Dengue Cases On Rise: ಹೆಚ್ಚುತ್ತಲೇ ಇದೆ ಡೆಂಗಿ ಪ್ರಕರಣ; ರೋಗದ ಅಪಾಯವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿರಲಿ ಈ 12 ಪ್ರಮುಖ ಬದಲಾವಣೆ
Aug 15, 2023 12:41 PM IST
ಡೆಂಗಿ ನಿವಾರಣೆಗೆ ನೆರವಾಗುವ ಜೀವನಶೈಲಿ
- Lifestyle Changes To Prevent Dengue: ಮಳೆರಾಯನ ಕಣ್ಣಮುಚ್ಚಾಲೆಯ ನಡುವೆಯೂ ದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ಡೆಂಗಿ ಹರಡುವುದನ್ನು ತಡೆಯಲು ಯಾವುದೇ ಸೂಕ್ತ ಮಾರ್ಗಗಳು ಇಲ್ಲದೇ ಇದ್ದರೂ, ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ಭಾರತ ದೇಶ ಮಾತ್ರವಲ್ಲದೇ, ವಿದೇಶಗಳಲ್ಲೂ ಡೆಂಗಿ ಹರಡುವ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಡೆಂಗಿ ಪ್ರಕರಣಗಳು ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಜನರು ತುಂಬಿ ತುಳುಕಾಡುತ್ತಿದ್ದಾರೆ.
ಡೆಂಗಿ ಜ್ವರವು ಈಡಿಸ್ ಎಂಬ ಸೊಳ್ಳೆಗಳ ಕಡಿತದಿಂದ ಮನುಷ್ಯರಲ್ಲಿ ಹರಡುವ ಕಾಯಿಲೆಯಾಗಿದೆ. ಇದು ಸೌಮ್ಯವಾಗಿದ್ದಾಗ ವಿಪರೀತ ಜ್ವರ, ಮೈಕೈನೋವು, ತಲೆನೋವು, ಚರ್ಮದ ದದ್ದು, ವಾಕರಿಕೆ ಮುಂತಾದ ರೋಗಲಕ್ಷಣಗಳು ಕಾಣಿಸಬಹುದು. ಒಂದು ವೇಳೆ ರೋಗಲಕ್ಷಣಗಳು ತೀವ್ರವಾದರೆ ಮೂಗು, ಒಸಡುಗಳಿಂದ ರಕ್ತಸ್ರಾವ, ರಕ್ತದೊತ್ತಡ ಕಡಿಮೆಯಾಗುವುದು, ಪ್ಲೇಟ್ಲೆಟ್‌ಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದು ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಡೆಂಗಿ ಹರಡುವುದನ್ನು ತಡೆಯಲು ಯಾವುದೇ ಖಚಿತವಾದ ಮಾರ್ಗಗಳಿಲ್ಲ. ಆದರೆ ಜೀವನಶೈಲಿ ಬದಲಾವಣೆಗಳೊಂದಿಗೆ ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವೈದ್ಯರು. ಸೊಳ್ಳೆ ಕಡಿತವನ್ನು ತಡೆಗಟ್ಟುವುದರಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚಿಸುವವರೆಗೆ, ತಜ್ಞರು ರೋಗವನ್ನು ದೂರವಿಡಲು ಈ ಕೆಲವು ಕ್ರಮಗಳನ್ನು ಅನುಸರಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ನೊಯ್ದಾದ ಮೆಟ್ರೊ ಹಾಸ್ಪಿಟಲ್ಸ್ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಇಂಟರ್ನಲ್ ಮೆಡಿಸಿನ್ ವಿಭಾಗದ ಡಾ. ಸೈಬಲ್ ಚಕ್ರವರ್ತಿ ಡೆಂಗಿ ತಡೆಗಟ್ಟಲು ನೆರವಾಗುವ ಜೀವನಶೈಲಿಗಳ ಕುರಿತು ಇಲ್ಲಿ ವಿವರಿಸಿದ್ದಾರೆ.
ಸೊಳ್ಳೆಗಳಿಂದ ರಕ್ಷಣೆ: ಉದ್ದ ತೋಳಿನ ಡ್ರೆಸ್ ಹಾಗೂ ಮೊಣಕಾಲಿನವರೆಗೆ ಹರಡಿರುವ ಪ್ಯಾಂಟ್ ಧರಿಸಿ. ಸೊಳ್ಳೆ ನಿವಾರಕರಗಳನ್ನು ಬಳಸಿ. ಸಾಧ್ಯವಾದಷ್ಟು ಸೊಳ್ಳೆ ಕಡಿತವನ್ನು ತಡೆಯಲು ಮಲಗುವಾಗ ಸೊಳ್ಳೆ ಪರದೆ ಬಳಸಿ.
ಸಂತಾನೋತ್ಪತ್ತಿ ಸ್ಥಳಗಳ ಬಗ್ಗೆ ಗಮನ ಕೊಡಿ: ಹೂವಿನ ಕುಂಡ, ಬಿಸಾಡಿದ ಟೈರ್, ತೆರೆದಿಟ್ಟ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ನಿಲ್ಲುವ ಕಾರಣ ಅಂತಹ ಜಾಗದಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸುತ್ತವೆ. ಹಾಗಾಗಿ ನಂತರ ಸ್ಥಳಗಳ ಸ್ವಚ್ಛತೆಗೆ ಗಮನ ಕೊಡಿ.
ಸ್ವಚ್ಛ ಪರಿಸರ ಕಾಪಾಡಿಕೊಳ್ಳಿ: ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ನೀವು ವಾಸಿಸುವ ಸ್ಥಳದಲ್ಲಿ ಹಾಗೂ ಸುತ್ತಮುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಗಟಾರಗಳು, ಚರಂಡಿ ಹಾಗೂ ಕಸದ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಿ.
ರಕ್ಷಣೆ ನೀಡುವ ಉಡುಪು: ಹೊರಾಂಗಣದಲ್ಲಿದ್ದಾಗ ಸೊಳ್ಳೆಗಳ ಆಕರ್ಷಣೆಯನ್ನು ಕಡಿಮೆ ಮಾಡಲು ನಿಮ್ಮ ದೇಹವನ್ನು ಆವರಿಸುವ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ.
ಕಿಟಕಿ, ಬಾಗಿಲಿಗೆ ಪರದೆ ಮುಚ್ಚಿ: ಸೊಳ್ಳೆಗಳು ಮನೆಯೊಳಗೆ ಬಂದು ಕಡಿಯುವುದನ್ನು ತಪ್ಪಿಸಲು ಕಿಟಕಿ, ಬಾಗಿಲುಗಳನ್ನು ಮುಚ್ಚಿಡಿ. ಪರದೆಯನ್ನು ಮುಚ್ಚಲು ಮರೆಯದಿರಿ.
ಫ್ಯಾನ್ ಬಳಸಿ: ಸೊಳ್ಳೆಗಳಿಗೆ ಗಾಳಿಯಲ್ಲಿ ಹಾರಾಡುವುದು ಕಷ್ಟವಾಗುತ್ತದೆ. ಆ ಕಾರಣಕ್ಕೆ ಮನೆಯೊಳಗೆ ಇದ್ದಾಗ ಸಾಧ್ಯವಾದಷ್ಟು ಫ್ಯಾನ್ ಬಳಸಿ.
ನೈಸರ್ಗಿಕ ನಿವಾರಕಗಳು: ನಿಮ್ಮ ಮನೆಯ ಸುತ್ತಲೂ ಸೊಳ್ಳೆ-ನಿವಾರಕ ಸಸ್ಯಗಳಾದ ಸಿಟ್ರೊನೆಲ್ಲಾ, ಲೆಮೊನ್ಗ್ರಾಸ್ ಮತ್ತು ಪುದೀನದಂತಹ ಗಿಡಗಳನ್ನು ನೆಡಿ.
ಸೊಳ್ಳೆ ಹೆಚ್ಚಾಗುವ ಸಮಯವನ್ನು ತಪ್ಪಿಸಿ: ಸೊಳ್ಳೆಗಳು ಮುಂಜಾನೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಈ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿ.
ಪ್ರಯಾಣದ ಮುನ್ನೆಚ್ಚರಿಕೆಗಳು: ಡೆಂಗಿ ಪೀಡಿತ ಪ್ರದೇಶಗಳಿಗೆ ಪ್ರಯಾಣಿಸುತ್ತಿದ್ದರೆ, ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು ಮತ್ತು ಸೊಳ್ಳೆ ನಿವಾರಕಗಳನ್ನು ಬಳಸುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ.
ವೈಯಕ್ತಿಕ ನೈರ್ಮಲ್ಯ: ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ, ಬೆವರು ಮತ್ತು ದೇಹದ ವಾಸನೆಗೆ ಸೊಳ್ಳೆಗಳು ಆಕರ್ಷಿತವಾಗುತ್ತವೆ. ಹಾಗಾಗಿ ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ.
ಸಮುದಾಯದ ಪ್ರಯತ್ನಗಳು: ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಲು ಸಮುದಾಯದೊಂದಿಗೆ ಕೈ ಜೋಡಿಸಿ.
ಜಾಗೃತಿ ಮೂಡಿಸಿ: ಡೆಂಗಿ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಜಾಗೃತಿಯನ್ನು ಹರಡಿ.
ಡೆಂಗಿಗೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
ವಿಭಾಗ