logo
ಕನ್ನಡ ಸುದ್ದಿ  /  ಜೀವನಶೈಲಿ  /  Cholesterol Control: ಮಜ್ಜಿಗೆಯಿಂದ ಬಾರ್ಲಿವರೆಗೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸುವ 5 ಸೂಪರ್‌ ಫುಡ್‌ಗಳು

Cholesterol Control: ಮಜ್ಜಿಗೆಯಿಂದ ಬಾರ್ಲಿವರೆಗೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸುವ 5 ಸೂಪರ್‌ ಫುಡ್‌ಗಳು

Reshma HT Kannada

Apr 09, 2024 12:29 PM IST

google News

ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ 5 ಸೂಪರ್‌ ಫುಡ್‌ಗಳು

    • ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್‌ ಹೆಚ್ಚುವ ಕಾರಣದಿಂದ ಹೃದಯಾಘಾತ ಸೇರಿದಂತೆ ಹಲವು ರೀತಿಯ ಹೃದಯದ ಸಮಸ್ಯೆಗಳು ಎದುರಾಗುತ್ತಿವೆ. ಯುವಜನರು ಕೂಡ ಕೊಲೆಸ್ಟ್ರಾಲ್‌ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಅಡುಗೆಮನೆಯಲ್ಲೇ ಸಿಗುವ ಈ ನೈಸರ್ಗಿಕ ಪದಾರ್ಥಗಳು ದೇಹದಲ್ಲಿನ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ 5 ಸೂಪರ್‌ ಫುಡ್‌ಗಳು
ನೈಸರ್ಗಿಕವಾಗಿ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ 5 ಸೂಪರ್‌ ಫುಡ್‌ಗಳು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗುವುದರಿಂದ ಸಾಕಷ್ಟು ಅಪಾಯಗಳಿವೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಕೆಲವು ಗಂಭೀರ ಸಮಸ್ಯೆಗಳು ಎದುರಾಗಬಹುದು. ಇತ್ತೀಚಿನ ದಿನಗಳಲ್ಲಿ ಯುವಜನರು ಕೂಡ ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳು ಕೊಲೆಸ್ಟ್ರಾಲ್‌ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಕೊಬ್ಬಿನಾಂಶ ಹಾಗೂ ಸಕ್ಕರೆಯಂಶ ಅಧಿಕವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಕೂಡ ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಏರಿಕೆಯಾಗಬಹುದು. ಜಡಜೀವನಶೈಲಿ ಹೊಂದಿರುವವರಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚುವುದು ಮಾತ್ರವಲ್ಲ, ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಎದುರಾಗಲು ಕಾರಣವಾಗುತ್ತದೆ. ಕೊಲೆಸ್ಟ್ರಾಲ್‌ ನಿಯಂತ್ರಿಸಲು ನಿಯಮಿತ ವ್ಯಾಯಾಮದ ಜೊತೆಗೆ ಆರೋಗ್ಯಕರ ಕೊಬ್ಬು, ಗಿಡಮೂಲಿಕೆಗಳನ್ನು ಸೇರಿಸುವುದು ಮುಖ್ಯವಾಗುತ್ತದೆ.

ಕೊಲೆಸ್ಟ್ರಾಲ್‌ ಅವಶ್ಯವೂ ಹೌದು

ಕೊಲೆಸ್ಟ್ರಾಲ್‌ ದೇಹದಲ್ಲಿ ಉತ್ಪತ್ತಿಯಾಗುವ ಮೇಣದಂತಹ ವಸ್ತುವಾಗಿದೆ. ಇದು ದೇಹಕ್ಕೆ ಅವಶ್ಯ. ಆದರೆ ಆಹಾರದ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಾದರೆ ಇದು ದೇಹದ ಕಾರ್ಯಗಳಿಗೆ ಹಾನಿ ಉಂಟು ಮಾಡುತ್ತದೆ. ಅಲ್ಲದೇ ಉತ್ತಮ ಕೊಲೆಸ್ಟ್ರಾಲ್‌ (ಎಚ್‌ಡಿಎಲ್‌) ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಕೊಲೆಸ್ಟ್ರಾಲ್‌ ಅತಿಯಾದರೆ ಧೂಮಪಾನ ಹಾಗೂ ಮದ್ಯಪಾನ ತ್ಯಜಿಸುವುದು ಬಹಳ ಅವಶ್ಯ.

ಪೌಷ್ಟಿಕತಜ್ಞ ಮುನ್ಮುನ್ ಗನೇರಿವಾಲ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುವ ಸೂಪರ್‌ಫುಡ್‌ಗಳ ಬಗ್ಗೆ ಚರ್ಚಿಸಿದ್ದಾರೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸುವ 5 ಸೂಪರ್‌ ಫುಡ್‌ಗಳು 

ಬೆಳ್ಳುಳ್ಳಿ: ಇದನ್ನು ಅಡುಗೆಯಲ್ಲಿ ತಪ್ಪದೇ ಬಳಸಬೇಕು. ಬೆಳ್ಳುಳ್ಳಿಯಿಂದ ಸೂಪ್‌ ತಯಾರಿಸಿ ಕೂಡ ಕುಡಿಯಬಹುದು. ಬೆಳ್ಳುಳ್ಳಿ ಹಾಲು ಕೂಡ ಕೊಲೆಸ್ಟ್ರಾಲ್‌ ಕಡಿಮೆಯಾಗಲು ಸಹಕಾರಿ. ಸತತವಾಗಿ 12 ವಾರಗಳ ಕಾಲ ಇದನ್ನು ಸೇವಿಸಬೇಕು. ಇದರಿಂದ ರಕ್ತವು ತೆಳುವಾಗುತ್ತದೆ.

ಬಾರ್ಲಿ: ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಗುಣ ಹೊಂದಿರುವ ಬಾರ್ಲಿಯಲ್ಲಿ ಪ್ರಿಬಯಾಟಿಕ್ ಬೀಟಾ-ಗ್ಲುಕನ್ ಅಂಶವಿದೆ. ಬಾರ್ಲಿ ಖಿಚಡಿ, ಬಾರ್ಲಿ ಗಂಜಿ, ಬಾರ್ಲಿ ಸೂಪ್ ಮತ್ತು ಬಾರ್ಲಿ ರೋಟಿ ಹೀಗೆ ಹಲವು ರೂಪಗಳಲ್ಲಿ ಇದನ್ನು ಸೇವಿಸಬಹುದು.

ತ್ರಿಫಲ: ಇದು ಉರಿಯೂತ ನಿವಾರಿಸುವ ಗುಣವನ್ನು ಹೊಂದಿದೆ. ಆ ಕಾರಣಕ್ಕೆ ಇದು ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ತ್ರಿಫಲವು ದೇಹದ ಆಂತರಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಜ್ಜಿಗೆ: ಸಾಂಪ್ರದಾಯಿಕ ರೀತಿಯಲ್ಲಿ ಮಸಾಲ ಮಜ್ಜಿಗೆ ಮಾಡಿ ಕುಡಿಯವುದರಿಂದ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಬಹುದು. ಅರಿಸಿನ, ಕಲ್ಲುಪ್ಪು, ಕರಿಬೇವಿನ ಸೊಪ್ಪು, ಶುಂಠಿ ಚೂರು ಸೇರಿಸಿ ಪ್ರತಿದಿನ ಕುಡಿಯುವುದರಿಂದ 3 ತಿಂಗಳಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆಯಾಗುವುದನ್ನು ನೋಡಬಹುದು.

ನೆಲ್ಲಿಕಾಯಿ: ಕೊಲೆಸ್ಟ್ರಾಲ್‌ ಕಡಿಮೆಯಾಗಲು ನೆಲ್ಲಿಕಾಯಿ ಉತ್ತಮ ಮನೆಮದ್ದು ಇನ್ನೊಂದಿಲ್ಲ. ಇದನ್ನು 12 ವಾರಗಳ ಕಾಲ ನಿರಂತರ ಸೇವನೆಯಿಂದ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ಸೀರಮ್‌ ಲಿಪಿಡ್‌ ಪ್ರೊಫೈಲ್‌ ಅನ್ನು ಸುಧಾರಿಸಲು ಕೂಡ ಇದು ಸಹಾಯ ಮಾಡುತ್ತದೆ. ಸಾಧ್ಯವಾದರೆ ಮನೆಯಲ್ಲೇ ನೆಲ್ಲಿಕಾಯಿ ಪುಡಿ ತಯಾರಿಸಿ, ಇಲ್ಲವೆಂದಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನೆಲ್ಲಿಕಾಯಿ ಪುಡಿ ತಿನ್ನಿ.

ಆದರೆ ಈ ಸೂಪರ್‌ಫುಡ್‌ಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬೇಕು ಅಂದ್ರೆ ನೀವು ಸಮತೋಲಿತ ಜೀವನಶೈಲಿಯನ್ನು ಹೊಂದಿರಬೇಕು. ಸಮತೋಲಿತ ಜೀವನಶೈಲಿ ಇಲ್ಲ ಎಂದಾದರೆ ಸೂಪರ್‌ಫುಡ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಗನೇರಿವಾಲ್‌ ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ