Mouthwash: ಪ್ರತಿದಿನ ಮೌತ್‌ವಾಶ್ ಬಳಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ನೀವು ತಿಳಿಯಲೇಬೇಕಾದ ವಿಚಾರವಿದು
May 24, 2024 05:45 PM IST
ಪ್ರತಿದಿನ ಮೌತ್‌ವಾಶ್ ಬಳಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ವಿಚಾರ ನಿಮಗೆ ತಿಳಿದಿರಬೇಕು
- ಹಲ್ಲುಗಳನ್ನು ಆರೋಗ್ಯವಾಗಿಡೋಕೆ ಪ್ರತಿದಿನ ಹಲ್ಲುಜ್ಜುವುದರ ಜೊತೆಗೆ ಮೌತ್‌ವಾಶ್ ಬಳಕೆ ಸಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬಾಯಿಯ ದುರ್ವಾಸನೆಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ನೀವು ನಿಯಮಿತವಾಗಿ ಬಳಸುವ ಮೌತ್‌ವಾಶ್ ಎಷ್ಟು ಹಾನಿಕಾರಕ ಎಂಬ ಮಾಹಿತಿ ಇಲ್ಲಿದೆ. (ಬರಹ: ಭಾಗ್ಯ ದಿವಾಣ)
ಹಲ್ಲುಗಳನ್ನು ಕೀಟಾಣುಗಳಿಂದ ರಕ್ಷಿಸಿಕೊಂಡು, ಪಳಪಳ ಹೊಳೆಯುವಂತೆ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಅದೆಷ್ಟು ಬಗೆಯ ಟೂತ್‌ಪೇಸ್ಟ್‌ಗಳು ಲಭ್ಯವಿದೆಯೋ ಅದೇ ರೀತಿ ಹಲ್ಲಿನ ರಕ್ಷಣೆ ಹಾಗೂ ದುರ್ವಾಸನೆಯನ್ನು ತೊಡೆದುಹಾಕುವ ಜೊತೆಗೆ ಒಟ್ಟಾರೆ ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಮೌತ್‌ವಾಶ್‌ಗಳೂ ಸಹ ಲಭ್ಯವಿವೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಶಿಸ್ತು, ಈಗಂತೂ ದಿನಕ್ಕೆ ಹಲವು ಬಾರಿ ಮೌತ್‌ವಾಶ್ ಬಳಕೆ ಮಾಡುವವರೆಗೂ ತಲುಪಿಬಿಟ್ಟಿದೆ. ಆದರೆ ಮೌತ್‌ಫ್ರೆಶ್ನರ್ ಹಾಗೂ ಮೌತ್‌ವಾಶ್‌ಗಳನ್ನು ನಿತ್ಯವೂ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ವಿಚಾರವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.
ಮೌತ್‌ವಾಶ್‌ಗಳನ್ನು ದೀರ್ಘಾವಧಿಯವರೆಗೆ ಬಳಸುವುದರ ಪರಿಣಾಮಗಳು
ಬಾಯಿ ಪದೇ ಪದೇ ಒಣಗಲು ಮೂಲ ಕಾರಣ: ಟೂತ್‌ಬ್ರಷ್‌ಗಳಿಗೆ ತಲುಪಲು ಕಷ್ಟಕರವಾದ ಸ್ಥಳಗಳನ್ನು ದ್ರವ ರೂಪದ ಮೌತ್‌ವಾಶ್ ಬಲು ಬೇಗನೆ ತಲುಪಿಬಿಡುತ್ತದೆ. ಹಲ್ಲು ಜುಮ್ಮೆನ್ನುವುದು, ಸೆಳೆತದಂತಹ ಅನೇಕ ಸಮಸ್ಯೆಗಳಿಗೂ ಒಮ್ಮೆಗೆ ಮೌತ್‌ವಾಶ್ ಬಳಕೆ ಸಹಕಾರಿ. ಅಲ್ಲದೆ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಿ ಫ್ರೆಶ್ ಫೀಲ್ ನೀಡುತ್ತದೆ. ಇದರಲ್ಲಿರುವ ಫ್ಲೋರೈಡ್ ಅಂಶದಿಂದಾಗಿ ಕ್ಯಾವಿಟೀಸ್ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ಒಸಡನ್ನು ಬಲಪಡಿಸಲು ಇದು ಸಹಾಯಕ. ಒಟ್ಟಾರೆ ಮೌಖಿಕ ನೈರ್ಮಲ್ಯಕ್ಕೆ ಇದು ಅವಶ್ಯ ಎಂಬುದು ನಿಜ.
ಆದರೆ ಮೌತ್‌ವಾಶ್‌ಗಳನ್ನು ದೀರ್ಘಾವಧಿಯವರೆಗೆ ಬಳಕೆ ಮಾಡುವುದರಿಂದ ಹಲವು ಕೆಟ್ಟ ಪರಿಣಾಮಗಳಿಗೂ ಇದು ಕಾರಣವಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ, ಬಾಯಿ ಒಣಗುವುದು ಅಥವಾ ಶುಷ್ಕವಾಗುವ ಸಮಸ್ಯೆ. ಹೌದು, ಆಂಟಿಸೆಪ್ಟಿಕ್ ಮೌತ್‌ವಾಶ್‌ಗಳಲ್ಲಿ ಅಡಗಿರುವ ಆಲ್ಕೋಹಾಲ್ ಅಂಶ ಬಾಯಿ ಶುಷ್ಕವಾಗಲು ಕಾರಣವಾಗುತ್ತದೆ.
ಆಂಟಿಸೆಪ್ಟಿಕ್ ಮೌತ್‌ವಾಶ್ ಪರಿಣಾಮ
ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೂ ಅಡ್ಡಿ: ಬಾಯಿಯಲ್ಲಿನ ಸೂಕ್ಷ್ಮಜೀವಿಗಳು ಹಲವು ಬಾರಿ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನೂ ಬೀರುತ್ತವೆ. ಇದು ದೇಹದಿಂದ ಆಹಾರವನ್ನು ಹೀರಿಕೊಂಡು ಅದರ ವಿಭಜನೆಗೆ ಸಹಾಯ ಮಾಡುತ್ತದೆ. ಅಂತಹ ಅನೇಕ ಉಪಯುಕ್ತ ಬ್ಯಾಕ್ಟೀರಿಯಾಗಳು ಮೌತ್ ವಾಶ್‌ಗಳ ನಿರಂತರ ಬಳಕೆಯಿಂದ ನಾಶವಾಗಿ ಹೋಗುತ್ತವೆ. ಇದರಿಂದ ದೇಹದ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರಲು ಕಾರಣವಾಗಬಹುದು.
ಬಾಯಿಯಲ್ಲಿನ ಸೂಕ್ಷ್ಮಜೀವಿಗಳು ಆಹಾರದ ನೈಟ್ರೇಟ್ ಅನ್ನು ಬಳಸಿಕೊಳ್ಳಲು ನೆರವಾಗುತ್ತದೆ. ಇದರಿಂದ ಹೃದಯದ ರಕ್ತನಾಳದ ಆರೋಗ್ಯಕ್ಕೆ ಅವಶ್ಯಕವಾದ ನೈಟ್ರಿಕ್ ಆಕ್ಸೈಡ್ ದೇಹದಲ್ಲಿ ಉತ್ಪಾದನೆಯಾಗಲು ಸಾಧ್ಯವಾಗುತ್ತದೆ. ಆದರೆ ಆಂಟಿಸೆಪ್ಟಿಕ್ ಮೌತ್‌ವಾಶ್‌ನ ಬಳಕೆಯು ಈ ನೈಟ್ರೇಟ್-ಉತ್ಪಾದಿಸುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಮೂಲಕ ಹೃದಯದ ರಕ್ತನಾಳದ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಮೌತ್‌ವಾಶನ್ನು ದಿನದಲ್ಲಿ ಅನೇಕ ಬಾರಿ ಬಳಸಿದರೆ ಅನಾರೋಗ್ಯ ತಪ್ಪಿದ್ದಲ್ಲ
ಆಲ್ಕೋಹಾಲ್ ಅಥವಾ ಕ್ಲೋರ್ಹೆಕ್ಸಿಡಿನ್ ಪ್ರಮುಖ ಭಾಗವಾಗಿರುವ ಮೌತ್‌ವಾಶ್‌ಗಳನ್ನು ದಿನದಲ್ಲಿ ಅನೇಕ ಬಾರಿ ಬಳಸುವುದರಿಂದ ಶುಷ್ಕವಾಗುವುದು ಮಾತ್ರವಲ್ಲದೆ ಬಾಯಿ ಸುಡುವಂತಹ ಅನುಭವ, ಬಾಯಿಯ ಅಂಗಾಂಶಗಳ ಉರಿಯೂತ, ಹಲ್ಲುಗಳಲ್ಲಿ ಕಲೆ ಬೀಳುವುದು ಸೇರಿದಂತೆ ಮುಂತಾದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಇದಕ್ಕೂ ಮಿಗಿಲಾಗಿ ಅಧಿಕ ರಕ್ತದೊತ್ತಡ, ಕರುಳಿನ ಆರೋಗ್ಯ, ಅಪೌಷ್ಟಿಕತೆ ಮತ್ತು ಅಧ್ಯಯನವೊಂದರ ಪ್ರಕಾರ ಕ್ಯಾನ್ಸರ್‌ಗೂ ಇದು ಕಾರಣವಾಗುವ ಸಾಧ್ಯತೆಗಳಿವೆಯಂತೆ. ಆದ್ದರಿಂದ ದೀರ್ಘಕಾಲದವರೆಗೆ ನಿಯಮಿತವಾಗಿ ಮೌತ್ ವಾಶ್‌ಗಳ ಬಳಕೆಯನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಹಲ್ಲು ಮತ್ತು ಬಾಯಿಯ ಆರೋಗ್ಯಕ್ಕೆ ಪರ್ಯಾಯ ವ್ಯವಸ್ಥೆಯೇನು?
ಬಾಯಿಯಲ್ಲಿನ ಸೂಕ್ಷ್ಮಜೀವಿಗಳಿಗೆ ಅಡ್ಡಿಪಡಿಸದೆ ಅಥವಾ ನೈಟ್ರಿಕ್ ಆಕ್ಸೈಡ್ ಮಟ್ಟದ ಮೇಲೆ ಯಾವುದೇ ಅಡ್ಡಪರಿಣಾಮ ಬೀರದೇ ಹಲ್ಲು ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಫ್ಲೋರೈಡ್ ಅಥವಾ ಬ್ಯಾಕ್ಟೀರಿಯಾ ವಿರೋಧಿ ಏಜೆಂಟ್‌ಗಳನ್ನು ಹೊಂದಿರುವ ಆಲ್ಕೋಹಾಲ್ ಇಲ್ಲದ ಮೌತ್‌ವಾಶ್‌ಗಳನ್ನು ಪ್ರಯತ್ನಿಸಬಹುದು. ಇಂಟರ್‌ಡೆಂಟಲ್ ಬ್ರಷ್‌ಗಳು ಮತ್ತು ವಾಟರ್ ಫ್ಲೋಸರ್‌ಗಳನ್ನು ಬಳಸಿ ಹಲ್ಲಿನ ಇಕ್ಕೆಡೆಗಳು, ಸಂಧಿಗಳನ್ನು ತಲುಪುವ ಮೂಲಕ ಹಲ್ಲನ್ನು ಸ್ವಚ್ಛಗೊಳಿಸಬಹುದು. ಈ ಮೂಲಕ ಹಲ್ಲಿನ ದುರ್ವಾಸನೆಯನ್ನೂ ತಡೆಯಬಹುದು.
ಒಟ್ಟಿನಲ್ಲಿ ನಿಮ್ಮ ಹಲ್ಲು ಹಾಗೂ ಬಾಯಿಯ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸುವುದೇ ಆದಲ್ಲಿ ಮೌತ್‌ವಾಶ್‌ಗಳನ್ನು ಅಗತ್ಯವಿರುವಾಗ ಮಾತ್ರ ಬಳಕೆ ಮಾಡಿ. ಇವೆಲ್ಲದಕ್ಕೂ ಮುಖ್ಯವಾಗಿ ಹಲ್ಲಿನ ಆರೋಗ್ಯದ ಬಗ್ಗೆ ತಿಳಿಯುವುದಕ್ಕೆ ನಿಯಮಿತವಾಗಿ ದಂತ ತಪಾಸಣೆಯನ್ನು ಮಾಡಿಸುವುದು ಒಳ್ಳೆಯದು.