logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಧುಮೇಹದಿಂದ ಹೃದ್ರೋಗ ನಿಯಂತ್ರಣದವರೆಗೆ; ಬೆಂಡೆಕಾಯಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ

ಮಧುಮೇಹದಿಂದ ಹೃದ್ರೋಗ ನಿಯಂತ್ರಣದವರೆಗೆ; ಬೆಂಡೆಕಾಯಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ

Reshma HT Kannada

May 27, 2024 09:30 AM IST

google News

ಬೆಂಡೆಕಾಯಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ

    • ಬೆಂಡೆಕಾಯಿ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲಿಯೂ ಸಿಗುವಂತಹ ತರಕಾರಿಗಳ ಪೈಕಿ ಒಂದಾಗಿದೆ. ಆದರೆ ಬೆಂಡೆಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಎಂದು ತಿಳಿದರೆ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.
ಬೆಂಡೆಕಾಯಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ
ಬೆಂಡೆಕಾಯಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ

ಅಡುಗೆ ಕೋಣೆಗಳಲ್ಲಿ ಇರುವ ಸಾಮಾನ್ಯ ತರಕಾರಿಗಳ ಸಾಲಿನಲ್ಲಿ ಬೆಂಡೆಕಾಯಿ ಕೂಡ ಒಂದು. ಕೆಲವರಿಗೆ ಇದು ಇಷ್ಟ ಎನಿಸಿದರೂ ಇನ್ನೂ ಕೆಲವರು ಇದನ್ನು ತಿನ್ನೋಕೆ ಕಷ್ಟ ಕಷ್ಟ ಎನ್ನುತ್ತಾರೆ. ಕೆಲವರಿಗೆ ಬೆಂಡೆಕಾಯಿ ಫ್ರೈ ಇಷ್ಟವಾದರೆ ಇನ್ನುಳಿದವರು ಬೆಂಡೆಕಾಯಿ ಮಸಾಲಾ ಇಷ್ಟಪಡುತ್ತಾರೆ. ಪಲ್ಯದ ರೂಪದಲ್ಲಿ, ಸಾಂಬಾರಿನ ರೂಪದಲ್ಲಿ, ಮಸಾಲಾ, ಫ್ರೈ ಹೀಗೆ ನಾನಾ ವಿಧದಲ್ಲಿ ಸೇವಿಸಲು ಸಾಧ್ಯವಾಗುವ ಬೆಂಡೆಕಾಯಿ ಸಾಕಷ್ಟು ಪೋಷಕಾಂಶಗಳನ್ನು ಸಹ ತನ್ನೊಡನೆ ಉಳಿಸಿಕೊಂಡಿದೆ. ಇವುಗಳಲ್ಲಿ ಇರುವ ಫೈಬರ್, ಕಾರ್ಬೋಹೈಡ್ರೇಟ್‌ಗಳು, ಖನಿಜಾಂಶಗಳು ಹಾಗೂ ವಿಟಾಮಿನ್‌ಗಳಿಂದ ಬೆಂಡೆಕಾಯಿ ಶಕ್ತಿಯ ಕೇಂದ್ರ ಎಂದೇ ಕರೆಸಿಕೊಂಡಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬೆಂಡೆಕಾಯಿ ಹೇಳಿ ಮಾಡಿಸಿದಂತಹ ತರಕಾರಿ. ತೂಕ ಇಳಿಕೆ, ಮಧುಮೇಹ ನಿಯಂತ್ರಣ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಗೆ ಬೆಂಡೆಕಾಯಿ ರಾಮಬಾಣವಾಗಿದೆ.

ಮಧುಮೇಹಿಗಳಿಗೂ ಉತ್ತಮ, ಕಿಡ್ನಿ ಆರೋಗ್ಯಕ್ಕೂ ಬೆಸ್ಟ್‌

ಬೆಂಡೆಕಾಯಿಯಲ್ಲಿರುವ ಅತ್ಯಧಿಕ ನಾರಿನಾಂಶವು ಮಧುಮೇಹವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ನಿರಂತರವಾಗಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ಕಿಡ್ನಿ ಸಂಬಂಧಿ ಕಾಯಿಲೆಗಳಿಂದಲೂ ಮುಕ್ತಿ ಪಡೆಯಬಹುದಾಗಿದೆ. ಅಲ್ಲದೇ ಕೊಬ್ಬಿನಾಂಶವನ್ನು ಕರಗಿಸಲೂ ಸಹ ಬೆಂಡೆಕಾಯಿ ಸಹಾಯ ಮಾಡುತ್ತದೆ. ಯಾರಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಕಾಡುತ್ತದೆಯೋ ಅಂಥವರಿಗೂ ಬೆಂಡೆಕಾಯಿ ಹೇಳಿ ಮಾಡಿಸಿದಂತಹ ತರಕಾರಿ. ಬೆಂಡೆಕಾಯಿಯಲ್ಲಿ ಇರುವ ಪಾಲಿಸ್ಯಾಚರೈಡ್‌ಗಳು ಉದರ ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಬೆಂಡೆಕಾಯಿಯಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿದೆ. ಸಾಕಷ್ಟು ಜೀವಸತ್ವಗಳು ಹಾಗೂ ಖನಿಜಾಂಶಗಳನ್ನು ಬೆಂಡೆಕಾಯಿ ಒಳಗೊಂಡಿರುತ್ತದೆ. ಬೆಂಡೆಕಾಯಿ ನಾರಿನಾಂಶದ ಉತ್ತಮ ಮೂಲವಾಗಿದೆ. ಮಲಬದ್ಧತೆಯನ್ನು ತಡೆಗಟ್ಟಲು ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಬೆಂಡೆಕಾಯಿ ನೆರವಾಗುತ್ತದೆ.

ಕೊಲೆಸ್ಟ್ರಾಲ್‌ ಕರಗಿಸಿ ಹೃದಯ ಆರೋಗ್ಯ ಕಾಪಾಡುತ್ತದೆ

ಬೆಂಡೆಕಾಯಿ ಕೊಬ್ಬಿನಾಂಶವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ಕರಗಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಬೆಂಡೆಕಾಯಿ ಮಾಡುತ್ತದೆ. ಹೃದ್ರೋಗಕ್ಕೆ ಕಾರಣವಾಗುವ ಮತ್ತೊಂದು ಹೋಮೋಸಿಸ್ಪೈನ್ ಮಟ್ಟವನ್ನು ಕಡಿಮೆ ಮಾಡುವ ಮೂಲಕವೂ ಬೆಂಡೆಕಾಯಿ ಮತ್ತೊಂದು ರೀತಿಯಲ್ಲಿ ಹೃದ್ರೋಗದ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿ ಪ್ರಮುಖ ತರಕಾರಿಗಳ ಪಟ್ಟಿಯಲ್ಲಿ ಬೆಂಡೆಕಾಯಿ ಕೂಡ ಸ್ಥಾನ ಪಡೆದಿದೆ. ಬೆಂಡೆಕಾಯಿಯಲ್ಲಿ ಇರುವ ಕೆಲವು ಸಂಯುಕ್ತಗಳು ಇನ್ಸುಲಿನ್‌ನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಕಣ್ಣಿಗೂ ಒಳ್ಳೆಯದು ಬೆಂಡೆಕಾಯಿ

ಬೆಂಡೆಕಾಯಿಯು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಹಾಗೂ ಕಣ್ಣಿಗೆ ಸಂಬಂಧಿಸಿದ ಕೆಲವು ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆಯುವಲ್ಲಿ ಸಹಕಾರಿಯಾಗಿವೆ. ಬೆಂಡೆಕಾಯಿಯಲ್ಲಿ ವಿಟಮಿನ್ ಎ ಅಂಶ ಅಧಿಕ ಪ್ರಮಾಣದಲ್ಲಿದ್ದು ಕಾರ್ನಿಯಾದ ಆರೋಗ್ಯವನ್ನು ಕಾಪಾಡುತ್ತದೆ.

ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಅಂಶ ಕೂಡ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂಕ್ಷ್ಮಜೀವಿಗಳು ಹಾಗೂ ಕಾಯಿಲೆಗಳನ್ನು ತಂದೊಡ್ಡುವಂತಹ ಆಕ್ರಮಣಕಾರಿ ವೈರಸ್‌ಗಳು ದೇಹವನ್ನು ಪ್ರವೇಶಿಸದಂತೆ ತಡೆಯುವಲ್ಲಿಯೂ ಬೆಂಡೆಕಾಯಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಬೆಂಡೆಕಾಯಿಯಲ್ಲಿ ಇರುವ ಪ್ರೋಬಯಾಟಿಕ್ ಫೈಬರ್ ಹೊಟ್ಟೆಯಲ್ಲಿ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಇಡಲು ಸಹಾಯ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ