ಅಲ್ಝೈಮರ್ ಕಾಯಿಲೆಯ ಈ ಆರಂಭಿಕ ಲಕ್ಷಣಗಳನ್ನು ಎಂದಿಗೂ ಕಡೆಗಣಿಸದಿರಿ, ಇಳಿ ವಯಸ್ಸಿಗೆ ಶಾಪವಾಗಬಹುದು ಮರೆವಿನ ಸಮಸ್ಯೆ
Oct 04, 2024 05:45 PM IST
ಅಲ್ಝೈಮರ್ ಸಮಸ್ಯೆಯ ಆರಂಭಿಕ ಲಕ್ಷಣಗಳು
- ವಯಸ್ಸು 60 ದಾಟುತ್ತಿದ್ದಂತೆ ನಿಧಾನಕ್ಕೆ ಮರೆವಿನ ಸಮಸ್ಯೆಗಳು ಎದುರಾಗುತ್ತವೆ. ಇದು ಸಹಜವಾದರೂ ಅತಿಯಾದ ಮರೆವು ಖಂಡಿತ ಒಳ್ಳೆಯದಲ್ಲ. ಇಳಿವಯಸ್ಸಿನವರನ್ನ ಕಾಡುವ ಮರೆವಿನ ಸಮಸ್ಯೆಗೆ ಅಲ್ಝೈಮರ್ಸ್ ಕಾಯಿಲೆ ಎನ್ನುತ್ತಾರೆ. ಇದು ವಯಸ್ಸಾದ ಮೇಲೆ ಶಾಪವಾಗಬಹುದು, ಇದನ್ನ ಆರಂಭದಲ್ಲೇ ಗುರುತಿಸಿ ಪರಿಹರಿಸಿಕೊಳ್ಳುವುದು ಉತ್ತಮ.
ವಯಸ್ಸಾದ ಬರುವ ಸಮಸ್ಯೆಗಳಲ್ಲಿ ಮರೆವಿನ ಕಾಯಿಲೆಯು ಒಂದು. ನಿರ್ದಿಷ್ಟ ವಯಸ್ಸಿಗೆ ಕಾಲಿಟ್ಟ ನಂತರ ಮರೆಗುಳಿತನ ಸಾಮಾನ್ಯ ಅಂತಾದ್ರೂ ಅದು ಅತಿಯಾಗಿ ಅಲ್ಝೈಮರ್ ಎನ್ನುವ ಕಾಯಿಲೆಗೆ ಕಾರಣವಾಗುತ್ತದೆ. ಇದು ಕೇವಲ ಮಾನಸಿಕ ಸಮಸ್ಯೆಯನ್ನಷ್ಟೇ ಅಲ್ಲ, ದೈಹಿಕವಾಗಿಯೂ ಹಲವು ತೊಂದರೆಗಳು ಉಂಟಾಗುವಂತೆ ಮಾಡುತ್ತದೆ. ಆದರೆ ಇದನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು. ಅಲ್ಝೈಮರ್ ಸಮಸ್ಯೆಯಿಂದ ವ್ಯಕ್ತಿಯು ಸಾಮಾಜಿಕ ತೊಂದರೆಗಳನ್ನೂ ಎದುರಿಸಬೇಕಾಗಬಹುದು. ಆರಂಭದಲ್ಲಿ ಸಹಜ ಲಕ್ಷಣಗಳನ್ನ ಹೊಂದಿರುವ ಈ ಕಾಯಿಲೆಯು ನಂತರದ ದಿನಗಳಲ್ಲಿ ಗಂಭೀರವಾಗಬಹುದು.
ಅಲ್ಝೈಮರ್ ಸಮಸ್ಯೆಯ ಲಕ್ಷಣಗಳು
ಅಲ್ಝೈಮರ್ ಕಾಯಿಲೆಯು ಮರೆಗುಳಿತನದ ಸಾಮಾನ್ಯ ಕಾರಣವಾಗಿದ್ದು, ಸುಮಾರು ಶೇ 60 ರಿಂದ 80ರಷ್ಟು ಡೆಮೆನ್ಷಿಯಾ ಪ್ರಕರಣಗಳಿಗೆ ಪ್ರಾಥಮಿಕ ಕಾರಣವಾಗಿದೆ. ಇದು ಅರಿವಿನ ಕ್ಷೀಣತೆ, ನೆನಪಿನ ಸಮಸ್ಯೆ ಮತ್ತು ಗೊಂದಲಗಳಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅಲ್ಝೈಮರ್ ಕಾಯಿಲೆ ಮರೆತು ಹೋಗುವ ಕಾಯಿಲೆ ಎಂದುಕೊಳ್ಳುತ್ತಾರೆ. ಆದರೆ ಇದು ಪ್ರಾಣಾಪಾಯವನ್ನೂ ಉಂಟು ಮಾಡಬಹುದು ಎಂಬುದು ಹಲವರಿಗೆ ತಿಳಿದಿಲ್ಲ.
ಅಲ್ಝೈಮರ್‌ಗೆ ಕಾರಣವಾಗುವ ಪ್ರಮುಖ ಅಂಶಗಳು
ಈ ಕಾಯಿಲೆಗೆ ಅನುವಂಶಿಕ (ಜೆನೆಟಿಕ್) ಮತ್ತು ಅನುವಂಶಿಕ ಅಲ್ಲದ ಅಂದರೆ ಪರಿಸರ ಮತ್ತು ಜೀವನಶೈಲಿ ಸಂಬಂಧಿತ ಅಂಶಗಳು ಕಾರಣವಾಗಬಹುದು. ಈ ರೋಗದ ಮೂಲ ನರಕೋಶ ಸಂವಹನದಲ್ಲಿ ಅಡ್ಡಿಯಾಗುವುದು. ಅಮೈಲೋಯ್ಡ್ ಬೀಟಾ ಪೆಪ್ಟೈಡ್ಸ್ ಎಂದು ಕರೆಯಲ್ಪಡುವ ಪ್ರೊಟೀನ್‌ಗಳ ಅಧಿಕ ಉತ್ಪಾದನೆ ಅಥವಾ ಕಡಿಮೆ ವಿಸರ್ಜನೆಯು ನರಕೋಶಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಸಂಶೋದನೆಗಳು ಹೇಳುತ್ತವೆ.
ಅಲ್‌ಝೈಮರ್‌ಗೆ ಕಾರಣವಾಗುವ ಇನ್ನಿತರ ಅಪಾಯಕಾರಿ ಅಂಶಗಳು
ವಯಸ್ಸು, ಅಲ್ಝೈಮರ್ ಕಾಯಿಲೆಯ ಅನುವಂಶಿಕ ಇತಿಹಾಸ ಮತ್ತು ಮೆದುಳಿನಲ್ಲಿ ಅಮಿಲಾಯ್ಡ್‌ನ ಮೇಲೆ ಪರಿಣಾಮ ಬೀರುವ ವಂಶವಾಹಿಗಳಲ್ಲಿನ ಕೆಲವು ರೂಪಾಂತರಗಳು ಮತ್ತು ಅಪೊಲಿಪೊಪ್ರೊಟೀನ್ E (APOE) ಎಪ್ಸಿಲಾನ್ 4 (e4) ಆಲೀಲ್, ಮೆದುಳಿನ ಕೊಲೆಸ್ಟರಾಲ್ ಚಯಾಪಚಯವು ಎಡಿಯ ಪ್ರಮುಖ ನಿರ್ಧಾರಕವಾಗಿರಬಹುದು. ಆಹಾರ, ಅನುವಂಶಿಕ ಕಾರಣಗಳು, ರಕ್ತದ ಲಿಪೊಪ್ರೊಟೀನ್ ಮಟ್ಟಗಳು ಮತ್ತು ಅಲ್ಝೈಮರ್ ಕಾಯಿಲೆಯ ನಡುವಿನ ಸಂಬಂಧವು ಸಂಕೀರ್ಣವಾಗಿದೆ.
ಗಮನಿಸಬೇಕಾದ ಅಂಶಗಳು
ಮೆದುಳಿನಲ್ಲಿನ ಜೀವರಾಸಾಯನಿಕ ಬದಲಾವಣೆಗಳ ಪ್ರಾರಂಭ ಮತ್ತು ಅಲ್ಝೈಮರ್ ಕಾಯಿಲೆಯ ಕ್ಲಿನಿಕಲ್ ರೋಗಲಕ್ಷಣಗಳ ಬೆಳವಣಿಗೆಯ ನಡುವೆ ದೀರ್ಘವಾದ ಪೂರ್ವಸೂಚಕ ಅವಧಿ ಇರುತ್ತದೆ, ಇದು ಮರೆಗುಳಿತನದ ಸಂಭವವನ್ನು ಕಡಿಮೆ ಮಾಡಲು ಜೀವನಶೈಲಿಯ ಬದಲಾವಣೆಗಳ ಪಾತ್ರವನ್ನು ಸೂಚಿಸುತ್ತದೆ. ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಮತ್ತು ಮಧುಮೇಹದಂತಹ ಅಪಾಯಕಾರಿ ಅಂಶಗಳು ಮರೆಗುಳಿತನದ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಅಲ್ಝೈಮರ್ಸ್ ಕಾಯಿಲೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು. ಮಧ್ಯವಾಯಸ್ಕರಲ್ಲಿ ಈ ಪರಿಣಾಮಗಳು ಪ್ರಬಲವಾಗಿರುತ್ತವೆ. 2050ರ ವೇಳೆಗೆ ಮರೆಗುಳಿತನದ ಜಾಗತಿಕ ಹರಡುವಿಕೆಯು > 100 ಮಿಲಿಯನ್‌ಗೆ ಏರುತ್ತದೆ ಎಂದು ಅಂದಾಜಿಸಲಾಗಿದೆ. ಸಾಮಾಜಿಕ ಅರಿವು ಮತ್ತು ದೈಹಿಕ ಚಟುವಟಿಕೆಗಳು ಅಲ್ಝೈಮರ್ಸ್ ಕಾಯಿಲೆ ಮತ್ತು ಮರೆಗುಳಿತನದ ಇತರ ರೂಪಗಳ ಅಪಾಯದೊಂದಿಗೆ ವಿಲೋಮವಾಗಿ ಸಂಬಂಧಿಸಿವೆ. ಆದ್ದರಿಂದ, ಅಲ್ಝೈಮರ್ಸ್ ಕಾಯಿಲೆ ಮತ್ತು ಮರೆಗುಳಿತನದ ಇತರ ರೂಪಗಳನ್ನು ತಡೆಗಟ್ಟುವ ತಂತ್ರಗಳಾಗಿ ಇವುಗಳ ಸಾಮರ್ಥ್ಯದಲ್ಲಿ ಗಣನೀಯ ಆಸಕ್ತಿಯಿದೆ.
ಅಲ್ಝೈಮರ್ಸ್ ಕಾಯಿಲೆಯ ರೋಗಲಕ್ಷಣಗಳನ್ನು ಗುರುತಿಸುವುದು
* ಪ್ರಾಥಮಿಕ ಆರಂಭಿಕ ಲಕ್ಷಣವೆಂದರೆ ಅಲ್ಪಾವಧಿಯ ನೆನಪಿನ ಶಕ್ತಿಯ ನಷ್ಟ, ಮಾತು ತೊದಲುವುದು, ಗೊಂದಲ, ಮನಸ್ಥಿತಿಯ ಏರಿಳಿತಗಳು ಮತ್ತು ನಡವಳಿಕೆಯ ಬದಲಾವಣೆಗಳು
* ರೋಗವು ಮುಂದುವರೆದಂತೆ, ವ್ಯಕ್ತಿಗಳು ಸಾಮಾಜಿಕ ವಲಯಗಳಿಂದ ಹಿಂದೆ ಸರಿಯುತ್ತಾರೆ
* ಅಂತಿಮವಾಗಿ ದೈಹಿಕ ಕಾರ್ಯಗಳಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ.
* ಅಲ್ಝೈಮರ್ಸ್ ಕಾಯಿಲೆಯು ವೃದ್ಧಾಪ್ಯದ ಕಾಯಿಲೆಯಾಗಿದ್ದರೂ (>65 ವರ್ಷಗಳು) 65 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲೂ ಶೇ 5ರಷ್ಟು ಜನರನ್ನು ಅಲ್ಝೈಮರ್ಸ್ ಕಾಡುವ ಸಾಧ್ಯತೆ ಇದೆ.
* ಆರಂಭಿಕ ಹಂತದಲ್ಲಿ ಅಲ್ಝೈಮರ್ಸ್ ಕಾಯಿಲೆಯೊಂದಿಗಿನ ಜನರು ಸಾಮಾನ್ಯವಾಗಿ ಈ ಕಾಯಿಲೆಗೆ ಸ್ವಲ್ಪ ವಿಲಕ್ಷಣವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ, ಉದಾಹರಣೆಗೆ ನೆನಪಿನ ಶಕ್ತಿಯ ಕ್ಷೀಣತೆ, ಮಾತಿನಲ್ಲಿ ಬದಲಾವಣೆ, ಇವರಲ್ಲಿ ದೃಶ್ಯ ಅಥವಾ ಮನಸ್ಥಿತಿ-ನಡವಳಿಕೆಯ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ.
* ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಕ್ರೋಮೋಸೋಮ್ 21ರ ಟ್ರೈಸೋಮಿಯಿಂದಾಗಿ APPಯ ಹೆಚ್ಚುವರಿ ಜೀನ್ ಪ್ರಮಾಣವನ್ನು ಹೊಂದಿರುತ್ತಾರೆ. ಇಂತಹವರು ವಯಸ್ಸಾದ ಮೇಲೆ ಅನಿವಾರ್ಯ ಎಂಬಂತೆ ಅಲ್ಝೈಮರ್ ಕಾಯಿಲೆಗೆ ತುತ್ತಾಗುತ್ತಾರೆ. ಇಂತಹ ಸಮಸ್ಯೆ ಇರುವವರಲ್ಲಿ ರೋಗಲಕ್ಷಣಗಳು ಸಾಮಾನ್ಯ ಜನಸಂಖ್ಯೆಗಿಂತ 10 ರಿಂದ 20 ವರ್ಷ ಕಡಿಮೆ ವಯಸ್ಸಿನಲ್ಲಿ ಕಾಣಲು ಆರಂಭವಾಗುತ್ತದೆ.
(ಬರಹ: ಡಾ. ಶಿವ ಕುಮಾರ್ ಆರ್, ಮುಖ್ಯಸ್ಥರು ಮತ್ತು ಹಿರಿಯ ಕನ್ಸಲ್ಟೆಂಟ್ - ನರವಿಜ್ಞಾನ, ಮಣಿಪಾಲ್ ಆಸ್ಪತ್ರೆ ಸರ್ಜಾಪುರ ರಸ್ತೆ)
ವಿಭಾಗ