Ghee Benifits: ಹಸುವಿನ ತುಪ್ಪಕ್ಕೆ ಈ ಪದಾರ್ಥಗಳನ್ನು ಸೇರಿಸಿದರೆ ಕರುಳಿನ ಆರೋಗ್ಯಕ್ಕೆ ಸಹಕಾರಿ, ತುಪ್ಪ ಬೇಕಾ ತುಪ್ಪ ಎಂದಾಗ ಬೇಕು ಎನ್ನಿ
Aug 31, 2023 11:04 AM IST
ಹಸುವಿನ ತುಪ್ಪಕ್ಕೆ ಈ ವಸ್ತುಗಳನ್ನು ಸೇರಿಸಿದರೆ ಕರುಳಿನ ಆರೋಗ್ಯಕ್ಕೆ ಸಹಕಾರಿ
- Ghee for Gut health: ತುಪ್ಪಕ್ಕೆ ವಿವಿಧ ಪದಾರ್ಥಗಳನ್ನು ಸೇರಿಸಿ ಸೇವಿಸಿದರೆ ಆರೋಗ್ಯ ಪ್ರಯೋಜನ ಹೆಚ್ಚು. ತುಪ್ಪಕ್ಕೆ ಅರಿಶಿನ, ಶುಂಠಿ, ಜೀರಿಗೆ, ಇಂಗು, ಏಲಕ್ಕಿ, ಸೋಂಪು, ಕಾಳುಮೆಣಸು ಇತ್ಯಾದಿಗಳನ್ನು ಸೇರಿಸಿ ಸೇವಿಸಿದರೆ ಏನೆಲ್ಲ ಪ್ರಯೋಜನಗಳು ಇವೆ ಎಂದು ನೋಡೋಣ.
ಬೆಣ್ಣೆಯಿಂದ ತೆಗೆದ ತುಪ್ಪ ಭಾರತೀಯ ಅಡುಗೆಗಳಲ್ಲಿ ಬಳಸುವ ಸಾಮಾನ್ಯ ವಸ್ತು. ಆಯುರ್ವೇದ ಔಷಧಿಗಳಲ್ಲಿಯೂ ತುಪ್ಪ ಬಳಸಲಾಗುತ್ತದೆ. ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳನ್ನು ತುಪ್ಪ ಹೊಂದಿದೆ. ಕೇವಲ ತುಪ್ಪವನ್ನು ಹಾಗೆಯೇ ಸೇವಿಸುವ ಬದಲು ತುಪ್ಪಕ್ಕೆ ಕೆಲವೊಂದು ಪದಾರ್ಥಗಳನ್ನು ಸೇರಿಸುವ ಮೂಲಕ ತುಪ್ಪದ ಪ್ರಯೋಜನವನ್ನು ಹೆಚ್ಚಿಸಿಕೊಳ್ಳಬಹುದು. ಇದು ಕರುಳಿನ ಆರೋಗ್ಯ ಹೆಚ್ಚಿಸಿಕೊಳ್ಳಲು ಸಹಕಾರಿ. ತುಪ್ಪಾ ಬೇಕಾ ತುಪ್ಪ ಎಂಬ ಹಾಡು ಕೇಳಿದಾಗ ಹಸುವಿನ ತುಪ್ಪವನ್ನು ನೆನಪಿಸಿಕೊಳ್ಳಿ, ಅದಕ್ಕೆ ವಿವಿಧ ಪದಾರ್ಥಗಳನ್ನು ಸೇರಿಸಿದರೆ ದೊರಕುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ತುಪ್ಪಕ್ಕೆ ಅರಿಶಿನ ಸೇರಿಸಿ
ಕರ್ಕ್ಯುಮಿನ್ ಎಂದು ಕರೆಯಲ್ಪಡುವ ಅರಿಶಿನವನ್ನು ತುಪ್ಪಕ್ಕೆ ಸೇರಿಸಿ ಸೇವಿಸಿದರೆ ಹಲವು ಪ್ರಯೋಜನಗಳಿವೆ. ಉರಿಯೂತ ಶಮನ ಮಾಡಲು ಸಹಕಾರಿ. ಇದು ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಪೂರಕವಾಗಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ತುಪ್ಪ ಮತ್ತು ಶುಂಠಿ
ತುಪ್ಪಕ್ಕೆ ಶುಂಠಿ ಸೇರಿಸಿದರೆ ಅದು ಉರಿಯೂತ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ. ಜೀರ್ಣಾಂಗ ಶಮನಕಾರಿಯಾಗಿ ವರ್ತಿಸುತ್ತದೆ. ಅಜೀರ್ಣದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇಂಗು ಮತ್ತು ತುಪ್ಪ
ತುಪ್ಪಕ್ಕೆ ಇಂಗು ಸೇರಿಸಿ ಸೇವಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ಇದು ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ. ಇದು ದೇಹದ ವಾಯುವನ್ನು ಕಡಿಮೆ ಮಾಡುತ್ತದೆ. ಸಾಂಪ್ರದಾಯಿಕ ಔಷಧಗಳಲ್ಲಿ ಇಂಗಿನ ಬಳಕೆ ಹೆಚ್ಚಿದೆ. ಕರುಳಿನ ಆರೋಗ್ಯ ಉತ್ತಮಪಡಿಸಲು ಸಹಕಾರಿ.
ಏಲಕ್ಕಿ
ತುಪ್ಪಕ್ಕೆ ಏಲಕ್ಕಿ ಸೇರಿಸಿದರೆ ಹಲವು ಪ್ರಯೋಜನಗಳಿವೆ. ಅಜೀರ್ಣ, ಗ್ಯಾಸ್, ಉಬ್ಬುವಿಕೆ ಇತ್ಯಾದಿ ಜೀರ್ಣಕ್ರಿಯೆ ತೊಂದರೆಗಳನ್ನು ನಿವಾರಿಸಲು ಉಪಯುಕ್ತ. ಏಲಕ್ಕಿಯಲ್ಲಿರುವ ಅಂಶಗಳು ಉರಿಯೂತದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
ತುಪ್ಪ ಮತ್ತು ಕಾಳುಮೆಣಸು
ತುಪ್ಪಕ್ಕೆ ಕಾಳುಮೆಣಸು ಸೇರಿಸಿ ಸೇವಿಸಿದರೆ ಸಾಕಷ್ಟು ಪ್ರಯೋಜನಗಳಿವೆ. ಕರಿಮೆಣಸಿನಲ್ಲಿ ಪೈಪರಿನ್ ಇರುತ್ತದೆ. ಇದು ದೇಹವು ಸಮರ್ಪಕವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವು ನೀಡುತ್ರದೆ. ಉರಿಯೂತದ ಪರಿಣಾಮ ಕಡಿಮೆ ಮಾಡುತ್ತದೆ.
ತುಪ್ಪ ಮತ್ತು ಸೋಂಪು
ಪರಿಮಳಯುಕ್ತ ಸೋಂಪು ಬಹುತೇಕರಿಗೆ ಇಷ್ಟ. ಇದನ್ನು ತುಪ್ಪಕ್ಕೆ ಸೇರಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೊಟ್ಟೆಯ ಉಬ್ಬರಿಸುವಿಕೆ ಕಡಿಮೆ ಮಾಡುತ್ತದೆ. ಒಟ್ಟಾರೆ ಜೀರ್ಣ ವ್ಯವಸ್ಥೆ ಉತ್ತಮಪಡಿಸಿಕೊಳ್ಳಲು ಸಹಕಾರಿ. ಜಠರಕರುಳಿನ ಸ್ನಾಯುಗಳಿಗೆ ರಿಲಾಕ್ಸ್ ಅನುಭವ ನೀಡುತ್ತದೆ.
ಜೀರಿಗೆ ಮತ್ತು ತುಪ್ಪ
ತುಪ್ಪಕ್ಕೆ ಜೀರಿಗೆ ಸೇರಿಸುವ ಮೂಲಕ ಹಲವು ಆರೋಗ್ಯ ಪ್ರಯೋಜನ ಪಡೆಯಬಹುದು. ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣವಿದೆ. ಗ್ಯಾಸ್ ಮತ್ತು ಹೊಟ್ಟೆಯ ಉಬ್ಬುವಿಕೆ ಕಡಿಮೆಮಾಡಿಕೊಳ್ಳಲು ಸಹಕಾರಿ.