ಬೆಳಗಿನ ಉಪಾಹಾರದ ವೇಳೆ ಸೇವಿಸಲೇ ಬಾರದಂತಹ 10 ಆಹಾರ ಪದಾರ್ಥಗಳಿವು
Nov 15, 2023 08:48 AM IST
ಬೆಳಗಿನ ಉಪಾಹಾರದ ವೇಳೆ ಸೇವಿಸಲೇ ಬಾರದಂತಹ 10 ಆಹಾರ ಪದಾರ್ಥಗಳಿವು
- ಬೆಳಗೆದ್ದು ಉಪಾಹಾರ ಸೇವನೆಯನ್ನು ತಪ್ಪಿಸಬಾರದು ನಿಜ, ಹಾಗಂತ ಸಿಕ್ಕಿದ್ದನ್ನೆಲ್ಲಾ ತಿನ್ನುವುದೂ ಒಳಿತಲ್ಲ. ಬೆಳಗೆದ್ದು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾದರೆ ಬೆಳಗಿನ ಉಪಾಹಾರದ ವೇಳೆ ಯಾವೆಲ್ಲಾ ಪದಾರ್ಥಗಳನ್ನು ಸೇವಿಸಬಾರದು ನೋಡಿ.
ಬೆಳಗೆದ್ದು ತಿಂಡಿ ತಿಂದಿಲ್ಲ ಎಂದರೆ ಹಲವರಿಗೆ ತಲೆ ತಿರುಗಲು ಆರಂಭವಾಗುತ್ತದೆ, ಇನ್ನೂ ಕೆಲವರಿಗೆ ಬೆಳಗೆದ್ದು ಉಪಾಹಾರ ಸೇವಿಸುವ ಅಭ್ಯಾಸವಿರುವುದಿಲ್ಲ. ಆದರೆ ನಾವು ಸೇವಿಸುವ ಆಹಾರಗಳ ಪಟ್ಟಿಯಲ್ಲಿ ಬೆಳಗಿನ ಉಪಾಹಾರಕ್ಕೆ ಬಹಳ ಪ್ರಾಧಾನ್ಯವಿದೆ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು ಎನ್ನುತ್ತಾರೆ. ಆದರೆ ಉಪಾಹಾರ ಸೇವಿಸುವುದು ಎಂದರೆ ಹೊಟ್ಟೆ ತುಂಬಿಸಿಕೊಳ್ಳುವುದು ಎಂದಲ್ಲ. ಉಪಾಹಾರದಲ್ಲಿ ಅಗತ್ಯ ಪ್ರಮಾಣದ ಪೋಷಕಾಂಶಗಳನ್ನು ಸೇವಿಸುವುದು ಅಷ್ಟೇ ಮುಖ್ಯವಾಗುತ್ತದೆ.
ಹಲವರು ಸೇವಿಸುವ ಉಪಾಹಾರದಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಇದರಿಂದ ವಾಕರಿಕೆ, ಹಸಿವಾಗುವುದು ಇಂತಹ ಸಮಸ್ಯೆಗಳು ಹೆಚ್ಚುತ್ತವೆ. ಆರೋಗ್ಯಕರ ಆಹಾರವು ನಾರಿನಾಂಶ, ಪ್ರೊಟೀನ್, ಆರೋಗ್ಯಕರ ಕೊಬ್ಬು ಇಂತಹ ಅಂಶಗಳನ್ನು ಒಳಗೊಂಡಿರಬೇಕು. ಇವು ದೇಹಕ್ಕೆ ಶಕ್ತಿ ಒದಗಿಸುವ ಜೊತೆಗೆ ಮಧ್ಯಾಹ್ನದ ಊಟದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ.
ಆದರೆ ಬೆಳಗೆದ್ದು ಗಡಿಬಿಡಿಯಲ್ಲಿ ಸಿಕ್ಕಿದನ್ನು ತಿನ್ನುವುದು ಖಂಡಿತ ಒಳ್ಳೆಯದಲ್ಲ. ಈ ಅಭ್ಯಾಸವು ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಅದರಲ್ಲೂ ಬೆಳಗಿನ ಉಪಾಹಾರದ ಹೊತ್ತಿಗೆ ಈ 10 ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು.
ಫ್ಲೇವರ್ಡ್ ಯೋಗರ್ಟ್
ಯೋಗರ್ಟ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬುದು ನಿಜ. ಆದರೆ ವಿವಿಧ ಫ್ಲೇವರ್‌ನ ಫ್ಲೇವರ್ಡ್ ಯೋಗರ್ಟ್ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದರಲ್ಲಿ ಮೊಸರಿನೊಂದಿಗೆ ಸಕ್ಕರೆ ಮತ್ತು ಸಿಹಿಕಾರಕ ಅಂಶಗಳನ್ನು ಸೇರಿಸಿ ಇರುತ್ತಾರೆ. ಇದು ತಂಪುಪಾನೀಯದಲ್ಲಿ ಇರುವುದಕ್ಕಿಂತ ಹೆಚ್ಚು ಸಿಹಿ ಅಂಶವನ್ನು ಹೊಂದಿರುತ್ತದೆ. ಆ ಕಾರಣಕ್ಕೆ ಯೋಗರ್ಟ್ ಅನ್ನು ಬೆಳಗಿನ ಉಪಾಹಾರಕ್ಕೆ ಯಾವುದೇ ಕಾರಣಕ್ಕೂ ಸೇವಿಸಬೇಡಿ.
ಬಿಳಿ ಬ್ರೆಡ್
ಬೆಳಗಿನ ಉಪಾಹಾರಕ್ಕೆ ಕಾಫಿಯೊಂದಿಗೆ ಬ್ರೆಡ್ ಸೇವಿಸುವುದು ಹಲವರಿಗೆ ರೂಢಿಯಾಗಿದೆ. ಆದರೆ ಬಿಳಿ ಬ್ರೆಡ್ ಸೇವನೆ ಖಂಡಿತ ಉತ್ತಮವಲ್ಲ. ಬಿಳಿ ಬ್ರೆಡ್‌ನಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶ ಇರುವುದಿಲ್ಲ. ಅದರಲ್ಲೂ ಇದರ ಮೇಲೆ ಜಾಮ್ ಅಥವಾ ಚಾಕೊಲೇಟ್ ಸವರಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಇನ್ನಷ್ಟು ಕೆಟ್ಟದಾಗುತ್ತದೆ. ಬಿಳಿ ಬ್ರೆಡ್ ಬದಲಿಗೆ ಗೋಧಿ ಬ್ರೆಡ್ ಅಥವಾ ಮಲ್ಟಿಗ್ರೇನ್ ಬ್ರೆಡ್ ತಿನ್ನಬಹುದು. ಇದರೊಂದಿಗೆ ಚೀಸ್ ಅಥವಾ ಕಡಿಮೆ ಕೊಬ್ಬಿನಾಂಶ ಇರುವ ಬೆಣ್ಣೆ ಸವರಿ ತಿನ್ನಬಹುದು.
ಪಾನ್‌ಕೇಕ್
ಪಾನ್‌ಕೇಕ್‌ಗಳು ಹಲವರಿಗೆ ಇಷ್ಟ. ಆದರೆ ಇದು ಬಾಯಿಗೆ ರುಚಿ ಹೊರತು ಆರೋಗ್ಯಕ್ಕಲ್ಲ. ಕೆಲವೊಂದು ಉಪಾಹಾರಗಳಿಗಿಂತ ಅವು ಹೆಚ್ಚು ಪ್ರೊಟೀನ್ ಅಂಶವನ್ನು ಹೊಂದಿರುತ್ತವೆ. ಆದರೆ ಅವುಗಳಲ್ಲಿ ಸಂಸ್ಕರಿಸಿದ ಕೊಬ್ಬಿನಾಂಶದ ಪ್ರಮಾಣ ಅಧಿಕವಾಗಿರುತ್ತದೆ. ಇದು ಬೊಜ್ಜು ಹಾಗೂ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಮಫಿನ್‌ಗಳು
ಹಲವು ದೇಶಗಳಲ್ಲಿ ಮಫಿನ್‌ಗಳನ್ನು ಬೆಳಗಿನ ಉಪಾಹಾರಕ್ಕೆ ಸೇವಿಸುತ್ತಾರೆ. ಆದರೆ ಇವುಗಳು ಕೇಕ್‌ಗಳಂತೆ. ಇದನ್ನು ಸಂಸ್ಕರಿಸಿದ ಹಿಟ್ಟು, ಸಸ್ಯಜನ್ಯ ತೈಲ ಹಾಗೂ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಕೆಲವೊಮ್ಮೆ ಪುಡಿ ಮಾಡಿದ ಸಕ್ಕರೆ ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಚಾಕೊಲೇಟ್ ಚಿಪ್ಸ್ ಅನ್ನು ಕೂಡ ಸೇರಿಸಿ ಇರುತ್ತಾರೆ. ಇದು ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು.
ಬ್ರೇಕ್‌ಫಾಸ್ಟ್ ಸಿರಲ್ಸ್
ಬೆಳಗಿದ್ದು ಉಪಾಹಾರಕ್ಕೆ ಸಿರಲ್‌ಗಳ ಸೇವನೆ ಉತ್ತಮ ಎಂದು ಹಲವರು ಭಾವಿಸುತ್ತಾರೆ. ಆದರೆ ಇವು ಖಂಡಿತ ಆರೋಗ್ಯಕ್ಕೆ ಒಳಿತಲ್ಲ. ಇವು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಏಕದಳ ಧಾನ್ಯಗಳಲ್ಲಿ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಅವು ತಿನ್ನಲು ಉತ್ತಮ. ಆದರೆ ಸಿರಲ್ಸ್‌ಗಳನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಇದರಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇದು ಬೊಜ್ಜು, ಹೃದ್ರೋಗ ಹಾಗೂ ಮಧುಮೇಹದ ಅಪಾಯ ಹೆಚ್ಚಲು ಕಾರಣವಾಗುತ್ತದೆ.
ಪ್ಯಾಕೆಟ್‌ನಲ್ಲಿರುವ ಹಣ್ಣಿನ ರಸ
ಪ್ರತಿದಿನ ಹಣ್ಣಿನ ರಸ ಸೇವಿಸುವುದು ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಉತ್ತಮ ನಿಜ. ಆದರೆ ಪ್ಯಾಕೆಟ್‌ನಲ್ಲಿ ಹಣ್ಣಿನ ರಸ ಖಂಡಿತ ಆರೋಗ್ಯಕ್ಕೆ ಉತ್ತಮವಲ್ಲ. ತೂಕ ಇಳಿಸಲು ಬಯಸುವವರು ಇದನ್ನು ಖಂಡಿತ ಸೇವಿಸಬಾರದು. ಪ್ಯಾಕೆಟ್ ಜ್ಯೂಸ್‌ನಲ್ಲಿ ಹಣ್ಣಿನ ರಸದ ಪ್ರಮಾಣ ಕಡಿಮೆ ಇರುತ್ತದೆ. ಇದಕ್ಕೆ ಸಿಹಿಕಾರಕಗಳನ್ನು ಸೇರಿಸಿ ಇರುತ್ತಾರೆ. ಇದು ಬೊಜ್ಜು, ಮಧುಮೇಹ ಹಾಗೂ ವಿವಿಧ ರೀತಿಯ ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆ ಹೆಚ್ಚಲು ಕಾರಣವಾಗಬಹುದು.
ಗ್ರಾನೋಲಾ ಬಾರ್
ಗ್ರಾನೋಲಾ ಬಾರ್‌ಗಳು ಉಪಾಹಾರಕ್ಕೆ ಉತ್ತಮ ಎನ್ನಿಸಬಹುದು, ಆದರೆ ಇವು ಚಾಕೊಲೇಟ್ ಬಾರ್‌ಗಳಿಗೆ ಹೋಲುತ್ತವೆ. ಇದರಲ್ಲಿ ಸರಾಸರಿ 1 ರಿಂದ 3 ಗ್ರಾಂ ನಷ್ಟು ಮಾತ್ರ ನಾರಿನಾಂಶವಿರುತ್ತದೆ. ಅದಕ್ಕೆ ಇವುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಇವು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ಇದು ದೇಹದಲ್ಲಿ ಉರಿಯೂತಕ್ಕೂ ಕಾರಣವಾಗಬಹುದು.
ಡೊನಟ್ಸ್
ಡೊನಟ್ಸ್ ನಾಲಿಗೆಗೆ ರುಚಿಸುವುದು ನಿಜ, ಆದರೆ ಉಪಾಹಾರದ ವೇಳೆಗೆ ಎಂದಿಗೂ ಡೊನಟ್ ಸೇವನೆ ಉತ್ತಮವಲ್ಲ. ಒಂದು ಡೊನಟ್‌ನಜಲ್ಲಿ ಸುಮಾರು 300 ರಿಂದ 500 ರಷ್ಟು ಕ್ಯಾಲೋರಿ ಅಂಶ ಮತ್ತು 30 ಗ್ರಾಂನಷ್ಟು ಸಂಸ್ಕರಿಸಿದ ಸಕ್ಕರೆ ಅಂಶವಿರುತ್ತದೆ. ಡೊನಟ್ಸ್ ಅಂಶವು ರಕ್ತದಲ್ಲಿನ ಗುಕ್ಲೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದು ಹಗಲಿನ ವೇಳೆಯಲ್ಲೂ ನಿದ್ದೆ ಬರುವಂತೆ ಮಾಡಬಹುದು.
ಕಾಫಿ
ಬೆಳಗೆದ್ದು ಕಾಫಿ ಕುಡಿಯುವುದರಿಂದ ಮೂಡ್ ಫ್ರೆಶ್ ಆಗುವುದು ನಿಜ, ಆದರೆ ಒಂದು ಕಪ್ ಕಾಫಿ ಕುಡಿಯುವುದು ಆರೋಗ್ಯಕ್ಕೆ ಹಾನಿಕರ. ಖಾಲಿ ಹೊಟ್ಟೆಯಲ್ಲಿ ಎಂದಿಗೂ ಕಾಫಿ ಕುಡಿಯದಿರಿ. ಹೊಟ್ಟೆ ತುಂಬಾ ಉಪಾಹಾರ ಸೇವಿಸಿ ನಂತರ ಕಾಫಿ ಕುಡಿಯುವುದು ತಕ್ಕ ಮಟ್ಟಿಗೆ ಉತ್ತಮ.
ಸ್ಮೂಥಿ
ತರಕಾರಿ ಹಣ್ಣಿನ ಸ್ಮೂಥಿಗಳು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಅವನ್ನು ಬೆಳಗಿನ ಉಪಾಹಾರಕ್ಕೆ ಸೇವಿಸುವುದು ಉತ್ತಮವಲ್ಲ. ಸ್ಮೂಥಿಯಲ್ಲೂ ಸಕ್ಕರೆ ಅಂಶವಿರುತ್ತದೆ. ಇದನ್ನು ಬೆಳಗಿನ ಹೊತ್ತು ಕುಡಿಯುವುದರಿಂದ ರಕ್ತದಲ್ಲಿನ ರಕ್ತರೆಯ ಮಟ್ಟದಲ್ಲಿ ತ್ವರಿತ ಏರಿಕೆ ಕಾಣಬಹುದು. ಇದನ್ನು ಸಂಜೆ ಹೊತ್ತಿಗೆ ಕುಡಿಯುವುದು ಉತ್ತಮ.
ಈ ಮೇಲಿನ ಆಹಾರಗಳನ್ನು ಬೆಳಗಿನ ಉಪಾಹಾರದ ಹೊತ್ತಿನಲ್ಲಿ ಸೇವಿಸುವವರು ಈಗಲೇ ತ್ಯಜಿಸಿ. ಇದರಿಂದ ತೂಕ ಇಳಿಕೆ ಮಾತ್ರವಲ್ಲ ಹಲವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದಲೂ ದೂರ ಇರಬಹುದು.