logo
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ಬೇಗ ಏಳುವುದಕ್ಕಿಂತ ತಡವಾಗಿ ಏಳುವುದು ಉತ್ತಮವೇ: ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ

ಬೆಳಗ್ಗೆ ಬೇಗ ಏಳುವುದಕ್ಕಿಂತ ತಡವಾಗಿ ಏಳುವುದು ಉತ್ತಮವೇ: ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ

Priyanka Gowda HT Kannada

Oct 14, 2024 08:36 AM IST

google News

ಬೆಳಗಿನ ಜಾವ ಎದ್ದೇಳುವುದಕ್ಕಿಂತ ತಡವಾಗಿ ಎದ್ದೇಳುವುದು ಉತ್ತಮ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.

  • ಬೆಳಗಿನ ಜಾವ ಎದ್ದೇಳುವುದಕ್ಕಿಂತ ತಡವಾಗಿ ಎದ್ದೇಳುವುದು ಉತ್ತಮ ಎಂದು ಸಂಶೋಧನಾ ವರದಿಯಲ್ಲಿ ತಿಳಿದುಬಂದಿದೆ. ಅಧ್ಯಯನದ ಪ್ರಕಾರ, ರಾತ್ರಿ ಓದಿದವರ ಅರಿವಿನ ಕಾರ್ಯ ಉತ್ತಮವಿರುತ್ತದೆ ಎಂದು ಪರಿಗಣಿಸಲಾಗಿದೆ. ಆದರೆ, ಮಧ್ಯರಾತ್ರಿ 12 ಗಂಟೆಯ ಮುನ್ನ ಮಲಗುವುದು ಉತ್ತಮ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಬೆಳಗಿನ ಜಾವ ಎದ್ದೇಳುವುದಕ್ಕಿಂತ ತಡವಾಗಿ ಎದ್ದೇಳುವುದು ಉತ್ತಮ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
ಬೆಳಗಿನ ಜಾವ ಎದ್ದೇಳುವುದಕ್ಕಿಂತ ತಡವಾಗಿ ಎದ್ದೇಳುವುದು ಉತ್ತಮ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ. (Canva)

ಉತ್ತಮ ಆರೋಗ್ಯಕ್ಕೆ ನಿದ್ದೆಯೂ ದಿವ್ಯೌಷಧಿ ಎಂದು ತಜ್ಞ ವೈದ್ಯರು ಹೇಳುತ್ತಾರೆ. ನಿದ್ದೆಯ ಗುಣಮಟ್ಟ ಚೆನ್ನಾಗಿ ಆದರೆ, ಆರೋಗ್ಯವೂ ಉತ್ತಮವಿರುತ್ತದೆ. ವೈದ್ಯರು ಮಾತ್ರವಲ್ಲ ನಮ್ಮ ಹಿರಿಯರೂ ಕೂಡ ಬಹಳ ಹಿಂದಿನಿಂದಲೂ ಈ ಮಾತನ್ನು ಹೇಳುತ್ತಾ ಬಂದಿದ್ದಾರೆ. ಇದಕ್ಕಾಗಿ ಭಾರತದಲ್ಲಿ ಮಕ್ಕಳನ್ನು ಪೋಷಕರು ರಾತ್ರಿ ಬೇಗ ಮಲಗಿಸಿ ಬೆಳಗ್ಗೆ ಬೇಗ ಎದ್ದೇಳಿಸುವ ಪ್ರಯತ್ನ ಮಾಡುತ್ತಾರೆ. ಮಕ್ಕಳು ಬೆಳಗ್ಗೆ ಬೇಗ ಎದ್ದೇಳುವುದು ಉತ್ತಮ ಎಂಬುದು ಬಹುತೇಕ ಹಿರಿಯರು ಹೇಳುವ ಮಾತು. ಬಹುಷಃ ನೀವು ಚಿಕ್ಕವರಿದ್ದಾಗ ಮನೆಯಲ್ಲಿ ನಿಮ್ಮನ್ನೂ ಬೆಳಗ್ಗೆ ಬೇಗ ಎಬ್ಬಿಸುತ್ತಿದ್ದಿರಬಹುದು. ಅದರಲ್ಲೂ ಮುಂಜಾನೆ ಎದ್ದು ಓದಿದರೆ ಬೇಗ ಅರ್ಥವಾಗುತ್ತದೆ, ಓದಿದ್ದು ನೆನಪಿರುತ್ತದೆ ಎಂದೆಲ್ಲಾ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕಾಗಿ ತಮ್ಮ ಮಕ್ಕಳನ್ನು ಬೆಳಗ್ಗೆ ಬೇಗ ಎದ್ದೇಳಿಸಲು ಮುಂದಾಗುತ್ತಾರೆ. ಆದರೆ, ಇದೀಗ ಹೊಸ ಅಧ್ಯಯನವೊಂದರಲ್ಲಿ ಬೆಳಗಿನ ಜಾವ ಎದ್ದೇಳುವುದಕ್ಕಿಂತ ತಡವಾಗಿ ಎದ್ದೇಳುವುದು ಉತ್ತಮ ಎಂದು ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ, ರಾತ್ರಿ ಓದಿದವರ ಅರಿವಿನ ಕಾರ್ಯ ಉತ್ತಮವಿರುತ್ತದೆ ಎಂದು ಪರಿಗಣಿಸಲಾಗಿದೆ. 26,000 ಜನರ ಮೇಲೆ ಸಂಶೋಧನೆ ನಡೆಸಿದ ಸಂಶೋಧಕರ ತಂಡವು ತಡವಾಗಿ ಎಚ್ಚರಗೊಳ್ಳುವವರು ಬುದ್ಧಿವಂತಿಕೆ ಮತ್ತು ನೆನಪಿನ ಶಕ್ತಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂದು ಕಂಡುಹಿಡಿದಿದೆ.

ಇಂದಿನ ಬ್ಯುಸಿ ಜೀವನದಲ್ಲಿ, ವೃತ್ತಿಪರ ಬದ್ಧತೆಗಳು ಅಥವಾ ಜೀವನಶೈಲಿಯಿಂದಾಗಿ ಜನರು ವಿಭಿನ್ನ ನಿದ್ದೆಯ ವೇಳಾಪಟ್ಟಿಯನ್ನು ಹೊಂದಿದ್ದಾರೆ. ನಮ್ಮ ದೇಹವು ನೈಸರ್ಗಿಕ ಸಿರ್ಕಾಡಿಯನ್ ರಿದಮ್‌ಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುವ ದೇಹದ ನೈಸರ್ಗಿಕ ಸಿರ್ಕಾಡಿಯನ್‍ ರಿದಮ್‍ಗೆ ಅನುಗುಣವಾಗಿ ಮಧ್ಯರಾತ್ರಿ 12 ಗಂಟೆಯ ಮುನ್ನ ಮಲಗುವುದು ಉತ್ತಮ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ನಿದ್ದೆಯ ವಿಚಾರದಲ್ಲಿ ತಜ್ಞರು ಹೇಳುವುದೇನು?

ಹಾರ್ಮೋನ್ ಪ್ರಭಾವ: ನಿದ್ರೆಯ ಹಾರ್ಮೋನ್ ಮೆಲಟೋನಿನ್ ರಾತ್ರಿ ವೇಳೆಗೆ ಪ್ರತಿಕ್ರಿಯೆಯಾಗಿ ಸ್ರವಿಸುತ್ತದೆ. ಆದರೆ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್, ಬೆಳಿಗ್ಗೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ನಿದ್ರೆಯ ಗುಣಮಟ್ಟದ ಅಡ್ಡಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಅರಿವಿನ ಕಾರ್ಯ: ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ಅರಿವಿನ ಕಾರ್ಯಕ್ಷಮತೆಯು ದಿನವಿಡೀ ಬದಲಾಗಬಹುದು. ರಾತ್ರಿ ವೇಳೆ ಎಚ್ಚರವಾಗಿರುವ ಗೂಬೆಗಳು ತೀಕ್ಷ್ಣವಾದ ಅರಿವಿನ ಕಾರ್ಯವನ್ನು ಹೊಂದಿರಬಹುದು. ಇದೇ ರೀತಿ ಬಹಳಷ್ಟು ಮಂದಿ ರಾತ್ರಿ ವೇಳೆ ಅರಿವಿನ ಕಾರ್ಯವನ್ನು ಹೆಚ್ಚಿಸಬಹುದು.

ನಿದ್ರೆಯ ಗುಣಮಟ್ಟ: ನಿದ್ದೆಯ ಗುಣಮಟ್ಟವು ನಿರ್ಣಾಯಕವಾಗಿದೆ. ರಾತ್ರಿ ತುಂಬಾ ತಡವಾಗಿ ಮಲಗುವುದು ಕೂಡ ಅಷ್ಟು ಉತ್ತಮವಲ್ಲ. ರಾತ್ರಿ ವೇಳೆಯ ಸರಾಸರಿ ನಿದ್ದೆಯು ಕನಿಷ್ಠ 7 ರಿಂದ 9 ಗಂಟೆಗಳ ಅವಧಿ ಇರಬೇಕು.

ತಡವಾಗಿ ಮಲಗುವುದರ ಆರೋಗ್ಯ ಸಮಸ್ಯೆಗಳು

ಮಾನಸಿಕ ಆರೋಗ್ಯ: ರಾತ್ರಿ ತುಂಬಾ ತಡವಾಗಿ ಮಲಗುವುದು ಅಷ್ಟು ಒಳ್ಳೆಯದಲ್ಲ. ಇದು ಹೆಚ್ಚಿನ ಆತಂಕ ಮತ್ತು ಖಿನ್ನತೆಗೆ ಸಂಬಂಧಿಸಿರಬಹುದು. ಆದರೂ ಜೀವನಶೈಲಿಯ ಅಂಶಗಳು ಇಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ದೈಹಿಕ ಆರೋಗ್ಯ: ಅನಿಯಮಿತ ನಿದ್ದೆಯ ಮಾದರಿಗಳು ಚಯಾಪಚಯ ಸಮಸ್ಯೆಗಳು, ತೂಕ ಹೆಚ್ಚಾಗುವುದು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಿದ್ದೆಯ ವೇಳಾಪಟ್ಟಿಯನ್ನು ರಚಿಸುವುದು ಸೂಕ್ತ.

ಅಂತಿಮವಾಗಿ, ತಡವಾಗಿ ಏಳುವುದು ಉತ್ತಮ ಎಂಬುದು ನಿಮ್ಮ ವೈಯಕ್ತಿಕ ನಿದ್ದೆಯ ವೇಳಾಪಟ್ಟಿ, ಜೀವನಶೈಲಿ ಮತ್ತು ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ನಿದ್ದೆಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ