ಶ್ವಾನಪ್ರಿಯರಿಗೆ ಆಘಾತಕಾರಿ ಸುದ್ದಿ : ಸಾಕುಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ ನಿಗೂಢ ಉಸಿರಾಟ ಸಂಬಂಧಿ ಕಾಯಿಲೆ
Nov 30, 2023 05:14 PM IST
ಸಾಂಕೇತಿಕ ಚಿತ್ರ
- ಪ್ರೀತಿಯಿಂದ ಸಾಕುವ ಶ್ವಾನಗಳಿಗೆ ಏನಾದರೂ ಆದರೆ ಜೀವವೇ ಹೋದಂತಾಗುತ್ತದೆ. ಆದರೆ ಇದೀಗ ಶ್ವಾನಗಳಲ್ಲಿ ಉಸಿರಾಟ ಸಂಬಂಧಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಳ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಂಶೋಧಕರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಶ್ವಾನ ಪೋಷಕರಿಗೆ ಆತಂಕ ತಂದಿದೆ.
ಮನೆಗೆ ಒಂದು ಸಾಕು ಪ್ರಾಣಿಯನ್ನು ತಂದರೆ ಸಾಕು. ಕಾಲ ಕಳೆದಂತೆ ಅವು ಮನೆಯ ಮಕ್ಕಳಂತೆ ಇದ್ದುಬಿಡುತ್ತವೆ. ಪ್ರಾಣಿ ಪೋಷಕರಿಗೆ ತಮ್ಮ ನೆಚ್ಚಿನ ಪ್ರಾಣಿಯನ್ನು ಕಳೆದುಕೊಳ್ಳುವುದು ಅಂದರೆ ಒಂದು ರೀತಿಯಲ್ಲಿ ದುಸ್ವಪ್ನವಿದ್ದಂತೆ. ಆದರೆ ಇದೀಗ ಶ್ವಾನಗಳಲ್ಲಿ ನಿಗೂಢವಾದಂತಹ ಉಸಿರಾಟದ ಕಾಯಿಲೆಯೊಂದು ಶುರುವಾಗಿದೆ ಎಂದು ಹೇಳಲಾಗುತ್ತಿದ್ದು ಈವರೆಗೆ ಅಮೆರಿಕದ 14 ರಾಜ್ಯಗಳಿಗೆ ಈ ಕಾಯಿಲೆ ವ್ಯಾಪಿಸಿದೆ ಎನ್ನಲಾಗಿದೆ. ಅಮೆರಿಕದ ವೆಟರ್ನರಿ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಪ್ರಯೋಗಾಲಯಗಳಲ್ಲಿ ಶ್ವಾನಗಳಲ್ಲಿ ಕಂಡು ಬರುತ್ತಿರುವ ಈ ವಿಚಿತ್ರ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎನ್ನಲಾಗಿದೆ. ಈ ಕಾಯಿಲೆಯು ವೈರಸ್ನಿಂದ ಬರುತ್ತಿರಬಹುದೇ ಅಥವಾ ಬ್ಯಾಕ್ಟೀರಿಯಾಗಳು ಕಾರಣವೇ ಎಂಬುದರ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ. ಈ ನಡುವೆ ಸಂಶೋಧಕರು ಶ್ವಾನಗಳಲ್ಲಿ ಈ ಹಿಂದೆ ಕಾಣಿಸಿಕೊಳ್ತಿದ್ದ ಕೆನೆಲ್ ಕಫ್ ಅಥವಾ ದವಡೆ ಕೆಮ್ಮಿನ ರೂಪಾಂತರ ಆಗಿರಬಹುದೇ ಎಂದು ಶಂಕಿಸುತ್ತಿದ್ದಾರೆ .
ಕಾಯಿಲೆಯ ಲಕ್ಷಣಗಳು ಹೀಗಿವೆ
ಈ ಕಾಯಿಲೆಗೆ ತುತ್ತಾದ ಶ್ವಾನಗಳು ನಾಲ್ಕರಿಂದ ಆರು ವಾರಗಳ ಕೆಮ್ಮಿನಿಂದ ಬಳಲುತ್ತವೆ. ಇದು ಸೌಮ್ಯವಾಗಿ ಕೊನೆಗೊಳ್ಳಬಹುದು ಅಥವಾ ನ್ಯುಮೋನಿಯಾಕ್ಕೆ ಕೂಡ ತಿರುಗಬಹುದು. ಕೆಲವು ಪ್ರಕರಣಗಳಲ್ಲಿ ಈ ಸೋಂಕು ತಗುಲಿದ ಕೇವಲ 24 ರಿಂದ 36 ಗಂಟೆಗಳಲ್ಲಿ ಶ್ವಾನಗಳು ನ್ಯೂಮೋನಿಯಾಗೆ ತುತ್ತಾಗಿವೆ ಎನ್ನಲಾಗಿದೆ .ಅದೃಷ್ಟವಶಾತ್ ಇಲ್ಲಿಯವರೆಗೆ ಈ ಕಾಯಿಲೆಯು ಶ್ವಾನದಿಂದ ಮನುಷ್ಯರಿಗೆ ಹರಡಿದ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಶ್ವಾನಗಳನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಅಥವಾ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಸಂದರ್ಭಗಳಲ್ಲಿ ಜಾಗೃತೆವಹಿಸುವಂತೆ ಸೂಚನೆ ನೀಡಲಾಗಿದೆ. .
ಸದ್ಯ ಈ ಕಾಯಿಲೆಯು ಅಮೆರಿಕದಲ್ಲಿ ಮಾತ್ರ ಕಾಣಿಸಿಕೊಳ್ತಿದ್ದು ಮುಂದಿನ ದಿನಗಳಲ್ಲಿ ಇದು ವಿವಿಧ ದೇಶಗಳಿಗೂ ಹರಡುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಪಶುವೈದ್ಯರಾದ ರೆನಾ ಕಾರ್ಲ್ಸನ್ ಈ ವಿಚಾರವಾಗಿ ಮಾತನಾಡಿದ್ದು, ಈ ಕಾಯಿಲೆಯು ಶ್ವಾನಗಳಲ್ಲಿ ಏಕಾಏಕಿಯಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಸದ್ಯಕ್ಕೆ ಇದನ್ನೊಂದು ವಿಲಕ್ಷಣ ಕಾಯಿಲೆ ಅಂತಾ ಕರೆಯಬಹುದು. ಮುಂದಿನ ದಿನಗಳಲ್ಲಿ ಸಂಶೋಧನೆಗಳ ವರದಿಯನ್ನು ಆಧರಿಸಿ ಈ ನಿಗೂಢ ಕಾಯಿಲೆಯ ಹಿಂದಿನ ಕಾರಣವನ್ನು ಕಂಡುಕೊಳ್ಳುತ್ತೇವೆ. ಇದು ಬೇರೆ ಜಾತಿಯ ಪ್ರಾಣಿಗಳಿಗೂ ಹರಡಬಹುದೇ ಎಂಬುದರ ಬಗ್ಗೆಯೂ ನಮಗೆ ಸದ್ಯಕ್ಕೆ ಮಾಹಿತಿಯಿಲ್ಲ. ಸದ್ಯಕ್ಕೆ ಮನುಷ್ಯರು ಹಾಗೂ ಬೆಕ್ಕುಗಳಲ್ಲಿ ಈ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ಹೇಳಿದ್ದಾರೆ.
ವಿಭಾಗ