Monsoon Skin Issues: ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಚರ್ಮದ ಸಮಸ್ಯೆಗಳು, ಪರಿಹಾರ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ
Jul 02, 2023 09:56 AM IST
ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳು
- ಮಳೆಗಾಲದಲ್ಲಿ ಚರ್ಮದ ಸಮಸ್ಯೆಗಳು ಕಾಡುವುದು ಸಹಜ. ಸೋಂಕು, ಅಲರ್ಜಿಯಂತಹ ಸಮಸ್ಯೆಗಳಿಗೆ ಮನೆಮದ್ದುಗಳಿಂದಲೇ ಪರಿಹಾರ ಕಂಡುಕೊಳ್ಳಬಹುದು. ಆದರೆ ಈ ಪರಿಹಾರಗಳು ಎಲ್ಲರಿಗೂ ಅನ್ವಯವಾಗಬೇಕು ಎಂದೇನಿಲ್ಲ. ಹಾಗಾಗಿ ವೈದ್ಯರ ಬಳಿ ತೋರಿಸುವುದು ಅವಶ್ಯವಾಗುತ್ತದೆ.
ಮಳೆಗಾಲ ಎಂದರೆ ತಣ್ಣನೆಯ ವಾತಾವರಣ, ಎಲ್ಲೆಲ್ಲೂ ಹಸಿರಿನ ಸೊಬಗು, ತುಂಬಿ ಹರಿಯುವ ಜಲಧಾರೆಗಳು.. ಒಟ್ಟಾರೆ ಮಳೆಗಾಲ ಮನಸ್ಸಿಗೆ ಮುದ ನೀಡುವುದೇನೋ ನಿಜ. ಆದರೆ ಈ ಎಲ್ಲಾ ಸೊಬಗಿನೊಂದಿಗೆ ಆರೋಗ್ಯ ಸಮಸ್ಯೆಗಳೂ ಜೊತೆಯಾಗುತ್ತವೆ. ಜ್ವರ, ಕೆಮ್ಮು, ನೆಗಡಿ, ಅಲರ್ಜಿಯ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಈ ಸಮಯದಲ್ಲಿ ಹೆಚ್ಚುತ್ತವೆ. ಆ ಕಾರಣಕ್ಕೆ ಮಳೆನೀರಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಎಚ್ಚರ ವಹಿಸಬೇಕು.
ಅತಿಯಾದ ಆರ್ದ್ರತೆಯ ಹೊರತಾಗಿಯೂ ಶಿಲೀಂಧ್ರಗಳ ಸೋಂಕು ಅಪಾಯವನ್ನು ಹೆಚ್ಚಿಸಬಹುದು. ಇವು ಜೀವಕ್ಕೆ ಅಪಾಯ ಮಾಡದೇ ಇದ್ದರೂ ನಿರ್ಲಕ್ಷ್ಯ ಮಾಡುವುದರಿಂದ ತೊಂದರೆ ಉಂಟಾಗಬಹುದು.
ʼಮಳೆಗಾಲದಲ್ಲಿ ಎದುರಾಗುವ ಸಣ್ಣ ಪುಟ್ಟ ಚರ್ಮದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಅದು ಮುಂದುವರಿದು ಹೆಚ್ಚಿನ ತೊಂದರೆ ಉಂಟು ಮಾಡಬಹುದು. ಆ ಕಾರಣಕ್ಕೆ ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗೆ ವೈದ್ಯರ ಬಳಿ ತೆರಳ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಚರ್ಮದ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಕುರಿತು ಇಲ್ಲಿ ವಿವರಿಸಲಾಗಿದೆ.
ಸೋಂಕು: ಮಳೆಗಾಲದಲ್ಲಿ ಸೋಂಕಿನ ಸಮಸ್ಯೆ ಕಾಡುವುದು ಸಾಮಾನ್ಯ. ಕೊಳೆಚೆ ಅಥವಾ ಕಲುಷಿತ ನೀರು, ಮಳೆನೀರಿಗೆ ಚರ್ಮವನ್ನು ಒಡ್ಡುವುದು, ಬೆವರುವಿಕೆ, ನಿರ್ಜಲೀಕರಣ ಹೀಗೆ ಹಲವು ಕಾರಣಗಳಿಂದ ಸೋಂಕಿನ ಪರಿಣಾಮದಿಂದ ಚರ್ಮದ ಸಮಸ್ಯೆಗಳು ಕಾಣಿಸಬಹುದು. ಇದರಿಂದ ರಿಂಗ್‌ವರ್ಮ್, ಮೊಡವೆ, ಕಜ್ಜಿ, ತುರಿಕೆ ಉಂಟಾಗುವುದು ಸಹಜ.
ಪರಿಹಾರ ಮಾರ್ಗ: ಈ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಪರಿಹಾರ ಮಾರ್ಗ ಎಂದರೆ ಒದ್ದೆಯಾಗುವುದನ್ನು ತಪ್ಪಿಸುವುದು. ಮಳೆಯಲ್ಲಿ ನೆನೆಯುವುದು, ಕೊಳಚೆ ನೀರಿನಲ್ಲಿ ನಡೆದಾಡುವುದನ್ನು ತಪ್ಪಿಸಬೇಕು ಮತ್ತು ಬೆವರುವುದನ್ನು ಕೂಡ ತಪ್ಪಿಸಬೇಕು. ಮಳೆಗಾಲದಲ್ಲಿ ಆಗಾಗ್ಗೆ ಸ್ನಾನ ಮಾಡಬೇಕು. ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ಮುನ್ನ ಜಾಗರೂಕರಾಗಿರಬೇಕು. ದಿನದಲ್ಲಿ ಕನಿಷ್ಠ 10 ರಿಂದ 12 ಲೋಟ ನೀರು ಕುಡಿಯುವುದನ್ನು ತಪ್ಪಿಸಬಹುದು. ಚರ್ಮವನ್ನು ತೇವಾಂಶದಿಂದ ಇರಿಸಿಕೊಳ್ಳಲು ಮಾಯಿಶ್ಚರೈಸರ್ ಬಳಕೆಯನ್ನು ತಪ್ಪಿಸಬಾರದು.
ಹೈಪರ್ಹೈಡ್ರೋಸಿಸ್ ಅಥವಾ ಅತಿಯಾದ ಬೆವರುವಿಕೆ: ಮಳೆಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ಬೆವರುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ ಮಳೆಗಾಲದಲ್ಲಿ ನಾವು ಹೆಚ್ಚು ಬೆವರುತ್ತೇವೆ. ಅಂಗೈ, ಕುಂಕುಳ, ತೊಡೆ ಸಂಧಿ, ಬೆರಳುಗಳ ಸಂಧಿ, ನೆತ್ತಿಯ ಮೇಲೆ ಬೆವರು ನಿಂತಿರುತ್ತದೆ. ಇವು ಮಳೆಗಾಲದಲ್ಲಿ ದೇಹದ ವಾಸನೆ ಮತ್ತು ಸೋಂಕು ಹೆಚ್ಚಲು ಕಾರಣವಾಗಬಹುದು.
ಪರಿಹಾರ: ಬೆವರುವುದನ್ನು ಕಡಿಮೆ ಮಾಡಲು ಬೊಟೊಕ್ಸ್ ಇಂಜೆಕ್ಷನ್ ಪಡೆಯುವುದು ಉತ್ತಮ ಚಿಕಿತ್ಸೆಯಾಗಿದೆ. ಇವರೊಂದಿಗೆ ಬೆವರು ನಿಲ್ಲುವ ಪ್ರದೇಶಗಳಿಗೆ ಟಾಲ್ಕಂ ಪೌಡರ್ ಹಚ್ಚಲು ಮರೆಯಬಾರದು. ಮಳೆಗಾಲದಲ್ಲಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ವೈಯಕ್ತಿಕ ನೈರ್ಮಲ್ಯದ ಬಗ್ಗೆ ಸಾಕಷ್ಟು ಗಮನ ನೀಡಬೇಕು.
ಮಂದ, ಸುಕ್ಕುಗಟ್ಟಿದ ಕೂದಲು: ಮಳೆಗಾಲದಲ್ಲಿ ಕೂದಲಿನ ಸಮಸ್ಯೆ ಕಾಡುವುದು ಸಹಜ. ಒದ್ದೆ ಕೂದಲು ಹಲವು ರೀತಿ ತೊಂದರೆಗಳನ್ನು ಉಂಟು ಮಾಡಬಹುದು. ಇದರೊಂದಿಗೆ ಗಾಳಿಯ ತೇವಾಂಶವು ಸೌಂದರ್ಯಕ್ಕೆ ಹಾನಿಯುಂಟು ಮಾಡಬಹುದು.
ಪರಿಹಾರ: 1 ಚಮಚ ಆಪಲ್ ಸೀಡರ್ ವಿನೆಗರ್ ಅನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಇದು ಕೂದಲನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಶುಷ್ಕತೆಯು ಹೆಚ್ಚಿರುವ ಕಾರಣ ಸೌಮ್ಯವಾದ ಶಾಂಪೂವನ್ನು ಬಳಸಬೇಕು ಮತ್ತು ಅತಿಯಾದ ರಾಸಾಯನಿಕ ಅಂಶ ಇರುವ ಶಾಂಪೂಗಳ ಬಳಕೆಯನ್ನು ತಪ್ಪಿಸಬೇಕು.
ಚರ್ಮದ ಅಲರ್ಜಿ: ಕಲುಷಿತ ವಾತಾವರಣದ ಕಾರಣದಿಂದ ಮಳೆಗಾಲದಲ್ಲಿ ಚರ್ಮ ಅಲರ್ಜಿ ಕಾಡುವುದು ಸಹಜ. ಮುಖದ ಚರ್ಮ, ಕುತ್ತಿಗೆ, ಕೈ ಕಾಲಿನ ಚರ್ಮದ ಮೇಲೆ ಅರ್ಲಜಿ ಉಂಟಾಗುತ್ತದೆ. ಚರ್ಮದ ಸಿಪ್ಪೆ ಏಳುವುದು, ದುದ್ದು ಉಂಟಾಗುವುದು, ತುರಿಕೆ, ಕಜ್ಜಿ ಇಂತಹ ಸಮಸ್ಯೆಗಳು ಕಾಡುತ್ತವೆ. ಇದಕ್ಕೆ ಕಾರಣಗಳು ಏನು ಎಂಬುದು ಅರಿವಾಗುವುದಿಲ್ಲ.
ಅಲರ್ಜಿಗಳಿಗೆ ಮನೆಮದ್ದುಗಳಿಂದಲೂ ಪರಿಹಾರ ಕಂಡುಕೊಳ್ಳಬಹುದು. ಆದರೆ ಸಮಸ್ಯೆಗಳು ಅತಿಯಾದರೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯವುದು ಅವಶ್ಯ.