Neem Benefits: ಸಂಪ್ರದಾಯಕಷ್ಟೇ ಅಲ್ಲ ಆರೋಗ್ಯಕ್ಕೂ ಬೇಕು ಬೇವು; ಬಹುಮುಖಿ ಗುಣದ ಬೇವಿನಿಂದ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
Apr 09, 2024 02:58 PM IST
ಬಹುಮುಖಿ ಗುಣದ ಬೇವಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
- ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವ ಹೊಂದಿರುವ ಬೇವಿನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ಬಹುಮುಖಿ ಸಸ್ಯವಾಗಿದ್ದು ಬೇವಿನ ಎಲೆ, ಬೇವಿನ ಕಡ್ಡಿ, ಬೇವಿನ ಹೂ ಈ ಎಲ್ಲವೂ ಪ್ರಯೋಜನಕ್ಕೆ ಬರುತ್ತದೆ. ಯುಗಾದಿ ಹಬ್ಬದ ಸಂದರ್ಭ ಬೇವು ತಿನ್ನುವ ಜೊತೆಗೆ ಇದರ ಆರೋಗ್ಯ ಪ್ರಯೋಜನಗಳನ್ನೂ ತಿಳಿಯಿರಿ. (ಬರಹ: ಎಚ್. ಸತೀಶ್)
ಯುಗಾದಿ ಹಬ್ಬ ಎಂದರೆ ಬೇವು-ಬೆಲ್ಲ ಇರಲೇಬೇಕು, ಇದು ಸಂಪ್ರದಾಯದ ಭಾಗವೂ ಹೌದು. ಬೇವು-ಬೆಲ್ಲ ಸವಿಯುವುದರ ಉದ್ದೇಶ ಜೀವನವು ಬೇವು-ಬೆಲ್ಲದಂತೆ ಕಹಿ-ಸಿಹಿ ಎರಡರ ಸಮ್ಮಿಶ್ರಣ ಎಂಬುದಾಗಿದ್ದರೂ ಬೇವನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಬೇವಿನ ಹೂ, ಸೊಪ್ಪು, ಕಡ್ಡಿ ಇವೆಲ್ಲವೂ ನೂರಾರು ಪ್ರಯೋಜನಗಳನ್ನು ಹೊಂದಿದ್ದು, ಬೇವಿನ ಸಸ್ಯವು ಬಹುಮುಖಿ ಗುಣಗಳನ್ನು ಹೊಂದಿದೆ.
ಬೇವಿನ ಸೊಪ್ಪು ಕೇವಲ ಯುಗಾದಿಯ ದಿನದ ಪೂಜೆಗೆ ಮಾತ್ರ ಮೀಸಲಾಗಿರುವುದಿಲ್ಲ. ಬೇವಿನ ಸೊಪ್ಪು, ಬೇವಿನಕಡ್ಡಿ ಮತ್ತು ಬೇವಿನ ಎಣ್ಣೆ ಇವು ತಮ್ಮದೇ ಆದ ಔಷಧೀಯ ಗುಣಗಳನ್ನು ಹೊಂದಿವೆ. ಮುಖ್ಯವಾಗಿ ಬೇವಿನ ಸೊಪ್ಪು ದೇಹದ ಒಳಭಾಗದ ಸೋಂಕನ್ನು ನಿವಾರಿಸುತ್ತದೆ. ಹಾಗೆಯೇ ಬೇವಿನ ಎಣ್ಣೆ ಕೇವಲ ನೋವು ನಿವಾರಕವಲ್ಲ, ಹಲವು ರೋಗಗಳಿಗೂ ಇದು ಉತ್ತಮ ಔಷಧಿ. ಕಲ್ಲಿನಿಂದ ಕುಟ್ಟಿ ಕುಂಚದಂತೆ ಮಾಡಿದ ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜಿದಲ್ಲಿ, ಕೇವಲ ಹಲ್ಲಿನ ವಿಚಾರವಲ್ಲ ಇಡೀ ಬಾಯಿಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಬೇವಿನ ಮರ ಬೆಳೆಯಲು ಅಲ್ಪ ಪ್ರಮಾಣದ ನೀರು ಸಾಕಾಗುತ್ತದೆ. ಮುಖ್ಯವಾಗಿ ಈ ಮರವು ಸುಲಭವಾಗಿ ಒಣಗುವುದಿಲ್ಲ. ಈ ಮರವಿದ್ದೆಡೆ ಶುದ್ಧವಾದ ಗಾಳಿ ಮತ್ತು ತಂಪಿನ ಅನುಭವ ಉಂಟಾಗುತ್ತದೆ.
ಬಹುತೇಕ ರೋಗಗಳು ರಕ್ತವು ಅಶುದ್ಧವಾಗುವುದರಿಂದ ಬರುತ್ತದೆ. ನಾವು ಯಾವುದೇ ಔಷಧಿ ಸೇವಿಸಿದರು ಅದು ರಕ್ತದಲ್ಲಿ ಬೆರೆಯುತ್ತದೆ. ಆದ್ದರಿಂದ ಪ್ರತಿದಿನ ಬೆಳಗಿನ ವೇಳೆ ಮತ್ತು ಸಂಜೆಯ ವೇಳೆ ಎರಡೆರಡು ಬೇವಿನ ಎಲೆಗಳನ್ನು ತಿಂದಲ್ಲಿ ನಮ್ಮಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಬೇವಿನ ಎಲೆ ಕಹಿ ಎನಿಸಿ ಸಕ್ಕರೆಯ ಜೊತೆ ಇದನ್ನು ಬೆರೆಸಿ ಸೇವಿಸಬಾರದು. ಅದರ ಬದಲು ಕಪ್ಪು ಬಣ್ಣದಲ್ಲಿರುವ ಬೆಲ್ಲದೊಂದಿಗೆ ಸೇವಿಸಿದರೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.
ಆರೋಗ್ಯ ಸಮಸ್ಯೆಗಳಿಗೆ ಬೇವನ್ನು ಹೀಗೆ ಬಳಸಿ
* ಚರ್ಮದಲ್ಲಿ ನವೆ ಅಥವಾ ಅಲರ್ಜಿಯಿಂದ ಆದ ಗುಳ್ಳೆಗಳಿದ್ದರೆ ನೀರಿನಲ್ಲಿ ಸುಮಾರು ಐದು ನಿಮಿಷಗಳ ಕಾಲ ಬೇವಿನಸೊಪ್ಪನ್ನು ಮುಳುಗಿಸಿ. ಅನಂತರ ಅದೇ ನೀರಿನಿಂದ ಸ್ನಾನವನ್ನು ಮಾಡಿದಲ್ಲಿ ಈ ತೊಂದರೆಯಿಂದ ಪಾರಾಗಬಹುದು.
* ಬೇವಿನ ಸೊಪ್ಪನ್ನು ಚೆನ್ನಾಗಿ ಅರೆದು ಅದರ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ರಾತ್ರಿ ಮಲಗುವ ವೇಳೆ ಅಂಗಾಲಿಗೆ ಹಚ್ಚಿ ಮಲಗಿದರೆ ಮಾನಸಿಕ ಒತ್ತಡ ಕಡಿಮೆಯಾಗಿ ಉತ್ತಮ ನಿದ್ದೆ ಆವರಿಸುತ್ತದೆ.
* ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. 10 ನಿಮಿಷದ ನಂತರ ಚರ್ಮದ ಮೇಲೆ ಆಗಿರುವ ಗಾಯವನ್ನು ಈ ನೀರಿನಿಂದ ಶುಭಗೊಳಿಸಿದರೆ ಗಾಯವು ವಾಸಿಯಾಗುವುದು.
* ಬೇವಿನ ಸೊಪ್ಪು ಕರಿಎಳ್ಳು, ಪಚ್ಚ ಕರ್ಪೂರ ಮತ್ತು ಅರಿಶಿಣಗಳ ಮಿಶ್ರಣವನ್ನು ಚರ್ಮಕ್ಕೆ ಹೆಚ್ಚಿದರೆ ಕಜ್ಜಿಯಂತಹ ದೋಷವು ದೂರವಾಗುವುದು.
* ಬೇವಿನ ರಸಕ್ಕೆ ಕೆಂಪು ಕಲ್ಲು ಸಕ್ಕರೆಯೊಂದಿಗೆ ಸೇವಿಸಿದರೆ ಬೆಳೆಸಿ ಸೇವಿಸಿದರೆ ಅರಿಶಿಣ ಕಾಮಾಲೆಯು ಹೆಚ್ಚಾಗುವುದಿಲ್ಲ.
* ಬೇವಿನಎಣ್ಣೆ ಮತ್ತು ಹರಳೆಣ್ಣೆಯ ಮಿಶ್ರಣದಿಂದ ಮೊಣಕಾಲಿಗೆ ಮಸಾಜ್ ಮಾಡಿದರೆ ನೋವು ನಿವಾರಣೆಯಾಗುತ್ತದೆ.
* ಬೇವಿನ ರಸಕ್ಕೆ ಅರಿಶಿಣ ಮತ್ತು ಕರ್ಪೂರವನ್ನು ಸೇರಿಸಿ ಬೆರಳಿಗೆ ಕಟ್ಟಿದರೆ ಉಗುರುಸುತ್ತು ನಿವಾರಣೆ ಆಗುತ್ತದೆ. ಆದರೆ ಉರಿತದ ಅನುಭವವಾಗುತ್ತದೆ.
* ಬೇವಿನ ಎಣ್ಣೆಗೆ ಪಚ್ಚಕರ್ಪೂರ ಬೆರೆಸಿ ಹಣೆಗೆ ಹಚ್ಚಿದರೆ ಆರೆತಲೆ ಶೂಲೆಯಿಂದ ಪಾರಾಗಬಹುದು.