logo
ಕನ್ನಡ ಸುದ್ದಿ  /  ಜೀವನಶೈಲಿ  /  Dengue: ನವಜಾತ ಶಿಶುಗಳಿಗೆ ಡೆಂಗ್ಯೂ ಡೇಂಜರ್‌; ಎಳೆ ಕಂದಮ್ಮಗಳ ರಕ್ಷಣೆಗೆ ಪೋಷಕರು ಪಾಲಿಸಬೇಕಾದ ಕ್ರಮಗಳಿವು

Dengue: ನವಜಾತ ಶಿಶುಗಳಿಗೆ ಡೆಂಗ್ಯೂ ಡೇಂಜರ್‌; ಎಳೆ ಕಂದಮ್ಮಗಳ ರಕ್ಷಣೆಗೆ ಪೋಷಕರು ಪಾಲಿಸಬೇಕಾದ ಕ್ರಮಗಳಿವು

Reshma HT Kannada

Jul 18, 2024 10:46 AM IST

google News

ನವಜಾತ ಶಿಶುಗಳಿಗೆ ಡೆಂಗ್ಯೂ ಡೇಂಜರ್‌; ಎಳೆ ಕಂದಮ್ಮಗಳ ರಕ್ಷಣೆಗೆ ಪೋಷಕರು ಪಾಲಿಸಬೇಕಾದ ಕ್ರಮಗಳಿವು

    • ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಮಳೆ ಅಬ್ಬರದ ನಡುವೆ ಸೊಳ್ಳೆ ಕಾಟವೂ ಹೆಚ್ಚಿದೆ. ಮಳೆಗಾಲದಲ್ಲಿ ಡೆಂಗ್ಯೂ ಹರಡುವುದು ಸಾಮಾನ್ಯವಾದರೂ ನವಜಾತ ಶಿಶುಗಳಿಗೆ ಡೆಂಗ್ಯೂ ಬಹಳ ಡೇಂಜರ್‌. ಎಳೆ ಕಂದಮ್ಮಗಳಿಗೆ ಬಾಧಿಸುವ ಡೆಂಗ್ಯೂ ಜ್ವರದ ಲಕ್ಷಣಗಳು, ಜ್ವರ ಬಾರದಂತೆ ತಡೆಯುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಪ್ರಶಾಂತ್ ಗೌಡ
ನವಜಾತ ಶಿಶುಗಳಿಗೆ ಡೆಂಗ್ಯೂ ಡೇಂಜರ್‌; ಎಳೆ ಕಂದಮ್ಮಗಳ ರಕ್ಷಣೆಗೆ ಪೋಷಕರು ಪಾಲಿಸಬೇಕಾದ ಕ್ರಮಗಳಿವು
ನವಜಾತ ಶಿಶುಗಳಿಗೆ ಡೆಂಗ್ಯೂ ಡೇಂಜರ್‌; ಎಳೆ ಕಂದಮ್ಮಗಳ ರಕ್ಷಣೆಗೆ ಪೋಷಕರು ಪಾಲಿಸಬೇಕಾದ ಕ್ರಮಗಳಿವು

ಡೆಂಗ್ಯೂ ಸೊಳ್ಳೆಗಳಿಂದ ಹರಡುವ ಒಂದು ಜ್ವರ. ಇದನ್ನು ವೈರಾಣು ಪ್ರೇರಿತ ಸೋಂಕು ಎಂದು ಕೂಡ ಕರೆಯಬಹುದು. ಭಾರತದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಡೆಂಗ್ಯೂ ಜ್ವರದ ತೊಂದರೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಡೆಂಗ್ಯೂ ಎಲ್ಲೆಡೆ ಕಾಣಿಸಿಕೊಂಡು ಜನರಿಗೆ ತೊಂದರೆ ಕೊಡುತ್ತಿದೆ. ಎಲ್ಲಾ ವಯಸ್ಸಿನ ಜನರಿಗೂ ಈ ಜ್ವರ ಬಾಧಿಸಬಹುದಾದರೂ ಪುಟಾಣಿ ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಇದರ ತೊಂದರೆ ಹೆಚ್ಚು. ಅಭಿವೃದ್ಧಿ ಹೊಂದಿರದ ಅವರ ರೋಗ ನಿರೋಧಕ ಶಕ್ತಿಯ ಕಾರಣದಿಂದ ಮತ್ತು ರೋಗ ಲಕ್ಷಣಗಳನ್ನು ವಿವರಿಸಲು ಬಾರದೇ ಇರುವುದರಿಂದ ಈ ಮಕ್ಕಳು ತೊಂದರೆ ಎದುರಿಸುವ ಅಪಾಯ ಹೆಚ್ಚು. ಡೆಂಗ್ಯೂ ನವಜಾತ ಶಿಶುಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಡೆಂಗ್ಯೂವಿಂದ ನವಜಾತ ಶಿಶುಗಳು ಎದುರಿಸಬಹುದಾದ ಪರಿಣಾಮಗಳು

ಹಲವಾರು ಕಾರಣಗಳಿಂದ ನವಜಾತ ಶಿಶುಗಳು ತೀವ್ರವಾದ ಡೆಂಗ್ಯೂ ಜ್ವರದಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಯಾಕೆಂದರೆ ನವಜಾತ ಶಿಶುಗಳ ರೋಗ ನಿರೋಧಕ ವ್ಯವಸ್ಥೆಯು ಸರಿಯಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಆ ಕಾರಣದಿಂದ ಅವರು ಸೋಂಕನ್ನು ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಶಿಶುಗಳಲ್ಲಿನ ರೋಗ ಲಕ್ಷಣಗಳನ್ನು ಕಿರಿಕಿರಿಯುಂಟು ಮಾಡುವಿಕೆ, ಆಹಾರವನ್ನು ನಿರಾಕರಿಸುವುದು ಮತ್ತು ಕ್ರಿಯಾಶೀಲವಾಗಿರದೇ ಇರುವುದು ಇತ್ಯಾದಿಯನ್ನು ಹೇಳಬಹುದಾದರೂ ನಿರ್ದಿಷ್ಟವಾಗಿ ಇಂಥದ್ದೇ ಎಂದು ಹೇಳಲು ಆಗುವುದಿಲ್ಲ. ಹಾಗಾಗಿ ರೋಗನಿರ್ಣಯ ಮಾಡುವುದು ತಡವಾಗಬಹುದು ಮತ್ತು ಚಿಕಿತ್ಸೆ ನೀಡುವುದು ವಿಳಂಬವಾಗಬಹುದು.

ನವಜಾತ ಶಿಶುಗಳ ಮೇಲೆ ಡೆಂಗ್ಯೂ ಜ್ವರದ ಪರಿಣಾಮಗಳ ಪ್ರಮುಖಾಂಶಗಳು

ಟ್ರಾನ್ಸ್‌ ಪ್ಲೇಸೆಂಟಲ್ ಟ್ರಾನ್ಸ್‌ ಮಿಷನ್ (ಪ್ಲೇಸೆಂಟಾ ಮೂಲಕ ರೋಗ ಹರಡುವಿಕೆ): ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರು ಡೆಂಗ್ಯೂ ಜ್ವರದಿಂದ ಬಾಧಿತರಾದರೆ ನವಜಾತ ಶಿಶುಗಳು ಕೂಡ ಡೆಂಗ್ಯೂ ಜ್ವರಕ್ಕೆ ಒಳಗಾಗಬಹುದು. ಪ್ಲೇಸೆಂಟಾ ಮೂಲಕ ಡೆಂಗ್ಯೂ ಜ್ವರವು ನವಜಾತ ಶಿಶುವಿಗೆ ಹರಡಬಹುದಾದ್ದರಿಂದ ಮಗುವಿನ ಜನನದ ಸಂದರ್ಭದಲ್ಲಿ ಅಥವಾ ಜನನದ ಸ್ವಲ್ಪ ಹೊತ್ತಿನ ಬಳಿಕ ಶಿಶುವಿಗೆ ಡೆಂಗ್ಯೂ ಜ್ವರ ಕಾಡಬಹುದು.

ತೀವ್ರ ರೀತಿಯ ರೋಗಲಕ್ಷಣಗಳು: ಡೆಂಗ್ಯೂ ಜ್ವರ ಹೊಂದಿರುವ ಶಿಶುಗಳು ತೀವ್ರತರವಾದ ಜ್ವರ, ಕಿರಿಕಿರಿ, ಚರ್ಮದ ಮೇಲಿನ ದದ್ದು, ವಾಂತಿಯಿಂದ ಬಳಲುತ್ತಿರುತ್ತಾರೆ. ಇನ್ನು ತೀವ್ರತರವಾದ ಕೆಲವು ಪ್ರಕರಣಗಳಲ್ಲಿ ರಕ್ತಸ್ರಾವ ಮತ್ತು ಅಂಗಗಳು ಸರಿಯಾಗಿ ಕೆಲಸ ಮಾಡದೇ ಇರುವಂತಹ ತೀವ್ರ ರೀತಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ವಯಸ್ಕರಿಗೆ ಮತ್ತು ಸ್ವಲ್ಪ ವಯಸ್ಸಾದ ಮಕ್ಕಳಿಗೆ ಹೋಲಿಸಿದರೆ ನವಜಾತ ಶಿಶುಗಳಲ್ಲಿನ ಅನಾರೋಗ್ಯದ ತೀವ್ರತೆಯು ಬಹಳ ಹೆಚ್ಚಿರುತ್ತದೆ.

ರಕ್ತನಾಳ ಹಾನಿ ಮತ್ತು ಅದರಿಂದ ರಕ್ತಸ್ರಾವ ಸಾಧ್ಯತೆ: ನವಜಾತ ಶಿಶುಗಳು ಡೆಂಗ್ಯೂ ಹೆಮರಾಜಿಕ್ ಜ್ವರದ ಬಾಧೆಗೆ ಒಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಹೆಮರಾಜಿಕ್ ಅಂದ್ರೆ ರಕ್ತನಾಳಕ್ಕೆ ಹಾನಿಯಾಗಿ ಅದರಿಂದ ರಕ್ತಸ್ರಾವ ಉಂಟಾಗುವುದು. ಹೆಮರಾಜಿಕ್ ಜ್ವರದಿಂದ ತೀವ್ರವಾದ ರಕ್ತಸ್ರಾವ, ರಕ್ತದ ಪ್ಲಾಸ್ಮಾ ಸೋರಿಕೆ ಮತ್ತು ಪ್ರಾಣಕ್ಕೆ ಹಾನಿಯಾಗಬಹುದಾದಂತಹ ಡೆಂಗ್ಯೂ ಶಾಕ್ ಸಿಂಡ್ರೋಮ್ ಉಂಟಾಗುವ ಸಾಧ್ಯತೆಯೂ ಇದೆ.

ದುರ್ಬಲ ರೋಗನಿರೋಧಕ ವ್ಯವಸ್ಥೆ: ನವಜಾತ ಶಿಶುಗಳ ರೋಗ ನಿರೋಧಕ ಶಕ್ತಿಯು ಅಪಕ್ವವಾಗಿರುತ್ತದೆ. ಅದರಿಂದ ಸೋಂಕಿನ ವಿರುದ್ಧ ಹೋರಾಡಲು ಅವರಿಗೆ ಕಷ್ಟವಾಗುತ್ತದೆ. ಈ ಕಾರಣದಿಂದ ತೀವ್ರ ಥರದ ಪರಿಣಾಮ ಉಂಟಾಗಬಹುದಾಗಿದೆ ಹಾಗೂ ಚೇತರಿಕೆಗೆ ದೀರ್ಘಕಾಲದ ಸಮಯ ಬೇಕಾಗುತ್ತದೆ.

ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲಿನ ಪರಿಣಾಮ: ಜೀವನದಲ್ಲಿ ಬಹಳ ಪ್ರಮುಖವಾದ ಆರಂಭಿಕ ಘಟ್ಟಗಳಲ್ಲಿ ತೀವ್ರ ರೀತಿಯ ಡೆಂಗ್ಯೂ ಜ್ವರದ ಬಾಧೆಗೆ ಒಳಪಟ್ಟರೆ ಆ ನವಜಾತ ಶಿಶುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಭಾರಿ ಪರಿಣಾಮ ಉಂಟಾಗಬಹುದಾಗಿದೆ. ದೀರ್ಘಕಾಲದ ಅನಾರೋಗ್ಯ ಕಾಡಬಹುದು ಮತ್ತು ದೀರ್ಘಕಾಲ ಆಸ್ಪತ್ರೆ ವಾಸ ಮಾಡಬೇಕಾಗಿ ಬರಬಹುದು. ಅವೆಲ್ಲವೂ ಮಗುವಿನ ಒಟ್ಟಾರೆ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಗಾಢ ಪರಿಣಾಮ ಬೀರುತ್ತದೆ.

ಮಗು (ಸಾಂಕೇತಿಕ ಚಿತ್ರ) ಡಾ. ಪ್ರಶಾಂತ್ ಗೌಡ (ಬಲಚಿತ್ರ)

ತಡೆಗಟ್ಟುವಿಕೆ ಮತ್ತು ನಿಗಾ ವಹಿಸುವಿಕೆ: ಇವೆಲ್ಲಾ ಕಾರಣಗಳಿಂದ ಸೊಳ್ಳೆ ಪರದೆಗಳು ಮತ್ತು ಸೊಳ್ಳೆ ನಿವಾರಕಗಳನ್ನು ಬಳಸಿ ನವಜಾತ ಶಿಶುಗಳನ್ನು ಸೊಳ್ಳೆಗಳಿಂದ ದೂರವೇ ಇಡುವುದು ಹಾಗೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಅವಶ್ಯ. ಡೆಂಗ್ಯೂ ಅಧಿಕ ಇರುವ ಪ್ರದೇಶಗಳಲ್ಲಿನ ಗರ್ಭಿಣಿಯರನ್ನು ನಿಯಮಿತವಾಗಿ ನಿಗಾ ವಹಿಸುವುದರಿಂದ ಮತ್ತು ನವಜಾತ ಶಿಶುಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಡೆಂಗ್ಯೂ ಉಂಟುಮಾಡುವ ಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ.

ರೋಗ ತಡೆಗಟ್ಟಬಹುದಾದ ಕ್ರಮಗಳು

ನವಜಾತ ಶಿಶುಗಳ ಸುತ್ತಮುತ್ತ ಸೊಳ್ಳೆಗಳ ಸಂತಾನೋತ್ಪತ್ತಿ ಜಾಗಗಳು ಇಲ್ಲದೇ ಇರುವಂತೆ ನೋಡಿಕೊಳ್ಳುವ ಮೂಲಕ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಬಹುದು. ವಾತಾವರಣದಲ್ಲಿ ಇರಬಹುದಾದ ನೀರು ಸಂಗ್ರಹಿಸುವ ಪಾತ್ರೆಗಳಲ್ಲಿ ನೀರನ್ನು ನಿಯಮಿತವಾಗಿ ಖಾಲಿ ಮಾಡುತ್ತಿರುವ ಮೂಲಕ, ಸೊಳ್ಳೆ ಪರದೆಗಳು ಮತ್ತು ಸೊಳ್ಳೆ ನಿವಾರಕಗಳನ್ನು ಬಳಸುವ ಮೂಲಕ ಶಿಶುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದು. ನವಜಾತ ಶಿಶುಗಳಲ್ಲಿ ಡೆಂಗ್ಯೂ ಜ್ವರವನ್ನು ಸೂಕ್ತವಾಗಿ ನಿರ್ವಹಿಸಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಆರಂಭದ ಹಂತದಲ್ಲಿಯೇ ಡೆಂಗ್ಯೂ ಜ್ವರವನ್ನು ಪತ್ತೆ ಹಚ್ಚುವುದು ಬಹಳ ಮುಖ್ಯವಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ರೋಗನಿರ್ಣಯ ಸೌಲಭ್ಯದ ಹೆಚ್ಚಿನ ಲಭ್ಯತೆಯಿಂದ ಕ್ಷಿಪ್ರವಾಗಿ ರೋಗನಿರ್ಣಯ ಪರೀಕ್ಷೆ ಮಾಡಬಹುದಾಗಿದೆ. ಅದರಿಂದ ಸೂಕ್ತ ಸಮಯದಲ್ಲಿ ಡೆಂಗ್ಯೂ ಜ್ವರ ಪತ್ತೆ ಹಚ್ಚುವುದು ಸಾಧ್ಯವಾಗುತ್ತದೆ ಮತ್ತು ಸರಿಯಾದ ಸಮಯಕ್ಕೆ ರೋಗ ಚಿಕಿತ್ಸೆ ಆರಂಭಿಸಬಹುದಾಗಿದೆ.

ಭಾರತದಲ್ಲಿನ ನವಜಾತ ಶಿಶುಗಳಿಗೆ ಡೆಂಗ್ಯೂ ಜ್ವರವು ಬಹಳ ಅಪಾಯಕಾರಿ ಜ್ವರವಾಗಿ ಪರಿಣಮಿಸಿದೆ. ಹಾಗಾಗಿ ಡೆಂಗ್ಯೂ ಜ್ವರವನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಸಮಗ್ರವಾದ ಕಾರ್ಯ ನಿರ್ವಹಣೆಯ ಅಗತ್ಯವಿದೆ. ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಮುಖ್ಯವಾಗಿದೆ. ಅಲ್ಲದೇ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆಯುವಂತೆ ಅರಿವು ಮೂಡಿಸುವುದರಿಂದ ಈ ಶಿಶುಗಳ ಮೇಲೆ ಹೆಚ್ಚಿನ ಗಮನ ಇಡುವಂತೆ ಮಾಡಬಹುದಾಗಿದೆ ಮತ್ತು ಆ ಮೂಲಕ ಅವರನ್ನು ಸುರಕ್ಷಿತವಾಗಿ ಇಡಬಹುದಾಗಿದೆ.

(ಲೇಖನ: ಡಾ. ಪ್ರಶಾಂತ್ ಗೌಡ, ಕನ್ಸಲ್ಟೆಂಟ್ - ಶಿಶುವೈದ್ಯರು ಮತ್ತು ನವಜಾತ ಶಿಶು ತಜ್ಞ, ಮದರ್ ಹುಡ್ ಹಾಸ್ಪಿಟಲ್ಸ್, ಸರ್ಜಾಪುರ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ