Monsoon Health: ಮಳೆಗಾಲದಲ್ಲಿ ಹೆಚ್ಚಲಿದೆ ಅಸ್ತಮಾ ಸಮಸ್ಯೆ; ಕಾರಣಗಳು, ಪರಿಹಾರ ಮಾರ್ಗ ಹೀಗಿದೆ; ಇರಲಿ ಮುನ್ನೆಚ್ಚರಿಕೆ
Jul 06, 2023 10:59 AM IST
ಮಳೆಗಾಲದಲ್ಲಿ ಅಸ್ತಮಾ ಹೆಚ್ಚಲು ಕಾರಣ ಮತ್ತು ಪರಿಹಾರ ಮಾರ್ಗ
- ಮಳೆಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಈ ವಾತಾವರಣ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶೀತ ವಾತಾವರಣವು ಅಸ್ತಮಾ ಸಮಸ್ಯೆಯನ್ನು ಇನ್ನಷ್ಟು ಬಿಡಾಗುಸುತ್ತದೆ. ಮಳೆಗಾಲದಲ್ಲಿ ಅಸ್ತಮಾ ಸಮಸ್ಯೆ ಹೆಚ್ಚಲು ಕಾರಣ, ಅದಕ್ಕೆ ಪರಿಹಾರ ಮಾರ್ಗಗಳೇನು ಎಂಬ ಕುರಿತ ಮಾಹಿತಿ ಇಲ್ಲಿದೆ.
ಮುಂಗಾರಿನ ಋತು ಆರಂಭವಾಯಿತು ಎಂದರೆ ಮಳೆರಾಯ ಧೋ ಎಂದು ಸುರಿಯಲು ಆರಂಭಿಸುತ್ತಾನೆ. ಈ ವರ್ಷ ಮಳೆ ತಡವಾಗಿ ಬಂದರೂ ಹಲವು ಕಡೆ ಮಳೆಯ ಆರ್ಭಟ ಜೋರಾಗಿದೆ.
ಮಳೆಗಾಲ ದೇಹ, ಮನಸ್ಸಿಗೆ ಖುಷಿ ಕೊಡುವುದೇನೋ ನಿಜ. ರೊಮಾಂಟಿಕ್ ಮುಂಗಾರು ಆರೋಗ್ಯ ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ಶೀಲಿಂಧ ಸೋಂಕು, ವೈರಾಣುಗಳ ಹಾವಳಿಯ ಜೊತೆಗೆ ಕಲುಷಿತ ನೀರು ಹಾಗೂ ಆಹಾರಗಳಿಂದಲೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಮಳೆಗಾಲದಲ್ಲಿ ಆಸ್ತಮಾ ಸಮಸ್ಯೆ ಉಲ್ಬಣವಾಗುವ ಕಾರಣ ಜನರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಆರ್ದ್ರತೆ, ಗಾಳಿಯಲ್ಲಿನ ಪರಾಗವು ಅಸ್ತಮಾ ಸಮಸ್ಯೆ ಉಲ್ಬಣವಾಗಲು ಕಾರಣವಾಗಬಹುದು.
ಮಳೆಗಾಲದಲ್ಲಿ ಅಸ್ತಮಾ ಉಲ್ಬಣವಾಗಲು ನಿಖರ ಕಾರಣ
ಅಸ್ತಮಾವು ಗಾಳಿಯ ಉರಿಯೂತದಿಂದ ಎದುರಾಗುವ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಉಬ್ಬಸ, ಉಸಿರಾಟದ ತೊಂದರೆ, ಎದೆ ಬಿಗಿತ ಮತ್ತು ಕೆಮ್ಮಿನ ಇತಿಹಾಸವನ್ನು ಹೊಂದಿರುತ್ತಾರೆ. ಕಾಲದೊಂದಿಗೆ ಇದರ ರೋಗಲಕ್ಷಣಗಳೂ ಬದಲಾಗುತ್ತವೆ. ಈ ಸಮಸ್ಯೆಗೆ ಚಿಕಿತ್ಸೆ ನೀಡಿದೇ ಅನಿಯಂತ್ರಿತವಾಗಿ ಬಿಟ್ಟರೆ ಇದು ಉಲ್ಬಣವಾಗುವ ಸಾಧ್ಯತೆ ಹೆಚ್ಚು.
ಅಸ್ತಮಾವು ಯಾವುದೇ ವಯಸ್ಸಿನಲ್ಲಿ ಯಾರನ್ನೂ ಬೇಕಾದರೂ ಬಾಧಿಸಬಹುದು. ಸಮಸ್ಯೆ ಉಲ್ಬಣಗೊಳ್ಳಲು ಹಲವಾರು ಪ್ರಚೋದಕ ಅಂಶಗಳಿವೆ. ಅವುಗಳಲ್ಲಿ ಮಾನ್ಸೂನ್ ಅಥವಾ ಮಳೆ ಕೂಡ ಒಂದಾಗಿರಬಹುದು.
ಮಳೆಗಾಲದಲ್ಲಿ ಅಸ್ತಮಾ ಉಲ್ಬಣಕ್ಕೆ ಕಾರಣವಾಗುವ ವಿವಿಧ ಅಂಶಗಳು
ಶೀತ ವಾತಾವರಣ: ಮಳೆಗಾಲದಲ್ಲಿ ವಾತಾವರಣವು ತಂಪಾಗಿರುವ ದೇಹದಲ್ಲಿ ಹಿಸ್ಟಮಿನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಉಬ್ಬಸ ಸೇರಿದಂತೆ ಅಸ್ತಮಾದ ಲಕ್ಷಣಗಳನ್ನು ಪ್ರಚೋದಿಸಬಹುದು.
ಏರಿಕೆಯಾಗುವ ಪರಾಗ ಮಟ್ಟ: ಮಳೆಗಾಲದಲ್ಲಿ ಪರಾಗ ಮಟ್ಟದಲ್ಲಿ ಏರಿಕೆಯಾಗುವುದು ಅಲರ್ಜಿ ಇರುವವರಲ್ಲಿ ಅಸ್ತಮಾ ಹೆಚ್ಚಲು ಕಾರಣವಾಗಬಹುದು.
ತೇವಾಂಶ: ವಾತಾವರಣದಲ್ಲಿ ತೇವಾಂಶದ ಮಟ್ಟ ಏರಿಕೆಯಾದಾಗ ಕಟ್ಟಡದ ಒಳಗೆ ಶೀಲಿಂಧ್ರಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ, ಇದು ಅಸ್ತಮಾ ಸಮಸ್ಯೆ ಹೆಚ್ಚಲು ಕಾರಣವಾಗುತ್ತದೆ.
ಸೂರ್ಯನ ಶಾಖದ ಕೊರತೆ: ಸೂರ್ಯನ ಕಿರಣಗಳು ದೇಹಕ್ಕೆ ವಿಟಮಿನ್ ಡಿಯನ್ನು ಒದಗಿಸುತ್ತದೆ. ಜೊತೆಗೆ ಇದು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕಿನ ಕೊರತೆಯು ಈ ಸಮಸ್ಯೆ ಹೆಚ್ಚಲು ಇನ್ನೊಂದು ಕಾರಣ.
ಅಲರ್ಜಿ ಮತ್ತು ವೈರಲ್ ಸೋಂಕುಗಳು: ವಿವಿಧ ಬ್ಯಾಕ್ಟೀರಿಯಾಗಳು, ವೈರಸ್‌ಗಳು, ಶೀಲಿಂಧ್ರಗಳು ಮಳೆಗಾಲದಲ್ಲಿ ಹೆಚ್ಚುತ್ತವೆ. ಇದು ಅರ್ಲಜಿಗೆ ಕಾರಣವಾಗಬಹುದು ಮತ್ತು ಅಸ್ತಮಾ ದಾಳಿಯ ಅಪಾಯವನ್ನು ಹೆಚ್ಚಿಸಬಹುದು.
ಮಳೆಗಾಲದಲ್ಲಿ ಅಸ್ತಮಾ ನಿರ್ವಹಣೆ
ಇನ್ಹೇಲರ್ ಜೊತೆ ಇರಲಿ: ಮಳೆಗಾಲದಲ್ಲಿ ಅಸ್ತಮಾವನ್ನು ನಿಯಂತ್ರಿಸಲು ಇನ್ಹೇಲರ್ ಅನ್ನು ಜೊತೆ ಇರಿಸಿಕೊಳ್ಳುವುದು ಬಹಳ ಮುಖ್ಯ.
ಬೆಚ್ಚಗಿನ ಪಾನೀಯ, ಆಹಾರ ಸೇವಿಸಿ: ಅಸ್ತಮಾದ ಪರಿಣಾಮಗಳನ್ನು ಕಡಿಮೆ ಮಾಡಲು ತಂಪು ಪಾನೀಯ ಹಾಗೂ ಆಹಾರಗಳ ಸೇವನೆಯನ್ನು ತಪ್ಪಿಸಿ. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಿ. ಪ್ರೊಟೀನ್ ಅಂಶ ಇರುವ ಆಹಾರ, ಕೆಂಪಕ್ಕಿ, ಮೊಳಕೆ ಕಾಳುಗಳು, ಹಸಿರು ಸೊಪ್ಪು, ತರಕಾರಿ, ಕ್ಯಾರೆಟ್, ಎಲೆಕೋಸು, ಹೂಕೋಸು ಮತ್ತು ಮೊಟ್ಟೆಯಂತಹ ಪದಾರ್ಥಗಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ.
ಹಬೆ: ಹಬೆ ತೆಗೆದುಕೊಳ್ಳುವುದರಿಂದಲೂ ಕೊಂಚ ನಿರಾಳರಾಗಬಹುದು. ಇದು ಶ್ವಾಸಕೋಶದ ನಾಳಗಳಿಗೆ ಹಿತ ಹಾಗೂ ಆರಾಮದಾಯಕ ಭಾವ ಸಿಗುವಂತೆ ಮಾಡುತ್ತದೆ. ಆಹಾರ ತಯಾರಿಯ ಮುನ್ನ ಕೆಲವೊಂದು ಅಡುಗೆಎಣ್ಣೆ ಹಾಗೂ ಲವಣಾಂಶ ಇರುವ ವಸ್ತುಗಳನ್ನು ತಪ್ಪಿಸಿ. ಇದು ಶ್ವಾಸನಾಳದ ಕಿರಿಕಿರಿಗೆ ಕಾರಣವಾಗಬಹುದು ಮತ್ತು ಉಬ್ಬಸವನ್ನು ಉಂಟು ಮಾಡಬಹುದು.
ಸ್ವಚ್ಛ ಪರಿಸರವೂ ಮುಖ್ಯ: ಮನೆಯ ಧೂಳು, ಸೂಕ್ಷ್ಮ ಜೀವಿಗಳು, ಒದ್ದೆಯಾದ ಗೋಡೆಗಳು ಆಸ್ತಮಾ ಉಲ್ಬಣಕ್ಕೆ ಪ್ರಚೋದಕಗಳಾಗಿವೆ. ನಿಯಮಿತವಾಗಿ ವ್ಯಾಕ್ಯೂಮ್ ಕ್ಲೀನಿಂಗ್, ಹವಾನಿಯಂತ್ರಣಗಳ ಫಿಲ್ಚರ್‌ಗಳನ್ನು ಸ್ವಚ್ಛಗೊಳಿಸುವುದು ಮತ್ತು ಬೆಡ್‌ಶೀಟ್‌ಗಳು ಮತ್ತು ದಿಂಬಿನ ಕವರ್‌ಗಳನ್ನು ಬದಲಾಯಿಸುವುದು ಇವೆಲ್ಲವೂ ಧೂಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನಾರೋಗ್ಯದಿಂದ ಜನರನ್ನು ದೂರವಿರಿಸಬಹುದು.
ಅಲರ್ಜಿಯನ್ನು ತಪ್ಪಿಸಿ: ಮಾಲಿನ್ಯನಿಂದ ಕೂಡಿರುವ, ಧೂಳಿರುವ ಜಾಗ ಹಾಗೂ ಪರಾಗ ಇರುವ ಸಸ್ಯಗಳಿಂದ ದೂರವಿರಿ. ಧೂಮಪಾನವನ್ನು ತಪ್ಪಿಸಿ. ಅಲ್ಲದೆ, ಸಾಕುಪ್ರಾಣಿಗಳ ರೋಮಗಳು ಉಸಿರಾಟಕ್ಕೆ ತೊಂದರೆ ಮಾಡಬಹುದು. ಅವುಗಳಿಂದ ದೂರವಿರಿ.
ವ್ಯಾಕ್ಸಿನೇಷನ್: ಸಮಯಕ್ಕೆ ಸರಿಯಾಗಿ ಜ್ವರ ಮತ್ತು ನ್ಯುಮೋನಿಯಾ ವಿರುದ್ಧ ನಿಯಮಿತ ವ್ಯಾಕ್ಸಿನೇಷನ್ ಪಡೆಯಿರಿ. ಇದು ಸೋಂಕಿನ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇವೆಲ್ಲದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಇದು ಬಹಳ ಮುಖ್ಯ. ಇದರೊಂದಿಗೆ ಆಗಾಗ ವೈದ್ಯರಿಂದ ತಪಾಸಣೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ವಿಭಾಗ