Chia vs Flax: ಚಿಯಾ ಬೀಜ vs ಅಗಸೆ ಬೀಜ, ಈ ಎರಡಲ್ಲಿ ತೂಕ ಇಳಿಕೆಗೆ ಯಾವುದು ಉತ್ತಮ? ಇಲ್ಲಿದೆ ತಜ್ಞರ ಉತ್ತರ
Jun 17, 2024 01:17 PM IST
ಚಿಯಾ ಬೀಜ vs ಅಗಸೆ ಬೀಜ, ಈ ಎರಡಲ್ಲಿ ತೂಕ ಇಳಿಕೆಗೆ ಯಾವುದು ಉತ್ತಮ?
- ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ನೆನಪಾಗುವುದು ಅಗಸೆ ಬೀಜ ಹಾಗೂ ಚಿಯಾ ಬೀಜ. ಹಲವರು ತೂಕ ಕಡಿಮೆಯಾಗಲು ಈ ಬೀಜಗಳನ್ನು ಸೇವಿಸುತ್ತಾರೆ. ಈ ಎರಡರಲ್ಲಿ ಯಾವುದು ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದರ ವಿವರ ಇಲ್ಲಿದೆ.
ಹಿಂದೆಲ್ಲಾ ಡ್ರೈಫ್ರೂಟ್ಸ್, ನಟ್ಸ್ ಎಂದಾಗ ಮೊದಲು ನೆನಪಾಗುವುದು ಗೋಡಂಬಿ, ಬಾದಾಮಿ, ವಾಲ್‌ನಟ್, ದ್ರಾಕ್ಷಿ ಇಂತಹವು. ಅವು ಪೌಷ್ಟಿಕ ಆಹಾರಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿದ್ದವು. ಆದರೆ ಈ ಅಗಸೆ ಬೀಜ, ಚಿಯಾ ಬೀಜಗಳು ಹಲವರ ದೈನಂದಿನ ಆಹಾರಕ್ರಮದ ಭಾಗವಾಗಿದೆ. ಅದರಲ್ಲೂ ಪೌಷ್ಟಿಕ ತಜ್ಞರು ಈ ಆಹಾರಗಳ ಮಹತ್ವವನ್ನು ಒತ್ತಿ ಹೇಳಿದ ಮೇಲಂತೂ ಇದರ ಬೇಡಿಕೆ ಹೆಚ್ಚಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗಂತೂ ಈ ಬೀಜಗಳು ಹೇಳಿ ಮಾಡಿಸಿದ್ದು.
ಚೀಯಾ ಬೀಜ ಹಾಗೂ ಅಗಸೆ ಬೀಜ ಎರಡಲ್ಲೂ ಪೋಷಕಾಂಶಗಳು, ನಾರಿನಾಂಶ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಸಮೃದ್ಧವಾಗಿವೆ. ಆದರೆ ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಪ್ಲ್ಯಾಕ್ಸ್ ಸೀಡ್ಸ್ (ಅಗಸೆ ಬೀಜ) ಅಥವಾ ಚಿಯಾ ಸೀಡ್ಸ್ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ನೋಡಿ.
ಚಿಯಾ ಬೀಜಗಳ ಪ್ರಯೋಜನ
ಚಿಯಾ ಬೀಜಗಳಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಅವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಚಿಯಾ ಬೀಜಗಳಲ್ಲಿ ಸಸ್ಯ ಆಧಾರಿತ ಪ್ರೋಟೀನ್ ಅಂಶವಿರುತ್ತದೆ. ಇದರಲ್ಲಿ ಒಮೆಗಾ ತ್ರೀ ಫ್ಯಾಟಿ ಆಸಿಡ್ ಕೂಡ ಇದೆ. ಇವುಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಉರಿಯೂತದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
ಅಗಸೆ ಬೀಜಗಳ ಪ್ರಯೋಜನ
ಅಗಸೆ ಬೀಜಗಳು ಚಿಯಾ ಬೀಜಗಳಿಗಿಂತ ಸ್ವಲ್ಪ ದೊಡ್ಡದಾಗಿದೆ. ಆದರೆ ಇದರ ರುಚಿ ಉತ್ತಮವಾಗಿರುತ್ತದೆ. ಇವುಗಳಲ್ಲಿ ನಾರಿನಾಂಶ, ಪ್ರೊಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ಮ್ಯಾಂಗನೀಸ್ ಮತ್ತು ವಿಟಮಿನ್ ಬಿ 1 ತುಂಬಿದೆ. ಅಗಸೆ ಬೀಜಗಳನ್ನು ತಿನ್ನುವುದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ರೀತಿಯ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಅಗಸೆ ಬೀಜಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಪೌಷ್ಟಿಕ ತಜ್ಞರ ಪ್ರಕಾರ, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ಎರಡೂ ಆರೋಗ್ಯಕ್ಕೆ ಒಳ್ಳೆಯದು. ಈ ಎರಡರಲ್ಲೂ ಒಮೆಗಾ ತ್ರೀ ಫ್ಯಾಟಿ ಆಸಿಡ್ ಅಂಶವಿದೆ. ಇವು ಜೀರ್ಣಕ್ರಿಯೆಗೆ ಸಹಕಾರಿ. ಇದನ್ನು ತಿಂದ ನಂತರ ಹೊಟ್ಟೆ ತುಂಬಿದ ಭಾವ ಮೂಡುತ್ತದೆ. ಹಾಗಾಗಿ ಇವೆರಡನ್ನೂ ತಿನ್ನುವುದು ಒಳ್ಳೆಯದು.
ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ಸ್ಮೂಥಿಗಳು, ಸಲಾಡ್‌ಗಳು ಮತ್ತು ಸೂಪ್‌ಗಳಿಗೆ ಸೇರಿಸಲು ಒಳ್ಳೆಯದು. ಅಗಸೆಬೀಜಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಆದ್ದರಿಂದ ಅವುಗಳನ್ನು ಪಾನ್ ಕೇಕ್ ಮತ್ತು ಮಫಿನ್‌ಗಳಲ್ಲಿ ಒಟ್ಟಿಗೆ ಬೇಯಿಸಬಹುದು. ದಿನನಿತ್ಯದ ಆಹಾರದಲ್ಲಿ ಈ ಎರಡು ಬೀಜಗಳನ್ನು ಸೇರಿಸುವುದು ನಿಮಗೆ ದುಪ್ಪಟ್ಟು ಫಲಿತಾಂಶವನ್ನು ನೀಡುತ್ತದೆ. ಒಂದೇ ಒಂದು ಪದಾರ್ಥವನ್ನು ತಿನ್ನುವ ಬಗ್ಗೆ ಯೋಚಿಸಬೇಡಿ. ಇವೆರಡನ್ನು ಒಟ್ಟಿಗೆ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಇವೆರಡನ್ನು ಒಟ್ಟಿಗೆ ತಿಂದರೆ ಮಾನಸಿಕವಾಗಿಯೂ ಹಲವು ಲಾಭಗಳನ್ನು ಪಡೆಯಬಹುದು.