್​ ದೇಗುಲಕ್ಕೆ ಇದೆ ಇತಿಹಾಸ (PC: Pixabay)

Hanuman Temple: ರಾಮನ ಪರಮ ಬಂಟ, ಬ್ರಹ್ಮಚಾರಿ, ಆಂಜನೇಯನ ಧೈರ್ಯ ಹಾಗೂ ಪರಾಕ್ರಮಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅಂಜನೇಯನನ್ನು ಪರಾಕ್ರಮದ ಸಂಕೇತವೆಂಬಂತೆ ಪೂಜಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಹನುಮಂತ ಗಂಡು ದೇವರು ಎನ್ನುವುದು ತಿಳಿದಿರುವ ವಿಚಾರವೇ. ಆದರೆ ಇಲ್ಲೊಂದು ಕಡೆ ಮಾತ್ರ ಹನುಮಂತನನ್ನು ಸ್ತ್ರೀ ರೂಪದಲ್ಲಿ ಪೂಜಿಸಲಾಗುತ್ತದೆ. ಹೌದು..! ಅಚ್ಚರಿ ಎನಿಸಿದರೂ ಈ ಮಾತು ಸತ್ಯ.

ಈ ದೇವಸ್ಥಾನ ಎಲ್ಲಿದೆ..?

ಛತ್ತೀಸಗಢದ ರತನ್​ಪುರದಲ್ಲಿರುವ ಗಿರಿಜಾಬಂಧ್​ ದೇವಸ್ಥಾನದಲ್ಲಿ ಆಂಜನೇಯ ದೇವತೆಯ ರೂಪದಲ್ಲಿ ಪೂಜಿಸಲ್ಪಡುತ್ತಾನೆ. ಅಂದರೆ ಆಂಜನೇಯನ ಬ್ರಹ್ಮಚರ್ಯದಲ್ಲಿನ ನಿಷ್ಠೆ, ಶಿಸ್ತು, ಸ್ವಯಂ ನಿಯಂತ್ರಣ ಹಾಗೂ ಶುದ್ಧತೆಯ ಸಂಕೇತ ಇದು ಎಂದು ಹೇಳಲಾಗುತ್ತದೆ. ಹೊರಭಾಗದಿಂದ ಈ ದೇವಸ್ಥಾನ ಚಿಕ್ಕದಾಗಿ ಕಂಡರೂ ಸಹ ಒಳಾಂಗಣ ಆಕರ್ಷಕವಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಕೂಡ ಆಕರ್ಷಕವಾಗಿದೆ. ಇಲ್ಲಿ ಹನುಮಂತನ ಸ್ತ್ರೀ ರೂಪದ ವಿಗ್ರಹವನ್ನು ಇರಿಸಲಾಗಿದೆ. ವರ್ಷವಿಡೀ ಈ ದೇಗುಲಕ್ಕೆ ಭಕ್ತರು ಆಗಮಿಸುತ್ತಲೇ ಇರುತ್ತಾರೆ. ಹನುಮಂತನನ್ನು ಮಹಿಳೆಯ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ದೇವಾಲಯವಿದು.

ಗಿರಿಜಾಬಂಧ್​ ಇತಿಹಾಸ

ಗಿರಿಜಾಬಂದ್​ನಲ್ಲಿ ಹನುಮಂತನ ಪ್ರತಿಷ್ಠಾಪನೆ ಆಗುವುದರ ಹಿಂದೆ ಜನಪ್ರಿಯ ಕತೆಯೊಂದಿದೆ. ಹಿಂದೆ ಪೃಥ್ವಿ ದೇವಜು ಎಂಬ ರಾಜನು ಅಸ್ವಸ್ಥಗೊಂಡಿರುತ್ತಾನೆ. ಮಹಾನ್ ಋಷಿಗಳು, ಪಂಡಿತರು, ವೈದ್ಯರು ಹೀಗೆ ಯಾರೇ ಪ್ರಯತ್ನಪಟ್ಟರೂ ರಾಜನ ಅಸ್ವಸ್ಥತೆಯನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಒಂದು ದಿನ ಆಂಜನೇಯ ರಾಜನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ. ನನ್ನ ಹೆಸರನ್ನು ಧ್ಯಾನಿಸುತ್ತಾ ಹಾಗೂ ನನಗಾಗಿ ಒಂದು ದೇಗುಲ ನಿರ್ಮಿಸಬೇಕು ಎಂದು ಹೇಳಿದ್ದನಂತೆ. ಇದಾದ ಬಳಿಕ ರಾಜನು ಹನುಮಂತನಿಗಗಾಗಿ ಈ ದೇವಾಲಯ ನಿರ್ಮಿಸಿದನು ಎನ್ನಲಾಗಿದೆ.

ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಂಜನೇಯ ಮತ್ತೊಮ್ಮೆ ರಾಜನ ಕನಸಿನಲ್ಲಿ ಬರುತ್ತಾನೆ. ಈ ಬಾರಿ ಆಂಜನೇಯನು ದೇಗುಲದ ಸಮೀಪದಲ್ಲೇ ನನ್ನ ವಿಗ್ರಹವಿದ್ದು ಅದನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವಂತೆ ಹೇಳುತ್ತಾನೆ. ಅಂತೆಯೇ ರಾಜನು ಆ ಕೆಲಸವನ್ನು ಮಾಡುತ್ತಾನೆ. ಆಶ್ಚರ್ಯಕರ ವಿಚಾರ ಏನೆಂದರೆ ಹೊಳೆಯಲ್ಲಿ ಸಿಕ್ಕ ವಿಗ್ರಹದಲ್ಲಿ ಹನುಮಂತನು ಮಹಿಳೆಯ ರೂಪದಲ್ಲಿರುತ್ತಾನೆ. ಆದರೆ ಹನುಮಂತನೇ ಕನಸಿನಲ್ಲಿ ಬಂದು ಈ ಮಾತನ್ನು ಹೇಳಿದ್ದರಂದ ರಾಜನು ಅದೇ ಮೂರ್ತಿಯನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಿದನು. ಇದಾದ ಬಳಿಕ ರಾಜನಿಗೆ ಬಂದಿದ್ದ ಕಾಯಿಲೆ ಕೂಡ ವಾಸಿಯಾಗುತ್ತದೆ. ಅಂದಿನಿಂದ ಗಿರಿಜಾಬಂಧ್​ ದೇಗುಲವು ಗಂಭೀರ ಕಾಯಿಲೆಗಳನ್ನು ಗುಣಪಡಿಸುವ ಸ್ಥಳ ಎಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು ಇಲ್ಲಿ ಭೇಟಿ ನೀಡಿದರೆ ಶೀಘ್ರದಲ್ಲೇ ಗುಣಮುಖರಾಗುತ್ತಾರೆ ಎಂಬ ನಂಬಿಕೆಯಿದೆ.

ಹನುಮಂತನ ಪೂಜೆ ಹೇಗಿರಬೇಕು..?

ಹನುಮಂತನಿಗೆ ಮಂಗಳವಾರ ಶ್ರೇಷ್ಠಕರ ವಾರವೆಂದು ಪರಿಗಣಿಸಲಾಗಿದೆ. ಶನಿಯಿಂದ ಉಂಟಾದ ಬಾಧೆಗಳಿಂದ ಪಾರಾಗಲು ಆಂಜನೇಯನನ್ನು ಆರಾಧಿಸಬೇಕು ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಶನಿಯ ದುಷ್ಟ ಶಕ್ತಿಗೆ ಬೀಳದವರಲ್ಲಿ ಆಂಜನೇಯ ಕೂಡ ಒಬ್ಬ. ಹೀಗಾಗಿ ಆಂಜನೇಯನನ್ನು ಆರಾಧಿಸಿದರೆ ಶನಿ ಕಾಟದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ. ಹನುಮಾನ್​ ಚಾಲೀಸಾ ನಿತ್ಯ ಪಠಿಸುವವರ ಎಲ್ಲಾ ಸಂಕಷ್ಟಗಳು ದೂರಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಅಲ್ಲದೇ ರಾಮನಾಮ ಜಪಿಸುವವರಿಗೂ ಆಂಜನೇಯನ ಕೃಪೆ ಇರುತ್ತದೆ ಎಂದು ಹೇಳಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ